‘ಮಿತ್ರ ಧರ್ಮ’ ಮರೆತ ಬಿಜೆಪಿ ವಿರುದ್ಧ ಸಾಮೂಹಿಕ ಹೋರಾಟಕ್ಕೆ ಕರೆ ನೀಡಿದ ಚಂದ್ರಬಾಬು ನಾಯ್ಡು

7

‘ಮಿತ್ರ ಧರ್ಮ’ ಮರೆತ ಬಿಜೆಪಿ ವಿರುದ್ಧ ಸಾಮೂಹಿಕ ಹೋರಾಟಕ್ಕೆ ಕರೆ ನೀಡಿದ ಚಂದ್ರಬಾಬು ನಾಯ್ಡು

Published:
Updated:

ವಿಜಯವಾಡ: ‘ರಾಜ್ಯ ವಿಭಜನೆಯ ಆರಂಭದ ದಿನಗಳಲ್ಲಿ ಶಾಸನಸಭೆ, ಸಚಿವಾಲಯಗಳಿಲ್ಲದೆ ಬಸ್‌ ಅನ್ನೇ ಕಚೇರಿಯಾಗಿಸಿಕೊಂಡು 43 ದಿನಗಳ ಕಾಲ ಆಡಳಿತ ನಡೆಸಿದ್ದೆ. ಈ ವೇಳೆ 29 ಬಾರಿ ದೆಹಲಿಗೆ ತೆರಳಿ ಕೇಂದ್ರದ ನೆರವು ಕೋರಿದ್ದರೂ ಯಾವುದೇ ನೆರವು ದೊರೆಯಲಿಲ್ಲ’ ಎಂದು ಆರೋಪಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಒಂದಾಗಿ ಹೋರಾಟ ನಡೆಸಬೇಕು’ ಎಂದು ಕರೆ ನೀಡಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕರ್ನಾಟಕ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವ ವೇಳೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸೇರಿದಂತೆ ದೇಶದ ಪ್ರಮುಖ ಪಾದೇಶಿಕ ಪಕ್ಷಗಳ ನಾಯಕರು ಹಾಜರಾಗಿದ್ದರು. ಈ ಹಿನ್ನಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ತೆಲಗು ದೇಶಂ ಪಕ್ಷದ(ಟಿಡಿಪಿ) 35ನೇ ವಾರ್ಷಿಕ ಸಮಾವೇಶ ‘ಮಹಾನಾಡು’ ಅಧಿವೇಶನವನ್ನು ಇದೇ ಮೊದಲ ಬಾರಿಗೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಅಮೆರಿಕದಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿದೆ. ಈ ವೇಳೆ ಮಾತನಾಡಿದ ನಾಯ್ಡು, ಭಾಷಣದುದ್ದಕ್ಕೂ ಬಿಜೆಪಿಯನ್ನು ಟೀಕಿಸಿದರು.

‘ಬಿಜೆಪಿ ನಮಗೆ ದ್ರೋಹ ಮಾಡಿದ್ದರಿಂದಾಗಿ ನಾವು ಎನ್‌ಡಿಎ ಮೈತ್ರಿ ಕೂಟದಿಂದ ಹೊರಬರಬೇಕಾಯಿತು. ದಕ್ಷಿಣದ ರಾಜ್ಯಗಳಿಗೆ ನೀಡಿರುವ ಭರವಸೆಗಳ ವಿಚಾರದಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಸರ್ಕಾರ ಮಿತ್ರ ಧರ್ಮವನ್ನು ಮರೆತಿದೆ’ ಎಂದು ಹರಿಹಾಯ್ದರು. ‘2004 –2014ರ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಂಧ್ರಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ’ ಎಂದು ಕಾಂಗ್ರೆಸ್‌ ವಿರುದ್ಧವೂ ಗುಡುಗಿದರು.

‘ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಕಾರ್ಯಗಳು ಆಗಿಲ್ಲ. ಮೋದಿ ಸರ್ಕಾರದಿಂದ ಯಾರೊಬ್ಬರಿಗೂ ಉಪಯೋಗವಾಗಿಲ್ಲ. ನೋಟು ರದ್ದು ಬಳಿಕ ದೇಶದ ಆರ್ಥಿಕತೆಯ ನಷ್ಟ ಸರಿದೂಗಿಸುವ ಕುರಿತು ಹಾಗೂ ಡಿಜಿಟಲ್‌ ಆರ್ಥಿಕತೆಯನ್ನು ಉತ್ತೇಜಿಸಲು ನನ್ನ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಸಮಿತಿಯನ್ನು ರಚಿಸಲಾಗಿತ್ತು. ನಾನು ಹಲವು ವಿಸ್ತೃತ ಸಲಹೆಗಳನ್ನು ಕೇಂದ್ರಕ್ಕೆ ಶಿಫಾರಸು ನೀಡಿದ್ದೆ. ಆದರೆ, ನನ್ನ ಯಾವೊಂದು ಶಿಫಾರಸು ಜಾರಿಗೆ ಬರಲಿಲ್ಲ’

‘ನಮ್ಮ ಸಂಸದರು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೋರಿ ದೆಹಲಿಯಲ್ಲಿ ಹೋರಾಟ ಆರಂಭಿಸಿದರೆ, ಬಿಜೆಪಿಯವರು ಕಾವೇರಿ ವಿವಾದದ ವಿಚಾರವಾಗಿ ಎಐಡಿಎಂಕೆ ನಾಯಕರನ್ನು ಉತ್ತೇಜಿಸುತ್ತಿದ್ದರು. ಗದ್ದಲ ಮೂಡಿಸುವ ಮೂಲಕ ಸಂಸತ್ತಿನಲ್ಲಿ ನಾವು ಮಾತನಾಡುವುದಕ್ಕೆ ಅವಕಾಶ ದೊರೆಯದಂತೆ ಮಾಡುತ್ತಿದ್ದರು’ ಎಂದು ದೂರಿದ್ದಾರೆ.

ಸದ್ಯ 2019 ಸಾರ್ವತ್ರಿಕ ಚುನಾವಣೆಗೆ ತೃತೀಯ ರಂಗವನ್ನು ಬಲಪಡಿಸುವುದಾಗಿ ಹೇಳಿರುವ ನಾಯ್ಡು, ಕರ್ನಾಟಕದಲ್ಲಿ ಕೇವಲ 37 ಸ್ಥಾನಗಳಲ್ಲಿ ಜಯಿಸಿದ್ದ ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಪ್ರಾದೇಶಿಕ ‍ಪಕ್ಷಗಳಿಗೆ ರಾಷ್ಟ್ರಮಟ್ಟದಲ್ಲೂ ಅಧಿಕಾರಕ್ಕೇರುವ ಅವಕಾಶಗಳಿವೆ’ ಎಂದಿದ್ದಾರೆ.

‘ಎನ್‌.ಟಿ ರಾಮರಾವ್‌ ಕಾಲದಿಂದಲೂ ರಾಷ್ಟ್ರ ರಾಜಕೀಯದಲ್ಲಿ ಟಿಡಿಪಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ತೃತೀಯ ರಂಗದ ಸರ್ಕಾರಗಳು ಅಸ್ತಿತ್ವಕ್ಕೆ ಬಂದ ಸಂದರ್ಭಗಳಲ್ಲಿ ದೇವೇಗೌಡ, ಐ.ಕೆ. ಗುಜ್ರಾಲ್‌ ಅವರನ್ನು ದೇಶದ ಪ್ರಧಾನ ಮಂತ್ರಿಗಳನ್ನಾಗಿ ಆಯ್ಕೆ ಮಾಡುವಲ್ಲಿ ಪಕ್ಷ ಪ್ರಮುಖ ಪಾತ್ರ ವಹಿಸಿದೆ’ ಎಂದೂ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry