ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡದೆಲೆ ಮಾಡುವವನು ರೂಢಿಯೊಳಗುತ್ತಮ

ಕ್ಷೇತ್ರದ ಅಭಿವೃದ್ಧಿ ಕುರಿತ ಕನಸು– ಕಾರ್ಯಯೋಜನೆಗಳ ಬಗ್ಗೆ ಶಾಸಕ ನೆಹರು ಓಲೇಕಾರ ಅಭಿಮತ
Last Updated 28 ಮೇ 2018, 11:25 IST
ಅಕ್ಷರ ಗಾತ್ರ

ಹಾವೇರಿ: ‘ಆಡದೆಲೆ ಮಾಡುವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು, ಅಧಮ ತಾನಾಡಿಯೂ ಮಾಡದವನು... ಎಂಬ ಸರ್ವಜ್ಞರ ತ್ರಿಪದಿಯ ಸಾರದಂತೆ, ಎಲ್ಲಿ ಸಮಸ್ಯೆ ಇರುತ್ತದೆಯೋ, ಅಲ್ಲಿ ಓಲೇಕಾರ ಇರುತ್ತಾರೆ. ಈ ತನಕ ಅಧಮರಾಗಿದ್ದವರೂ, ಆಡದೆಯೇ ಕೆಲಸ ಮಾಡಬೇಕಾಗುತ್ತದೆ’ ಹಾವೇರಿ ಕ್ಷೇತ್ರದ ಶಾಸಕ ನೆಹರು ಓಲೇಕಾರ ತಮ್ಮ ‘ಕನಸು –ಕಾರ್ಯ ಯೋಜನೆಗಳ’ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತಿಗಿಳಿದರು. ಅವರ ಜೊತೆಗಿನ ಸಂದರ್ಶನದ ಪ್ರಮುಖಾಂಶಗಳು ಇಲ್ಲಿವೆ.

ನಗರದ ಬಗ್ಗೆ ನಿಮ್ಮ ಆದ್ಯತೆ ಏನು?

ನಗರದ ನೀರು, ಚರಂಡಿ, ರಸ್ತೆ, ಸ್ವಚ್ಛತೆ, ಬೀದಿ ದೀಪ, ಉದ್ಯಾನ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಸಮರ್ಪಕ ಮೂಲಸೌಕರ್ಯಗಳ ಮೂಲಕ ಜನರಿಗೆ ನೆಮ್ಮದಿ ಸಿಗಬೇಕು. ನದಿಯಿಂದ ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ನಲ್ಲಿ ಸೋರಿಕೆ ಇದೆ. ಇದಕ್ಕೆ ಪರಿಹಾರ ಕಂಡುಕೊಂಡು, ಪ್ರತಿ ಬಡಾವಣೆಗೂ ವಾರಕ್ಕೊಮ್ಮೆ ನೀರು ಬಿಡಲಾಗುವುದು.

ಹೆಗ್ಗೇರಿ ಕೆರೆಯ ಅಭಿವೃದ್ಧಿ ಬಗ್ಗೆ ?

ಈ ಹಿಂದೆ, ₹10.5 ಕೋಟಿ ಮಂಜೂರು ಮಾಡಿಸಿ, ಕರ್ಜಗಿಯಿಂದ ಪೈಪ್‌ಲೈನ್ ಹಾಕಿಸಲಾಗಿತ್ತು. ಅದರ ಸದ್ಬಳಕೆ ಮಾಡಲಾಗುವುದು. ಹೂಳು ತೆಗೆಸಲಾಗುವುದು. ಹೆಚ್ಚುವರಿ ನೀರನ್ನು ನಗರದ ಇತರ ಕೆರೆಗಳಿಗೆ ಹರಿಸಲು ಯೋಜನೆ ರೂಪಿಸಲಾಗುವುದು. ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಪಡಿಸಲಾಗುವುದು.

ಜಿಲ್ಲಾ ಕ್ರೀಡಾಂಗಣದ ಕುರಿತು?

ಹಿಂದೆ ₹5 ಕೋಟಿಯಲ್ಲಿ ಒಳಾಂಗಣ, ಈಜುಕೊಳ ಮತ್ತಿತರ ಅಭಿವೃದ್ಧಿ ಮಾಡಲಾಗಿತ್ತು. ಬಳಿಕ ಬಂದವರ ನಿರ್ಲಕ್ಷ್ಯದಿಂದ ಅವೆಲ್ಲ ಸ್ಮಶಾನ ಸದೃಶವಾಗಿವೆ. ಜಿಲ್ಲಾ ಮಟ್ಟದ ಅಧಿಕಾರಿಗಳೂ ತಡೆಯದೇ ಇರುವುದು ದುರದೃಷ್ಟಕರ. ಈ ಬಗ್ಗೆ ಜಿಲ್ಲಾಧಿಕಾರಿಗೆ ಸಮಗ್ರ ಮಾಹಿತಿ ನೀಡಿ, ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ.

ಅಧಿಕಾರಿಗಳಿಗೆ ಕಿವಿಮಾತು?

ನಾನು, ಬೆಳಿಗ್ಗೆ 6 ಗಂಟೆಗೆಯಿಂದ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದೇನೆ. ಸ್ಪಂದಿಸುತ್ತಿರುವ ಅಧಿಕಾರಿಗಳನ್ನು ಗೌರವಿಸುತ್ತೇನೆ. ‘ಸಮಸ್ಯೆಗೆ ಸ್ಪಂದಿಸಿದರೆ, ನೀವು ಹಾಗೂ ನಿಮ್ಮ ಕುಟುಂಬ ನೆಮ್ಮದಿಯಿಂದ ಇರುತ್ತದೆ’ ಎಂದು ಸ್ಪಂದಿಸದ ಕೃತಘ್ನರು, ಸಬೂಬು ಹೇಳುವವರಿಗೆ ಹೇಳುತ್ತೇನೆ.

ಆಡಳಿತ ಕಚೇರಿಗಳು ದಿಕ್ಕಿಗೊಂದು ಇವೆಯಲ್ಲ?

ಜಿಲ್ಲಾಡಳಿತ ಭವನ ಹಾಗೂ ಸರ್ಕಾರಿ ಕಚೇರಿಗಳಿಗೆ ಕಡಿಮೆ ದರದಲ್ಲಿ ಬಸ್‌ ಸೌಲಭ್ಯ ಕಲ್ಪಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳ ಜೊತ ಚರ್ಚಿಸುತ್ತೇನೆ. ಡಿ.ಸಿ. ಕಚೇರಿ ನಗರದಲ್ಲಿ ಸ್ಥಾಪಿಸುವ ಕುರಿತು ತಾಂತ್ರಿಕ ಮತ್ತು ಕಾರ್ಯ ಸಾಧ್ಯತೆಯ ವರದಿ ನೋಡಿಕೊಂಡು ಪರಿಶೀಲಿಸುತ್ತೇನೆ.

ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ಬಗ್ಗೆ?

ತುಂಗಾ ಮೇಲ್ದಂಡೆ ಯೋಜನೆ ಹಾಗೂ ಕೆರೆಗಳನ್ನು ತುಂಬಿಸಲು ಮೊದಲ ಆದ್ಯತೆ. ಕಳೆದ ಐದು ವರ್ಷ ನನೆಗುದಿಗೆ ಬಿದ್ದ ಹೊಸರಿತ್ತಿ, ಕೋಳೂರು, ತಿಮ್ಮೇನಹಳ್ಳಿ, ನೆಗಳೂರು, ಅಗಡಿ, ತಿಮ್ಮಾಪುರ ಮತ್ತಿತರ ಬಹುಗ್ರಾಮ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ತುಂಗಭದ್ರಾ ನದಿಗೆ ಬಾಂದಾರು ನಿರ್ಮಿಸಲಾಗುವುದು. 2ರಿಂದ 3 ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಇದೆ.

ಸ್ಥಳೀಯಾಡಳಿತ ಸಂಸ್ಥೆಗಳಲ್ಲಿನ ಕೆಲಸಗಳ ಬಗ್ಗೆ ?

ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ‘ಜನಸ್ಪಂದನ’ ಮೂಲಕ ಅಹವಾಲು ಆಲಿಸಿ, ಮೂಲಸೌಲಭ್ಯ ಕಲ್‍ಪಿಸಲಾಗುವುದು. ಸಾರ್ವಜನಿಕ ಬದುಕಿನಲ್ಲಿ ‘ಸೇವಾ’ ಮತ್ತು ‘ಸ್ವಾಹಾ’ ಎಂಬ ಎರಡು ಭಾವನೆ ಬಗ್ಗೆ ಸ್ಪಷ್ಟತೆ ಇರಬೇಕು. ‘ಸೇವಾ’ಗಳನ್ನು ಗೌರವಿಸಿ, ‘ಸ್ವಾಹಾ’ಗಳಿಗೆ ಗೇಟ್ ಪಾಸ್ ನೀಡಲಾಗುವುದು.

ಶಾಲೆಗಳು–ಶಿಕ್ಷಣದ ಬಗ್ಗೆ ?

‘ನಮ್ಮ ಊರು, ನಮ್ಮ ಶಾಲೆ’ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಲಾಗುವುದು. ಈ ಹಿಂದೆ, ಎಲ್ಲ ಶಾಲಾ ಖಾತೆಗಳಲ್ಲಿ ಸುಮಾರು ₹40ರಿಂದ ₹50 ಸಾವಿರ ಹಣ ಇತ್ತು. ಅದು ಮಂಗಮಾಯವಾಗಿದ್ದು, ಪರಿಶೀಲಿಸಲಾಗುವುದು.

ರೈತರು ಹಾಗೂ ನಿರುದ್ಯೋಗ ಕುರಿತ ಚಿಂತನೆಗಳು ?

ಬೀಜ, ಗೊಬ್ಬರ, ನೀರಾವರಿ ಜೊತೆಗೆ ‘ಬೆಲೆ ಅಸ್ಥಿರತೆಗೆ ಪರಿಹಾರ’ವನ್ನು ಕಂಡುಕೊಳ್ಳಬೇಕಾಗಿದೆ. ಸರ್ಕಾರದ ಪಾತ್ರ ಪ್ರಮುಖವಾಗಿದೆ. ಎಪಿಎಂಸಿಯ ಆವರ್ತ ನಿಧಿಯನ್ನು ತುರ್ತಾಗಿ ಬಳಸಿ, ಬೆಂಬಲ ಬೆಲೆ ನೀಡುವ ಕುರಿತು ಸದನದಲ್ಲಿ ದನಿ ಎತ್ತುತ್ತೇನೆ. ಸಣ್ಣ ಕೈಗಾರಿಕೆಗಳ ಸ್ಥಾಪನೆ, ಸ್ವ ಉದ್ಯೋಗಕ್ಕೆ ಸಾಲ ಸೌಲಭ್ಯ ಸೇರಿದಂತೆ ಯುವಜನತೆಗೆ
ಉದ್ಯೋಗ ದೊರಕಿಸಲು ಪ್ರಯತ್ನಿಸುತ್ತೇನೆ.

‘ದಪ್ಪ ಅಕ್ಷರದಲ್ಲಿ ಬರೆಯಿರಿ’

‘ಹಿಂದೆ ನಮ್ಮ (ಬಿಜೆಪಿ) ಸರ್ಕಾರದ ಅವಧಿಯಲ್ಲಿ ಮರಳು ಪಡೆಯಲು ಪಾಸ್ ನೀಡಲಾಗುತ್ತಿತ್ತು. ಇದರಿಂದ ಸುಮಾರು ₹220 ಕೋಟಿ ರಾಜಸ್ವ ಬಂದಿತ್ತು. ಜನರಿಗೆ ಕಡಿಮೆ ದರದಲ್ಲಿ ಮರಳು ಸಿಕ್ಕಿತ್ತು. ಆದರೆ, ಕಳೆದ ಐದು ವರ್ಷಗಳಲ್ಲಿ ಬಡವರಿಗೆ ಮರಳು ಸಿಕ್ಕಿಲ್ಲ, ಸರ್ಕಾರಕ್ಕೂ ರಾಜಸ್ವ ಬಂದಿಲ್ಲ. ಕೆಲವು ಕುಳಗಳು ಕೋಟ್ಯಧಿಪತಿಗಳು ಆಗಿದ್ದಾರೆ. ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುತ್ತೇನೆ. ಸದನದಲ್ಲೂ ದನಿ ಎತ್ತುತ್ತೇನೆ. ಇದನ್ನು ದಪ್ಪ ಅಕ್ಷರಗಳಲ್ಲಿ ದೊಡ್ಡದಾಗಿ ಬರೆಯಿರಿ’ ಎಂದು ನೆಹರು ಓಲೇಕಾರ ಹೇಳಿದರು.

‘ಜನ ಸಂಪರ್ಕ ಇಲ್ಲದವ ಅಯೋಗ್ಯ’

ಜನ ಸಂಪರ್ಕ ಇಲ್ಲದ ಜನಪ್ರತಿನಿಧಿ ಅಥವಾ ಅಧಿಕಾರಿಯೇ ‘ಅಯೋಗ್ಯ’. ಜನ ಹೇಳುವ ಮೊದಲೇ, ಸಮಸ್ಯೆ ಅರಿತು ಸ್ಪಂದಿಸಬೇಕು. ‘ಇಷ್ಟು ದಿನ ಎಲ್ಲಿದ್ದಿಯೋ?’ ಎಂದು ಜನ ಕೇಳುವಂತಾಗಬಾರದು. ಅವನನ್ನು ಕಂಡಕೂಡಲೇ ಜನರು ಮುಗುಳ್ನಗುವಂತಿರಬೇಕು’ ಎಂದ ಓಲೇಕಾರ, ‘ಜನ ಸ್ಪಂದನೆಗಾಗಿ ನಗರದಲ್ಲಿನ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ‘ಶಾಸಕರ ಕಚೇರಿ’ ತೆರೆದು ಒಬ್ಬರನ್ನು ನೇಮಕ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT