ಮನಸ್ಸೂ ಘಮ್ಮೆನ್ನಲಿ

7

ಮನಸ್ಸೂ ಘಮ್ಮೆನ್ನಲಿ

Published:
Updated:
ಮನಸ್ಸೂ ಘಮ್ಮೆನ್ನಲಿ

ಖಿನ್ನತೆ ಎಂದಾಕ್ಷಣ ಕಾಯಿಲೆಯ ಲಕ್ಷಣವೇ ಎಂದುಕೊಳ್ಳಬೇಕಿಲ್ಲ. ಸಣ್ಣ ಬೇಸರ, ದುಗುಡ, ದುಮ್ಮಾನ, ಒಳಬೇಗುದಿ, ಅಸಮಾಧಾನ, ಬೇಸರ... ಹೀಗೆ ದೈನಂದಿನ ಕೆಲಸಗಳ ಮಧ್ಯೆ ಧುತ್ತನೆ ಕಾಡುವ ಸಂಗತಿಗಳನ್ನೆಲ್ಲ ಖಿನ್ನತೆ ಎಂಬ ವಿಸ್ತೃತ ರೂಪದ ಟ್ಯಾಗ್‌ಲೈನ್‌ನಲ್ಲಿಟ್ಟು ಮಾತನಾಡೋಣ.

ಖಿನ್ನತೆ ಕಾಡಿದಾಗ ಮನಸ್ಸು ಮಾತ್ರವಲ್ಲ ಮುಖವೂ ಬಾಡುವುದು ಸಹಜ. ಅದು ನಮ್ಮ ಮೇಲೆ ಪರಿಣಾಮ ಬೀರಿದರೆ ನೋಡಿದವರೆಲ್ಲ ‘ಯಾಕೆ ಸಪ್ಪಗಿದ್ದೀರಿ?’ ಎಂದು ಕೇಳುತ್ತಾರೆ. ಯಾಕೆಂದರೆ ಮುಖ ಮನಸ್ಸಿನ ಕನ್ನಡಿ. ಹಾಗಿದ್ದರೆ ಖಿನ್ನತೆ ನಮ್ಮ ಒಳಗನ್ನು ಕಾಡದಂತೆ ಉಪಾಯ ಕಂಡುಕೊಳ್ಳೋಣ ಬನ್ನಿ.

ಲಿಫ್ಟ್‌, ಬಸ್, ರೈಲು, ವಿಮಾನದಲ್ಲಿ ಯಾವುದೋ ಸಹಪ್ರಯಾಣಿಕರು ಪೂಸಿಕೊಂಡ ಸುಗಂಧದ್ರವ್ಯದ ಸುವಾಸನೆ ನಮ್ಮನ್ನು ಹಿಡಿದಿಡುತ್ತದೆ. ನಮ್ಮದೇ ಮನೆಯ ಅಂಗಳದಲ್ಲೋ, ಕುಂಡದಲ್ಲೋ, ಪಕ್ಕದ ಮನೆಯಿಂದಲೇ ತೂರಿಬರುವ ಮಲ್ಲಿಗೆಯ ಘಮ, ಪಕಳೆಯೊಂದಿಗೇ ಬಿರಿದುಕೊಳ್ಳುವ ಗುಲಾಬಿಯ ಸುವಾಸನೆಯನ್ನೂ ಕಣ್ಮುಚ್ಚಿ ಆಘ್ರಾಣಿಸುತ್ತೇವೆ. ಆ ಕ್ಷಣ ನಮ್ಮನ್ನು ಆವರಿಸಿಕೊಳ್ಳುವ ಸಂತೃಪ್ತಿಗೆ ಇನ್ಯಾವುದೂ ಸಾಟಿಯಿಲ್ಲ ಎಂದು ಅನಿಸುತ್ತದೆ. ಪ್ರಕೃತಿ, ನಮಗೆ ದಯಪಾಲಿಸಿರುವ ಚಿಕಿತ್ಸೆ ಇದು!

ಸುಗಂಧದ್ರವ್ಯಗಳನ್ನು ಆಘ್ರಾಣಿಸಿದಾಗ ಅರೆಕ್ಷಣ ಗಾಳಿಯಲ್ಲಿ ತೇಲಾಡಿದಂತಹ ಅನುಭವವಾಗುತ್ತದೆ. ಮಿದುಳಿನ ಮೇಲೆ ಸುಗಂಧಗಳು ಬೀರುವ ಪರಿಣಾಮವೇ ಇದಕ್ಕೆ ಕಾರಣ. ‘ಯಾಕೋ ಬೇಜಾರಾಗುತ್ತಿದೆ’, ‘ಯಾವ ಕೆಲಸ ಮಾಡೋದೂ ಬೇಡ ಅನಿಸುತ್ತಿದೆ’, ‘ಯಾಕೋ ಮೂಡೇ ಇಲ್ಲ’ ಎಂದು ಅನಿಸುತ್ತಿದ್ದರೆ ಸಿಟ್ರಸ್‌ ಅಂಶ ಅಥವಾ ಸುಗಂಧವಿರುವ ದ್ರವ್ಯವನ್ನು ಸಿಂಪಡಿಸಿಕೊಳ್ಳಿ. ದ್ರವ್ಯ ಇಲ್ಲದಿದ್ದರೆ ಸಾಬೂನನ್ನು ಆಘ್ರಾಣಿಸಿ ಅಥವಾ ಅದನ್ನು ಹಚ್ಚಿಕೊಂಡು ಚೆನ್ನಾಗಿ ಕೈಕಾಲು ಮುಖ ತೊಳೆದುಕೊಳ್ಳಿ! ಮಂಕಾಗಿರುವ ಮನಸ್ಸನ್ನು ಪ್ರಫುಲ್ಲಗೊಳಿಸಲು ಸಿಟ್ರಸ್‌ (ಲಿಂಬೆ, ಕಿತ್ತಳೆ, ಮೂಸಂಬಿಯಂತಹ ಸುವಾಸನೆ ಬೀರುವ) ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಅಧ್ಯಯನದಿಂದ ಸಾಬೀತಾಗಿರುವ ಅಂಶ. 

‘ಬೆಳಿಗ್ಗೆ ಸರಿ ಇದ್ಯಲ್ಲೋ ಈಗ ಏನಾಯ್ತು’ ಎಂದು ನೀವೇ ಯಾರನ್ನಾದರೂ ವಿಚಾರಿಸಿರಬಹುದು; ನಿಮ್ಮನ್ನು ಯಾರಾದರೂ ಕೇಳಿರಬಹುದು. ಸಂಗಾತಿಯ ಇರುವಿಕೆ, ಮಾತು ಸಹ ಅಪಥ್ಯವಾಗುವುದಿದೆ. ಇಂತಹ ಮೂಡ್‌ ಸರಿಪ‍ಡಿಸಿಕೊಳ್ಳಲು ಸುಗಂಧರಾಜದಂತಹ ಹೂವಿನ ಪರಿಮಳ ನೆರವಾದೀತು. ವಿದೇಶದಲ್ಲಿ ‘ಟ್ಯೂಬ್‌ರೋಸ್‌’, ‘ಮಸ್ಕ್‌ ವೆನಿಲಾ’ ಎಂಬ ಹೂವುಗಳ ಸುಗಂಧವಿರುವ ದ್ರವ್ಯ, ಶೇವಿಂಗ್‌ ಕ್ರೀಂ ಮತ್ತು ಶೇವಿಂಗ್‌ ನಂತರದ ಲೋಷನ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ.

ಮಲ್ಲಿಗೆ, ಕಿತ್ತಳೆ ಅಥವಾ ಕಹಿ ಮತ್ತು ಒಗರು ವಾಸನೆ ಖಿನ್ನತೆಯನ್ನು ಆ ಕ್ಷಣದಲ್ಲಿ ಒದ್ದೋಡಿಸಬಲ್ಲದು. ದ್ರಾಕ್ಷಿಯ ಪರಿಮಳ, ಲೈಂಗಿಕ ಶಕ್ತಿ ವೃದ್ಧಿಸಬಲ್ಲದಂತೆ. ಷಿಕಾಗೊದ ಸಂಸ್ಥೆಯೊಂದು ನಡೆಸಿದೆ ಎನ್ನಲಾಗಿರುವ ಅಧ್ಯಯನ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ದ್ರಾಕ್ಷಿ ಸುವಾಸನೆಯು ತನ್ನ ಸಂಗಾತಿ ಇನ್ನೂ ಸಣ್ಣ ವಯಸ್ಸಿನವಳು ಎಂಬ ಭಾವವನ್ನು ಪುರುಷರಲ್ಲಿ ಮೂಡಿಸುತ್ತದೆಯಂತೆ.

ಪೆಪ್ಪರ್‌ಮಿಂಟ್‌, ಅದರಲ್ಲೂ ಲಿಂಬೆ, ಕಿತ್ತಳೆ ರುಚಿ ಮತ್ತು ಸುವಾಸನೆಯುಳ್ಳ ಪೆಪ್ಪರ್‌ಮಿಂಟ್‌ ಕೆಲವರಿಗೆ ಅತ್ಯಂತ ಮೆಚ್ಚಿನದ್ದಾಗಿರುತ್ತದೆ. ಆ ಕ್ಷಣಕ್ಕೆ ಒಳ್ಳೆಯ ರೀತಿಯಲ್ಲಿ ಮತ್ತು ಕ್ಷಿಪ್ರವಾಗಿ ಕೆಲಸ ನಿರ್ವಹಿಸಲು, ಆತ್ಮವಿಶ್ವಾಸ ಹೆಚ್ಚಿಸಿಕೊಂಡು ತಮ್ಮೊಳಗೆ ಸ್ಫೂರ್ತಿ ತುಂಬಿಕೊಳ್ಳಲು ಈ ಎರಡೂ ರುಚಿ ಮತ್ತು ಸುವಾಸನೆ ಉತ್ತೇಜಕವಾಗುತ್ತದೆ.

ಖಿನ್ನತೆ ಮತ್ತು ಮನೋರೋಗದಿಂದ ಬಳಲುತ್ತಿರುವವರಿಗೆ ಮೀನುಗಳ ಸಖ್ಯ, ಅವುಗಳ ಚಲನೆಯನ್ನು ಗಮನಿಸುವುದು ಅತ್ಯುತ್ತಮ ಪರಿಹಾರ ಮಾರ್ಗ ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಪುಟಾಣಿ ಮೀನುಗಳ ಚಲನೆಯನ್ನು ಗಮನಿಸುತ್ತಾ ತಮ್ಮ ಇರುವಿಕೆಯನ್ನೇ ಮರೆಯುವಂತಾಗುತ್ತದೆ. ಮೀನುಗಳು ಆಗೊಮ್ಮೆ ಈಗೊಮ್ಮೆ ಪುಳಕ್ಕನೆ ಹಾರಿ ನೀರು ಚಿಮ್ಮುವುದು, ಪರಸ್ಪರ ಮುತ್ತಿಕ್ಕಿಕೊಳ್ಳುವುದು, ಬಾಲವನ್ನಷ್ಟೇ ಆಡಿಸುವುದು, ಇದ್ದಲ್ಲೇ ನಿದ್ದೆ ಮಾಡುವಂತೆ ಅರೆಕ್ಷಣ ತೇಲುವುದು, ಕಣ್ಣಾಮುಚ್ಚಾಲೆ ಆಡುವುದು, ಇವೆಲ್ಲದಕ್ಕೆ ಪೂರಕವಾಗಿ ನಡೆಯುವ ಬೆಳಕಿನ ವಕ್ರೀಭವನದ ಪರಿಣಾಮಗಳು.. ಅಕ್ವೇರಿಯಂ ನೋಡುವಾಗ ಸಿಗುವ ಮನರಂಜನೆ ಅಷ್ಟಿಷ್ಟಲ್ಲ.

ಪ್ರಕೃತಿಯ ಮಧ್ಯೆ ಅಂದರೆ ಉದ್ಯಾನವನ, ನದಿ, ಸಮುದ್ರ, ಆಕಾಶ, ಮೋಡಗಳನ್ನು ನೋಡುತ್ತಾ ಕಾಲ ಕಳೆಯುವುದರಿಂದ ಮಾನಸಿಕ ಆರೋಗ್ಯದ ಮೇಲಾಗುವಷ್ಟೇ ಧನಾತ್ಮಕ ಪರಿಣಾ ಅಕ್ವೇರಿಯಂ ವೀಕ್ಷಣೆಯಿಂದಲೂ ಸಿಗುತ್ತದೆ ಎನ್ನುತ್ತಾರೆ ತಜ್ಞರು. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಎಷ್ಟೊಂದು ಸರಳೋಪಾಯಗಳಿವೆ. ಅಲ್ವೇ?

***

ಹೂವಿನ ಗಂಧವೇ ಚಿಕಿತ್ಸೆಯಾಯ್ತು!

ನ್ಯೂಯಾರ್ಕ್‌ ನಗರದ ರಂಗಭೂಮಿ ನಿರ್ದೇಶಕಿ, ನಟಿ ಎಲಾಯ್ಸ್‌ ವಾಟ್‌ 29ರ ಹರೆಯದಲ್ಲೇ ತೀವ್ರವಾದ ಖಿನ್ನತೆಯ ರೋಗದಿಂದ ಬಳಲುತ್ತಿದ್ದರು. ಮೂರ್ನಾಲ್ಕು ವರ್ಷ ಸತತವಾಗಿ ಔಷಧಿಗಳನ್ನು ಸೇವಿಸುತ್ತಿದ್ದ ಎಲಾಯ್ಸ್‌ ರೋಗಮುಕ್ತರಾದದ್ದು ಔಷಧಿರಹಿತ ಚಿಕಿತ್ಸೆಯಿಂದ. ಅವರು ಮೊರೆಹೋದುದು ಬಗೆ ಬಗೆಯ ಸುವಾಸನೆಗಳನ್ನು ಆಘ್ರಾಣಿಸುವ ‘ಚಿಕಿತ್ಸೆ’ಗೆ.

ಇಡೀ ಜಗತ್ತನ್ನೇ ನಕಾರಾತ್ಮಕ ದೃಷ್ಟಿಯಿಂದ ನೋಡುತ್ತಿದ್ದ ಎಲಾಯ್ಸ್‌ ಈ ‘ಫ್ಲವರ್‌ ರೆಮಿಡಿ’ಯ ಪರಿಣಾಮವಾಗಿ ಮೂರು ದಶಕದಿಂದಲೂ ಧನಾತ್ಮಕ ಶಕ್ತಿಯನ್ನು ಸಂಪಾದಿಸಿಕೊಂಡಿದ್ದಾರಂತೆ. ಅಮೆರಿಕದ ‘ಫ್ಲವರ್‌ ಎಸೆನ್ಸ್ ಸೊಸೈಟಿ’ಯಲ್ಲಿ ಹೂವಿನ ಸುಗಂಧ ಚಿಕಿತ್ಸೆಯ ತರಬೇತಿಯನ್ನೂ ಪಡೆದ ಎಲಾಯ್ಸ್‌ ಅದರ ಬಗ್ಗೆ ಸಂದರ್ಶನವೊಂದರಲ್ಲಿ ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು.

ನಾವೇ ನೆಟ್ಟ ಗಿಡಗಳಲ್ಲಿ ಮೊಗ್ಗು ಕಟ್ಟಿಕೊಂಡ ಕ್ಷಣದಿಂದಲೇ ಅದು ಹೂವಾಗಿ ಅರಳುವುದನ್ನು ನೋಡಲು ಕಾತರಿಸುತ್ತೇವೆ. ಹೂವುಗಳನ್ನು ತದೇಕಚಿತ್ತದಿಂದ ನೋಡುತ್ತಿದ್ದರೆ ಸುತ್ತಮುತ್ತಲನ್ನೇ ಮರೆತುಬಿಡುತ್ತೇವೆ. ಬಣ್ಣ, ಬಣ್ಣಗಳ ಸಂಯೋಜನೆ, ಕುಸುಮಗಳು, ಮಕರಂದ, ಪಕಳೆಗಳ ವಿನ್ಯಾಸ ಮತ್ತು ಒಟ್ಟಾರೆ ಸೌಂದರ್ಯವನ್ನು ಗಮನವಿಟ್ಟು ನೋಡುವುದರಿಂದ ಹೂವಿನ ಲೋಕದಲ್ಲಿನ ಹೊಸ ಸಂಗತಿಗಳ ಬಗ್ಗೆ ಯೋಚಿಸುವಂತಾಗುತ್ತದೆ.

ಮನೋವಿಜ್ಞಾನದ ಪ್ರಕಾರ, ಪ್ರಕೃತಿಗೆ ಎಲ್ಲ ಸಮಸ್ಯೆಗಳನ್ನೂ ಮರೆಸುವ ಸಾಮರ್ಥ್ಯ ಇದೆ. ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೂ ಪ್ರಕೃತಿಯೇ ಅತ್ಯುತ್ತಮ ಚಿಕಿತ್ಸಕಿ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry