ಕೌಶಲ ಅಭಿವೃದ್ಧಿ ಯೋಜನೆಯಡಿ ಉದ್ಯೋಗ ಗಿಟ್ಟಿಸಲು ಸಲಹೆ

7
ಮಾಜಿ ಸೈನಿಕರ ರ್‍ಯಾಲಿ

ಕೌಶಲ ಅಭಿವೃದ್ಧಿ ಯೋಜನೆಯಡಿ ಉದ್ಯೋಗ ಗಿಟ್ಟಿಸಲು ಸಲಹೆ

Published:
Updated:
ಕೌಶಲ ಅಭಿವೃದ್ಧಿ ಯೋಜನೆಯಡಿ ಉದ್ಯೋಗ ಗಿಟ್ಟಿಸಲು ಸಲಹೆ

ಮಡಿಕೇರಿ: ‘ಪ್ರಧಾನಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯಡಿ ಮಾಜಿ ಸೈನಿಕರು ಉದ್ಯೋಗ ಪಡೆಯಲು ಮುಂದಾಗಬೇಕು’ ಎಂದು ಭಾರತೀಯ ಭೂಸೇನೆಯ ದಕ್ಷಿಣ ವಿಭಾಗದ ಸೇನಾ ಮುಖ್ಯಸ್ಥ ಲೆ.ಜ.ದಿವಾನ್ ರವೀಂದ್ರನಾಥ್ ಸೋನಿ ಕರೆ ನೀಡಿದರು.

ಭಾರತೀಯ ಸೇನೆಯ ಕರ್ನಾಟಕ ಹಾಗೂ ಕೇರಳ ಸಬ್ ಏರಿಯಾ ವತಿಯಿಂದ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ಭಾನುವಾರ ನಡೆದ ಮಾಜಿ ಸೈನಿಕರ ರ್‍ಯಾಲಿಯಲ್ಲಿ ಅವರು ಮಾತನಾಡಿದರು.

‘ಮಾಜಿ ಸೈನಿಕರಿಗೆ ಹಾಗೂ ಅವರ ಅವಲಂಬಿತ ಕುಟುಂಬದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಅವುಗಳನ್ನು ಬಳಸಿಕೊಳ್ಳಬೇಕು, ಜತೆಗೆ ಮಕ್ಕಳನ್ನು ಸೇನೆಗೆ ಸೇರಿಸಲು ಪ್ರೋತ್ಸಾಹ ನೀಡಬೇಕು’ ಎಂದು ಅವರು ಕರೆ ನೀಡಿದರು.

ಸರ್ಕಾರದಿಂದ ಪಿಂಚಣಿ ಸೌಲಭ್ಯ, ಭೂಮಿ ಒದಗಿಸುವುದು, ಮಕ್ಕಳ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ, ಕಂದಾಯ ರಿಯಾಯಿತಿ... ಹೀಗೆ ಹಲವು ಸೌಲಭ್ಯಗಳಿವೆ. ಇವುಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.

ಮಾಜಿ ಸೈನಿಕರಿಗೆ ಇಸಿಎಚ್‌ಎಸ್ ಆಸ್ಪತ್ರೆಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳಲ್ಲಿ ಉತ್ತಮ ಆರೋಗ್ಯ ಸೇವೆ ಪಡೆಯಬಹುದು. ಎಲ್ಲ ಆಸ್ಪತ್ರೆಗಳಲ್ಲಿ ನಗದು ರಹಿತ ವಹಿವಾಟು ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಮೇಜರ್ ಜನರಲ್ ಸಂಜೀವ್ ನಾರಾಯಣ ಮಾತನಾಡಿ, ‘ಭಾರತೀಯ ಸೇನೆಯಲ್ಲಿ ಕೊಡಗಿನ ಸೈನಿಕರು ವೀರ ಸೇನಾನಿಗಳಾಗಿ ಕಾರ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದು ಸ್ಮರಿಸಿದರು.

ಸೈನಿಕ ಕಲ್ಯಾಣ ಇಲಾಖೆಯ ನಿರ್ದೇಶಕ ಎಸ್.ಬಿ.ಸಜನ್ ಮಾತನಾಡಿ, ‘ಮಾಜಿ ಸೈನಿಕರು ಸೇನೆಯಲ್ಲಿ ನಿವೃತ್ತರಾದ ನಂತರ ಜಿಲ್ಲಾ ಮಟ್ಟದಲ್ಲಿರುವ ಸೈನಿಕ ಕಲ್ಯಾಣ ಇಲಾಖೆಗೆ ತೆರಳಿ, ಅಗತ್ಯ ದಾಖಲೆಗಳ ಪ್ರತಿಯನ್ನು ನೀಡಿ ಹೆಸರು ನೋಂದಾಯಿಸಿ ಗುರುತಿನ ಚೀಟಿ ಪಡೆಯಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಲೆ.ಕರ್ನಲ್ ಗೀತಾ ಮಾತನಾಡಿ, ‘ಮಾಜಿ ಸೈನಿಕರ ಮಕ್ಕಳ ಶಾಲೆ-ಕಾಲೇಜು ಪ್ರವೇಶಕ್ಕೆ, ಉದ್ಯೋಗದಲ್ಲಿ ಮೀಸಲಾತಿ, ಮದುವೆಗೆ ₹ 50 ಸಾವಿರದವರೆಗೆ ಸಹಾಯಧನ, ಮೈಸೂರು, ಕಾರವಾರ, ಬೆಳಗಾವಿ ಮತ್ತಿತರ ಕಡೆಗಳಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳಿವೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಭೂಮಿಗೆ ಸಂಬಂಧಿಸಿ ಸುಮಾರು 400ಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ಬಾಕಿ ಇದ್ದು, ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಅವರು ತಿಳಿಸಿದರು.

ಮೇಜರ್ ಜನರಲ್ ಎಸ್.ಕೆ.ಕಾರ್ಯಪ್ಪ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕೆ.ಸಿ. ಸುಬ್ಬಯ್ಯ, ಸಂಚಾಲಕ ಮೇಜರ್ ಬಿ.ಎ.ನಂಜಪ್ಪ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಕಾರ್ಯದರ್ಶಿ ಕೆ.ಜಿ.ಉತ್ತಪ್ಪ, ಪ್ರಾಂಶುಪಾಲ ಪ್ರೊ.ಪಟ್ಟಡ ಪೂವಣ್ಣ, ತಹಶೀಲ್ದಾರ್ ಗೋವಿಂದರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry