ಕೈಗೆಟುಕದ ನಿವೇಶನ ಭಾಗ್ಯ

7
14 ವರ್ಷ ಕಳೆದರೂ ಸೌಲಭ್ಯವಿಲ್ಲ; ಹೊಸ ಶಾಸಕರ ಮುಂದಿದೆ ಸವಾಲು

ಕೈಗೆಟುಕದ ನಿವೇಶನ ಭಾಗ್ಯ

Published:
Updated:
ಕೈಗೆಟುಕದ ನಿವೇಶನ ಭಾಗ್ಯ

ಮಾಲೂರು: ಪಟ್ಟಣದ 1,236 ಮಂದಿ ನಿವೇಶನ ರಹಿತರು ಸೋರಿನ ಸೌಲಭ್ಯಕ್ಕಾಗಿ 14 ವರ್ಷಗಳಿಂದ ಕಾಯುತ್ತಿದ್ದರೂ ಸೌಲಭ್ಯ ಎನ್ನುವುದು ಮರೀಚಿಕೆಯಾಗಿದೆ. ಇಂದು ಕೊಡುವರು ನಾಳೆ ಕೊಡುವರು ಎಂದು ನಿವೇಶನಗಳತ್ತ ಜನರು ಆಸೆಯ ನೋಟ ಬೀರಿದ್ದಾರೆ. ಆದರೆ ಸೌಲಭ್ಯ ಮಾತ್ರ ದೊರೆತಿಲ್ಲ.

ಏನಿದು ಸೂರಿನ ಸಮಸ್ಯೆ: 2004ರಲ್ಲಿ ಪುರಸಭೆಯು ಆಶ್ರಯ ಯೋಜನೆ ಅಡಿ ಪಟ್ಟಣದ ಬಡ ಜನರಿಗೆ ನಿವೇಶನ ನೀಡಲು ನಿರ್ಧರಿಸಿತು. ಪರಿಶಿಷ್ಟ‌‌ ಜಾತಿ ಮತ್ತು ವರ್ಗದ ಜನರಿಗೆ ₹ 2,500 ಮತ್ತು ಸಾಮಾನ್ಯ ವರ್ಗಕ್ಕೆ ₹ 5 ಸಾವಿರ ಮುಂಗಡ ಹಣ ಪಾವತಿಸಲು ಸೂಚಿಸಲಾಯಿತು. ಅದರಂತೆ 1,236 ಮಂದಿ ಹಣ ಕಟ್ಟಿದರು. ಈ ಹಣದಿಂದ 16.30 ಎಕರೆ ಜಮೀನನ್ನು ಖರೀದಿಸಲಾಯಿತು. 2004 ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಾಲೂರಿಗೆ ಬಂದಿದ್ದ ವೇಳೆ ಕೆಲವು ಫಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರಗಳನ್ನು ನೀಡಿದರು.

2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಎಸ್.ಎಂ.ಕೃಷ್ಣಯ್ಯ ಶೆಟ್ಟಿ ಶಾಸಕರಾಗಿ ಆಯ್ಕೆಯಾದರು. ಆಗ ನಿವೇಶನ ನೀಡುವ ಕಾರ್ಯ ಸ್ಥಗಿತಗೊಂಡಿತ್ತು. ಕೃಷ್ಣಯ್ಯ ಶೆಟ್ಟಿ ಶಾಸಕರಾಗಿ ಆಯ್ಕೆಯಾಗಿ 10 ವರ್ಷ ಅಧಿಕಾರದಲ್ಲಿದ್ದರು. ಅವರು ಸೂರಿಲ್ಲದ ಫಲಾನುಭವಿಗಳಿಗೆ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿದರು. ನಿವೇಶನಕ್ಕಾಗಿ ಹಣ ಕಟ್ಟಿದ್ದ ಫಲಾನುಭವಿಗಳು ಮನೆ ಕಟ್ಟಿಸಿಕೊಡುವುದಾಗಿಯೂ ತಿಳಿಸಿದರು.

ಆಗ ಹಣ ಕಟ್ಟಿದ್ದ ನಾಗರಿಕರು ಮತ್ತೆ ₹ 30 ಸಾವಿರ ಡಿಡಿ ತಂದು ಒಪ್ಪಿಸಿದರು. ಫಲಾನುಭವಿಗಳಿಂದ ಒಟ್ಟು ₹ 2.90 ಕೋಟಿ ಸಂಗ್ರಹವಾಯಿತು. ಅದನ್ನು ಬ್ಯಾಂಕ್ ಖಾತೆಯಲ್ಲಿ ಇಡಲಾಗಿದೆ. ಆಶ್ರಯ ಸಮಿತಿಯಿಂದ ಖರೀದಿಸಿದ್ದ 16.30 ಎಕರೆ ಜಮೀನಿನಲ್ಲಿ 2.30 ಎಕರೆಯನ್ನು ಕೃಷ್ಣಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೇ ಕಾಲೇಜು ಕಟ್ಟಡ ನಿರ್ಮಾಣಕ್ಕೆ ನೀಡಿದ್ದರು.

ಇದರಿಂದ ನಿವೇಶನ ನೀಡಲು ಭೂಮಿಯ ಕೊರತೆ ಉಂಟಾಗಿದ್ದರಿಂದ ಬಡವರ ಸೂರಿನ ಕಣಸು ನನಸಾಗಲಿಲ್ಲ. 2014 ರಲ್ಲಿ ಜೆಡಿಎಸ್ ಪಕ್ಷದಿಂದ ಕೆ.ಎಸ್.ಮಂಜುನಾಥ್ ಗೌಡ ಶಾಸಕರಾಗಿ ಆಯ್ಕೆಯಾದರು. ಆರಂಭದಲ್ಲಿ ಸೂರು ಇಲ್ಲದ ಜನರ ಬಗ್ಗೆ ಕಾಳಜಿ ತೋರಿಸಿದರು. ಆದರೆ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ಸೂರು ನೀಡುವ ಕಾರ್ಯ ಸ್ಥಗಿತಗೊಂಡಿತು.

ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಕಳೆದ ಜ.10 ರಂದು ಬಡ ಜನರಿಗೆಗೆ ನಿವೇಶನ ನೀಡುವಂತೆ ಒತ್ತಾಯಿಸಿ ಪುರಸಭೆ ಅಧಿಕಾರಿಗಳ ವಿರುದ್ಧ ಅಹೋ ರಾತ್ರಿ ಧರಣಿ ನಡೆಸಿದರು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಸತ್ಯವತಿ ಅವರು 3 ತಿಂಗಳಲ್ಲಿ ಫಲಾನುಭವಿಗಳಿಗೆ ನಿವೇಶನ ನೀಡುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಿದರು. ಆದರೆ ವಿಧಾನ ಸಭೆ ಚುನಾವಣೆ ಕಾರಣ ನಿವೇಶನ ನೀಡುವ ಕಾರ್ಯ ಮುಂದಕ್ಕೆ ಹೋಯಿತು.

ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವೈ.ನಂಜೇಗೌಡ ಶಾಸಕರಾಗಿ ಆಯ್ಕೆಯಾಗಿದ್ದಾರೆ. 14 ವರ್ಷಗಳಿಂದ ಬಕ ಪಕ್ಷಿಗಳಂತೆ ನಿವೇಶನಕ್ಕಾಗಿ ‌ಕಾದು ಕುಳಿತಿರುವ ಬಡ ಜನರಿಗೆ ನಿವೇಶನ ದೊರಕಿಸಿಕೊಡಬೇಕಾದ ದೊಡ್ಡ ಜವಾಬ್ದಾರಿ ಅವರ ಮೇಲಿದೆ.

ಶೀಘ್ರ ನಿವೇಶನ

ನಿವೇಶನ ರಹಿತರಿಂದ ಸಂಗ್ರಹಿಸಿದ್ದ ₹ 2.90 ಕೋಟಿ ಬ್ಯಾಂಕ್ ಖಾತೆಯಲ್ಲಿ ಜೋಪಾನವಾಗಿದೆ. ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ನಿವೇಶನ ನೀಡುವುದು ವಿಳಂಬವಾಗಿದೆ.  ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಅವರ ಮನವೊಲಿಸಲಾಗುವುದು. ಶೀಘ್ರವಾಗಿ ನಿವೇಶನಗಳನ್ನು ನೀಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಎಂ.ರಾಮಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ದೇವರು ಒಳ್ಳೆಯದು ಮಾಡುವುದಿಲ್ಲ

ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ನಮಗೆ ನಿವೇಶನ ನೀಡುವುದಾಗಿ ತಿಳಿಸಿ ಹಣ ಕಟ್ಟಿಸಿಕೊಂಡು 14 ವರ್ಷಗಳು ಕಳೆದಿದೆ.  ಒಡವೆಗಳನ್ನು ಅಡವಿಟ್ಟು ಹಣ ಕಟ್ಟಿದ್ದೇವೆ. ಇದುವರೆಗೂ ನಿವೇಶನ ನೀಡಿಲ್ಲ. ನಮ್ಮನ್ನು ಗೋಳಾಡಿಸುತ್ತಿರುವ ಪುರಸಭೆ ಅಧಿಕಾರಿಗಳಿಗೆ ದೇವರು ಒಳ್ಳೆಯದು ಮಾಡಲ್ಲ ಎಂದು ಫಲಾನುಭವಿ ನಾರಾಯಣಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಹೋರಾಟದ ಎಚ್ಚರಿಕೆ

ಆಶ್ರಯ ಸಮಿತಿ ಜಿಲ್ಲಾಧಿಕಾರಿ ಸೂಚನೆಯಂತೆ ಕೂಡಲೇ ನಿವೇಶಗಳನ್ನು ವಿತರಿಸಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ದಿನೇಶ್ ಗೌಡ ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry