ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಬೆಂಡೆಯ ಬೆಡಗು!

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ಜಿ. ಕೃಷ್ಣಪ್ರಸಾದ್

‘ಬೆಂಡೆ, ಗುಳ್ಸುಂಡೆ ಹಾಕ್ಸಾರ್ ಮಾಡೇಳ್ಲೆ ಗೆಂಡ್ತಿಮ್ಮಿ..’ ಹೀಗೆ ಜನಪದರ ಮಾತುಕತೆ, ಕೀಟಲೆ, ಹಾಡು, ಗಾದೆ, ಪೋಲಿ ಸಂಭಾಷಣೆಗಳಲ್ಲಿ ತಪ್ಪದೇ ಇಣುಕುವ ಬೆಂಡೆ ಹಳ್ಳಿಗರ ನೆಚ್ಚಿನ ತರಕಾರಿ. ಬೆಂಡೆಯ ಲೋಳೆಗೆ ಮೂಗು ಮುರಿಯುವ ಮಂದಿ, ಹೋಟೆಲ್‍ನ ಬೆಂಡೆ ಮಸಾಲೆಗೆ ಬಾಯಿ ಬಿಡುತ್ತಾರೆ. ರಗಳೆ ಇಲ್ಲದೇ ಕೃಷಿ ಮಾಡಬಹುದು ಎಂಬುದು ಬೆಂಡೆಯ ಮತ್ತೊಂದು ಹೆಗ್ಗಳಿಕೆ.

ಇಥಿಯೋಪಿಯಾದ ಏರಿತ್ರಿಯಾ ಹಾಗೂ ಸುಡಾನ್‍ನ ಒಣಭೂಮಿಯಲ್ಲಿ ಜನ್ಮ ತಳೆದ ಬೆಂಡೆಯನ್ನು ಅಲ್ಲಿನ ದನಗಾಹಿ ಬಂಟು ಜನಾಂಗ ಈಜಿಪ್ಟ್‌ನ ನೈಲ್ ನದಿ ತೀರಕ್ಕೆ ತಂದರು. ಅಲ್ಲಿಂದ ಅರಬರ ಮೂಲಕ ಬೆಂಡೆಯು ಭಾರತ ಮತ್ತು ಚೀನಾಕ್ಕೆ ಬಂತು. 17ನೇ ಶತಮಾನದಲ್ಲಿ ಗುಲಾಮರಾಗಿ ಅಮೆರಿಕಕ್ಕೆ ಬಂದ ಆಫ್ರಿಕನ್ನರು, ತಮ್ಮ ಜತೆ ಬೆಂಡೆಯನ್ನೂ ಕೊಂಡೊಯ್ದರು. ಅಮೆರಿಕಾದ ಬಿಳಿಯರ ಮೂಲಕ ಯುರೋಪಿಗೆ ಬಂತಾದರೂ, ಯುರೋಪಿಯನ್ನರಿಗೆ ಬೆಂಡೆ ರುಚಿಸಲಿಲ್ಲ.

ಕನ್ನಡ ನಾಡಿಗೂ ಬೆಂಡೆಗೂ ಇನ್ನಿಲ್ಲದ ನಂಟು! ಚಾಲುಕ್ಯರ ದೊರೆ ಮೂರನೇ ಸೋಮೇಶ್ವರನಿಗೆ ಬೆಂಡೆಕಾಯಿಯ ಭಕ್ಷ್ಯ ಅತ್ಯಂತ ಪ್ರಿಯವಾಗಿತ್ತು. ಬೆಂಡೆಕಾಯಿ ಬೀಜದ ಪ್ರಸಾದದಿಂದಲೇ ದೊಡ್ಡಮ್ಮ ತಾಯಿಯನ್ನು ಮಂಟೇಸ್ವಾಮಿ ಸೃಷ್ಟಿಸಿದರು ಎಂದು ಜನಪದ ಕಾವ್ಯದಲ್ಲಿ ಉಲ್ಲೇಖವಿದೆ. ಆಲೆಮನೆ ಮಂದಿಗೆ ಬೆಂಡೆಕಾಯಿ ಅಲ್ಲ, ಇಡೀ ಗಿಡವೇ ಬೇಕು! ಬೆಂಡೆಗಿಡದ ಕಾಂಡವನ್ನು ಜಜ್ಜಿ ರಸ ತೆಗೆದು, ಬೆಲ್ಲದ ಪಾಕಕ್ಕೆ ಸೇರಿಸುವುದು ಸರ್ವೇಸಾಮಾನ್ಯ. ಇದರಿಂದ ಕಬ್ಬಿನ ಹಾಲಿನಲ್ಲಿರುವ ಕಲ್ಮಶ ಮೇಲೆ ತೇಲುತ್ತದೆ; ಬೆಲ್ಲದ ಗುಣಮಟ್ಟ ಹೆಚ್ಚುತ್ತದೆ. ಪಂಚತಾರಾ ಹೋಟೆಲುಗಳ ಚಿತ್ರ-ವಿಚಿತ್ರ ಮೆನುಗಳಲ್ಲೂ ಬೆಂಡೆ ಸ್ಥಾನ ಪಡೆದಿದೆ.

ದೇಸಿ ವೈವಿಧ್ಯದ ಸೊಬಗು
ಹೆಚ್ಚು ಆರೈಕೆ ಕೇಳದೆ ಬೆಳೆಯುವ ಬೆಂಡೆಯ ಅನೇಕ ನಾಡು ತಳಿಗಳು ನಮ್ಮಲ್ಲಿವೆ. ಮಲೆನಾಡಿನ ಮೊಳಕೈ ಉದ್ದದ ಮಿಕದ ಕೊಂಬಿನ ಬೆಂಡೆ, ಆಳೆತ್ತರ ಮೀರಿ ಬೆಳೆವ ತುಮಕೂರು ಮತ್ತು ಕೋಲಾರದ ಮರಬೆಂಡೆ, ಬೆಂಗಳೂರು ಗ್ರಾಮಾಂತರದ ಮೃದು ಹಸಿರು ಬೆಂಡೆ, ಗದಗ- ಕೊಪ್ಪಳದ ಒಣಭೂಮಿಯಲ್ಲಿ ಸಾಲುಬಿತ್ತನೆಯಾಗಿ ಬೆಳೆಯುವ ದೊಡ್ಡ ಬೆಂಡೆ... ಹೀಗೆ ಪ್ರದೇಶದಿಂದ ಪ್ರದೇಶಕ್ಕೆ ಬೆಂಡೆಯ ಆಕಾರ, ಬಣ್ಣ ಬದಲಾಗುತ್ತ ಹೋಗುತ್ತದೆ. ಹೆಸರಿಲ್ಲದ ಸ್ಥಳೀಯ ಬೆಂಡೆ ತಳಿಗಳು ನೂರಾರಿವೆ. ಸಾಗುವಳಿ ಮಾಡದ ಕಸ್ತೂರಿ ಬೆಂಡೆ, ತಿನ್ನಲು ಬಾರದ ಕಾಡು ಬೆಂಡೆ ಹೊಲದ ಅಂಚಿನಲ್ಲಿ ಆಗೀಗ ಕಾಣಿಸಿಕೊಳ್ಳುತ್ತವೆ.

ತರಕಾರಿ ಕೃಷಿ ಆಧುನಿಕಗೊಂಡಂತೆಲ್ಲ, ಅಂಗಡಿಯಿಂದ ಬೀಜ ತಂದು ಬಿತ್ತುವ ಪರಿಪಾಠ ಹೆಚ್ಚುತ್ತಿದೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಿದ್ದ ದೇಸಿ ಬೆಂಡೆ ತಳಿಗಳು ಇಂದು ಬೆಳೆಸುವವರಿಲ್ಲದೇ ಕಣ್ಮರೆಯಾಗುತ್ತಿವೆ.

ಅವನತಿಯ ಹಾದಿಯಲ್ಲಿರುವ ದೇಸಿ ಬೆಂಡೆ ತಳಿಗಳನ್ನು ಮತ್ತೆ ಹೊಲಕ್ಕೆ ತಂದು, ಬೆಳೆಸಿ ಉಳಿಸುವ ಕೆಲಸವನ್ನು ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದ ಶಂಕರ್ ಎಚ್.ಸಿ. ಮತ್ತು ರೂಪಾ ದಂಪತಿ ಮಾಡಿದ್ದಾರೆ. ಹೇಳಿ ಕೇಳಿ ಹುಣಸೂರು ಮತ್ತು ಪಿರಿಯಾಪಟ್ಟಣ ತಂಬಾಕಿನ ಕಣಜ. ಇಲ್ಲೆಲ್ಲಾ ಲಕ್ಷಗಳ ಮಾತು. ಹಣ ಹೂಡಿ, ಹಣ ಗೆಲ್ಲಲು ಬ್ಯಾಂಕುಗಳು ನಾ ಮುಂದು, ತಾ ಮುಂದು ಎಂದು ಸಾಲ ಕೊಡಲು ನಿಲ್ಲುತ್ತವೆ. ಮಳೆ ಕೈ ಕೊಟ್ಟು, ಪರ್ಮಿಟ್ ಸಿಗದೇ, ಬೆಳೆ ರೋಗಕ್ಕೆ ತುತ್ತಾದರೆ ಸಾಲದ ಹೊರೆ ಹೆಗಲಿಗೇರುತ್ತದೆ. ಸಾಲ ತೀರಿಸಲು ಮತ್ತೊಮ್ಮೆ ಸಾಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ತಂಬಾಕು ಮಾಯೆಯಿಂದ ಹೊರಬಂದ ಬೆರಳೆಣಿಕೆಯಷ್ಟು ರೈತರಲ್ಲಿ ಶಂಕರ್ ಕೂಡ ಒಬ್ಬರು. ಸಹಜ ಕೃಷಿಕರ ಬಳಗದ ಸದಸ್ಯರಾದ ಶಂಕರ್‌ಗೆ ಸಹಜವಾಗಿಯೇ ದೇಸಿ ತಳಿಗಳ ಬಗ್ಗೆ ಒಲವು ಮೂಡಿತು. ದೇಶದ ವಿವಿಧ ಭಾಗಗಳಲ್ಲಿ ನಡೆದ ಬೀಜ ಮೇಳಗಳಲ್ಲಿ ಭಾಗವಹಿಸಿ, ಅನೇಕ ರೀತಿಯ ಬೀಜಗಳನ್ನು ಸಂಗ್ರಹಿಸಿದರು. ಹೈದರಾಬಾದಿನ ಬೀಜ ಮೇಳಕ್ಕೆ ಹೋಗಿದ್ದಾಗ, ಅಲ್ಲಿ ಪ್ರದರ್ಶಿಸಲ್ಪಟ್ಟಿದ್ದ ಕೆಂಪು ಬೆಂಡೆ ಇವರನ್ನು ಆಕರ್ಷಿಸಿತು. ಅಲ್ಲಿಂದ ಬೆಂಡೆ ಬೀಜ ಸಂಗ್ರಹಿಸುವ ಹುಚ್ಚು ಅಚ್ಚುಮೆಚ್ಚಾಯಿತು.
‘ನಮ್ಮ ಊರು ತರಕಾರಿ ಕೃಷಿಗೆ ಹೆಸರುವಾಸಿ. ಇಲ್ಲಿಂದ ಪ್ರತಿದಿನ ಮಂಗಳೂರು, ಕೇರಳಕ್ಕೆ ತರಕಾರಿ ಟೆಂಪೊ ಹೋಗುತ್ತವೆ. ತರಕಾರಿ ಬೆಲೆ ಕುಸಿತ ಆದ ಸಂದರ್ಭದಲ್ಲಿ ನಮಗೆ ಟೆಂಪೊ ಬಾಡಿಗೆಯೂ ಗಿಟ್ಟಲ್ಲ. ಬಂದ ಲಾಭವೆಲ್ಲ ಔಷಧಿ, ಬೀಜ, ಗೊಬ್ಬರಕ್ಕೇ ಸರಿ ಹೋಗುತ್ತದೆ. ಜಾಸ್ತಿ ಖರ್ಚು ಇಲ್ಲದೆ ಬೆಳೆಯೋ ಬೆಂಡೆ ತಳಿಗಳನ್ನು ಉಳಿಸಬೇಕು. ಜಾಸ್ತಿ ಮಾಡಿ ರೈತರಿಗೆ ಹಂಚಬೇಕು’ ಎನ್ನುತ್ತಾ ದೇಸಿ ಬೆಂಡೆ ತಳಿಗಳ ಸಂರಕ್ಷಣೆಯ ಹಿನ್ನೆಲೆ ಬಿಚ್ಚಿಡುತ್ತಾರೆ ಶಂಕರ್.

ದೇಸಿ ಬೆಂಡೆ ತಳಿಗಳ ಸಂರಕ್ಷಣೆಗೆ ನಿರ್ಧರಿಸಿದ ಶಂಕರ್‌ಗೆ ‘ಸಹಜ ಸಮೃದ್ಧ’ ಸಾಥ್ ನೀಡಿತು. ‘ಭಾರತ್ ಬೀಜ ಸ್ವರಾಜ್ ಮಂಚ್’ನ ಸದಸ್ಯರಿಂದ ದೇಶದ ವಿವಿಧ ಭಾಗಗಳಿಂದ ಬಗೆ ಬಗೆಯ ದೇಸಿ ಬೆಂಡೆ ತಳಿಗಳ ಬೀಜಗಳನ್ನು ಸಂಗ್ರಹಿಸಲಾಯಿತು. ಒಡಿಶಾದ ಮುಳ್ಳು ಬೆಂಡೆ, ಬಿಳಿ ಬೆಂಡೆ ಮತ್ತು ಹಸಿರು ಉದ್ದ ಬೆಂಡೆ, ಆಂಧ್ರ ಪ್ರದೇಶದ ಸ್ಥಳೀಯ ಬೆಂಡೆ, ಪಶ್ಚಿಮ ಬಂಗಾಳದ ಕೆಂಪು ಬೆಂಡೆ, ಹಸಿರು ಮೂಲೆಯ ಬಹುವರ್ಣದ ಬೆಂಡೆ ಮತ್ತು ಸ್ಥಳೀಯ ಬೆಂಡೆ ತಳಿಗಳ ಬೀಜ ಸಂಗ್ರಹಿಸಲಾಯಿತು. ಪಾಂಡಿಚೇರಿಯ ಬೀಜ ಸಂರಕ್ಷಕಿ ದೀಪಿಕಾ ಕುಂದಾಜೆ ತಮ್ಮ ಸಂಗ್ರಹದ ಹಸಿರು ನಕ್ಷತ್ರ ಬೆಂಡೆ ಮತ್ತು ಶ್ರೀಲಂಕಾ ಬೆಂಡೆ ತಳಿಯ ಬೀಜಗಳನ್ನು ಶಂಕರ್‌ಗೆ ಕೊಡುಗೆಯಾಗಿ ನೀಡಿದರು.

ಸಂಗ್ರಹವಾದ 15 ದೇಸಿ ಬೆಂಡೆ ತಳಿಗಳನ್ನು ಏರುಮಡಿ ವಿಧಾನದಲ್ಲಿ ಬೆಳೆಸಲಾಯಿತು. ಕೊಟ್ಟಿಗೆ ಗೊಬ್ಬರ, ಒಂದಷ್ಟು ಸಸ್ಯಮೂಲ ಕೀಟನಾಶಕ, ಕಷಾಯದ ಆರೈಕೆ ಬಿಟ್ಟರೆ ಹೆಚ್ಚೇನೂ ಮಾಡಲಿಲ್ಲ. ಫೆಬ್ರುವರಿ ಮೊದಲ ವಾರ ಬೀಜ ಬಿತ್ತನೆ, ಮೇ ಮೊದಲ ವಾರಕ್ಕೆ ಕುಯಿಲು ಆರಂಭವಾಯಿತು.

ಗ್ರಾಮಸ್ಥರಿಗೆ ಆಕರ್ಷಣೆ

ಬೆಂಡೆಯೆಂದರೆ ಹಸಿರು ಎಂದು ಮಾತ್ರ ತಿಳಿದಿದ್ದ ಹಿಟ್ನೆ ಹೆಬ್ಬಾಗಿಲಿನ ಗ್ರಾಮಸ್ಥರಿಗೆ ಶಂಕರ್ ಮತ್ತು ರೂಪಾ ಬೆಳೆದ ಬಣ್ಣಬಣ್ಣದ ಬೆಂಡೆ ಆಕರ್ಷಣೆ ಎನಿಸಿತು. ಬೆಂಡೆ ಹೊಲಕ್ಕೆ ಬಂದು ನೋಡುವವರ ಸಂಖ್ಯೆ ಹೆಚ್ಚಿತು. ‘ಬೆಳೆದ 15 ತಳಿಯ ಬೆಂಡೆಗಳಲ್ಲಿ ಮಾರುಕಟ್ಟೆ ಮತ್ತು ಸಾಗುವಳಿ ದೃಷ್ಟಿಯಿಂದ ಉತ್ತಮ ಎನಿಸಿದ ಒಂದೆರಡು ತಳಿಗಳನ್ನು ಪತ್ತೆ ಹಚ್ಚುವ ಕಾರ್ಯ ಅಗತ್ಯವಾಗಿತ್ತು. ಹೀಗಾಗಿ ಸಹಭಾಗಿತ್ವ ತಳಿ ಆಯ್ಕೆ ಕಾರ್ಯಕ್ರಮವನ್ನು ಆಯೋಜಿಸಿದೆವು’ ಎಂದು ಸಹಜ ಸಮೃದ್ಧದ ಕೆ.ಪಿ.ಆಶಾಕುಮಾರಿ ಉತ್ತಮ ತಳಿ ಆಯ್ಕೆಯ ಪ್ರಕ್ರಿಯೆ ವಿವರಿಸುತ್ತಾರೆ.

ಮೇ ತಿಂಗಳ ಮೂರನೇ ವಾರ ಬೆಂಡೆ ಕ್ಷೇತ್ರೋತ್ಸವ ಆಯೋಜಿಸಲಾಯಿತು. ಬೆಂಡೆ ತಳಿಗಳನ್ನು ನೋಡಲು ಹೊರಟ ಪ್ರತಿಯೊಬ್ಬರ ಕೈಗೂ ಒಂದು ಬಣ್ಣದ ದಾರ ಕೊಟ್ಟು, ತಮ್ಮ ಇಷ್ಟದ ತಳಿಯ ಹೆಸರಿನ ಫಲಕಕ್ಕೆ ಕಟ್ಟಲು ಸೂಚಿಸಲಾಯಿತು. ‘ಓ! ಇದು ಬೆಂಡೇನಾ? ಹಾಗಲಕಾಯಿ ಇದ್ದಂಗಿದೆ!’- ಹಸಿರುಮೂಲೆ ಬೆಂಡೆ ನೋಡಿದ ಗಣೇಶ್ ಉದ್ಗರಿಸಿದರು. ಕೆಂಪು, ಬಹುವರ್ಣದ ಬೆಂಡೆ ತಳಿ ನೋಡಿದವರ ಪ್ರತಿಕ್ರಿಯೆಯೂ ಇದೇ ತೆರನಾಗಿತ್ತು.
ರೈತರು ಕಟ್ಟಿದ ಬಣ್ಣದ ದಾರಗಳ ಸಂಖ್ಯೆ ಆಧರಿಸಿ, ಉತ್ತಮ ಬೆಂಡೆಯ ತಳಿಯನ್ನು ರೈತರೆದುರು ಘೋಷಿಸಲಾಯಿತು. ಒಡಿಶಾದ ಮುಳ್ಳು ಬೆಂಡೆ ಮತ್ತು ಕೆಂಪು ಬೆಂಡೆ, ಹಸಿರುಮೂಲೆ ಬೆಂಡೆ ( ಗ್ರೀನ್ ಸ್ಟಾರ್) ರುಚಿ, ಮೃದುತ್ವ, ಇಳುವರಿ, ರೋಗ ಕೀಟಗಳ ನಿರೋಧಕತೆ, ನಾರಿನಂಶಗಳ ದೃಷ್ಟಿಯಿಂದ ಉತ್ತಮ ಎನಿಸಿ ಮೆಚ್ಚುಗೆಗೆ ಪಾತ್ರವಾದವು.

‘ನಂಗೆ ಎಲ್ಲಾ ಬೆಂಡೆನೂ ಇಷ್ಟ. ಯಾವ ಮಗುನೂ ನಾವು ಕೈಬಿಡಕಾಗಲ್ಲ ಅಲ್ವಾ? ಒಂದಲ್ಲಾ ಒಂದು ಒಳ್ಳೇ ಗುಣ ಎಲ್ಲಾ ತಳೀಗೂ ಐತೆ’ ಎನ್ನುವ ಬೆಂಡೆ ಬೆಳೆದ ರೂಪಾ ಅವರಿಗೆ ದೇಸಿ ತಳಿಗಳನ್ನು ಜತನದಿಂದ ಸಂರಕ್ಷಿಸುವ ಉಮೇದು. ಸಹಜ ಕೃಷಿಕರ ಬಳಗದ ಅಧ್ಯಕ್ಷ ಕಾಳಪ್ಪ ಅವರು, ಸಮುದಾಯ ಬೀಜ ಬ್ಯಾಂಕ್‍ನಲ್ಲೂ ದೇಸಿ ಬೆಂಡೆಗಳನ್ನು ಸಂರಕ್ಷಿಸುವ ಹಾಗೂ ಆಸಕ್ತರಿಗೆ ಹಂಚುವ ಜವಾಬ್ದಾರಿ ವಹಿಸಿಕೊಂಡರು.

ಮೈಸೂರಿನ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅರವಿಂದ್ ತಳಿಗಳ ಗುಣಲಕ್ಷಣಗಳನ್ನು ದಾಖಲು ಮಾಡಿದರು. ‘ದೇಸಿ ಬೆಂಡೆ ತಳಿಗಳು ಸ್ವಾದಿಷ್ಟ ಮತ್ತು ಪೌಷ್ಟಿಕಾಂಶ ದೃಷ್ಟಿಯಿಂದ ಉತ್ತಮವಾದವು. ಇತ್ತೀಚೆಗೆ ಸಾವಯವ ತರಕಾರಿಗಳ ಬಗ್ಗೆ ಒಲವು ಹೆಚ್ಚುತ್ತಿದೆ. ಹೀಗಾಗಿ ಸಾಂಪ್ರದಾಯಿಕ ಹಸಿರು ಬೆಂಡೆ ಜತೆಗೆ ಬಹುವರ್ಣದ, ಕೆಂಪು ಬೆಂಡೆ ಬೆಳೆಯುವುದರಿಂದ ರೈತರಿಗೆ ಆರ್ಥಿಕ ಲಾಭ ಸಿಗುತ್ತದೆ’ ಎಂದು ದೇಸಿ ಬೆಂಡೆಗೆ ಶಹಭಾಸ್‍ಗಿರಿ ಕೊಡುತ್ತಾರೆ.

‘ಬೆಂಡೆಕಾಯಿ ಬೆಳೆದ ನಿನಗೆ ತಿನ್ನಾಕಿಲ್ ಗೆಂಡೇ; ಮೆಣಸಿನಕಾಯಿ ಬೆಳೆದ ಶೂರ ಕಣ್ಣಿಗೆ ಬಿತ್ತು ಖಾರ’ ಎಂಬ ಹಾಡಿನ ಸಾಲುಗಳು ರೈತ ಹೋರಾಟದ ದಿನಗಳಲ್ಲಿ ರೈತರ ಬಾಯಲ್ಲಿ ನಲಿದಾಡುತ್ತಿದ್ದವು. ರಾಸಾಯನಿಕ ತರಕಾರಿ ಕೃಷಿಗೆ ಸೋತಿರುವ ಬೆಂಡೆ ಬೆಳೆಗಾರರು, ನಷ್ಟದ ಬಾಧೆ ತಡೆಯಲಾರದೆ ಬೆಂಡೆ ಕೃಷಿಯನ್ನೇ ಕೈಬಿಡುತ್ತಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿರುವ ಗ್ರಾಹಕರಿಗೆ ದೇಸಿ ತಳಿಗಳತ್ತ ಒಲವು ಹೆಚ್ಚುತ್ತಿದೆ. ಬಹುವರ್ಣದ ಬೆಂಡೆ ತಳಿಗಳನ್ನು ಮಾರುಕಟ್ಟೆಗೆ ಪರಿಚಯಿಸುವ, ಆ ಮೂಲಕ ಮಾರುಕಟ್ಟೆ ಗೆಲ್ಲುವ ಅವಕಾಶ ಬೆಂಡೆ ರೈತರಿಗೆ ಒದಗಿ ಬಂದಿದೆ. ಕೊನೆಪಕ್ಷ ಮನೆಮಟ್ಟಕ್ಕಾದರೂ ಬಣ್ಣಬಣ್ಣದ ದೇಸಿ ಬೆಂಡೆ ಬೆಳೆದುಕೊಳ್ಳುವ ಅವಕಾಶ ಇದ್ದೇ ಇದೆಯಲ್ಲ.

ಮಾಹಿತಿಗೆ: 9164989440 ಬೀಜಗಳಿಗೆ: 9108128123 

**
ವಿಶೇಷ ಬೆಂಡೆ ತಳಿಗಳು

ಮುಳ್ಳು ಬೆಂಡೆ: ಒಡಿಶಾ ಮೂಲದ ತಳಿ. ಸಾಧಾರಣ ಗಾತ್ರದ ಹಸಿರು ಕಾಯಿಗಳ ಮೇಲೆ ಸಣ್ಣ ಸಣ್ಣ ರೋಮಗಳಿರುತ್ತವೆ. ಎಳಸಾಗಿದ್ದು, ತಿಂದವರು ಮತ್ತೆ ತಿನ್ನಬೇಕೆನ್ನುವ ಬಯಕೆ ಹುಟ್ಟಿಸುತ್ತದೆ. ಹಸಿರು ಮೂಲೆ ಬೆಂಡೆ: ನೋಡಲು ಹಾಗಲಕಾಯಿ ತರ ಕಾಣುವ, ಗಿಡ್ಡವಾಗಿ ದಪ್ಪನಾಗಿರುವ ಕಾಯಿಗಳ ಅಪರೂಪದ ತಳಿ. ಕಾಯಿಯ ಅಂಚುಗಳು ಹೆಚ್ಚಿದ್ದು, ನಕ್ಷತ್ರದ ಆಕಾರದಲ್ಲಿದೆ. ಹಸಿಯಾಗಿ ತಿನ್ನಬಹುದು. ಉತ್ತಮ ಇಳುವರಿ ಕೊಡುತ್ತದೆ.

ಬಹುವರ್ಣದ ಬೆಂಡೆ: ನಕ್ಷತ್ರದ ಆಕಾರದ ಹಸಿರು ಕೆಂಪು ವರ್ಣದ ಪುಟ್ಟ ಕಾಯಿಗಳ ತಳಿ. ಗಿಡದ ತುಂಬಾ ಕಾಯಿಗಳ ಜಾತ್ರೆ. ತಿನ್ನಲು ಮೃದುವಾಗಿದ್ದು, ಕಡಿಮೆ ಲೋಳೆ ಹೊಂದಿರುತ್ತದೆ. ಕೆಂಪು ಬೆಂಡೆ: ಹೆಸರೇ ಹೇಳುವಂತೆ ಕಾಯಿಯ ಬಣ್ಣ ಗಾಢ ಕೆಂಪು. ಗಿಡದ ಕಾಂಡ, ಎಲೆ ತೊಟ್ಟು ಎಲ್ಲವೂ ಕೆಂಪು ಕೆಂಪು. ಆಧಿಕ ಇಳುವರಿ ಕೊಡುತ್ತದೆ. ಮಾರುಕಟ್ಟೆಯಲ್ಲಿ ಗೆಲ್ಲುವ ಅವಕಾಶ ಇರುವ ತಳಿ. ಹಸಿರು ಉದ್ದ ಬೆಂಡೆ: ಹಸಿರು ಬಣ್ಣದ, ಮೃದುವಾದ, ಅಡಿಗೆಗೆ ಉತ್ತಮವಾದ ತಳಿ. ಇಳುವರಿಯೂ ಉತ್ತಮ.
ಮಿಕದ ಕೊಂಬಿನ ಬೆಂಡೆ: ಸಾಗರ ತಾಲ್ಲೂಕಿನ ಮೊಣಕೈ ಉದ್ದದ ಕಾಯಿಗಳ ಅಪರೂಪದ ತಳಿ. ಮನೆ ಬಳಕೆಗೆ ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT