ಸಾವಯವ ಮಾವಿನ ಹಣ್ಣಿಗೆ ಬೇಡಿಕೆ

7
ಕನಕಗಿರಿ: ವಿವಿಧ ತಳಿಯ ಮಾವಿನ ಗಿಡಗಳು, ಉತ್ತಮ ಆದಾಯ

ಸಾವಯವ ಮಾವಿನ ಹಣ್ಣಿಗೆ ಬೇಡಿಕೆ

Published:
Updated:
ಸಾವಯವ ಮಾವಿನ ಹಣ್ಣಿಗೆ ಬೇಡಿಕೆ

ಕನಕಗಿರಿ: ಹಣ್ಣುಗಳ ರಾಜ ಎಂದು ಕರೆಸಿಕೊಳ್ಳುವ ಮಾವಿನ ಹಣ್ಣಿಗೆ ಈಗ ಎಲ್ಲಿಲ್ಲದ ಬೇಡಿಕೆ. ಗಂಗಾವತಿಯ ರೈತ ಜಿ.ಸತ್ಯರಾಜ ಅವರು 19 ಎಕರೆಯಲ್ಲಿ 1,500 ಮಾವಿನ ಗಿಡಗಳನ್ನು ಬೆಳೆಸಿದ್ದು, ಉತ್ತಮ ಫಸಲು ನೀಡುತ್ತಿವೆ.

ಕನಕಗಿರಿ–ಕೊಪ್ಪಳ ರಸ್ತೆಯಲ್ಲಿ ಸತ್ಯರಾಜ ಅವರ ತೋಟವಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕ ಔಷಧಿ ಬಳಕೆ ಮಾಡದೆ ಸಾವಯವ ಗೊಬ್ಬರ ಹಾಕಿ ಗಿಡಗಳನ್ನು ಬೆಳೆಸಲಾಗಿದೆ ಎಂಬುದು ವಿಶೇಷ.

ಗಿಡಗಳಿಗೆ ರೋಗ ಬಂದರೆ ಬೇವಿನ ರಸ, ಐದಾರು ದಿನಗಳ ಕಾಲ ಸಂಗ್ರಹಿಸಿದ ಮಜ್ಜಿಗೆ ಸಿಂಪಡಣೆ ಮಾಡಿ ಬೆಳೆಗಳನ್ನು ರಕ್ಷಿಸಲಾಗಿದೆ. ಉದುರಿದ ಮಾವಿನ ಎಲೆಗಳನ್ನು ಗಿಡದ ಕೆಳಗೆ ಹಾಕಿ ಮಣ್ಣಿನಿಂದ ಮುಚ್ಚಲಾಗುತ್ತಿದೆ.

ಮಾವಿನ ಜತೆಗೆ ಮಿಶ್ರ ಬೆಳೆಯಾಗಿ ಸಜ್ಜೆ, ತೊಗರಿ, ಲಿಂಬು, ಬದನೆಕಾಯಿ ಸೇರಿ ಇತರೆ ಬೆಳೆ ಹಾಗೂ ತರಕಾರಿ ಬೆಳೆಯಲಾಗಿದೆ. ಆರು ವರ್ಷದ ಹಿಂದೆ ಭೂಮಿಯನ್ನು ಖರೀದಿಸಿರುವ ಸತ್ಯರಾಜು ಅವರು ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

ಬೇನಿಸ್, ದೊಡ್ಡರಸಲು, ಸಣ್ಣ ರಸಲು, ಚಿಲ್ಕಿರಸಲೂ, ಬಾದಾಮಿ ಸೇರಿ ವಿವಿಧ ತಳಿಯ ಮಾವಿನ ಗಿಡಗಳಿವೆ. ಈವರೆಗೆ ಮೂರು ಬಾರಿ ಫಸಲು ಬಂದಿದೆ. ಗಿಡವೊಂದರಿಂದ 50 ಕೆಜಿ ಮಾವಿನ ಕಾಯಿಗಳು ಸಿಕ್ಕಿವೆ.

ಮಾವಿನ ಕಾಯಿ ಹಣ್ಣು ಮಾಡುವಾಗ ಯಾವುದೇ ರಾಸಾಯನಿಕ ಬಣ್ಣ ಬಳಸದೆ ನೈಸರ್ಗಿಕವಾಗಿ ದಿನಕ್ಕೆ ಐದು ಕ್ವಿಂಟಲ್ ಕಾಯಿಗಳನ್ನು ಹಣ್ಣು ಮಾಡಲಾಗುತ್ತದೆ. ಸುತ್ತಲೂ ಗುಡ್ಡಗಾಡು ಪ್ರದೇಶ ಇರುವ ಕಾರಣ ಕರಡಿಗಳ ಕಾಟ ಹೆಚ್ಚಾಗಿದೆ. ಕಳ್ಳರಿಂದ ಬೆಳೆ ಉಳಿಸಿಕೊಳ್ಳಲು ಪ್ರತಿದಿನ ಏಳು ಜನ ಹಗಲಿರುಳು ಎನ್ನದೆ ತೋಟ ಸುತ್ತಾಡುತ್ತಾರೆ ಎಂದು ಮಾಲೀಕ ಸತ್ಯರಾಜು ತಿಳಿಸಿದರು.

ತೋಟವನ್ನು ಗುತ್ತಿಗೆ ಪಡೆದಿರುವ ಕೃಷಿ ಪ್ರೇಮಿ ಸಿಂಧನೂರಿನ ಹನುಮಂತಪ್ಪ ಕಂಡಕ್ಟರ್ ಹೇಳುವಂತೆ ಕಡಿಮೆ ದರ, ಹೆಚ್ಚು ಸಿಹಿ ಇರುವ ಬೇನಿಸ್‌ ತಳಿಯ ಹಣ್ಣು ಬಡವರಿಗೆ ವರದಾನವಾಗಿದೆ. ಈ ತಳಿಯ ಹಣ್ಣನ್ನು ಜಾಸ್ತಿ ಬೆಳೆಯಲಾಗಿದೆ. ಸೀಖರಣೆಗೆ ಈ ಹಣ್ಣು ಯೋಗ್ಯವಾಗಿದೆ. ಬೇರೆ ಕಡೆಗೆ ರಫ್ತು ಮಾಡುವುದಿಲ್ಲ. ದಿನಕ್ಕೆ ಎರಡು ಕ್ವಿಂಟಲ್ ಹಣ್ಣನ್ನು ತೋಟದ ಪಕ್ಕದಲ್ಲಿ ಟೆಂಟ್‌ ಹಾಕಿಕೊಂಡು ಕುಟುಂಬದ ಸದಸ್ಯರು ಮಾರಾಟ ಮಾಡುತ್ತಾರೆ ಎಂದು ವಿವರಿಸಿದರು.

**

ಮಾವಿನ ಗಿಡಗಳು ಹಾಳಾಗದಂತೆ ಸಾಕಷ್ಟು ಎಚ್ಚರ ವಹಿಸಿದ್ದೇವೆ. ಆಲಿಕಲ್ಲು ಮಳೆ, ರಭಸವಾದ ಗಾಳಿ ಬೀಸಿದರೆ ಬೆಳೆ ನಾಶವಾಗುತ್ತದೆ

–  ಜಿ. ಸತ್ಯರಾಜು, ರೈತ 

ಮೆಹಬೂಬಹುಸೇನ ಕನಕಗಿರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry