ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೆನಿ ಡ್ರೀಮ್ಸ್ ಮೆನಿ ಲೈವ್ಸ್’ ಕೃತಿ ಬಿಡುಗಡೆ

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ಇಂಗ್ಲೀಷ್ ಲೇಖಕಿ ವಿಜಿ ನಾರಾಯಣನ್ ಅವರ ಚೊಚ್ಚಲ ಕಾದಂಬರಿ ‘ಮೆನಿ ಡ್ರೀಮ್ಸ್ ಮೆನಿ ಲೈವ್ಸ್’ ಬೆಂಗಳೂರಿನಲ್ಲಿ ಭಾನುವಾರ ಬಿಡುಗಡೆಯಾಯಿತು. ಹಿಗಿನ್ ಬಾಥಮ್ಸ್ ಪುಸ್ತಕ ಮಳಿಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಕ್ರೀಡಾಪಟು ನಿತ್ಯಾ ಶ್ರೀನಿವಾಸನ್ ಅವರು ಪುಸ್ತಕವನ್ನು ಬಿಡುಗಡೆ ಮಾಡಿದರು.

ಪತಿ ಮತ್ತು 13 ವರ್ಷ ವಯಸ್ಸಿನ ಮಗಳೊಂದಿಗೆ ಡೆಟ್ರಾಯ್ಟ್‍ನಲ್ಲಿ ನೆಲೆಸುವ ಮಾಯಾ ಎಂಬಾಕೆಯ ಸುತ್ತ ಈ ಕಾದಂಬರಿ ಹೆಣೆಯಲಾಗಿದೆ. ಸ್ವತಂತ್ರ ಮನೋಭಾವದ ಮಾಯಾ ತಮ್ಮ ಕಚೇರಿ ಮತ್ತು ಮನೆಗೆಲಸಗಳೆರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿರುತ್ತಾಳೆ. ತನ್ನ 40ನೇ ಹುಟ್ಟುಹಬ್ಬದ ವೇಳೆ ಬದುಕಿನ ಆದ್ಯತೆಗಳ ಬಗ್ಗೆ ಮಾಯಾ ವಿಮರ್ಶೆಗೆ ಇಳಿಯುತ್ತಾಳೆ. ತಾನು ಓದಿದ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಬರುವ ಮಾಯಾ ಹೊಸ ಜೀವನದ ಅನ್ವೇಷಣೆಯಲ್ಲಿ ತೊಡಗುವುದು ಕಾದಂಬರಿಯ ತಿರುಳು.

ಇನ್ನೊಬ್ಬರಿಗಾಗಿ ಬದುಕುವ ಮಹಿಳೆಯರ ಭಾವನಾತ್ಮಕ ನೆಲೆಗಳನ್ನು ಕಾದಂಬರಿ ಚಿತ್ರಿಸುತ್ತದೆ. ಇಂದಿಗೂ ಉದ್ಯೋಗದಲ್ಲಿ ಉನ್ನತ ಸ್ಥಾನದಲ್ಲಿರುವ, ಮೇಲ್ನೋಟಕ್ಕೆ ಸ್ವತಂತ್ರರೆಂದು ಕಾಣುವ ಮಹಿಳೆಯರು ತಮಗೆ ಬೇಕಾದಂತೆ ಬದುಕುತ್ತಿಲ್ಲ. ಬೇರೊಬ್ಬರನ್ನು ಖುಷಿಯಾಗಿಡುವುದರಲ್ಲಿಯೇ ಜೀವನ ಸೆವೆಸುತ್ತಾರೆ. ಇನ್ನೊಂದು ಜೀವನ ನಡೆಸುವ ಅವಕಾಶ ಸಿಕ್ಕಿದರೆ ನೀವು ವಿಭಿನ್ನವಾಗಿ ಬದುಕು ನಡೆಸುತ್ತೀರಾ ಎಂಬ ಪ್ರಶ್ನೆಯನ್ನು ವಿಜಿ ನಾರಾಯಣನ್ ಅವರು ಕಾದಂಬರಿ ಹುಟ್ಟುಹಾಕುತ್ತದೆ.

‘ನಮ್ಮ ಕನಸು ಮತ್ತು ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಒಂದು ಜೀವನ ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಮಹಿಳೆಯರು ತಮ್ಮ ಹೊಣೆಗಾರಿಕೆಗಳನ್ನು ನಿಭಾಯಿಸುವುದರಲ್ಲಿಯೇ ಕಾಲ ಕಳೆಯುತ್ತಾರೆ. ತಮಗಾಗಿ ಸಮಯ ಮೀಸಲಿಡುವುದಿಲ್ಲ. ಅಂಥ ಮಹಿಳೆಯರಿಗೆ ಪ್ರೇರಣೆ ನೀಡುವ ಪ್ರಯತ್ನವನ್ನು ನನ್ನ ಕಾದಂಬರಿ ಮಾಡುತ್ತದೆ’ ಎಂದು ವಿಜಿ ನಾರಾಯಣನ್ ಹೇಳಿದರು.

ಕೃತಿ ಬಿಡುಗಡೆ ಮಾಡಿದ ಕ್ರೀಡಾಪಟು ನಿತ್ಯಾ ಶ್ರೀನಿವಾಸನ್, ‘ಮಧ್ಯಮ ವಯಸ್ಸು ನಮ್ಮೆಲ್ಲರೂ ಬಿಕ್ಕಟ್ಟಿನ ಸ್ಥಿತಿ ತಂದೊಡ್ಡುತ್ತದೆ. ಜೀವನದ ಪರಾಮರ್ಶೆಗೆ ಮುಂದಾಗುವ ಕಾಲವದು. ಬದುಕಿನ ಅರ್ಥವೇನು ಎಂದು ಕಂಡುಕೊಳ್ಳಲಾರಂಭಿಸುತ್ತೇವೆ. ನಾವೇನು ಮಾಡಲು ಸಾಧ್ಯವಾಗಲಿಲ್ಲ ಎಂಬುದರ ಚಿಂತನೆಗೆ ಇಳಿಯುತ್ತೇವೆ. ನಮ್ಮ ಕುಟುಂಬ ಚೆನ್ನಾಗಿರಲು ಶಕ್ತಿ ಮೀರಿ ದುಡಿಯುತ್ತೇವೆ. ವಿಜಿ ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಇಂಥದ್ದೊಂದು ವಿನೂತನ ಕಾದಂಬರಿ ಬರೆಯಲು ಅವರಿಗೆ ಸಾಧ್ಯವಾಗಿದೆ. ಭಾರತ ಮತ್ತು ಅಮೆರಿಕದ ಕಾಲೇಜು ಜೀವನ ಮತ್ತು ದೈನಂದಿನ ಬದುಕಿನ ಸಂಘರ್ಷವನ್ನು ವಿಜಿ ನಾರಾಯಣನ್ ಚಿತ್ರೀಕರಿಸಿದ ರೀತಿ ಚೆನ್ನಾಗಿದೆ. ಪ್ರೇರಣೆ ನೀಡುವ ಕಥಾ ಹಂದರವಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಮೆರಿಕದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಮೆನಿ ಡ್ರೀಮ್ಸ್ ಮೆನಿ ಲೈವ್ಸ್ ಓದುಗರಿಂದ ಮತ್ತು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ. ಓದುಗ ಮಹಿಳೆಯರು ತಮ್ಮ ಬದುಕಿನೊಂದಿಗೆ ಕಾದಂಬರಿಯ ವಸ್ತುವನ್ನು ಸಮೀಕರಿಸಿಕೊಳ್ಳುತ್ತಿದ್ದಾರೆ. ಪುಸ್ತಕ ಪ್ರಸ್ತುತ ನೋಷನ್ ಪ್ರೆಸ್ ಪುಸ್ತಕಾಲಯ, ಅಮೆಜಾನ್, ಫ್ಲಿಪ್‍ಕಾರ್ಟ್ ಮತ್ತು ಇತರ ಆನ್‌ಲೈನ್ ಮಾರುಕಟ್ಟೆ ತಾಣಗಳಲ್ಲಿ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT