ಪಾರ್ವತಮ್ಮನ ಮಗಳ ಫಸ್ಟ್‌ ಲುಕ್‌

7

ಪಾರ್ವತಮ್ಮನ ಮಗಳ ಫಸ್ಟ್‌ ಲುಕ್‌

Published:
Updated:
ಪಾರ್ವತಮ್ಮನ ಮಗಳ ಫಸ್ಟ್‌ ಲುಕ್‌

ಕೈಯಲ್ಲಿ ಕಡುಗಪ್ಪು ಕನ್ನಡಕ, ಜೀನ್ಸ್‌ ಪ್ಯಾಂಟ್‌, ಟೀಷರ್ಟ್‌ ಮೇಲೊಂದು ಜಾಕೆಟ್‌. ಕೇಶರಾಶಿಯ ನಾಜೂಕಿಗೆ ತದ್ವಿರುದ್ಧವಾದ ತೀಕ್ಷ್ಣ ದೃಷ್ಟಿ, ಪೊಲೀಸ್‌ ಎಂದು ಕೆಂಪಕ್ಷರದಲ್ಲಿ ಬರೆದ ಜೀಪಿನ ಬಾನೆಟ್‌ ಮೇಲೆ ಕೂತ ಖಡಕ್‌ ನೋಟ...

ಹರಿಪ್ರಿಯಾ ಬದಲಾಗಿದ್ದಾರೆ. ಇದುವರೆಗೆ ಗ್ಲ್ಯಾಮರ್ ಬೆಡಗಿ, ಹಳ್ಳಿ ಹುಡುಗಿ, ಸಾಂಪ್ರದಾಯಿಕ ಮನಸ್ಥಿತಿಯ ಮುಗ್ಧ ಹುಡುಗಿ ಹೀಗೆ ಹಲವು ಪಾತ್ರಗಳಿಂದ ಬೆಳ್ಳಿಪರದೆಯ ಮೇಲೆ ಮಿಂಚಿದ್ದ ಹರಿಪ್ರಿಯಾ ಖತರನಾಕ್‌ ಪೊಲೀಸ್‌ ಅಧಿಕಾರಿಯಾಗಿ ಬದಲಾಗಿದ್ದಾರೆ.

ಈ ಬದಲಾವಣೆ ಬದುಕಿಗಾಗಿ ಅಲ್ಲ, ಸಿನಿಮಾಕ್ಕಾಗಿ. ಹರಿಪ್ರಿಯಾ ಅವರ 25ನೇ ಸಿನಿಮಾ ‘d/o ಪಾರ್ವತಮ್ಮ’ದಲ್ಲಿ ಸುಮಲತಾ ಅಂಬರೀಶ್‌ ಅವರ ಜತೆ ನಟಿಸುತ್ತಿರುವುದು ಈಗಾಗಲೇ ಸುದ್ದಿಯಾಗಿತ್ತು. ಅದರಲ್ಲಿ ಅವರು ತನಿಖಾ ಅಧಿಕಾರಿಯಾಗಿ ನಟಿಸುತ್ತಿರುವುದೂ ಗೊತ್ತಾಗಿತ್ತು. ಇದೀಗ ಚಿತ್ರತಂಡ ಹರಿಪ್ರಿಯಾ ಅವರ ಪಾತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದೆ. ಮೇ 29ರಂದು ಬಿಡುಗಡೆಯಾದ ಫಸ್ಟ್‌ ಲುಕ್‌ನ ಚಿತ್ರದಲ್ಲಿ ಖಡಕ್‌ ಲುಕ್‌ನಲ್ಲಿ ಅವರು ಮಿಂಚುತ್ತಿದ್ದಾರೆ.

ಈ ಚಿತ್ರದಲ್ಲಿ ಅವರ ಪಾತ್ರದ ಹೆಸರು ವೈದೇಹಿ. ‘ತನಿಖಾ ಅಧಿಕಾರಿಗೆ ಹೇರ್‌ಸ್ಟೈಲ್‌ ಮತ್ತೆ ಮೇಕಪ್‌ ಎಲ್ಲಾ ಮಾಡಿಕೊಳ್ಳಲು ಎಲ್ಲಿ ಪುರಸೊತ್ತಿರುತ್ತದೆ ಹೇಳಿ? ಆದ್ದರಿಂದ ಸಾಧ್ಯವಾದಷ್ಟೂ ಸಹಜವಾಗಿಯೇ ಕಾಣಬೇಕು ಎಂಬ ಉದ್ದೇಶದಿಂದ ಮೇಕಪ್‌ ಮತ್ತು ಹೇರ್‌ಸ್ಟೈಲ್‌ಗೆ ಹೆಚ್ಚು ಒತ್ತು ಕೊಟ್ಟಿಲ್ಲ. ಆದರೆ ಜಾಕೆಟ್‌ ಮತ್ತಿತರ ದಿರಿಸನ್ನು ವಿನ್ಯಾಸ ಮಾಡುವಾಗ ಹಲವು ಇಂಗ್ಲಿಷ್ ಸಿರೀಸ್‌ಗಳನ್ನು ರೆಫರೆನ್ಸ್‌ ಆಗಿ ಬಳಸಿಕೊಂಡಿದ್ದೇವೆ’ ಎಂದು ವಿವರಿಸುತ್ತಾರೆ ಹರಿಪ್ರಿಯಾ.

ರಿಷಬ್‌ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ವೈದೇಹಿ ಪಾತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಜಯತೀರ್ಥ ನಿರ್ದೇಶನದ ‘ಬೆಲ್‌ ಬಾಟಂ’ ಚಿತ್ರಕ್ಕೆ ಅವರು ವಸ್ತ್ರ ವಿನ್ಯಾಸ ಮಾಡಿದ್ದು ಇಷ್ಟವಾಗಿ ಹರಿಪ್ರಿಯಾ ಅವರೇ ಈ ಚಿತ್ರದಲ್ಲಿ ಅವರನ್ನು ಬಳಸಿಕೊಳ್ಳುವಂತೆ ಸೂಚಿಸಿದರಂತೆ.

ಫಸ್ಟ್‌ ಲುಕ್‌ ನೋಡಿದ ತಕ್ಷಣ ಇದೊಂದು ಆ್ಯಕ್ಷನ್ ಚಿತ್ರ ಅಂದುಕೊಳ್ಳಬೇಕಿಲ್ಲ. ಒಂದು ಪ್ರಕರಣದ ತನಿಖೆಯ ಸುತ್ತಲೇ ಈ ಸಿನಿಮಾ ಹೆಣೆಯಲ್ಪಟ್ಟಿದ್ದರೂ ತಾಯಿ ಮಗಳ ನಡುವಿನ ಬಾಂಧವ್ಯಕ್ಕೂ ಸಾಕಷ್ಟು ಅವಕಾಶ ಇದೆಯಂತೆ. ಹೊಸ ನಿರ್ದೇಶಕ ಶಂಕರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶಶಿಧರ್ ಹಣ ಹೂಡುತ್ತಿದ್ದಾರೆ.

ಈಗಾಗಲೇ ಹದಿನೈದು ದಿನದ ಮೊದಲ ಶೆಡ್ಯೂಲ್‌ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬುಧವಾರದಿಂದ ಎರಡನೇ ಶೆಡ್ಯೂಲ್‌ ಚಿತ್ರೀಕರಣ ಆರಂಭಿಸಲಿದೆ.

ಇಡೀ ಚಿತ್ರವನ್ನು ಬೆಂಗಳೂರಿನಲ್ಲಿಯೇ ಚಿತ್ರೀಕರಿಸಲಾಗುತ್ತದೆ. ಹರಿಪ್ರಿಯಾ ಅವರ ಜತೆ ಇಬ್ಬರು ಹೊಸ ಹುಡುಗರು ನಾಯಕರಾಗಿ ತೆರೆಯನ್ನು ಹಂಚಿಕೊಳ್ಳಲಿದ್ದಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry