ಹೆಚ್ಚುತ್ತಿವೆ ಪ್ರಿ ಸ್ಕೂಲ್‌ ಸಂಖ್ಯೆ

7

ಹೆಚ್ಚುತ್ತಿವೆ ಪ್ರಿ ಸ್ಕೂಲ್‌ ಸಂಖ್ಯೆ

Published:
Updated:
ಹೆಚ್ಚುತ್ತಿವೆ ಪ್ರಿ ಸ್ಕೂಲ್‌ ಸಂಖ್ಯೆ

ಅಮ್ಮನ ಬೆಚ್ಚನೆ ಅಪ್ಪುಗೆಯ ಪೋಷಣೆಯಲ್ಲಿ ಮನೆಯಲ್ಲಿಯೇ ಬೆಳೆಯುತ್ತಿದ್ದ ಪುಟಾಣಿಗಳು ಮೂರು ವರ್ಷವಾಗುವುದಕ್ಕೂ ಮುನ್ನವೇ ಶಾಲೆಗಳತ್ತ ಹೆಜ್ಜೆ ಹಾಕುತ್ತಿವೆ. ಮಗುವನ್ನು ಬಿಟ್ಟಿರಲಾಗದಿದ್ದರೂ ಹೊಟ್ಟೆ ಪಾಡಿಗಾಗಿ ದುಡಿಯಲೇ ಬೇಕಾದ ಅನಿವಾರ್ಯ ಪೋಷಕರದ್ದು. ಇದರಿಂದಾಗಿ ಕೆಲ ಮಕ್ಕಳು ವರ್ಷ ದಾಟುವ ಮುನ್ನವೇ ‘ಡೇ ಕೇರ್‌’, ‘ಬೇಬಿ ಕೇರ್‌’ ಪ್ರವೇಶಿಸುತ್ತಿವೆ.

ಪೋಷಕರ ಈ ಸಂಕಷ್ಟವನ್ನೇ ಬಂಡವಾಳ ಮಾಡಿಕೊಂಡು ಸಾಕಷ್ಟು ‘ಪ್ರಿ ಸ್ಕೂಲ್‌’ಗಳು ಉದ್ಯಾನನಗರಿಯಲ್ಲಿ ನಡೆಯುತ್ತಿವೆ. ಇವುಗಳಲ್ಲಿ ಹಲವು ಮಾಂಟೆಸರಿ, ಕಿಂಡರ್‌ ಗಾರ್ಟನ್‌ಗಳೂ ಇವೆ. ಮೂರು ನಾಲ್ಕು ವರ್ಷಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಾಗಿವೆ. ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ 4000ಕ್ಕೂ ಅಧಿಕ ನೋಂದಾಯಿತ ‘ಪ್ರಿ ಸ್ಕೂಲ್‌’ಗಳಿವೆ ಎಂಬ ದಾಖಲೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿದೆ.

ನೋಂದಣಿಯಾಗದ ಹಲವು ಪ್ರಿ ಸ್ಕೂಲ್‌ಗಳೂ ನಗರದಲ್ಲಿವೆ. ಎಲ್ಲ ಪ್ರಿ ಸ್ಕೂಲ್‌ಗಳು ಶಿಕ್ಷಣ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸರ್ಕಾರ 2016ರಲ್ಲಿಯೇ ಆದೇಶಿಸಿತ್ತು. ಕಳೆದ ವರ್ಷ ಎರಡು ಬಾರಿ ಸುತ್ತೋಲೆಯನ್ನೂ ಹೊರಡಿಸಿದ ನಂತರ ಇತ್ತೀಚೆಗೆ ಇವುಗಳ ನೋಂದಣಿ ಪ್ರಕ್ರಿಯೆ ಚುರುಕುಗೊಂಡಿವೆ. ಹಾಗಾಗಿ ಎರಡು ಮೂರು ತಿಂಗಳಲ್ಲಿ ಖಚಿತ ಅಂಕಿ ಅಂಶ ದೊರೆಯುತ್ತದೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಕಾರ್ಪೋರೇಟ್‌ ಶೈಲಿ

ಕೆಲ ‘ಪ್ರಿ ಸ್ಕೂಲ್‌’ಗಳಂತೂ ನಗರದ ವಿವಿಧೆಡೆ ಫ್ರಾಂಚಾಯ್ಸಿಗಳನ್ನು ತೆರೆದಿದ್ದು, ಕಾರ್ಪೊರೇಟ್‌ ಶೈಲಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ‘ಯುರೊ ಕಿಡ್ಸ್‌’ ಬೆಂಗಳೂರಿನ 80 ಹಾಗೂ ‘ಕಿಡ್‌ಜಿ’ 124 ಬಡಾವಣೆಗಳಲ್ಲಿ ಫ್ರಾಂಚಾಯ್ಸಿಗಳನ್ನು ಹೊಂದಿವೆ. ಓಐ ಸ್ಕೂಲ್‌ (20), ಬ್ರೈಟ್‌ (36), ನೀವ್‌ (5), ಆಲ್ಫಬೆಟ್‌ ಕ್ಯಾಂಪಸ್‌ (2), ಎಚ್‌ಎಸ್‌ಎಂಎಚ್‌ಸಿ, ವ್ಹಿಕೇರ್‌, ಕ್ಲೈ ಪ್ರೀಸ್ಕೂಲ್‌,

ಫನ್‌ ಅಂಡ್‌ ಲರ್ನ್‌ ಸ್ಕೂಲ್‌, ಕಿಂಗ್‌ಡಂ ಪ್ರೀ ಸ್ಕೂಲ್‌ಗಳು ಉದ್ಯಾನನಗರಿಯ ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿವೆ.

ಕೆಲವೆಡೆ ‘ಡೇ ಕೇರ್‌’ ಸೌಲಭ್ಯಗಳೂ ಇವೆ. ಆಟಕ್ಕೆ ಒತ್ತು ನೀಡುವುದರ ಜತೆಗೆ ಭಾಷೆ, ಅಕ್ಷರ, ಅಂಕಿ–ಸಂಖ್ಯೆ, ರೈಮ್ಸ್‌ಗಳ ಕಲಿಕೆಗೆ ಒತ್ತು ಈ ಶಾಲೆಗಳು ನೀಡುತ್ತಿವೆ. ಮಕ್ಕಳ ಸುರಕ್ಷೆಯನ್ನು ಬಹುತೇಕ ಪೋಷಕರು ಬಯಸುವುದರಿಂದ ಹಲವು ಪ್ರಿ ಸ್ಕೂಲ್‌ಗಳು ಒಳ ಮತ್ತು ಹೊರ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಂಡಿವೆ.

ಕೆಲ ಶಾಲೆಗಳು ಮಕ್ಕಳನ್ನು ಕರೆತರಲು ಮತ್ತು ವಾಪಸು ಮನೆಗೆ ಬಿಡಲು ವಾಹನ ಸೌಲಭ್ಯವನ್ನೂ ಹೊಂದಿವೆ. ಅವುಗಳಲ್ಲೂ ಸಿಸಿಟಿವಿ, ಜಿಪಿಎಸ್‌, ಎಸ್‌ಎಂಎಸ್‌ ಸಂದೇಶದ ವ್ಯವಸ್ಥೆಯನ್ನು ಹೊಂದಿವೆ. ಮಕ್ಕಳಿಗೆ ಸ್ನ್ಯಾಕ್ಸ್‌, ಊಟೋಪಚಾರ ಒದಗಿಸುವ ಪ್ರಿ ಸ್ಕೂಲ್‌ಗಳೂ ಇವೆ. ಪ್ರತಿ ಸೇವೆಗೂ ಇವು ಪೋಷಕರಿಂದ ಹೆಚ್ಚುವರಿ ಶುಲ್ಕ ಪಡೆಯುತ್ತಿವೆ.

78 ಅಂಗನವಾಡಿಗಳು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 78 ಅಂಗನವಾಡಿಗಳಿವೆ. ಇವುಗಳಲ್ಲಿ ಪಶ್ಚಿಮ ವಲಯದಲ್ಲಿ 26, ದಕ್ಷಿಣ ವಲಯದಲ್ಲಿ 18 ಮತ್ತು ಪೂರ್ವ ವಲಯದಲ್ಲಿ 34 ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ಕಲಿಕೆಯ ಜತೆಗೆ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣಾ ಜವಾಬ್ದಾರಿಯೂ ಇದೆ. ಬಡ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಾಗಿ ಅಲ್ಲಿಗೆ ಹೋಗುತ್ತಿದ್ದಾರೆ.

ದುಬಾರಿ ಶುಲ್ಕ

ಕಾರ್ಪೊರೇಟ್‌ ಶೈಲಿಯಲ್ಲಿ ನಡೆಯುತ್ತಿರುವ ಪ್ರಿ ಸ್ಕೂಲ್‌ಗಳಲ್ಲಿ ವರ್ಷಕ್ಕೆ ₹ 40 ಸಾವಿರದಿಂದ ₹ 70 ಸಾವಿರದವರೆಗೆ ಶುಲ್ಕ ಪಡೆಯಲಾಗುತ್ತಿದೆ. ಸಣ್ಣ ಪುಟ್ಟ ಪ್ರಮಾಣದಲ್ಲಿ ನಡೆಯುತ್ತಿರುವ ಪ್ರಿ ಸ್ಕೂಲ್‌ಗಳು ಕನಿಷ್ಠ ₹ 20 ಸಾವಿರ ಶುಲ್ಕ ನಿಗದಿಪಡಿಸಿವೆ.

ಎಲ್‌ಕೆಜಿಗೆ ಯಾವಾಗ ಸೇರಿಸಬೇಕು 

ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಮಗುವಿಗೆ 3 ವರ್ಷ 10 ತಿಂಗಳಾಗಿದ್ದರೆ ಎಲ್‌ಕೆಜಿ ಅಥವಾ ಕೆ1ಗೆ ಸೇರಿಸಬಹುದು. 4 ವರ್ಷ 10 ತಿಂಗಳಿಗೆ ಯುಜಿಕೆ/ಕೆ2 ಹಾಗೂ 5 ವರ್ಷ 5 ತಿಂಗಳಿಗೆ ಒಂದನೇ ತರಗತಿಗೆ ಮಗು ಪ್ರವೇಶ ಪಡೆಯಬಹುದು ಎಂಬುದು ನಿಯಮ. ಮಗುವು 3 ವರ್ಷ 10 ತಿಂಗಳಿಗಿಂತ ಕಡಿಮೆ ಇದ್ದರೆ ಟಾಡ್ಲರ್ಸ್‌ (Toddlers) ಅಥವಾ ಪ್ರಿ ನರ್ಸರಿ ವಿಭಾಗದಲ್ಲಿ ಪ್ರಿ ಸ್ಕೂಲ್‌ಗಳು ದಾಖಲು ಮಾಡಿಕೊಳ್ಳುತ್ತಿವೆ .

**

ವಿಫಲವಾದ ಹೊಸ ಪ್ರಯೋಗ 

ಪ್ರೀ ಸ್ಕೂಲ್‌ಗಳ ಡೊನೇಷನ್‌ ಹಾವಳಿಯಿಂದ ಬೇಸತ್ತು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಪೋಷಕರೇ ಗುಂಪು ರಚಿಸಿಕೊಂಡು ‘ಸಿಟಿಜನ್‌ ಗುರುಕುಲ್‌’ ಎಂಬ ಪ್ರೀ ಸ್ಕೂಲ್‌ 2017ರಲ್ಲಿ ಆರಂಭಿಸಿದ್ದರು. ಅದು ‘ನೋ ಪ್ರಾಫಿಟ್‌’ ಉದ್ದೇಶವನ್ನು ಒಳಗೊಂಡಿತ್ತು. ಶಾಲೆಯ ಖರ್ಚು, ವೆಚ್ಚವನ್ನು ಎಲ್ಲ ಪೋಷಕರು ಸಮನಾಗಿ ಹಂಚಿಕೊಳ್ಳುವುದು ಇದರ ಮತ್ತೊಂದು ಉದ್ದೇಶವಾಗಿತ್ತು. ಆರಂಭದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಸ್ಥಳೀಯ ಪೋಷಕರು, ನಿವಾಸಿಗಳಿಂದ ವ್ಯಕ್ತವಾಗಿತ್ತು. ಆದರೆ ವರ್ಷ ತುಂಬುವುದರೊಳಗೆ ಎದುರಾದ ಆರ್ಥಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೇ ಒಂದೇ ವರ್ಷಕ್ಕೆ ಈ ಶಾಲೆಯ ಬಾಗಿಲು ಮುಚ್ಚಬೇಕಾಯಿತು. ಹೆಚ್ಚಿನ ಮಕ್ಕಳು ದಾಖಲಾಗದಿದ್ದರಿಂದ ಆರ್ಥಿಕ ಹೊರೆ 14 ಟ್ರಸ್ಟಿಗಳ ಮೇಲೆ ಬಿತ್ತು ಎಂದು ಶಾಲೆಯ ಟ್ರಸ್ಟಿ ಅಭಿಲಾಷ್‌ ಪ್ರತಿಕ್ರಿಯಿಸಿದರು.

**

ಪ್ರಿ ಸ್ಕೂಲ್‌ಗಳಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಅವುಗಳನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ನಿಯಮ ರೂಪಿಸಿದೆ. ಅವು ಇಂತಿವೆ...

* 30 ಮಕ್ಕಳಿಗೊಂದು ಕೊಠಡಿ ಇರಬೇಕು. ಅದು ಉತ್ತಮ ಗಾಳಿ, ಬೆಳಕಿನ ಸೌಕರ್ಯದಿಂದ ಕೂಡಿರಬೇಕು. ಪ್ರತಿ ಮಗುವಿಗೂ ಒಂದು ಚದರ ಮೀಟರ್‌ ಸ್ಥಳಾವಕಾಶ ಇರಬೇಕು.

* ಸುರಕ್ಷಿತ ಆವರಣ, ಬೀಗ ಹಾಕಬಹುದಾದ ಪ್ರವೇಶದ್ವಾರ ಇರಬೇಕು.

* ಬಾಡಿಗೆ ಕಟ್ಟಡವಾಗಿದ್ದಲ್ಲಿ ಕನಿಷ್ಠ ಮೂರು ವರ್ಷಗಳ ಗುತ್ತಿಗೆ ಅವಧಿ ಹೊಂದಿರಬೇಕು.

* ಶುದ್ಧ ಕುಡಿಯುವ ನೀರು ಹಾಗು ಮಕ್ಕಳು ಸುಲಭವಾಗಿ ಉಪಯೋಗಿಸಬಹುದಾದ ಶೌಚಾಲಯ ವ್ಯವಸ್ಥೆ ಇರಬೇಕು.

* ಶಾಲಾ ಆವರಣದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಬೇಕು. ಇದರ ಬಳಕೆ ಕುರಿತು ಸಿಬ್ಬಂದಿ ತರಬೇತಿ ಪಡೆದಿರಬೇಕು.

* ಮಕ್ಕಳ ಹಾಗೂ ಸಿಬ್ಬಂದಿಯ ಹಾಜರಾತಿ ದಾಖಲಾತಿಗಳನ್ನು ನಿರ್ವಹಿಸಬೇಕು.

* ಎಲ್ಲ ಮಕ್ಕಳ ಪೋಷಕರ ಸಂಪರ್ಕದ ಮಾಹಿತಿ ಹೊಂದಿರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry