ಆರೋಗ್ಯಭಾಗ್ಯದಲ್ಲಿ ಅಧೋಗತಿ ಭಾರತದ ಸ್ಥಿತಿ ಕಳವಳಕಾರಿ

7

ಆರೋಗ್ಯಭಾಗ್ಯದಲ್ಲಿ ಅಧೋಗತಿ ಭಾರತದ ಸ್ಥಿತಿ ಕಳವಳಕಾರಿ

Published:
Updated:
ಆರೋಗ್ಯಭಾಗ್ಯದಲ್ಲಿ ಅಧೋಗತಿ ಭಾರತದ ಸ್ಥಿತಿ ಕಳವಳಕಾರಿ

ಭಾರತದಲ್ಲಿನ ಆರೋಗ್ಯಸೇವೆಗಳ ಕುರಿತಂತೆ ‘ಜಾಗತಿಕ ಆರೋಗ್ಯಸೇವೆ ಮತ್ತು ಗುಣಮಟ್ಟ ಸೂಚ್ಯಂಕ ವರದಿ’ಯಲ್ಲಿ ಇರುವ ಮಾಹಿತಿ ಕಳವಳ ಹುಟ್ಟಿಸುವಂತಿದೆ. 2016ರ ಸಾಲಿನ ‘ಗ್ಲೋಬಲ್ ಬರ್ಡನ್ ಆಫ್ ಡಿಸೀಸ್’ ವರದಿ ಪ್ರಕಾರ, ಆರೋಗ್ಯಸೇವೆಗಳಿಗೆ ಸಂಬಂಧಿಸಿದ ವಿಶ್ವ ಸೂಚ್ಯಂಕದಲ್ಲಿ ಭಾರತ 145ನೇ ಸ್ಥಾನದಲ್ಲಿದೆ. ನೆರೆಯ ಭೂತಾನ್‌ (134), ಶ್ರೀಲಂಕಾ (71) ಹಾಗೂ ಚೀನಾ (48) ದೇಶಗಳಿಗಿಂತಲೂ ಭಾರತ ಹಿಂದುಳಿದಿದೆ. ಆರೋಗ್ಯ ಸೇವೆಗಳ ಲಭ್ಯತೆ ಹಾಗೂ ಗುಣಮಟ್ಟಕ್ಕೆ ಸಂಬಂಧಿಸಿದಂತೆ 1990ರಲ್ಲಿ 153ನೇ ಸ್ಥಾನದಲ್ಲಿದ್ದ ಭಾರತ 2016ರಲ್ಲಿ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದ್ದರೂ ಈ ಪ್ರಗತಿ ಸಂತೋಷಪಡುವಂತೇನೂ ಇಲ್ಲ. ಇದೇ ಅವಧಿಯಲ್ಲಿ ಬಾಂಗ್ಲಾದೇಶ ತನ್ನ ಸ್ಥಾನವನ್ನು 180ರಿಂದ 132ಕ್ಕೆ ಸುಧಾರಿಸಿಕೊಂಡಿರುವುದು ಗಮನಾರ್ಹ. ಭಾರತದ ಮಟ್ಟಿಗೆ, ಗೋವಾ ಹಾಗೂ ಕೇರಳಗಳು ವೈದ್ಯಕೀಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಾಗಿವೆ. ಅಂತರರಾಷ್ಟ್ರೀಯ ದರ್ಜೆಯ ಆಸ್ಪತ್ರೆಗಳನ್ನೂ, ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನೂ ಹೊಂದಿರುವ ಕರ್ನಾಟಕದ ಸಾಧನೆ ಕೂಡ ಕಳಪೆಯಾಗಿದೆ. ‘ವೈದ್ಯಕೀಯ ಪ್ರವಾಸೋದ್ಯಮ’ಕ್ಕೆ ಪ್ರಸಿದ್ಧವಾಗಿರುವ ಕರ್ನಾಟಕಕ್ಕೆ ಪಶ್ಚಿಮದ ದೇಶಗಳ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಹೀಗಿದ್ದರೂ ವೈದ್ಯಕೀಯ ಸೇವೆಗಳ ಲಭ್ಯತೆ– ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕರ್ನಾಟಕ ದೇಶದಲ್ಲಿ 16ನೇ ಸ್ಥಾನದಲ್ಲಿದೆ. ರಾಜ್ಯದ ಈ ಹಿನ್ನಡೆ ಅಚ್ಚರಿ ಹುಟ್ಟಿಸುವಂತಿದೆ ಹಾಗೂ ವೈದ್ಯಕೀಯ ಸೇವೆಗಳ ಕುರಿತ ನಮ್ಮ ಪರಿಕಲ್ಪನೆಗಳ ಮರುವಿಮರ್ಶೆಗೆ ಒತ್ತಾಯಿಸುವಂತಿದೆ.

ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಆರೋಗ್ಯ ಸವಲತ್ತುಗಳನ್ನುಕಲ್ಪಿಸುವುದು ಹೆಚ್ಚು ಸವಾಲಿನಿಂದ ಕೂಡಿದೆ. ಹವಾಮಾನ, ಪರಿಸರ ಹಾಗೂ ಆಹಾರದಲ್ಲಿ ಇರುವ ವೈವಿಧ್ಯದಿಂದಾಗಿ ಏಕರೂಪದ ಆರೋಗ್ಯನೀತಿ ಇಲ್ಲಿ ಸಾಧ್ಯವಿಲ್ಲ. ದೇಶದಲ್ಲಿನ ವೈವಿಧ್ಯವನ್ನು ಆರೋಗ್ಯನೀತಿಯೂ ಪ್ರತಿಫಲಿಸುವುದು ಅನಿವಾರ್ಯ. ಛತ್ತೀಸಗಡ, ಜಾರ್ಖಂಡ್‌ ಹಾಗೂ ಬಿಹಾರದಂಥ ಹಿಂದುಳಿದ ರಾಜ್ಯಗಳಿಗೆ ವಿಶೇಷ ಗಮನ ನೀಡುವುದೂ ಅಗತ್ಯ. ದೇಶದಲ್ಲಿ ಏರುತ್ತಿರುವ ಜನಸಂಖ್ಯೆ ಕೂಡ ಆರೋಗ್ಯಸೇವೆಗಳನ್ನು ಕಲ್ಪಿಸಲು ಇರುವ ಅಡಚಣೆಗಳಲ್ಲೊಂದಾಗಿದೆ. ದೇಶದ ಒಟ್ಟು ಜಿಡಿಪಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾವು ಖರ್ಚು ಮಾಡುತ್ತಿರುವುದು ಶೇ 1.15ರಷ್ಟನ್ನು ಮಾತ್ರ. ಈ ಪ್ರಮಾಣ ಕನಿಷ್ಠ ಶೇ 5ರಷ್ಟಾದರೂ ಇರಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಆರೋಗ್ಯಸೇವೆಗಳಿಗೆ ಬ್ರೆಜಿಲ್‌ ಅಮೆರಿಕ, ಬ್ರಿಟನ್‌ ಮುಂತಾದ ದೇಶಗಳು ತಮ್ಮ ಜಿಡಿಪಿಯಲ್ಲಿ ಖರ್ಚು ಮಾಡುತ್ತಿರುವ ವೆಚ್ಚವನ್ನು ಗಮನಿಸಿದರೆ, ಭಾರತದ ಸ್ಥಾನ ಯಾವುದು ಎನ್ನುವುದು ಸ್ಪಷ್ಟವಾಗುತ್ತದೆ. 1674 ರೋಗಿಗಳಿಗೆ ಒಬ್ಬ ವೈದ್ಯನ ಅನುಪಾತ ನಮ್ಮಲ್ಲಿರುವುದು ಪರಿಸ್ಥಿತಿಯ ಸಂಕೀರ್ಣತೆಯನ್ನು ಸೂಚಿಸುವಂತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್‌ಗಳು ಬಡರೋಗಿಗಳಿಗೆ ಮರೀಚಿಕೆಯಾಗಿವೆ. ಭೂಮಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸರ್ಕಾರದಿಂದ ರಿಯಾಯಿತಿ ದರದಲ್ಲಿ ಪಡೆಯುವ ಖಾಸಗಿ ಆಸ್ಪತ್ರೆಗಳು ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಜವಾಬ್ದಾರಿಯನ್ನು ಹೊರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಒಳರೋಗಿಗಳ ವಿಭಾಗಗಳಲ್ಲಿ ಶೇ 20ರಷ್ಟು ಪ್ರಮಾಣವನ್ನು ಬಡತನ ರೇಖೆಗಿಂತ ಕೆಳಗಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಬಳಸಬೇಕು ಎಂದು ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಈ ನಿರ್ದೇಶನಗಳನ್ನು ಹೈಟೆಕ್‌ ಆಸ್ಪತ್ರೆಗಳು ಎಷ್ಟರಮಟ್ಟಿಗೆ ಪಾಲಿಸುತ್ತಿವೆ ಎನ್ನುವುದನ್ನು ಗಮನಿಸುವ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಾರ್ಪೊರೇಟ್‌ ಆಸ್ಪತ್ರೆಗಳ ಪರವಾಗಿರುವ ಆರೋಗ್ಯನೀತಿಗಳು ಸಣ್ಣಪುಟ್ಟ ಆಸ್ಪತ್ರೆಗಳನ್ನು ಹಾಗೂ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಳ್ಳದೆ ಹೋದರೆ ‘ಎಲ್ಲರಿಗೂ ಆರೋಗ್ಯ’ ಎನ್ನುವ ಆಶಯ ಘೋಷಣೆಯ ರೂಪದಲ್ಲಷ್ಟೇ ಉಳಿಯುತ್ತದೆ. ಆರೋಗ್ಯಸೇವೆಗಳನ್ನು ಒದಗಿಸುವ ಕುರಿತು ಸರ್ಕಾರ ಇನ್ನಷ್ಟು ಕಾಳಜಿ ವಹಿಸುವುದರ ಜೊತೆಗೆ, ವೈದ್ಯಕೀಯ ಸೇವೆಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry