ಫಿಕ್ಸಿಂಗ್‌ ಆರೋಪಕ್ಕೆ ಇಂಗ್ಲೆಂಡ್‌, ಆಸ್ಟ್ರೇಲಿಯಾ ಕಿಡಿ

7

ಫಿಕ್ಸಿಂಗ್‌ ಆರೋಪಕ್ಕೆ ಇಂಗ್ಲೆಂಡ್‌, ಆಸ್ಟ್ರೇಲಿಯಾ ಕಿಡಿ

Published:
Updated:
ಫಿಕ್ಸಿಂಗ್‌ ಆರೋಪಕ್ಕೆ ಇಂಗ್ಲೆಂಡ್‌, ಆಸ್ಟ್ರೇಲಿಯಾ ಕಿಡಿ

ದುಬೈ: ಭಾರತ ತಂಡದ ಜೊತೆಗೆ ನಡೆದ ಟೆಸ್ಟ್ ಪಂದ್ಯಗಳು ಫಿಕ್ಸ್‌ ಆಗಿವೆ ಎಂಬ ಆರೋಪಕ್ಕೆ ಸಂಬಂಧಿಸಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾದಿಂದ ಖಾರವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸೂಕ್ತ ದಾಖಲೆ ಒದಗಿಸುವಂತೆ ಒತ್ತಾಯಿಸಲಾಗಿದೆ.

ಇದೇ ವೇಳೆ ಶ್ರೀಲಂಕಾದಲ್ಲಿ ನಡೆದಿದ್ದ ಟೆಸ್ಟ್‌ಗೆ ಸಂಬಂಧಿಸಿ ಸೋಮವಾರ ಒಬ್ಬ ಕ್ರೀಡಾಂಗಣ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಪೊಲೀಸರು ತನಿಖೆಯನ್ನೂ ಆರಂಭಿಸಿದ್ದಾರೆ.

2017ರ ಜುಲೈ 26ರಿಂದ 29ರ ವರೆಗೆ ಗಾಲ್‌ನಲ್ಲಿ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್‌ ಪಂದ್ಯದಲ್ಲಿ ತಮಗೆ ಅನುಕೂಲಕರ ಪಿಚ್ ಸಿದ್ಧಪಡಿಸುವಂತೆ ಮುಂಬೈನ ಹಿರಿಯ ಕ್ರಿಕೆಟಿಗ ರಾಬಿನ್‌ ಮಾರಿಸ್‌ ಆಮಿಷ ಒಡ್ಡಿದ್ದರು ಎಂದು ಮಾರುವೇಷದ ಕಾರ್ಯಾಚರಣೆ ನಡೆಸಿದ್ದ ಅಲ್‌ ಜಜೀರಾ ಚಾನೆಲ್ ಹೇಳಿತ್ತು.

ಚೆನ್ನೈನಲ್ಲಿ 2016ರ ಡಿಸೆಂಬರ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಟೆಸ್ಟ್‌ ಮತ್ತು ರಾಂಚಿಯಲ್ಲಿ ಕಳೆದ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದಲ್ಲೂ ಫಿಕ್ಸಿಂಗ್ ನಡೆದಿದೆ ಎಂದು ಚಾನೆಲ್‌ ಅಭಿಪ್ರಾಯಪಟ್ಟಿತ್ತು.

ಇದಕ್ಕೆ ಸಂಬಂಧಿಸಿ ದೃಶ್ಯಾವಳಿಗಳನ್ನು ಒದಗಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಲೆಕ್ಸ್‌ ಮಾರ್ಷಲ್‌ ಅವರು ಚಾನೆಲ್‌ನ ಆಡಳಿತವನ್ನು ಕೋರಿದ್ದರು. ಐಸಿಸಿಯ ಜೊತೆಗೂಡಿ ಸತ್ಯಾಸತ್ಯತೆ ತಿಳಿಯಲು ಪ್ರಯತ್ನಿಸುತ್ತಿರುವುದಾಗಿ ಬಿಸಿಸಿಐ ವಕ್ತಾರರು ತಿಳಿಸಿದ್ದಾರೆ.

ಶಂಕಿತ ಹಗರಣದಲ್ಲಿ ಆಸ್ಟ್ರೇಲಿಯಾದ ಹೆಸರು ಕೇಳಿ ಬಂದ ಕಾರಣ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಸದರ್ಲೆಂಡ್‌ ‘ನಮ್ಮ ತಂಡದ ಆಟಗಾರರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಸಾಬೀತುಪಡಿಸುವುಕ್ಕೆ ಸಂಬಂಧಿಸಿ ಯಾವುದೇ ದಾಖಲೆ ಇಲ್ಲ’ ಎಂದಿದ್ದಾರೆ. ದೃಶ್ಯಾವಳಿಗಳನ್ನು ಒದಗಿಸುವಂತೆ ಅವರು ಕೂಡ ಕೋರಿದ್ದಾರೆ. ‘ಆರೋಪ ಸುಳ್ಳಾಗಿದ್ದು ಆಧಾರರಹಿತವೂ ಆಗಿದೆ’ ಎಂದು ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್ ಮತ್ತು ಕೋಚ್‌ ಟ್ರೆವರ್ ಬೆಲಿಸ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry