7

ಎರಡು ವರ್ಷಗಳ ದುಗುಡ; ತಂಪೆರೆದ ‘ಕಿಂಗ್ಸ್‌’: ಫ್ಲೆಮಿಂಗ್

Published:
Updated:
ಎರಡು ವರ್ಷಗಳ ದುಗುಡ; ತಂಪೆರೆದ ‘ಕಿಂಗ್ಸ್‌’: ಫ್ಲೆಮಿಂಗ್

ಮುಂಬೈ: ಎರಡು ವರ್ಷಗಳ ನಿಷೇಧದ ಸಂದರ್ಭದಲ್ಲಿ ಫ್ರಾಂಚೈಸ್‌ನವರು ಅನುಭವಿಸಿದ ದುಗುಡ, ದುಮ್ಮಾನವನ್ನು ಪ್ರಶಸ್ತಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಟಗಾರರು ದೂರ ಮಾಡಿದ್ದಾರೆ ಎಂದು ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅಭಿಪ್ರಾಯಪಟ್ಟರು.

2013ರಲ್ಲಿ ನಡೆದಿದ್ದ ಮ್ಯಾಚ್ ಫಿಕ್ಸಿಂಗ್‌ನಲ್ಲಿ ತಂಡದ ಮಾಲೀಕರು ಭಾಗಿಯಾಗಿದ್ದರು ಎಂಬ ಆರೋಪದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮೇಲೆ ನಿಷೇಧ ಹೇರಲಾಗಿತ್ತು. ಶಿಕ್ಷೆ ಮುಗಿಸಿ ಈ ವರ್ಷ ಕಣಕ್ಕೆ ಇಳಿದ ತಂಡ ಆರಂಭದಿಂದಲೇ ಅಮೋಘ ಆಟ ಆಡಿತ್ತು. ಭಾನುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡದ ಫೈನಲ್‌ ಪಂದ್ಯದಲ್ಲಿ ಈ ತಂಡ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಎಂಟು ವಿಕೆಟ್‌ಗಳಿಂದ ಗೆದ್ದಿತ್ತು. 57 ಎಸೆತಗಳಲ್ಲಿ 117 ರನ್‌ ಗಳಿಸಿದ ಅಜೇಯರಾಗಿ ಉಳಿದ ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್‌ ತಂಡ ಮೂರನೇ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು.

ಪಂದ್ಯದ ನಂತರ ಮಾತನಾಡಿದ ಫ್ಲೆಮಿಂಗ್‌ ‘ಎರಡು ವರ್ಷಗಳ ಅವಧಿ ಕ್ಲಿಷ್ಟಕರವಾಗಿತ್ತು. ಫ್ರಾಂಚೈಸ್‌ನವರು ತಂಡವನ್ನು ಮತ್ತೆ ಟೂರ್ನಿಯಲ್ಲಿ ಆಡಿಸಲು ಕಾತರರಾಗಿದ್ದರು.ಪ್ರಶಸ್ತಿ ಗೆದ್ದ ನಂತರ ಅವರು ಭಾವುಕರಾಗಿದ್ದರು’ ಎಂದರು.

‘ಟೂರ್ನಿಯಲ್ಲಿ ನಮ್ಮ ಆಟಗಾರರು ಆಡಿದ ವಿಧಾನ ಅನನ್ಯವಾದದ್ದು. ಪ್ರತಿಯೊಬ್ಬರೂ ನಿರ್ಣಾಯಕ ಸಂದರ್ಭದಲ್ಲಿ ಆಡಿದ ಬಗೆ ನನ್ನನ್ನು ಪುಳಕಗೊಳಿಸಿದೆ. ಅನುಭವಿ ಆಟಗಾರರು ತಂಡಕ್ಕೆ ಕಾಣಿಕೆ ನೀಡಿದ ರೀತಿ ನನ್ನಲ್ಲಿ ಹೆಮ್ಮೆ ಮೂಡಿಸಿದೆ. ಅನುಭವಕ್ಕಿಂತ ಮಿಗಿಲು ಬೇರೆ ಇಲ್ಲ ಎಂಬುದನ್ನು ನಮ್ಮವರು ಸಾಬೀತು ಮಾಡಿದ್ದಾರೆ. ಮಹೇಂದ್ರ ಸಿಂಗ್ ದೋನಿ ಮತ್ತು ಸುರೇಶ್‌ ರೈನಾ ಈ ನಿಟ್ಟಿನಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದಾರೆ’ ಎಂದು ಫ್ಲೆಮಿಂಗ್ ಹೇಳಿದರು.

‘ನನ್ನ ಪ್ರಕಾರ ಫೈನಲ್‌ ಪಂದ್ಯ ಅತ್ಯಂತ ರೋಮಾಂಚಕಾರಿಯಾಗಿತ್ತು. ಗುರಿ ಬೆನ್ನತ್ತಿದ ನಮ್ಮ ತಂಡಕ್ಕೆ ಮೊದಲ ಐದು ಓವರ್‌ಗಳು ಕಠಿಣವಾಗಿದ್ದವು. ಶೇನ್ ವಾಟ್ಸನ್‌ ಲಯ ಕಂಡುಕೊಂಡ ನಂತರ ಪಂದ್ಯ ನಮ್ಮತ್ತ ತಿರುಗಿತು. ವಾಟ್ಸನ್ ಅವರು ಈ ಟೂರ್ನಿಯಲ್ಲಿ ಅದ್ಭುತ ಆಟ ಆಡುತ್ತಾರೆ ಎಂಬ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ’ ಎಂದು ನ್ಯೂಜಿಲೆಂಡ್‌ನ ಫ್ಲೆಮಿಂಗ್ ಹೇಳಿದರು.

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿಸಾನಿ ಗಿಡಿ ಮತ್ತು ಮುಂಬೈನ ಶಾರ್ದೂಲ್ ಠಾಕೂರ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುಕ್ಕೂ ಫ್ಲೆಮಿಂಗ್ ಮರೆಯಲಿಲ್ಲ. ‘ಎದುರಾಳಿ ತಂಡ 190ರಿಂದ 200 ರನ್ ಗಳಿಸುವ ಸಾಧ್ಯತೆ ಇತ್ತು. ಆದರೆ ಗಿಡಿ ಮತ್ತು ಶಾರ್ದೂಲ್‌ ಎರಡು ಉತ್ತಮ ಓವರ್‌ಗಳ ಮೂಲಕ ಅವರಿಗೆ ತಡೆ ಹಾಕಿದರು. ನಮ್ಮ ಬ್ಯಾಟ್ಸ್‌ಮನ್‌ಗಳು ರಶೀದ್ ಖಾನ್ ಬೌಲಿಂಗ್ ಸಮರ್ಥವಾಗಿ ಎದುರಿಸಿದ್ದು ಕೂಡ ಗೆಲುವಿಗೆ ಕಾರಣವಾಯಿತು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry