ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭೂತಿ ಮಹಿಳೆಯರು!

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ಮಲಪ್ರಭೆಯಲ್ಲಿ ಸದ್ಯ ಝರಿಯಂತೆ ಹರಿಯುವ ನೀರಿನಲ್ಲಿ ಬೆಳ್ಳಂಬೆಳಿಗ್ಗೆ ಸೂರ್ಯ ತನ್ನ ಕೆಂಪಾದ ಮುಖವನ್ನು ತೋರಿಸುವ ಹೊತ್ತಿಗೆ ಅಲ್ಲಿನ ಗೋವುಗಳೆಲ್ಲ ಉಪಾಹಾರಕ್ಕೆ ಸಜ್ಜಾಗಿ ನಿಂತಿದ್ದವು. ಗೋಶಾಲೆಯಿಂದ ಅವುಗಳು ಹೊರಡುವ ಹೊತ್ತಿಗೆ ಪಕ್ಕದ ಹಳ್ಳಿಗಳಿಂದ ಶಂಕ್ರಮ್ಮ, ನಿಂಗಮ್ಮ ಅವರ ನೇತೃತ್ವದಲ್ಲಿ 20 ಮಹಿಳೆಯರ ತಂಡ ಅಲ್ಲಿಗೆ ಬಂತು. ಆ ತಂಡದ ಕೆಲ ಸದಸ್ಯರು ಸೀದಾ ಭೋಜನಶಾಲೆಗೆ ತೆರಳಿ, ಪ್ರಸಾದ ಸ್ವೀಕರಿಸಿದವರೇ ಗೋಶಾಲೆಯಲ್ಲಿನ ಸಗಣಿ ಎತ್ತಲು ಹೊರಟರು.

ಹೊಸದಾಗಿ ಕುಳ್ಳು ತಟ್ಟಲು, ಒಣಗಿದ ಕುಳ್ಳು ಹೆಕ್ಕಲು, ಹೆಕ್ಕಿದ ಕುಳ್ಳನ್ನು ಸುಡಲು, ಸುಟ್ಟ ಕುಳ್ಳಿನಿಂದ ಸಿಕ್ಕ ಬೂದಿಯನ್ನು ನೀರಿನಲ್ಲಿ ಕಲಕಿ ಸೋಸಲು... ಹೀಗೆ ತಂಡಗಳಾಗಿ ಉಳಿದ ಮಹಿಳೆಯರು ಅವರನ್ನು ಹಿಂಬಾಲಿಸಿದರು.

ಬಾದಾಮಿ ತಾಲ್ಲೂಕಿನ ಶಿವಯೋಗ ಮಂದಿರದಲ್ಲಿ ನಿತ್ಯ ಮುಂಜಾವು ಕಾಣಸಿಗುವ ನೋಟವಿದು. ಅಲ್ಲಿನ ದಿನಚರಿ ಶುರುವಾಗುವುದೇ ಸಗಣಿ ಎತ್ತುವುದರಿಂದ. ಆ ಸಗಣಿಯಿಂದ ವಿಭೂತಿ ತಯಾರಿಸುವುದು ಇಲ್ಲಿನ ವಿಶೇಷ.

ಗೋಶಾಲೆಯಲ್ಲಿ ಈಗ 500ಕ್ಕೂ ಅಧಿಕ ದೇಸಿ ಗೋವುಗಳಿವೆ. ಅವುಗಳ ಪಾಲನೆ–ಪೋಷಣೆಗೆ 20 ಎಕರೆ ಪ್ರದೇಶದಲ್ಲಿ ಮೇವನ್ನು ಬೆಳೆಯಲಾಗಿದೆ. ಭಕ್ತರಿಂದಲೂ ಗೋಶಾಲೆಗೆ ಮೇವು ದಾನವಾಗಿ ಬರುತ್ತದೆ.

ಅಂದಹಾಗೆ, ವೈಶಿಷ್ಟ್ಯಪೂರ್ಣವಾದ ಈ ಶಿವಯೋಗ ಮಂದಿರವನ್ನು ಸ್ಥಾಪಿಸಿದವರು ಹಾನಗಲ್‌ನ ಕುಮಾರ ಸ್ವಾಮೀಜಿ. ವಟುಗಳಿಗೆ ವಿದ್ಯೆ ಧಾರೆ ಎರೆಯಲು ಈ ಮಂದಿರವನ್ನು ಮುಡಿಪಾಗಿಟ್ಟ ಅವರು, ವಟುಸಾಧಕರ ಮೇಲೆ ಹೊಂದಿದಷ್ಟೇ ಪ್ರೀತಿಯನ್ನು ಗೋವುಗಳ ಮೇಲೆಯೂ ಹೊಂದಿದ್ದರು.

ದೇಸಿ ಗೋವುಗಳ ಸಂರಕ್ಷಣೆಗೆ ಶಿವಯೋಗಮಂದಿರ ಮಾತ್ರವಲ್ಲದೆ ಕಪನಳ್ಳಿ, ನಿಡಗುಂದಿ ಮತ್ತು ಕೊಪ್ಪದ ಗ್ರಾಮಗಳಲ್ಲಿ ಗೋಶಾಲೆ ಆರಂಭಿಸಿದ ಮಾಹಿತಿಯನ್ನು ‘ಮಹಾಜಂಗಮ’ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.

ಪಂಚಗವ್ಯಗಳಾದ ಗೋಮೂತ್ರ, ಗೋಮಯ (ಸಗಣಿ), ಗೋಕ್ಷೀರ (ಹಾಲು), ಗೋಘೃತ (ತುಪ್ಪ) ಮತ್ತು ಗೋದಧಿ (ಮೊಸರು) ಇವುಗಳ ಪ್ರಯೋಜನವನ್ನು ಆಗಿನ ಕಾಲದಲ್ಲೇ ಸಮಾಜಕ್ಕೆ ಮನದಟ್ಟು ಮಾಡಿಕೊಟ್ಟವರು ಈ ಸ್ವಾಮೀಜಿ. ಪಂಚಗವ್ಯದಲ್ಲಿ ಗೋಮಯದ ಮಹತ್ವವನ್ನು ವೈದ್ಯಶಾಸ್ತ್ರ ಸಹ ಒಪ್ಪಿಕೊಂಡಿದೆ.

ಧಾರ್ಮಿಕ ಮಾತ್ರವಲ್ಲದೆ ಸಂಸ್ಕೃತಿ, ಕೃಷಿ, ಪರಿಸರ, ಆಹಾರ, ಆರೋಗ್ಯ, ಆರ್ಥಿಕತೆ – ಈ ನೆಲೆಯಲ್ಲೂ ಗೋಶಾಲೆಯ ಮಹತ್ವ ಏನೆಂಬುದನ್ನು ಸ್ವಾಮೀಜಿ ಅರಿತಿದ್ದರು. ಅಲ್ಲವೆ ಮತ್ತೆ? ಗೋಮಯದಿಂದ ಅವರು ವಿಭೂತಿಯನ್ನು ತಯಾರಿಸಲು ಆರಂಭಿಸಿದ್ದು ಜಗತ್ತಿನಲ್ಲೇ ಪ್ರಥಮ ಪ್ರಯೋಗ.

‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುಳ್ಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ, ನೀನಾರಿಗಾದೆಯೋ ಎಲೆ ಮಾನವ’ ಎಂಬ ಕವಿವಾಣಿಯಂತೂ ಶಿವಯೋಗ ಮಂದಿರದಲ್ಲಿ ಹೆಜ್ಜೆ ಹೆಜ್ಜೆಗೂ ಪ್ರತಿಧ್ವನಿಸಿದಂತೆ ಆಗುತ್ತದೆ. ಶಿವಯೋಗ ಮಂದಿರದಲ್ಲಿ ಕಳೆದೊಂದು ಶತಮಾನದಿಂದ ನಾಲ್ಕು ತಲೆಮಾರಿನ ಸ್ವಾಮೀಜಿಗಳ ನೇತೃತ್ವದಲ್ಲಿ ಇಲ್ಲಿ ವಿಭೂತಿಯನ್ನು ತಯಾರಿ ಮಾಡುತ್ತಾ ಬರಲಾಗಿದೆ. ವಿಭೂತಿ ತಯಾರಿಕೆ ಕೇಂದ್ರಕ್ಕೆ ಎಳಂದೂರ ಬಸವಲಿಂಗ ಸ್ವಾಮೀಜಿಯವರ ಹೆಸರಿಡಲಾಗಿದೆ. ಸಂಗನಬಸವ ಸ್ವಾಮೀಜಿಯವರು ಶಿವಯೋಗ ಮಂದಿರದ ಈಗಿನ ಅಧ್ಯಕ್ಷರಾಗಿದ್ದು, ವಿಭೂತಿ ತಯಾರಿಕಾ ಕೇಂದ್ರವನ್ನು ಅವರು ಮತ್ತಷ್ಟು ಅಭಿವೃದ್ಧಿ ಮಾಡುತ್ತಿದ್ದಾರೆ.

ವೀರಶೈವ ಅಷ್ಟಾವರ್ಣಗಳಲ್ಲಿ ಒಂದಾದ ವಿಭೂತಿಗೆ ಭವರೋಗ ಮತ್ತು ಭೌತಿಕ ರೋಗಗಳನ್ನು ಕಳೆಯುವ ಶಕ್ತಿ ಇದೆ ಎನ್ನುವುದು ಭಕ್ತರ ನಂಬಿಕೆ. ವೀರಶೈವ ಸಿದ್ಧಾಂತದಲ್ಲಿ ಅನಿವಾರ್ಯವೆನಿಸಿದಾಗ ಜಲಸ್ನಾನ ಬಿಟ್ಟು ವಿಭೂತಿಸ್ನಾನ ಮಾಡಿ ಲಿಂಗಾರ್ಚನೆ ಮಾಡಿಕೊಳ್ಳಬಹುದು ಎಂದು ಹೇಳಿದೆ. ‘ಬೆಳಿಗ್ಗೆ ಎದ್ದ ಕೂಡಲೇ ವಿಭೂತಿ ಧರಿಸು ಇಲ್ಲವೇ ವಿಭೂತಿ ಧರಿಸಿದವರ ಹಣೆಯನ್ನಾದರೂ ನೋಡು’ ಎಂಬುದು ಅನುಭಾವಿಗಳ ಮಾತು.

ವಿಭೂತಿ ಕೇಂದ್ರದಲ್ಲಿ ಸಾದಾ ಘಟ್ಟಿ ಮತ್ತು ಕ್ರಿಯಾ ಘಟ್ಟಿಗಳನ್ನು ಶಾಸ್ತ್ರೀಯವಾಗಿ ತಯಾರಿಸಲಾಗುತ್ತದೆ. ‘ಗೋಶಾಲೆಯಿಂದ ಗೋವಿನ ಸಗಣಿಯನ್ನು ಸಂಗ್ರಹಿಸಿ, ಕುಳ್ಳು ಹಚ್ಚಿ ಒಣಗಿಸಿದ ನಂತರ ಪುಡಿ ಮಾಡಲಾಗುತ್ತದೆ. ಪುಡಿ ಮಾಡಿದ್ದನ್ನು ಸುಟ್ಟು ಚಿಕ್ಕ ಬೆಟ್ಟದಂತೆ ಹಾಕಿ ಪುಡಿಯನ್ನು ನೀರಲ್ಲಿ ಮೆದ್ದು ಮೆದ್ದು ರಾಡಿ ಮಾಡಿ ಬಟ್ಟೆಯಿಂದ ಹರವಿಗೆ ಸೋಸುತ್ತೇವೆ’ ಎಂದು ಮಂಗಳೂರು ಗ್ರಾಮದ ಶಂಕ್ರಮ್ಮ ಹೇಳುತ್ತಾರೆ.

ನಾಲ್ಕು ಹರವಿಗಳಲ್ಲಿ ಬಟ್ಟೆಯಿಂದ ಸೋಸಿದ ಮೇಲೆ ತಿಳಿಯನ್ನು ಗುಂಡಿಯಲ್ಲಿ ಹಾಕುತ್ತೇವೆ. 24 ಗಂಟೆಯಲ್ಲಿ ಅದು ಹೆಪ್ಪುಗಟ್ಟುತ್ತದೆ. ಸ್ವಲ್ಪ ಒಣಗಿದ ನಂತರ ವೃತ್ತಾಕಾರವಾಗಿ ಉಂಡಿಯಂತೆ ಮಾಡಲಾಗುತ್ತದೆ. ನಂತರ ಬಡಮಣೆಯ ಮೂಲಕ ಅಳತೆಯಂತೆ ಮಾಡಿ ನೆರಳಿನಲ್ಲಿ ಒಣಗಿಸುತ್ತೇವೆ. ಕೊನೆಗೆ ಉಸುಕಿನ ಪೇಪರ್‌ ಮೂಲಕ ಉಜ್ಜಿದಾಗ ಶುಭ್ರ ಹೊಳಪು ಬಂದು ವಿಭೂತಿ ತಯಾರಾಗುತ್ತದೆ’ ಎಂದು ನಿಂಗಮ್ಮ ವಿವರಿಸುತ್ತಾರೆ.

ಸಾದಾ ಘಟ್ಟಿಗೆ ನಾಲ್ಕು ಮಣ್ಣಿನ ಹರವಿಗಳಲ್ಲಿ ಸೋಸಿದರೆ, ಕ್ರಿಯಾ ಘಟ್ಟಿಗೆ ಆರು ಹರವಿಯಲ್ಲಿ ಸೋಸಲಾಗುತ್ತದೆ. ಸಾದಾ ಘಟ್ಟಿಯಲ್ಲಿ ಬಂದ ಪುಡಿಯನ್ನೇ ಕ್ರಿಯಾ ಘಟ್ಟಿಗೆ ಬಳಸಲಾಗುತ್ತದೆ ಎಂದು ವಿಭೂತಿ ಕೇಂದ್ರದ ವ್ಯವಸ್ಥಾಪಕ ಕುಮಾರ ಪಾಟೀಲ ಹೇಳುತ್ತಾರೆ. ವಿಭೂತಿ ಕೇಂದ್ರದಲ್ಲಿ ಸಗಣಿ ಬಳೆಯಲು, ಕುಳ್ಳು ಹಚ್ಚಲು ಮತ್ತು ವಿಭೂತಿ ಬಟ್ಟೆಯಲ್ಲಿ ಕೆಲಸ ಮಾಡಲು ಗೋನಾಳ ಮತ್ತು ಮಂಗಳೂರು ಗ್ರಾಮಗಳ ಒಟ್ಟು 20 ಜನ ಮಹಿಳೆಯರು ಬರುತ್ತಾರೆ. ಬೆಳಿಗ್ಗೆ 10ರಿಂದ ಸಂಜೆ ಐದರವರೆಗೂ ಒಟ್ಟು 12 ಭಟ್ಟಿಗಳಲ್ಲಿ ಕಾಯಕದಲ್ಲಿ ನಿರತರಾಗಿರುತ್ತಾರೆ. ಅವರಿಗೆಲ್ಲಾ ಮಧ್ಯಾಹ್ನದ ಪ್ರಸಾದದ ವ್ಯವಸ್ಥೆಯನ್ನೂ ಶಿವಯೋಗ ಮಂದಿರವೇ ಮಾಡುತ್ತದೆ. ವಿಭೂತಿ ನಿರ್ಮಾಣ ಕಲೆಯು ತುಂಬಾ ಶ್ರಮದಾಯಕವಾಗಿದೆ.

‘ಎರಡು ಮೂರು ತಲೆಮಾರುಗಳಿಂದ ನಾವು ವಿಭೂತಿ ತಯಾರಿ ಮಾಡುತ್ತ ಬಂದಿದ್ದೇವೆ. ಈ ದೊಡ್ಡ ಸ್ಥಾನದಲ್ಲಿ ವಿಭೂತಿ ತಯಾರಿ ಮಾಡುವುದು ನಮಗೆ ಸಂತಸ ತಂದಿದೆ. ಪೂಜ್ಯ ಭಾವನೆ ಮೂಡಿಸಿದೆ’ ಎಂದು ಇಲ್ಲಿ ಕೆಲಸ ಮಾಡುವ ಮಹಿಳೆಯರು ವಿನೀತಭಾವದಿಂದ ಹೇಳುತ್ತಾರೆ.

ಶಿವಯೋಗಮಂದಿರಕ್ಕೆ ಬರುವ ಭಕ್ತರು ಮತ್ತು ಇಲ್ಲಿ ಅಧ್ಯಯನ ಮಾಡಿದ ಸ್ವಾಮೀಜಿಗಳು ಇಲ್ಲಿಂದಲೇ ವಿಭೂತಿಯನ್ನು ತೆಗೆದುಕೊಂಡು ಹೋಗುತ್ತಾರೆ. ಇಲ್ಲಿನ ವಿಭೂತಿ ದೇಶದ ವಿವಿಧ ರಾಜ್ಯಗಳಿಗಲ್ಲದೆ ವಿದೇಶಗಳಿಗೂ ಹೋಗುತ್ತದೆ. ಅದನ್ನು ಚರ್ಮಕ್ಕೆ ಆಯುರ್ವೇದ ಔಷಧಿಯನ್ನಾಗಿ ಬಳಸುತ್ತಾರೆ. ವಿಭೂತಿಯಿಂದ ಈ ವರ್ಷ ₹ 13 ಲಕ್ಷ ಆದಾಯ ಬಂದಿದೆ ಎಂದು ವ್ಯವಸ್ಥಾಪಕ ಕುಮಾರ ಹೇಳುತ್ತಾರೆ. ಹೆಚ್ಚಿನ ವಿಭೂತಿ ಉತ್ಪಾದನೆಗಾಗಿ ಸರ್ಕಾರದ ಅನುದಾನದಿಂದ ಎರಡು ನೂತನ ಘಟಕಗಳಿಗೆ ಅಗತ್ಯವಾದ ಕಟ್ಟಡವನ್ನು ನಿರ್ಮಿಸಲಾಗಿದೆ. ₹20 ಲಕ್ಷ ವೆಚ್ಚದಲ್ಲಿ ನೂತನ ಯಂತ್ರವನ್ನು ಅಳವಡಿಸುವ ಯೋಜನೆಯನ್ನೂ ಹೊಂದಲಾಗಿದೆ ಎನ್ನುತ್ತಾರೆ ಸಂಗನಬಸವ ಸ್ವಾಮೀಜಿ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT