ದ್ರಾಕ್ಷಿ ಬೆಳೆಗಾರರ ನಿದ್ದೆಗೆಡಿಸಿದ ನಿಫಾ

7
ಬೆಲೆ ಏರಿಕೆ ಖುಷಿಯಲ್ಲಿದ್ದವರಿಗೆ ಆಘಾತ

ದ್ರಾಕ್ಷಿ ಬೆಳೆಗಾರರ ನಿದ್ದೆಗೆಡಿಸಿದ ನಿಫಾ

Published:
Updated:
ದ್ರಾಕ್ಷಿ ಬೆಳೆಗಾರರ ನಿದ್ದೆಗೆಡಿಸಿದ ನಿಫಾ

ಚಿಕ್ಕಬಳ್ಳಾಪುರ: ನೆರೆಯ ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಾಣು ಸೋಂಕು ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ನಿದ್ದೆಗೆಡಿಸಿದೆ.

ರಂಜಾನ್ ಮಾಸದ ಕಾರಣಕ್ಕೆ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಇದೀಗ ಸೋಂಕಿನ ಭಯಕ್ಕೆ ಕೇರಳದಲ್ಲಿ ಹಣ್ಣು ಮಾರಾಟ ಕುಸಿತಗೊಂಡ ಪರಿಣಾಮ ದ್ರಾಕ್ಷಿ ಖರೀದಿದಾರರಿಲ್ಲದೆ ಕಂಗಾಲಾಗಿದ್ದಾರೆ.

ಇತ್ತೀಚೆಗಷ್ಟೇ ಆಲಿಕಲ್ಲಿನ ಮಳೆಯಿಂದ ಕಂಗೆಟ್ಟಿದ್ದ ದ್ರಾಕ್ಷಿ ಬೆಳೆಗಾರರಿಗೆ ಇದೀಗ ನಿಫಾ ಭಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯ ಜಿಲ್ಲೆಯ ನೂರಾರು ತೋಟಗಳಲ್ಲಿರುವ ದ್ರಾಕ್ಷಿ ಫಸಲಿನ ಕಟಾವು ಅವಧಿ ಕೊನೆಗೊಳ್ಳುತ್ತ ಬಂದಿದೆ. ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಕಳವಳ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಸುಮಾರು 10 ದಿನಗಳ ಹಿಂದಿನವರೆಗೆ ತೋಟದಲ್ಲಿ ಒಂದು ಕೆ.ಜಿ.ದ್ರಾಕ್ಷಿಯ ಬೆಲೆ ₹ 50ರ ಆಸುಪಾಸಿನಲ್ಲಿತ್ತು. ಸದ್ಯ ಬೇಡಿಕೆ ತೀವ್ರ ಕುಸಿತಗೊಂಡ ಪರಿಣಾಮ ಅದೀಗ ₹ 10ರ ಆಸುಪಾಸಿಗೆ ಕುಸಿದಿದೆ. ಇದರಿಂದ ರೈತರಿಗೆ ಬೆಳೆಗಾಗಿ ಹಾಕಿದ ಬಂಡವಾಳ ಕೂಡ ವಾಪಸ್ ಆಗದಂತಹ ಪರಿಸ್ಥಿತಿ ತಲೆದೋರಿದೆ.

‘ಮೂರು ಎಕರೆಯಲ್ಲಿ ದ್ರಾಕ್ಷಿ ಬೆಳೆದಿರುವೆ. ಸದ್ಯ ಕಟಾವಿಗೆ ಬಂದಿದೆ. ವಾರದಿಂದೀಚೆಗೆ ಏಳೆಂಟು ವರ್ತಕರನ್ನು ವಿಚಾರಿಸಿದೆ. ಯಾರೊಬ್ಬರೂ ದ್ರಾಕ್ಷಿ ಖರೀದಿಗೆ ಮುಂದೆ ಬರುತ್ತಿಲ್ಲ. ವಿಚಾರಿಸಿದರೆ ಕೇರಳದಲ್ಲಿ ನಿಫಾ ಸೋಂಕು ಕಾಣಿಸಿಕೊಂಡ ಕಾರಣಕ್ಕೆ ಹಣ್ಣುಗಳ ಮಾರಾಟ ಕುಸಿತ ಕಂಡಿದೆ ಎಂದು ಹೇಳುತ್ತಿದ್ದಾರೆ. ನಾಲ್ಕೈದು ದಿನಗಳಲ್ಲಿ ಹಣ್ಣು ಕಟಾವು ಮಾಡದಿದ್ದರೆ ಸುಮಾರು ₹ 7 ಲಕ್ಷ ನಷ್ಟವಾಗುತ್ತದೆ. ದಿಕ್ಕೇ ತೋಚದಂತಾಗಿದೆ’ ಎಂದು ತಾಲ್ಲೂಕಿನ ಗವಿಗಾನಹಳ್ಳಿ ರೈತ ಮುನಿವೆಂಕಟಪ್ಪ ಆತಂಕ ವ್ಯಕ್ತಪಡಿಸಿದರು.

‘₹ 3.50 ಲಕ್ಷ ಖರ್ಚು ಮಾಡಿ ಎರಡೂವರೆ ಎಕರೆಯಲ್ಲಿ ದ್ರಾಕ್ಷಿ ಬೆಳೆದಿರುವೆ. ಇತ್ತೀಚೆಗೆ ಬಿದ್ದ ಆಲಿಕಲ್ಲಿಗೆ ಸುಮಾರು 10–15 ಟನ್ ಕಾಯಿ ನೆಲ ಕಚ್ಚಿತು. ಇದೀಗ ಸುಮಾರು 20 ಟನ್ ಹಣ್ಣು ಕಟಾವಿಗೆ ಬಂದಿದೆ. ಆದರೆ ಬಾವಲಿಯ ವೈರಾಣು ಸೋಂಕಿನ ಭೀತಿ ನಮ್ಮ ಕನಸಿಗೆ ಬೆಂಕಿ ಇಟ್ಟಿದೆ. ಕಳೆದ ಒಂದು ವಾರದಿಂದ 10 ವರ್ತಕರಿಗೆ ಕೇಳಿಕೊಂಡರೂ ಯಾರೊಬ್ಬರೂ ಹಣ್ಣು ಖರೀದಿಗೆ ಮುಂದೆ ಬರುತ್ತಿಲ್ಲ’ ಎಂದು ತಾಲ್ಲೂಕಿನ ಗಿಡ್ನಳ್ಳಿ ರೈತ ಆನಂದ್ ಅಳಲು ತೋಡಿಕೊಂಡರು.

‘ಸದ್ಯ ಜಿಲ್ಲೆಯಲ್ಲಿ ಸುಮಾರು 3,000 ಸಾವಿರ ಟನ್ ದ್ರಾಕ್ಷಿ ಕಟಾವಿಗೆ ಬಂದಿದೆ. ನಮ್ಮಲ್ಲಿ ದ್ರಾಕ್ಷಿ ಹಣ್ಣು ಕೇರಳಕ್ಕೆ, ಕಾಯಿಗಳು ಬಾಂಗ್ಲಾದೇಶ, ಉತ್ತರ ಪ್ರದೇಶಕ್ಕೆ ಹೆಚ್ಚು ರಫ್ತಾಗುತ್ತದೆ. ಸದ್ಯ ಕೇರಳದಿಂದ ದ್ರಾಕ್ಷಿಗೆ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇನ್ನು, ಉತ್ತರ ಭಾರತದಲ್ಲಿ ಸಹ ಮಾವು ಮತ್ತು ಲಿಚ್ಚಿ ಹಣ್ಣಿನ ಮಾರಾಟ ಋತು ಆರಂಭಗೊಂಡ ಕಾರಣ ಅಲ್ಲಿಂದ ಸಹ ಬೇಡಿಕೆ ಇಲ್ಲದಂತಾಗಿದೆ. ಹೀಗಾಗಿ ರಫ್ತುದಾರರು ಹಣ್ಣು ಖರೀದಿಗೆ ಮುಂದಾಗುತ್ತಿಲ್ಲ’ ಎಂದು ದ್ರಾಕ್ಷಿ ವರ್ತಕ ಎಂ.ಎಫ್‌.ಸಿ.ನಾರಾಯಣಸ್ವಾಮಿ ಹೇಳಿದರು.

* ಒಂದು ಕೆ.ಜಿ ದ್ರಾಕ್ಷಿಗೆ ₹ 60ರ ಆಸುಪಾಸು ಬೆಲೆ ನಿರೀಕ್ಷಿಸಿದ್ದೆ. ಕೇರಳದಿಂದ ಹಣ್ಣಿಗೆ ಬೇಡಿಕೆ ಬರದ ಕಾರಣ ಕನಸು ನುಚ್ಚುನೂರಾಗಿದೆ

-ಆನಂದ್ ಗಿಡ್ನಳ್ಳಿ , ರೈತ 

ಮುಖ್ಯಾಂಶಗಳು

* ಏಕಾಏಕಿ ನೆಲ ಕಚ್ಚಿದ ಹಣ್ಣು ರಫ್ತು

* ದ್ರಾಕ್ಷಿ ಖರೀದಿಗೆ ಮುಂದಾಗದ ವರ್ತಕರು

* ದಿಕ್ಕು ತೋಚದಂತಹ ಸ್ಥಿತಿಯಲ್ಲಿ ರೈತರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry