ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ವರ್ಷದಲ್ಲಿ 10 ಕೋಟಿ ಎಲ್‌ಪಿಜಿ ಸಂಪ‍ರ್ಕ

ಸರ್ಕಾರದ ಸಾಧನೆ ಬಿಚ್ಚಿಟ್ಟ ಪ್ರಧಾನಿ ನರೇಂದ್ರ ಮೋದಿ
Last Updated 28 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ನಾಲ್ಕು ವರ್ಷಗಳಲ್ಲಿ 10 ಕೋಟಿ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕಗಳನ್ನು ನೀಡಲಾಗಿದೆ. ಅದರಲ್ಲಿ ಬಡ ಮಹಿಳೆಯರಿಗೆ ನಾಲ್ಕು ಕೋಟಿ ಸಂಪರ್ಕಗಳನ್ನು ಉಚಿತವಾಗಿ ಕೊಡಲಾಗಿದೆ ಎಂದು ಪ‍್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸ್ವಾತಂತ್ರ್ಯಾನಂತರದ ಆರು ದಶಕಗಳಲ್ಲಿ ಒಟ್ಟು 13 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ಮಾತ್ರ ನೀಡಲು ಸಾಧ್ಯವಾಗಿತ್ತು. ಆದರೆ ತಮ್ಮ ಸರ್ಕಾರ ಮಹಿಳೆಯರು ಮತ್ತು ಮಕ್ಕಳನ್ನು ಅಡುಗೆ ಮನೆಯ ಹೊಗೆಯಿಂದ ರಕ್ಷಿಸಲು ಪಣ ತೊಟ್ಟು ಎಲ್‌ಪಿಜಿ ಸಂಪರ್ಕಗಳನ್ನು ತ್ವರಿತವಾಗಿ ನೀಡಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಕೆಲವು ಫಲಾನುಭವಿಗಳ ಜತೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಿದ ಸಂವಾದದಲ್ಲಿ ಪ್ರಧಾನಿ ಮಾತನಾಡಿದರು. ತಮ್ಮ ಬಾಲ್ಯದಲ್ಲಿ ತಾಯಿ ಉರುವಲು ಅಥವಾ ಬೆರಣಿ ಬಳಸಿ ಒಲೆ ಉರಿಸಿ ಅದರ ಹೊಗೆಯಲ್ಲಿ ಕಷ್ಟಪಡುತ್ತಿದ್ದುದನ್ನು ಮೋದಿ ನೆನಪಿಸಿಕೊಂಡರು. ಸದ್ಯದಲ್ಲಿಯೇ ಎಲ್ಲ ಮನೆಗಳಿಗೆ ಶುದ್ಧ ಇಂಧನವನ್ನು ತಮ್ಮ ಸರ್ಕಾರ ಪೂರೈಸಲಿದೆ ಎಂದು ಅವರು ಭರವಸೆ ನೀಡಿದರು.

2014ರವರೆಗೆ ನೀಡಲಾದ 13 ಕೋಟಿ ಎಲ್‌ಪಿಜಿ ಸಂಪರ್ಕ ಮುಖ್ಯವಾಗಿ ಶ್ರೀಮಂತರಿಗಷ್ಟೇ ಸಿಕ್ಕಿತ್ತು. ಕಳೆದ 4 ವರ್ಷಗಳಲ್ಲಿ ನೀಡಿದ 10 ಕೋಟಿ ಸಂಪರ್ಕ ಬಡವರಿಗೇ ಹೆಚ್ಚಾಗಿ ಸಿಕ್ಕಿದೆ ಎಂದು ಮೋದಿ ಹೇಳಿದರು.

ಶೇ 100ರ ಗುರಿ: 2019ರ ಮಾರ್ಚ್‌ ಹೊತ್ತಿಗೆ ಎಲ್‌ಪಿಜಿ ಬಳಸುವ ಕುಟುಂಬಗಳ ಪ್ರಮಾಣವನ್ನು ಶೇ 80ಕ್ಕೆ ಏರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಎಲ್‌ಪಿಜಿ ಬಳಸುವ ಕುಟುಂಬಗಳ ಪ್ರಮಾಣ 2017ರಲ್ಲಿ ಶೇ 72.8ರಷ್ಟಿತ್ತು.

ಎಲ್‌‍ಪಿಜಿ ಬಳಕೆಯನ್ನು ಶೇ ನೂರಕ್ಕೆ ಏರಿಸಲಾಗುವುದು ಎಂದು ಮೋದಿ ಹೇಳಿದ್ದಾರೆ. ಆದರೆ, ಇದು ಯಾವಾಗ ಪೂರ್ಣಗೊಳ್ಳಲಿದೆ ಎಂಬುದನ್ನು ಅವರು ಹೇಳಿಲ್ಲ.

ಉಜ್ವಲ ಯೋಜನೆಯ ವ್ಯಾಪ್ತಿಯನ್ನು ಈಗ ಇನ್ನಷ್ಟು ವಿಸ್ತರಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಎಲ್ಲ ಕುಟುಂಬಗಳು, ಅತ್ಯಂತ ಹಿಂದುಳಿದ ವರ್ಗಗಳ ಕುಟುಂಬಗಳು, ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ), ಅಂತ್ಯೋದಯ ಅನ್ನ ಯೋಜನೆ, ಅರಣ್ಯ ವಾಸಿಗಳು, ನದಿ ದಡ ಮತ್ತು ನದಿ ದ್ವೀಪಗಳಲ್ಲಿ ವಾಸಿಸುವವರೂ ಉಜ್ವಲ ಯೋಜನೆ ವ್ಯಾಪ್ತಿಯಲ್ಲಿ ಬರುತ್ತಾರೆ.

ದಲಿತ ಸಮುದಾಯಕ್ಕೆ ಆದ್ಯತೆ

ಉಜ್ವಲ ಯೋಜನೆ ಅಡಿಯಲ್ಲಿ ನೀಡಲಾದ ಎಲ್‌ಪಿಜಿ ಸಂಪರ್ಕಗಳಲ್ಲಿ ಶೇ 45ರಷ್ಟನ್ನು ದಲಿತ ಕುಟುಂಬಗಳಿಗೆ ನೀಡಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ದಲಿತರ ಏಳಿಗೆಗೆ ತಮ್ಮ ಸರ್ಕಾರ ಬದ್ಧವಾಗಿದೆ. 2014ರಿಂದ ಈವರೆಗೆ 1,200 ಪೆಟ್ರೋಲ್‌ ಪಂಪ್‌ಗಳನ್ನು ಈ ಸಮುದಾಯದವರಿಗೆ ನೀಡಲಾಗಿದೆ. ಯುಪಿಎ ಸರ್ಕಾರ ಇದ್ದ 2010–2014ರ ಅವಧಿಯಲ್ಲಿ 445 ಪೆಟ್ರೋಲ್‌ ಪಂಪ್‌ಗಳನ್ನು ಮಾತ್ರ ದಲಿತ ಸಮುದಾಯದವರಿಗೆ ನೀಡಲಾಗಿತ್ತು ಎಂದು ಪ್ರಧಾನಿ ತಿಳಿಸಿದ್ದಾರೆ.

ಹಾಗೆಯೇ, 1,300 ಕುಟುಂಬಗಳಿಗೆ ಎಲ್‌ಪಿಜಿ ಸಿಲಿಂಡರ್‌ ವಿತರಣೆಯ ಅವಕಾಶ ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮಾಹಿತಿ ಪಡೆದ ಪ್ರಧಾನಿ

ಎಲ್‌ಪಿಜಿ ಸಿಲಿಂಡರ್‌ ಖಾಲಿಯಾದರೆ ಸಕಾಲಕ್ಕೆ ಹೊಸ ಸಿಲಿಂಡರ್‌ ದೊರೆಯುತ್ತಿದೆಯೇ, ಮಧ್ಯವರ್ತಿಗಳು ಹಣ ಕೇಳುತ್ತಿದ್ದಾರೆಯೇ ಎಂದು ಫಲಾನುಭವಿಗಳನ್ನು ಮೋದಿ ಅವರು ಪ್ರಶ್ನಿಸಿದರು. ಎಲ್‌ಪಿಜಿ ಬಳಕೆಯ ಅನುಭವವನ್ನು ಕೇಳಿ ತಿಳಿದುಕೊಂಡರು. ಎಲ್‌ಪಿಜಿಯಿಂದಾಗಿ ಸಮಯ ಉಳಿಯುತ್ತಿದೆಯಲ್ಲವೇ ಎಂದು ಕೇಳಿದರು. ಈ ಸಮಯದಲ್ಲಿ ಡಬ್ಬದ ಮೂಲಕ ಮನೆಊಟ ಪೂರೈಸುವಂತಹ ಕೆಲಸಗಳನ್ನು ಮಾಡಿ ಕುಟುಂಬಕ್ಕೆ ನೆರವಾಗಬಹುದು ಎಂಬ ಸಲಹೆಯನ್ನೂ ಕೊಟ್ಟರು.

‘ಬಡವರು, ದಲಿತರು, ಆದಿವಾಸಿಗಳ ಬದುಕನ್ನು ಉಜ್ವಲ ಯೋಜನೆಯು ಗಟ್ಟಿಗೊಳಿಸಿದೆ. ಸಾಮಾಜಿಕ ಸಶಕ್ತೀಕರಣದಲ್ಲಿಯೂ ಇದಕ್ಕೆ ಮಹತ್ವದ ಪಾತ್ರ ಇದೆ.’
– ನರೇಂದ್ರ ಮೋದಿ, ಪ್ರಧಾನಿ

ನಮಗೆ ರಂಜಾನ್‌ ತಿಂಗಳು ಪವಿತ್ರವಾಗಿದ್ದು ದಿನವೂ ಕುರ್‌–ಆನ್‌ ಪಠಿಸುತ್ತೇವೆ. ಪ್ರಧಾನಿಯಾಗಿ ನೀವೇ ಮುಂದುವರಿಯುವಂತೆ ನಾವು ದೇವರನ್ನು ಕೋರುತ್ತೇವೆ

– ಕಾಶ್ಮೀರದ ಮಹಿಳೆಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT