ಪೀಣ್ಯ ಟರ್ಮಿನಲ್‌ಗೆ 60 ಬಸ್‌

7

ಪೀಣ್ಯ ಟರ್ಮಿನಲ್‌ಗೆ 60 ಬಸ್‌

Published:
Updated:

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮೆಜೆಸ್ಟಿಕ್‌ನಿಂದ ಪೀಣ್ಯದ ಬಸವೇಶ್ವರ ಟರ್ಮಿನಲ್‌ಗೆ 60 ಬಸ್‌ಗಳನ್ನು ವರ್ಗಾಯಿಸಿದೆ. ಇದರಿಂದ ಪ್ರತಿದಿನ ಸುಮಾರು 250 ಲೀಟರ್‌ ಡೀಸೆಲ್‌ ಮತ್ತು ಪ್ರಯಾಣದ ಅವಧಿಯನ್ನು ಉಳಿಸಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಖಾಸಗಿ ಬಸ್‌ನವರು ಈ ಮಾರ್ಗದ ನಡುವೆ ಸಂಚಾರ ನಡೆಸದಿದ್ದರೆ ಮಾತ್ರ ಇದು ಸಾಧ್ಯವಾಗಲಿದೆ.

ಮೆಜೆಸ್ಟಿಕ್‌ನಿಂದ ಬಸ್‌ಗಳನ್ನು ಬೇರೆಡೆಗಳಿಗೆ ವರ್ಗಾಯಿಸುವ ಮೂಲಕ ಸಂಸ್ಥೆಯು ಏಪ್ರಿಲ್‌ನಿಂದ ನಗರದ ದಟ್ಟಣೆಯನ್ನು ತಗ್ಗಿಸಲು ಮೊದಲ ಹೆಜ್ಜೆ ಇರಿಸಿದೆ. 2014ರಲ್ಲಿ ಇದೇ ಪ್ರಯೋಗ ಮಾಡಿ ಸಂಸ್ಥೆಯು ₹ 12 ಕೋಟಿಯಷ್ಟು ನಷ್ಟಕ್ಕೆ ಒಳಗಾಗಿತ್ತು. ಕಡಿಮೆ ಅಂತರದ ಪ್ರಯಾಣ ಮತ್ತು ದೂರ ಪ್ರಯಾಣದವೂ ಸೇರಿ 60 ನಿಗದಿತ ಮಾರ್ಗಗಳ ವಾಹನಗಳನ್ನು ಈ ರೀತಿ ಸ್ಥಳಾಂತರಿಸಿತ್ತು.

‘ಕರ್ನಾಟಕ ಸಾರಿಗೆ’ ಬಸ್‌ಗಳು ಮಾತ್ರ ಪೀಣ್ಯದಿಂದ ಸಂಚರಿಸಲಿವೆ. ಈಗಿನ ಸಂಚಾರ ದಟ್ಟಣೆಯ ಅವಧಿಯನ್ನು ಪರಿಗಣಿಸಿದರೆ ಹೊಸ ಪ್ರಯೋಗದಿಂದ ಬಸ್‌ ಓಡಾಟದ ಅವಧಿ 1ರಿಂದ 1.30 ಗಂಟೆಗಳಷ್ಟು ಕಡಿಮೆಯಾಗುತ್ತದೆ. ಇದರಿಂದ ಪ್ರತಿ ಟ್ರಿಪ್‌ನಲ್ಲಿ 4 ಲೀಟರ್‌ಗಳಷ್ಟು ಡೀಸೆಲ್‌ ಉಳಿಸಬಹುದು’ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌.ಉಮಾಶಂಕರ್‌ ಪ್ರತಿಕ್ರಿಯಿಸಿ, ‘ಸಂಸ್ಥೆ ಇನ್ನೂ ನಷ್ಟದಲ್ಲಿದ್ದು ಸಂಕಷ್ಟ ಎದುರಿಸುತ್ತಿದೆ. ಬಸ್‌ಗಳು ಗರಿಷ್ಠ ಮಟ್ಟದಲ್ಲಿ ಓಡುತ್ತಿಲ್ಲ. ಇದರಿಂದಾಗಿ ಆದಾಯದಲ್ಲಿ ಇಳಿಮುಖವಾಗಿದೆ. ಹೀಗಾಗಿ ನಾವು ಇಂಧನ ಉಳಿಸುವುದು ಮತ್ತು ದಟ್ಟಣೆ ತಗ್ಗಿಸುವ ಪ್ರಯತ್ನದ ಮೂಲಕ ಗರಿಷ್ಠ ಲಾಭ ಗಳಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

‘ಖಾಸಗಿ ಬಸ್‌ಗಳು ಫ್ಲೈಓವರ್‌ನಲ್ಲಿ ಮಾತ್ರ ಸಂಚರಿಸಬೇಕು ಎಂದು ಸಾರಿಗೆ ಇಲಾಖೆ ನಿಯಮ ಮಾಡಿರುವುದು ಸ್ವಾಗತಾರ್ಹ. ಪ್ರಯಾಣಿಕರ ಬೇಡಿಕೆ ಹೆಚ್ಚಿದರೆ ನಾವು ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸುತ್ತೇವೆ’ ಎಂದರು.

ಬಸ್‌ ಸಂಖ್ಯೆ ಕಡಿತಗೊಳಿಸುವುದರಿಂದ ದಟ್ಟಣೆ ಕಡಿಮೆಯಾಗುವುದನ್ನು ಅಳೆಯುವುದು ಕಷ್ಟ. ಹೊಸ ಸರ್ಕಾರವು ಎಲ್ಲ ಬಸ್‌ಗಳನ್ನು ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ವರ್ಗಾಯಿಸಿದರೆ ಜನ ಸ್ವಲ್ಪ ನಿರಾಳವಾಗುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಸರ್ಕಾರ ಕೆಲವು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮುಖ್ಯ ರಸ್ತೆಯಿಂದ ಬಸ್‌ ಟರ್ಮಿನಲ್‌ಗೆ ಯಾವುದೇ ಆತಂಕವಿಲ್ಲದೇ ತಲುಪುವಂತಾಗಬೇಕು. ಮೆಟ್ರೊ ರೈಲು ನಿಗಮವು ಖಾಸಗಿ ಸಹಭಾಗಿತ್ವದಲ್ಲಿ ಇಲ್ಲಿ ಎಸ್ಕಲೇಟರ್‌ ನಿರ್ಮಿಸಲು ಯೋಜನೆ ರೂಪಿಸಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry