ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗಳ ಗುಣಮಟ್ಟ ವರ್ಧನೆಗೆ ಆದ್ಯತೆ

Last Updated 28 ಮೇ 2018, 19:39 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿಯು ಒಂದು ವರ್ಷದಿಂದ ಬಸ್‌ಗಳು ಅರ್ಧದಾರಿಯಲ್ಲೇ ಕೆಟ್ಟು ನಿಲ್ಲುವ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ. ಬಸ್‌ ಕೆಟ್ಟು ಹೋಗುವ ಪ್ರತಿದಿನದ ಪ್ರಕರಣಗಳನ್ನು 142ರಿಂದ 35ಕ್ಕೆ ಇಳಿಸಿದೆ. ಈ ಮೂಲಕ, ನಗರದ ಸ್ಪರ್ಧಾತ್ಮಕ ಸಾರಿಗೆ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆಗೆ ಪಾತ್ರವಾಗಲು ಮುಂದಾಗಿದೆ.

‘ಸರಿಯಾದ ಮತ್ತು ಗುಣಮಟ್ಟದ ಸೇವೆ ನೀಡಲು ಸಂಸ್ಥೆ ಒತ್ತು ನೀಡಿದೆ. ಬಸ್‌ಗಳು ಕೆಟ್ಟು ನಿಲ್ಲುವುದರಿಂದಾಗಿ ಪ್ರತಿದಿನ ಸುಮಾರು 850ರಷ್ಟು ಟ್ರಿಪ್‌ಗಳಿಗೆ ಅಡ್ಡಿಯಾಗುತ್ತಿತ್ತು. ಕೆಲವು ಸಂಚಾರವನ್ನೇ ರದ್ದುಗೊಳಿಸಬೇಕಾಗುತ್ತಿತ್ತು. ಇದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು.

‘ವಾಹನಗಳ ಸರಿಯಾದ ನಿರ್ವಹಣೆ ಮೂಲಕ ಬಸ್‌ ಕೆಟ್ಟುಹೋಗುವ ಸಾಧ್ಯತೆಗಳನ್ನು ಡಿಪೊ ಮಟ್ಟದಲ್ಲೇ ಅರ್ಧದಷ್ಟು ನಿವಾರಿಸಬಹುದು. ಬಸ್‌ಗಳ ಗುಣಮಟ್ಟ ವರ್ಧನೆಗೆ ಸಂಬಂಧಿಸಿದಂತೆ ಹಲವಾರು ಕ್ರಮಗಳನ್ನು ಏಕಕಾಲದಲ್ಲಿ ತೆಗೆದುಕೊಳ್ಳಲಾಗುತ್ತದೆ. ಬಸ್‌ ಕೆಟ್ಟು ಹೋಗುವುದನ್ನು ಭವಿಷ್ಯದಲ್ಲಿ ಶೂನ್ಯಕ್ಕಿಳಿಸುವುದೇ ನಮ್ಮ ಗುರಿ’ ಎಂದು ಬಿಎಂಟಿಸಿ ಆಡಳಿತ ನಿರ್ದೇಶಕ ವಿ.ಪೊನ್ನುರಾಜ್‌ ಹೇಳಿದರು.

ಅಂಕಿ ಅಂಶಗಳ ಪ್ರಕಾರ, 2017–18ರಲ್ಲಿ ಬಸ್‌ ಕೆಟ್ಟು ಹೋಗುವ 10 ಸಾವಿರದಷ್ಟು ಪ್ರಕರಣಗಳನ್ನು ಕಡಿಮೆ ಮಾಡಲಾಗಿತ್ತು.

ಬಸ್‌ಗಳನ್ನು ಇನ್ನಷ್ಟು ಸುವ್ಯವಸ್ಥಿತಗೊಳಿಸಲು ಹಲವಾರು ಮಾದರಿಗಳನ್ನು ಅನುಸರಿಸಲಾಗುತ್ತಿದೆ. ಎರಡು ಡಿಪೊಗಳಲ್ಲಿ ಬಸ್‌ಗಳ ಸ್ವಚ್ಛತೆಯನ್ನು ಹೊರಗುತ್ತಿಗೆ ಮೂಲಕ ನಿರ್ವಹಿಸಲು ಟೆಂಡರ್‌ ಆಹ್ವಾನಿಸಲಾಗಿದೆ. ಬಸ್‌ಗಳ ಸ್ವಚ್ಛತೆಗೆ ಸಂಬಂಧಿಸಿ ಪ್ರಯಾಣಿಕರು ಕೂಡ ದೂರು ನೀಡಿ ಸಹಕರಿಸಬಹುದು. ಬಿಎಂಟಿಸಿ ಆ್ಯಪ್‌ ಮೂಲಕವೂ ಪ್ರತಿಕ್ರಿಯೆ ನೀಡಿ ಇಂಥ ವಿಷಯಗಳನ್ನು ಗಮನಕ್ಕೆ ತರಬಹುದು ಎಂದು ಅಧಿಕಾರಿಗಳು ತಿಳಿಸಿದರು.

ಬಸ್‌ ಸುಸ್ಥಿತಿಗೆ ಆ್ಯಪ್‌ ಕಣ್ಣು...: ವಾಹನಗಳ ಆರೋಗ್ಯ ನಿರ್ವಹಣೆ (ಸುಸ್ಥಿತಿಯಲ್ಲಿಡುವ) ಕುರಿತು ಸಂಸ್ಥೆಯು ಆ್ಯಪ್‌ ಅನ್ನು ಪರಿಚಯಿಸುವ ಮೂಲಕ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಈ ಆ್ಯಪ್‌ ಅನ್ನು ಜಯನಗರ ಡಿಪೊದಲ್ಲಿ ಪರೀಕ್ಷಿಸಲಾಗುತ್ತಿದೆ.

‘ವಾಹನದಲ್ಲಿರುವ ದೋಷವನ್ನು ಆ್ಯಪ್‌ ಮೂಲಕ ದಾಖಲಿಸಿದರೆ ಸಾಕು. ಡಿಪೊದ ತಜ್ಞರಿಗೆ ತಾನೇ ಮಾಹಿತಿ ರವಾನಿಸುತ್ತದೆ. ಬಸ್‌ ಡಿಪೊಗೆ ಆಗಮಿಸುವ ವೇಳೆಗೆ ಸಂಬಂಧಪಟ್ಟ ವಿಭಾಗದ ತಜ್ಞರು ಅಲ್ಲಿ ಹಾಜರಿರುತ್ತಾರೆ. ಇದರಿಂದ ದುರಸ್ತಿ ಅವಧಿಯನ್ನು ಕಡಿಮೆಗೊಳಿಸಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

‘ನಿರ್ವಹಣಾ ಪ್ರಕ್ರಿಯೆಯನ್ನು ಸರಳಗೊಳಿಸುವುದರಿಂದ 7 ಅಥವಾ ಅದಕ್ಕಿಂತ ಹೆಚ್ಚು ವರ್ಷ ಹಳೆಯದಾದ ಸಾವಿರ ಬಸ್‌ಗಳಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ನಿವಾರಿಸಬಹುದು. ಈ ಆ್ಯಪ್‌ಗೆ ಚಾಲಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.

‘ಆ್ಯಪ್‌ನಿಂದಾಗಿ ವಾಹನದ ಕಾರ್ಯಕ್ಷಮತೆ ಹೆಚ್ಚಿದೆ. ಬಸ್‌ ದುರಸ್ತಿ ಮಾಡಿದವರು, ಬಳಕೆಯಾದ ಸಾಮಗ್ರಿಗಳ ಬಗ್ಗೆ ಮಾಹಿತಿ ದಾಖಲಾಗಲಿದೆ. ಒಂದು ವೇಳೆ ಸಮಸ್ಯೆ ಮರುಕಳಿಸುತ್ತಿದ್ದರೆ ಅದು ಸ್ವಯಂಚಾಲಿತವಾಗಿ, ಉನ್ನತ ಹಂತದಲ್ಲಿರುವವರ ಗಮನಕ್ಕೆ ಹೋಗುತ್ತದೆ’ ಎಂದು ಅವರು ಹೇಳಿದರು.

ಪ್ರಯಾಣಿಕರ ಸಂಖ್ಯೆ ಇಳಿಮುಖ
ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಇಳಿಮುಖವಾಗುತ್ತಿದೆ. 2014ರ ಅವಧಿಯಲ್ಲಿ ಪ್ರತಿದಿನ 52 ಲಕ್ಷ ಜನ ಪ್ರಯಾಣಿಸುತ್ತಿದ್ದರು. 2017–18ರ ಅವಧಿಯಲ್ಲಿ ಅದು 45 ಲಕ್ಷಕ್ಕೆ ಇಳಿದಿದೆ. ಮೆಟ್ರೊ ರೈಲು ಬಳಕೆ,  ಕ್ಯಾಬ್‌ ಸಂಖ್ಯೆ ಹೆಚ್ಚಾಗಿರುವುದು, ಸ್ವಂತ ವಾಹನ ಹೊಂದುವ ಪ್ರವೃತ್ತಿ ಹೆಚ್ಚಾಗಿರುವುದು ಇದಕ್ಕೆ ಕಾರಣ.

ಮಾರ್ಗಗಳ ಸುವ್ಯವಸ್ಥೆಗೆ ಕ್ರಮ

ಮಾನದಂಡ: ಕಡಿಮೆ ಬೇಡಿಕೆ ಮತ್ತು ಕಡಿಮೆ ಆದಾಯ

* ಖಾಸಗಿ ಬಸ್‌ ಸಂಚಾರ ಮತ್ತು ಪಾತ್ರದ ಅಧ್ಯಯನ

* ರಸ್ತೆ ನಿಯಮಗಳು ಮತ್ತು ಸಂಚಾರ ಸ್ಥಿತಿಗತಿಯ ಅಧ್ಯಯನ

* ಉತ್ತಮ ಸಮಯದಲ್ಲಿ ಪ್ರಯಾಣದ ಅವಧಿಯ ಸುಧಾರಣೆ

* ಬಸ್‌ಗಳ ಗರಿಷ್ಠ ಬಳಕೆ ಮಾಡಿಸುವ ಗುರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT