ಕ್ರಿಕೆಟ್‌ ಬಾಲ್‌ ಬಡಿದು 8 ದಿನಗಳ ಶಿಶು ಸಾವು

7

ಕ್ರಿಕೆಟ್‌ ಬಾಲ್‌ ಬಡಿದು 8 ದಿನಗಳ ಶಿಶು ಸಾವು

Published:
Updated:

ಬೀದರ್: ನಗರದ ಚಿದ್ರಿಯಲ್ಲಿರುವ ಸರ್ಕಾರಿ ಶಾಲೆಯ ಸಮೀಪ ಕ್ರಿಕೆಟ್ ಬಾಲ್‌ ಬಡಿದು ಎಂಟು ದಿನಗಳ ಶಿಶು ಭಾನುವಾರ ಮೃತಪಟ್ಟಿದೆ.

ಪರ್ವೀನ್‌ ದೀಲಸಾದ್‌ ಹುಸೇನ್‌ ಅವರು ಶಿಶುವನ್ನು ಎತ್ತಿಕೊಂಡು ಪತಿ ಜತೆ ಹೋಗುತ್ತಿದ್ದಾಗ, ಮೈದಾನದಲ್ಲಿ ಹುಡುಗರು ಕ್ರಿಕೆಟ್‌ ಆಡುತ್ತಿದ್ದರು. ಈ ವೇಳೆ ಬ್ಯಾಟ್‌ನಿಂದ ಬಾರಿಸಿದ ಬಾಲ್‌, ಪರ್ವೀನ್‌ ಅವರ ಬಗಲಲ್ಲಿದ್ದ ಶಿಶುವಿನ ತಲೆಗೆ ತಗುಲಿತು.

ಮಗುವನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.

ದೀಲಸಾದ್‌ ಅವರು ನೀಡಿದ ದೂರಿನ ಮೇರೆಗೆ ಗಾಂಧಿಗಂಜ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುವೆಂಪು ವಿ.ವಿ ವೆಬ್‌ಸೈಟ್‌ ಹ್ಯಾಕ್‌

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಅನ್ನು ದುಷ್ಕರ್ಮಿಗಳು ಸೋಮವಾರ ಹ್ಯಾಕ್ ಮಾಡಿದ್ದಾರೆ.

ಹ್ಯಾಕರ್‌ಗಳು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ತೆಗೆದು ಹಾಕಿದ್ದಾರೆ. ಅಲ್ಲದೆ ವೆಬ್‌ಸೈಟ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಬರೆಯಲಾಗಿದೆ. ‘ಹಂಟರ್‌ ಬಜ್ವಾ’ ಎಂಬ ಬರಹವೂ ಇದೆ. ವಿ.ವಿ ಆಡಳಿತ ಮಂಡಳಿ ಇದರಿಂದ ದಿಗ್ಭ್ರಮೆಗೊಂಡಿದೆ. ಹ್ಯಾಕರ್‌ಗಳು ವೆಬ್‌ಸೈಟ್‌ ಭದ್ರತೆಯನ್ನು ಅಣಕ ಮಾಡುವಂತಹ ಬರಹಗಳನ್ನು ಪ್ರಕಟಿಸಿರುವುದು ಮುಜುಗರ ಉಂಟು ಮಾಡಿದ್ದು, ಈ ಸಂಬಂಧ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದೆ.

ದುಷ್ಕರ್ಮಿಗಳು ಹ್ಯಾಕ್‌ ಮಾಡಿದ ಕೆಲವೇ ಗಂಟೆಗಳಲ್ಲಿ ವೆಬ್‌ಸೈಟ್‌ ಸರಿಯಾಗಿದೆ.

ಈ ಬಗ್ಗೆ ಕುಲಪತಿ ಪ್ರೊ. ಜೋಗನ್‌ ಶಂಕರ್‌ ಪ್ರತಿಕ್ರಿಯಿಸಿ, ‘ಭಾನುವಾರ ರಾತ್ರಿ ವೆಬ್‌ಸೈಟ್‌ ಚೆನ್ನಾಗಿ ಕೆಲಸ ಮಾಡಿದೆ. ಆದರೆ ಬೆಳಿಗ್ಗೆ ಹ್ಯಾಕ್‌ ಮಾಡಿರುವುದು ಗಮನಕ್ಕೆ ಬಂದಿದ್ದು, ಸೈಬರ್‌ ಕ್ರೈಂನವರಿಗೆ ದೂರು ನೀಡಿದ್ದೇವೆ. ಈಗಾಗಲೇ ನಮ್ಮ ತಾಂತ್ರಿಕ ತಂಡ ವೆಬ್‌ಸೈಟ್‌ ಅನ್ನು ಯಥಾಸ್ಥಿತಿಗೆ ತಂದಿದೆ’ ಎಂದು ತಿಳಿಸಿದರು.

ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ

ಜಗಳೂರು: ಚಿಕ್ಕಪ್ಪನ ಕಿರುಕುಳದಿಂದ ಬೇಸತ್ತ ಪಟ್ಟಣದ ಲತೀಫ್‌ ಬಡಾವಣೆಯ ಪ್ರಥಮ ದರ್ಜೆ ಗುತ್ತಿಗೆದಾರ ನಾಗಭೂಷಣ (38) ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ನೀಡುತ್ತ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಪಟ್ಟಣದ ಹೊರ ವಲಯದಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ವಿಷ ಸೇವಿಸಿರುವುದನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿದ ಅವರ ಸ್ನೇಹಿತರು ತಕ್ಷಣವೇ ಸ್ಥಳಕ್ಕೆ ಬಂದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮನೆ ಕಟ್ಟುವ ವಿಷಯಕ್ಕೆ ಚಿಕ್ಕಪ್ಪ ಕಿರುಕುಳ ನೀಡುತ್ತಿದ್ದಾನೆ. ಹಣ ಪಡೆದು ಹಿಂದಿರುಗಿಸದೆ ಸತಾಯಿಸುತ್ತಿರುವ ಹಿನ್ನೆಲೆಯಲ್ಲಿ ಜೀವನದಲ್ಲಿ ನೊಂದು ಸಾಯುತ್ತಿದ್ದೇನೆ’ ಎಂದು ನಾಗಭೂಷಣ ವಿಷ ಸೇವಿಸುವ ಮೊದಲು ಫೇಸ್‌ಬುಕ್‌ ಲೈವ್‌ನಲ್ಲಿ ಹೇಳಿಕೊಂಡಿದ್ದಾರೆ.

‘ಸ್ನೇಹಿತರೆ, ಕೆಲಸ ಕೊಡಿಸುವುದಾಗಿ ಪಡೆದಿದ್ದ ಹಣ ವಾಪಸ್ ಕೊಡದೆ ಚಿಕ್ಕಪ್ಪ ನನಗೆ ಕಿರುಕುಳ ನೀಡುತ್ತಿದ್ದಾನೆ. ಇದು ನನ್ನ ಕೊನೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಮಕ್ಕಳು ಮತ್ತು ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಅವರಿಗೆ ನ್ಯಾಯ ದೊರಕಿಸಿ’ ಎಂದು ಅಳುತ್ತಾ ವಿಷ ಸೇವಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry