ಮರಳು ಹರಾಜಿಗೆ ಡಿ.ಸಿ ಸೂಚನೆ

7
ಜನರಿಗೆ ನೆರವಾಗುವಂತೆ ತಾಕೀತು

ಮರಳು ಹರಾಜಿಗೆ ಡಿ.ಸಿ ಸೂಚನೆ

Published:
Updated:

ಬೆಳಗಾವಿ: ಲೋಕೋಪಯೋಗಿ ಇಲಾಖೆಯವರು ಜಿಲ್ಲೆಯ ವಿವಿಧೆಡೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿರುವ ಮರಳನ್ನು ಕೂಡಲೇ ಹರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ ಸೂಚಿಸಿದರು.

ಸೋಮವಾರ ನಡೆದ ಜಿಲ್ಲಾಮಟ್ಟದ ಮರಳು ಗಣಿಗಾರಿಕೆ ಮತ್ತು ಕಲ್ಲುಪುಡಿ ಘಟಕಗಳ ಉಸ್ತುವಾರಿ ಸಮಿತಿ

ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮರಳಿನ ಹರಾಜಿನಲ್ಲಿ ಗುತ್ತಿಗೆದಾರರು ಭಾಗವಹಿಸುತ್ತಿಲ್ಲ ಎಂದು ನೆಪ ಹೇಳಬಾರದು. ಮನೆ ನಿರ್ಮಿಸಲು, ಮರಳಿನ ಕೊರತೆಯಿಂದಾಗಿ ಜನರು ಪರದಾಡುತ್ತಿರುವುದು ಕಂಡುಬರುತ್ತಿದೆ. ವಿವಿಧ ಇಲಾಖೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಮರಳು ಸಾಕಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜನರಿಗೆ ಮರಳಿನ ಅವಶ್ಯಕತೆ ಇಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ಮುಂದಿನ ಸಭೆ ಒಳಗಾಗಿ ಮರಳನ್ನು ಹರಾಜು ಹಾಕಿ ವರದಿ ನೀಡಬೇಕು’ ಎಂದು ತಾಕೀತು ಮಾಡಿದರು.

‘ಸರ್ಕಾರಿ ಜಮೀನುಗಳಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡುವ ಮುನ್ನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ಬೇಕಾಬಿಟ್ಟಿ ಪರವಾನಗಿ ನೀಡಿದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕಲ್ಲುಪುಡಿ ಗಣಿಗಾರಿಕೆ ಘಟಕ ಸ್ಥಾಪಿಸಲು ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಆಯಾ ತಾಲ್ಲೂಕು ತಹಶೀಲ್ದಾರ್‌ ಮತ್ತು ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿ ಖುದ್ದಾಗಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ಜಿಲ್ಲಾಧಿಕಾರಿ ಅನುಮತಿ ನೀಡದರೆ ಮಾತ್ರ ‘ಬಿ’ ಫಾರಂ ಸಲ್ಲಿಸಬೇಕು. ಏಕಾಏಕಿ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳ ವಿರುದ್ಧವೇ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

‘ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಕಲ್ಲು ಗಣಿಗಾರಿಕೆ ಪರವಾನಗಿ ನೀಡುವ ನಿಯಮ ಹಾಗೂ ವ್ಯತ್ಯಾಸಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿರಬೇಕು. ಖಾಸಗಿ ಜಮೀನುಗಳಿಗೆ ನೀಡುವ ಮಾದರಿಯನ್ನು ಸರ್ಕಾರಿ ಜಮೀನುಗಳಿಗೆ ಅನ್ವಯಿಸಿದರೆ ಅಧಿಕಾರಿಗಳ ತಲೆದಂಡ ಆಗುತ್ತದೆ’ ಎಂದು ತರಾಟೆಗೆ ತೆಗೆದುಕೊಂಡರು.

ಎಸ್ಪಿ ಸುಧೀರಕುಮಾರ ರೆಡ್ಡಿ, ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry