ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಡಿಒ ವೈಮಾನಿಕ ವ್ಯವಸ್ಥೆಯ ಮಹಾ ನಿರ್ದೇಶಕಿಯಾಗಿ ಟೆಸ್ಸಿ ಥಾಮಸ್ ನೇಮಕ

Last Updated 29 ಮೇ 2018, 7:04 IST
ಅಕ್ಷರ ಗಾತ್ರ

ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಹಾ ನಿರ್ದೇಶಕಿಯಾಗಿ ಟೆಸ್ಸಿ ಥಾಮಸ್ ನೇಮಕವಾಗಿದ್ದಾರೆ.

ಡಿಆರ್‌ಡಿಒ ಏರೋನಾಟಿಕಲ್ ಸಿಸ್ಟಮ್ಸ್ ವಿಭಾಗದ ಮಹಾ ನಿರ್ದೇಶಕ ಡಾ.ಸಿ.ಪಿ. ರಾಮನಾರಾಯಣನ್ ಅವರು ಮೇ 31ರಂದು ನಿವೃತ್ತಿ ಹೊಂದಲಿದ್ದು, ಆ ಸ್ಥಾನಕ್ಕೆ ಟೆಸ್ಸಿ ಥಾಮಸ್ ನೇಮಕವಾಗಿದ್ದಾರೆ. ಜೂನ್ 1 ರಿಂದ ಟೆಸ್ಸಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಇದೀಗ ಹೈದರಾಬಾದ್‍ನ ಅಡ್ವಾನ್ಸ್ಡ್ ಲ್ಯಾಬೋರೇಟರಿಸ್ (ಎಎಸ್‌ಎಲ್) ನಿರ್ದೇಶಕಿಯಾಗಿದ್ದಾರೆ ಟೆಸ್ಸಿ. ಅಗ್ನಿ ಪುತ್ರಿ, ಕ್ಷಿಪಣಿ ಮಹಿಳೆ ಮೊದಲಾದ ಬಿರುದುಗಳ ಒಡತಿ ಈಕೆ. ಆರಂಭದಿಂದಲೂ ಅಗ್ನಿ ಕ್ಷಿಪಣಿ ಯೋಜನೆಗಳಲ್ಲಿ ಅವರದ್ದು ಮಹತ್ವದ ಸಾಧನೆ. 1988ರಿಂದ ಅಗ್ನಿ ಕ್ಷಿಪಣಿಯ ಸರಣಿ ಯೋಜನೆಗಳಲ್ಲೆಲ್ಲಾ ಇವರು ಕೆಲಸಮಾಡಿದ್ದಾರೆ.

ಮೊದಲ ಅಗ್ನಿ ಕ್ಷಿಪಣಿ ಪ್ರಯೋಗಾರ್ಥ ಉಡಾವಣೆ ನಡೆದದ್ದು 1989ರಲ್ಲಿ. 2006ರಲ್ಲಿ 3500 ಕಿಮೀ ವ್ಯಾಪ್ತಿಯ ಅಗ್ನಿ -3 ಕ್ಷಿಪಣಿ ಯೋಜನೆಗೆ ಅವರು ಸಹಯೋಜನಾ ನಿರ್ದೇಶಕರಾಗಿದ್ದರು. ನಂತರ ಅಗ್ನಿ 4 ಕ್ಷಿಪಣಿ ಯೋಜನೆಗೆ ಅವರು ಯೋಜನಾ ನಿರ್ದೇಶಕರಾಗಿದ್ದರು. ಇವರು ಅಗ್ನಿ-5 ಕ್ಷಿಪಣಿ ಯೋಜನೆಯ ನೇತೃತ್ವ ವಹಿಸಿದ್ದರು. ಈ ಮೂಲಕ ಕ್ಷಿಪಣಿ ಯೋಜನೆಗೆ ನೇತೃತ್ವ ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

ಡಿಆರ್‌ಡಿಒ ಮಹಾ ನಿರ್ದೇಶಕಿಯಾಗಿ ಹುದ್ದೆಗೇರಿದ ಎರಡನೇ ಮಹಿಳೆಯಾಗಿದ್ದಾರೆ ಟೆಸ್ಸಿ. ಈ ಹಿಂದೆ ಜೆ.ಮಂಜುಳಾ ಆ ಸ್ಥಾನಕ್ಕೇರಿದ್ದರು.

ಏರೋನಾಟಿಕಲ್ ಸಿಸ್ಟಮ್ಸ್ ಡೈರೆಕ್ಟರ್ ಜನರಲ್ ಹುದ್ದೆಗೇರುವ ಮೂಲಕ ಟೆಸ್ಸಿ ಅವರು ಡಿಫೆನ್ಸ್ ಏವಿಯೋನಿಕ್ಸ್ ರಿಸರ್ಚ್ ಎಸ್ಟಾಬ್ಲಿಷ್‍ಮೆಂಟ್ (DARE), ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್‍ಮೆಂಟ್ (GTRE) , ಸೆಂಟರ್ ಫಾರ್ ಏರ್ ಬೋನ್ ಸಿಸ್ಟಂ (CABS), ಏರೋನಾಟಿಕಲ್ ಡೆವಲಪ್‍ಮೆಂಟ್ ಎಸ್ಟಾಬ್ಲಿಷ್‍ಮೆಂಟ್ (ADE), ಸೆಂಟರ್ ಫಾರ್ ಮಿಲಿಟರಿ ಏರ್‍‍ವರ್ತಿನೆಸ್ ಆ್ಯಂಡ್ ಸರ್ಟಿಫಿಕೇಶನ್ (CEMILAC) , ಏರಿಯಲ್ ಡೆಲಿವರಿ ರಿಸರ್ಚ್ ಆ್ಯಂಡ್ ಡೆವಲಪ್‍ಮೆಂಟ್ ಎಸ್ಟಾಬ್ಲಿಷ್‍ಮೆಂಟ್ (ADRDE), ಏರೋನಾಟಿಕಲ್ ಡೆವಲಪ್‍ಮೆಂಟ್ ಏಜೆನ್ಸಿ (ADA)ಮೊದಲಾದವುಗಳ ಜವಾಬ್ದಾರಿ ವಹಿಸಲಿದ್ದಾರೆ.

ಕಿರುಪರಿಚಯ
ಭಾರತೀಯ ಕ್ಷಿಪಣಿ ಮಹಿಳೆ ಎಂದೇ ಹೆಸರಾದ ಟೆಸ್ಸಿ ಥಾಮಸ್ ಕೇರಳದವರು. ಆಲಪ್ಪುಳ ಸೇಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ  ಮುಗಿಸಿದ ಇವರು ತ್ರಿಶ್ಶೂರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಬಿಟೆಕ್ ಪದವಿ ಗಳಿಸಿದರು.1985ರಲ್ಲಿ  ಪುಣೆ ಇನ್ಸಿಟ್ಯೂಟ್ಸ್ ಆಫ್ ಆರ್ಮಮೆಂಟ್ ಟೆಕ್ನಾಲಜಿ ಸಂಸ್ಥೆಯಿಂದ ಎಂಟೆಕ್ ಪಡೆದ ನಂತರ ಡಿಆರ್‌ಡಿಒದಲ್ಲಿ ವಿಜ್ಞಾನಿಯಾದರು. ಈ ಕ್ಷೇತ್ರದಲ್ಲಿ ಟೆಸ್ಸಿ ಅವರಿಗೆ 30 ವರ್ಷದ ಅನುಭವವಿದೆ. ಕ್ಷಿಪಣಿ ಕ್ಷೇತ್ರಕ್ಕೆ ಟೆಸ್ಸಿಯವರು ನೀಡಿದ ವಿಶೇಷ ಕೊಡುಗೆಯನ್ನಾಧರಿಸಿ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT