ಪತ್ರಿಕೆ ಹಾಕುವ ಬಾಲಕನ ಸಾಧನೆ

7

ಪತ್ರಿಕೆ ಹಾಕುವ ಬಾಲಕನ ಸಾಧನೆ

Published:
Updated:
ಪತ್ರಿಕೆ ಹಾಕುವ ಬಾಲಕನ ಸಾಧನೆ

ಕುಮಾರಪಟ್ಟಣ: ಪ್ರತಿನಿತ್ಯ ಬೆಳಿಗ್ಗೆ ಪತ್ರಿಕೆ ವಿತರಿಸಿ ಶಾಲೆಗೆ ಹೋಗುತ್ತಿದ್ದ ಇಲ್ಲಿಗೆ ಸಮೀಪದ ಕೊಡಿಯಾಲ ಹೊಸಪೇಟೆ ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಯಲ್ಲಿ 584 (ಶೇ 93.44) ಅಂಕ ಪಡೆದಿದ್ದಾನೆ.

ಕೋಡಿಯಾಲ ಹೊಸಪೇಟೆಯ ಕೂಲಿಕಾರ, ಅನಕ್ಷರಸ್ಥ ನಾಗರಾಜ ದೊಗ್ಗಳ್ಳಿ ಮತ್ತು ರೇಣುಕಾ ದಂಪತಿಯ 2 ಗಂಡು ಮಕ್ಕಳಲ್ಲಿ ದೊಡ್ಡವ ಕಿರಣ್ ದೊಗ್ಗಳ್ಳಿ.

‘ಪ್ರತಿ ಕೆಲಸಕ್ಕೂ ಸಮಯ ಇಲ್ಲ ಎಂದು ಸಬೂಬು ನೀಡುವವರಿಗೆ ಅಪವಾದ ಎಂಬಂತೆ ಕಿರಣ್ ದೊಗ್ಗಳ್ಳಿ ಶಾಲೆಯ ಕಲಿಕೆಯ ಜೊತೆಗೆ ಪ್ರತಿದಿನ ಮುಂಜಾನೆ 5ಗಂಟೆಗೆ ಮನೆ ಮನೆಗೆ ದಿನಪತ್ರಿಕೆ ಹಾಕುತ್ತಾನೆ. ಆ ಬಳಿಕ ಮರಳಿ ಮನೆಗೆ ಬಂದು ವೇಳಾಪಟ್ಟಿಯಂತೆ ಅಭ್ಯಾಸ ಮಾಡಿ, ಶಾಲೆಗೆ ಹೋಗುತ್ತಾನೆ.

ಮನೆಯಲ್ಲಿ ತಂದೆ –ತಾಯಿ ಕಷ್ಟವನ್ನು ಅರಿತ ಕಿರಣ್, ನನ್ನ ವಿದ್ಯಾಭ್ಯಾಸದಿಂದ ಪಾಲಕರಿಗೆ ಇನ್ನಷ್ಟು ಹೊರೆಯಾಗಬಾರದೆಂದು ನಾಲ್ಕು ವರ್ಷಗಳಿಂದ ಪತ್ರಿಕೆ ಹಂಚುವ ಕೆಲಸ ಮಾಡುತ್ತಿದ್ದಾನೆ. ಮುಂದೆ ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತಿದ್ದಾನೆ.

‘ಏನಾದರೂ ಮಾಡಿ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕೆ ಇಲ್ಲಿನ ಪ್ರೌಢಶಾಲೆಯ ಶಿಕ್ಷಕರು, ಉಚಿತ ಶಿಕ್ಷಣ ನೀಡಿ ಸಹಕರಿಸಿದರು’ ಎನ್ನುತ್ತಾರೆ ಕಿರಣ್ ಪೋಷಕರು.

‘ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ತಾಲ್ಲೂಕಿನ ಗ್ರಾಮೀಣ ಭಾಗದ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾನೆ’ ಎನ್ನುತ್ತಾರೆ ರಾಣೆಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್.

‘ಶಾಲೆಯಲ್ಲಿ ಶಿಸ್ತು, ಸಂಯಮ ತೋರುತ್ತಿದ್ದನು. ತನ್ನ ಪರಿಶ್ರಮದಿಂದ ಉತ್ತಮ ಅಂಕ ಗಳಿಸಿದ್ದಾನೆ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಗದಿಗೆಪ್ಪ ಎಸ್ ಓಲೇಕಾರ್.

**

ಎಲ್ಲಾ ಕೆಲಸ ಇಷ್ಟಪಟ್ಟು ಮಾಡುತ್ತೇನೆ, ಶಿಕ್ಷಕರು ಸ್ನೇಹಿತರಂತೆ ಮಾರ್ಗದರ್ಶನ ಮಾಡಿದ್ದರ ಫಲವೇ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು

ಕಿರಣ್ ದೊಗ್ಗಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry