ಬಡವರಿಗೆ 10 ಸಾವಿರ ಮನೆಗಳ ನಿರ್ಮಾಣ

7
ಸೆಂಟ್ರಲ್‌ ಕ್ಷೇತ್ರದ ಮತದಾರರಿಗೆ, ಮುಖಂಡರಿಗೆ ಅಭಿನಂದನಾ ಸಮಾರಂಭ

ಬಡವರಿಗೆ 10 ಸಾವಿರ ಮನೆಗಳ ನಿರ್ಮಾಣ

Published:
Updated:

ಹುಬ್ಬಳ್ಳಿ: ಸೆಂಟ್ರಲ್‌ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ 10 ಸಾವಿರ ಮನೆಗಳನ್ನು ನಿರ್ಮಾಣ ಮಾಡಿ, ಬಡವರಿಗೆ ಹಂಚಲಾಗುವುದು ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ಸೋಮವಾರ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದಿಂದ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೆಂಟ್ರಲ್‌ ಕ್ಷೇತ್ರವನ್ನು ಹಸಿರು ನಗರ, ಸ್ವಚ್ಛ ನಗರವಾಗಿ ರೂಪಿಸಲಾಗುವುದು. ಎಲ್ಲ ವಾರ್ಡ್‌ಗಳಿಗೆ 24X7 ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಹಳ ದಿನ ಅಧಿಕಾರದಲ್ಲಿ ಉಳಿಯದು. ಆದಷ್ಟು ಶೀಘ್ರದಲ್ಲೇ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಚ್‌ಡಿಕೆಗೆ ಎರಡೆರಡು ಇಷ್ಟ: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ

ಅವರಿಗೆ ಎರಡೆರಡು ಎಂದರೆ ಬಹಳ ಇಷ್ಟ. ಈಗ ಹೈಕಮಾಂಡ್‌ ಕೂಡ ಎರಡಾಗಿದೆ. ಒಂದು ಕಡೆ ದೇವೇಗೌಡ, ಇನ್ನೊಂದು ಕಡೆ ರಾಹುಲ್‌ ಗಾಂಧಿ ಎಂದರು.

ಜೆಡಿಎಸ್‌ ಎಂದರೆ ಜನತಾ ದಳ ಸಂಘಪರಿವಾರ ಎಂದು ರಾಹುಲ್‌ ಗಾಂಧಿ ವ್ಯಾಖ್ಯಾನಿಸಿದ್ದರು. ಆದರೆ, ಈಗ ಅದು ದೇವೇಗೌಡ, ಸೋನಿಯಾಗಾಂಧಿ ಪರಿವಾರವಾಗಿದೆ ಎಂದು ಟೀಕಿಸಿದರು.

ಜೆಡಿಎಸ್‌, ಕಾಂಗ್ರೆಸ್‌ ಕಲಬೆರಿಕೆ ಸರ್ಕಾರ ಶೀಘ್ರದಲ್ಲೇ ಪಥನವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸೆಂಟ್ರಲ್‌ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯವನ್ನು ವಿರೋಧಿಗಳು ಸಂಪೂರ್ಣ ಮರೆಮಾಚಿ ಶೆಟ್ಟರ್‌ ವಿರುದ್ಧ ಅಪಪ್ರಚಾರ ನಡೆಸಿದ್ದರು. ಆದರೆ, ಇನ್ನು ಮುಂದಿನ ಚುನಾವಣೆಯಲ್ಲಿ ಸೆಂಟ್ರಲ್‌ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಯಾರೊಬ್ಬರೂ ಸ್ಪರ್ಧಿಸಲು ಮನಸ್ಸು ಮಾಡದಂತೆ ಜನರು ತೀರ್ಪು ನೀಡಿದ್ದಾರೆ ಎಂದು ಹೇಳಿದರು.

ಶಾಸಕ ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಮಹಾನಗರ ಪಾಲಿಕೆ ಆಯುಕ್ತ ಸುಧೀರ ಸರಾಫ್‌, ಉಪ ಮೇಯರ್‌ ಮೇನಕಾ ಹುರಳಿ, ಮುಖಂಡರಾದ ಮೋಹನ ಲಿಂಬಿಕಾಯಿ, ಸೀಮಾ ಮಸೂತಿ, ತಿಪ್ಪಣ್ಣ ಮಜ್ಜಗಿ, ನಾಗೇಶ ಕಲಬುರ್ಗಿ, ಮಹೇಶ ಟೆಂಗಿನಕಾಯಿ, ಮಲ್ಲಿಕಾರ್ಜುನ ಸಾವಕಾರ, ವೀರಣ್ಣ ಸವಡಿ ಇದ್ದರು.

ಕಾನೂನು ತಿದ್ದುಪಡಿ ಅಗತ್ಯ: ಬೊಮ್ಮಾಯಿ

ಹುಬ್ಬಳ್ಳಿ: ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವ ಪಕ್ಷಕ್ಕೆ ಆಡಳಿತ ನಡೆಸಲು ಅನುವಾಗುವಂತೆ ಈಗಿರುವ ಕಾನೂನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದರು.

ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವನ್ನು ಹೊರಗಿಟ್ಟು, ಕಡಿಮೆ ಸ್ಥಾನ ಗಳಿಸಿದ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಅವಕಾಶವನ್ನು ತೆಗೆದುಹಾಕಬೇಕು. ಒಂದು ವೇಳೆ ಸಮ್ಮಿಶ್ರ ಸರ್ಕಾರ ರಚನೆಯಾಗುವುದೇ ಆದರೆ ಅದು ಹೆಚ್ಚು ಸ್ಥಾನ ಪಡೆದ ಪಕ್ಷದ ನೇತೃತ್ವದಲ್ಲೇ ಆಗುವಂತೆ ಕಾನೂನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ಹೆಚ್ಚು ಸ್ಥಾನ ಪಡೆದ ಪಕ್ಷದ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಆ ಪಕ್ಷಕ್ಕೆ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಸ್ಥಾನ ಸಿಗುವಂತೆ ಕಾನೂನಿನಲ್ಲಿ ಅವಕಾಶ ಕಲ್ಪಿಸಬೇಕು ಎಂದರು.

ಜೆಡಿಎಸ್‌ ಪ್ರಾದೇಶಿಕ ಪಕ್ಷವೂ ಅಲ್ಲ. ಅದು ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾದ ಉಪ ಪ್ರಾದೇಶಿಕ ಪಕ್ಷವಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry