ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸೆ ಈಡೇರಿಸಿದಿರಿ, ನೀವೇ ಇಲ್ಲವಲ್ಲ’

ಅವಕಾಶ ಕೊಡಿಸಿ, ಆಸೆ ಕಣ್ತುಂಬಿಕೊಳ್ಳದೇ ಹೋದ ಸೈಕ್ಲಿಂಗ್‌ ಪ್ರೇಮಿ ಸಿದ್ದು
Last Updated 29 ಮೇ 2018, 7:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕದ ಸೈಕ್ಲಿಂಗ್‌ ‘ಕಾಶಿ’ ಎನಿಸಿರುವ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪೆಡಲ್‌ ತುಳಿಯುವ ಸಾಹಸ ಕ್ರೀಡೆ ಎತ್ತರಕ್ಕೆ ಏರಲು ಜಮಖಂಡಿಯ ಶಾಸಕ ಸಿದ್ದು ನ್ಯಾಮಗೌಡ ಅವರ ಅಗಾಧ ಸೈಕ್ಲಿಂಗ್‌ ಪ್ರೀತಿ ಕಾರಣ.

ಅದಮ್ಯ ಕ್ರೀಡಾಪ್ರೇಮಿಯಾಗಿ, ಪೋಷಕರಾಗಿ ಸೈಕ್ಲಿಸ್ಟ್‌ಗಳು ವೇಗವಾಗಿ ಪೆಡಲ್‌ ತುಳಿಯುವುದನ್ನು ಬೆರಗುಗಣ್ಣಿನಿಂದಲೇ ನೋಡುತ್ತ, ನಮ್ಮೂರಿನಲ್ಲಿಯೂ ಈ ರೀತಿಯ ಸ್ಪರ್ಧೆಗಳು ನಡೆಯಬೇಕೆಂದು ಆಸೆಪಟ್ಟಿದ್ದರು ನ್ಯಾಮಗೌಡ. ಅದನ್ನು ನನಸು ಮಾಡಿದರು ಕೂಡ.

1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಜಮಖಂಡಿ ಹತ್ತಿರದ ಕುಂಬಾರಹಳ್ಳದ ಸೈಕ್ಲಿಸ್ಟ್‌ ಚಂದ್ರಪ್ಪ ಮಲ್ಲಪ್ಪ ಕುರಣಿ ಅವರು ದೇಶವನ್ನು ಪ್ರತಿನಿಧಿಸಿದ್ದರು. ಆಗಿನ್ನೂ ನ್ಯಾಮಗೌಡ ಅವರು ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿರಲಿಲ್ಲ. ಆದರೆ, ಸೈಕ್ಲಿಸ್ಟ್‌ಗಳಿಗೆ ಹಣದ ಸಹಾಯ ಮಾಡುತ್ತಿದ್ದರು. ಚಂದ್ರಪ್ಪ ಅವರು ಏಷ್ಯನ್‌ ಕ್ರೀಡಾಕೂಟಕ್ಕೆ ಹೋಗಿಬರಲು ಸಾವಿರಾರು ರೂಪಾಯಿ ಹಣ ಕೊಟ್ಟಿದ್ದರು. ಅಷ್ಟೇ ಎಲ್ಲ, ತಮ್ಮೂರಿನ ಪ್ರತಿಭೆಯ ಸಾಹಸವನ್ನು ನೋಡುವ ಸಲುವಾಗಿ ತಾವೂ ದೆಹಲಿಗೆ ಹೋಗಿದ್ದರು.

‘ಏಷ್ಯನ್‌ ಕ್ರೀಡಾಕೂಟದಲ್ಲಿ ನನ್ನ ಸ್ಪರ್ಧೆ ನೋಡುವ ಸಲುವಾಗಿ ನ್ಯಾಮಗೌಡರು ದೆಹಲಿಗೆ ಬಂದಿದ್ದರು. ಮೊದಲ ಮೂರು ದಿನ ಅವರಿಗೆ ನನ್ನನ್ನು ಭೇಟಿಯಾಗಲು ಆಗಿರಲಿಲ್ಲ. ಕೊನೆಗೂ ನನ್ನನ್ನು ಭೇಟಿಯಾಗದೇ ದೆಹಲಿ ಬಿಟ್ಟು ಕದಲಲಿಲ್ಲ. ನೀನು ನಮ್ಮೂರಿನ ಹೆಮ್ಮೆ, ಪದಕ ಗೆಲ್ಲಲೇಬೇಕು ಎಂದು ಹುರಿದುಂಬಿಸುತ್ತಿದ್ದರು. ಈ ಭಾಗದಲ್ಲಿ ಸೈಕ್ಲಿಂಗ್‌ ಜನಮನ್ನಣೆ ಗಳಿಸಲು ಅವರ ಬೆಂಬಲವೇ ಕಾರಣ. ಆದರೆ, ಅವರು ಈಗಿಲ್ಲ ಎನ್ನುವುದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಚಂದ್ರಪ್ಪ ಕುರಣಿ ಭಾವುಕರಾದರು.

ಜಮಖಂಡಿಯಲ್ಲಿ 2008, 2014 ಮತ್ತು 2017ರಲ್ಲಿ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ನಡೆದಿತ್ತು. ಆಗ ನ್ಯಾಮಗೌಡ ಅವರೇ ಸೈಕ್ಲಿಸ್ಟ್‌ಗಳನ್ನು  ಖುದ್ದು ವಿಚಾರಿಸಿಕೊಳ್ಳುತ್ತಿದ್ದರು. ಆತಿಥ್ಯದಲ್ಲಿ ಏನಾದರೂ ತೊಂದರೆ ಇದ್ದರೆ ನನಗೆ ಹೇಳಿ ಎನ್ನುತ್ತಿದ್ದರು. ಹೀಗಾಗಿ ಅವರು ಹೊರರಾಜ್ಯದ ಸೈಕ್ಲಿಂಗ್‌ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸೈಕ್ಲಿಸ್ಟ್‌ಗಳ ಜೊತೆ ಬಹಳ ಆತ್ಮೀಯರಾಗಿದ್ದರು.

‘ನ್ಯಾಮಗೌಡ ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ದೆಹಲಿ ಸೇರಿದಂತೆ ಹೊರ ರಾಜ್ಯಗಳ ಸೈಕ್ಲಿಸ್ಟ್‌ಗಳು, ಕ್ರೀಡಾ ಆಡಳಿತಗಾರರು ನನಗೆ ಕರೆ ಮಾಡಿ ಆಘಾತ ವ್ಯಕ್ತಪಡಿಸಿದರು. ಈ ಸುದ್ದಿ ಸುಳ್ಳಾಗಲಿ ಎಂದು ಪ್ರಾರ್ಥಿಸಿದರು’ ಎಂದು ಸೈಕ್ಲಿಂಗ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಕುರಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಮಖಂಡಿಯಲ್ಲಿಯೂ ಏಷ್ಯನ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸಬೇಕು ಎಂದು ನ್ಯಾಮಗೌಡರು ತುಂಬಾ ಆಸೆ ಪಟ್ಟಿದ್ದರು. 2017ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆದಾಗ ಅವರು ಫೆಡರೇಷನ್‌ ಅಧಿಕಾರಿಗಳ ಮುಂದೆ ಈ ವಿಷಯ ಪ್ರಸ್ತಾಪಿಸಿದ್ದರು. ಆಗ ಫೆಡರೇಷನ್‌ನವರು ನೀವು ಸ್ಪರ್ಧೆಗಳನ್ನು ಚೆನ್ನಾಗಿ
ಆಯೋಜಿಸುತ್ತೀರಿ ಎನ್ನುವ ಭರವಸೆಯಿದೆ. ಆದ್ದರಿಂದ ನಿಮಗೆ ಆತಿಥ್ಯದ ಅವಕಾಶ ಕೊಡುತ್ತೇವೆ ಎಂದು ಸ್ಥಳದಲ್ಲಿಯೇ ಘೋಷಿಸಿದ್ದರು. 2019ರಲ್ಲಿ ನ್ಯಾಮಗೌಡ ಅವರ ಆಸೆಯಿಂತೆ ಜಮಖಂಡಿಯಲ್ಲಿಯೇ ಏಷ್ಯನ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಆದರೆ, ಈ ಕೂಟವನ್ನು ಕಣ್ತುಂಬಿಕೊಳ್ಳಲು ಈಗ ಅವರೇ ಇಲ್ಲವಲ್ಲ’ ಎಂದು ಶ್ರೀಶೈಲ ಕುರಣಿ ಕಣ್ಣೀರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT