ಸಂಪುಟ ರಚನೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ

7
ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಿರುವುದರಿಂದ ಗೊಂದಲ: ಶಾಸಕ ಎಚ್‌.ವಿಶ್ವನಾಥ್‌

ಸಂಪುಟ ರಚನೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ

Published:
Updated:

ಹುಣಸೂರು: ‘ರಾಜ್ಯ ಸರ್ಕಾರದ ಸಂಪುಟ ರಚನೆ ಕುರಿತು ತಾವು ಮೂಗು ತೂರಿಸುವುದಿಲ್ಲ. ಜೆಡಿಎಸ್ ಪಕ್ಷದಲ್ಲಿ ಎಲ್ಲವೂ ಗಟ್ಟಿಯಾಗಿದೆ. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನದ ಪೈಪೋಟಿ ಹೆಚ್ಚಿರುವುದರಿಂದ ಗೊಂದಲ ಸೃಷ್ಠಿಯಾಗಿದೆ’ ಎಂದು ಶಾಸಕ ಎಚ್‌.ವಿಶ್ವನಾಥ್‌ ಹೇಳಿದರು.

ನಗರದಲ್ಲಿ ಸಹಕಾರಿ ಸಂಘ ಸಂಸ್ಥೆಗಳಿಗೆ ಸೋಮವಾರ ಭೇಟಿ ನೀಡಿ  ಅವುಗಳ ಅಭಿವೃದ್ಧಿ ಕುರಿತು ಅಧಿಕಾರಿ ಮತ್ತು ಸದಸ್ಯರೊಂದಿಗೆ ಚರ್ಚಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರತಿಯೊಂದು ಸರ್ಕಾರ ಅಸ್ಥಿತ್ವಕ್ಕೆ ಬಂದ ಆರಂಭದಲ್ಲಿ ಈ ರೀತಿಯ ಗೊಂದಲ ಕಾಣಿಸುವುದು ಸಾಮಾನ್ಯ. ಇದನ್ನು ವಿರೋಧ ಪಕ್ಷದವರು ವೈಭವೀಕರಿಸುತ್ತಿದ್ದಾರೆ ಎಂದರು.

ಜೆಡಿಎಸ್‌ ಸಾಲ ಮನ್ನಾ ಮಾಡುವುದಾಗಿ ರಾಜ್ಯದ ಮತದಾರನಿಗೆ ಭರವಸೆ ನೀಡಿದ್ದು ಸತ್ಯ. ಆದರೆ, ಬಹುಮತದಿಂದ ಆರಿಸಿ ಬಂದಲ್ಲಿ ಅಧಿಕಾರ ಹಿಡಿದ 24 ಗಂಟೆಯೊಳಗೆ ಮನ್ನಾ ಮಾಡುವುದಾಗಿ ಪಕ್ಷದ ವರಿಷ್ಠರು ತಿಳಿಸಿದ್ದರು. ಈಗ ರಾಜಕೀಯ ಅತಂತ್ರ ಸ್ಥಿತಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದು, ವಿರೋಧ ಪಕ್ಷದವರು ಪ್ರಸ್ತುತ ರಾಜಕೀಯ ಸ್ಥಿತಿಗತಿಯನ್ನು ಅರ್ಥ ಮಾಡಿಕೊಂಡು ಹೋರಾಟ ಮಾಡುವುದು ಒಳಿತು ಎಂದ ಅವರು, ಕೃಷಿ ಸಾಲ ಮನ್ನಾ ಮಾಡುವ ವಿಷಯ ಕೈ ಬಿಟ್ಟಿಲ್ಲ. ರಾಜ್ಯದ ಮತದಾರರು ಆತಂಕಪಡುವ ಅವಶ್ಯವಿಲ್ಲ ಎಂದರು.

ಸಹಕಾರಿ ಸಂಘಗಳು ಅಭಿವೃದ್ಧಿಗೆ ಹಲವು ಮಾರ್ಗಗಳಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕ್ಷೇತ್ರ ಸೊರಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇದ್ದ ನಿವೇಶನಗಳನ್ನು ಅಧಿಕಾರಿಗಳು, ಸದಸ್ಯರು ಮಾರಾಟ ಮಾಡಿಕೊಂಡಿದ್ದು, ಇದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ವಿಸ್ತೀರ್ಣಕ್ಕೆ ಮಾರಕವಾಗಿದೆ. ಈ ಬಗ್ಗೆ ಹಿಂದಿನ ಹಾಗೂ ಪ್ರಸ್ತುತ ಆಡಳಿತ ಮಂಡಳಿ ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದರು.

ಸಹಕಾರಿ ಸಂಘಗಳಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಈ ಕೆಲಸ ಮಾಡದೆ ಇರುವುದು ಅಭಿವೃದ್ಧಿಗೆ ಮಾರಕವಾಗಿದೆ ಎಂದ ಅವರು, ಸಹಕಾರಿ ಕ್ಷೇತ್ರವನ್ನು ರಾಜಕೀಯ ಚಟುವಟಿಕೆಗೆ ಸೀಮಿತಗೊಳಿಸದೆ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಿಎಲ್‌.ಡಿ.ಬ್ಯಾಂಕ್ ಅಧ್ಯಕ್ಷ ಜಗದೀಶ್‌ ಉಪಸ್ಥಿತರಿದ್ದರು.

**

ಸಚಿವ ಸ್ಥಾನ ನನಗೆ ಮುಖ್ಯವಲ್ಲ. ಬದಲಿಗೆ, ಮುಖ್ಯಮಂತ್ರಿ ಎದುರಿರುವ ಹಲವು ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ನನ್ನ ಅನುಭವವನ್ನು ಧಾರೆ ಎರೆದು ಸಹಕಾರ ನೀಡುತ್ತೇನೆ

- ಎಚ್‌.ವಿಶ್ವನಾಥ್‌, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry