ಶಾಲಾ ಸ್ವಚ್ಛತೆಗೆ ಮೀಸಲಾದ ಮೊದಲ ದಿನ

7
ದಾಖಲಾತಿಗೆ ಚಾಲನೆ; ಬೆರಳೆಣಿಕೆ ವಿದ್ಯಾರ್ಥಿಗಳ ಹಾಜರಿ, ಆರಂಭೋತ್ಸವ ಬಹುತೇಕ ಕಡೆ ಇಂದು

ಶಾಲಾ ಸ್ವಚ್ಛತೆಗೆ ಮೀಸಲಾದ ಮೊದಲ ದಿನ

Published:
Updated:
ಶಾಲಾ ಸ್ವಚ್ಛತೆಗೆ ಮೀಸಲಾದ ಮೊದಲ ದಿನ

ವಿಜಯಪುರ: 2018–19ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭ ಸೋಮವಾರ (ಮೇ 28) ಶುರುವಾಯ್ತು. ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮೊದಲ ದಿನ ಶಾಲೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿಯಷ್ಟೇ ಗೋಚರಿಸಿತು. ಎರಡು ತಿಂಗಳು ಬಾಗಿಲು ಮುಚ್ಚಿದ್ದ ಶಾಲೆಯ ಕೊಠಡಿಗಳ ಬಾಗಿಲನ್ನು ಮುಂಜಾನೆಯೇ ತೆರೆದ ಶಿಕ್ಷಕ ಸಮೂಹ, ವಿದ್ಯಾರ್ಥಿಗಳೊಟ್ಟಿಗೆ ಸ್ವಚ್ಛತಾ ಕಾರ್ಯ ನಡೆಸುವುದು ಸರ್ಕಾರಿ ಶಾಲೆಗಳಲ್ಲಿ ಗೋಚರಿಸಿತು.

ಶಾಲೆಗೆ ಬಂದಿದ್ದ ಬೆರಳೆಣಿಕೆ ವಿದ್ಯಾರ್ಥಿಗಳ ಸಹಕಾರದಿಂದ ಆಯಾ ತರಗತಿ ಶಿಕ್ಷಕ–ಶಿಕ್ಷಕಿಯರು ಕೊಠಡಿಗಳನ್ನು ಸ್ವಚ್ಛಗೊಳಿಸಿದರು. ಬಳಿಕ ಶಾಲಾ ಮೈದಾನದ ಆವರಣ, ಅಕ್ಷರ ದಾಸೋಹ ಯೋಜನೆಯ ಅಡುಗೆ ಕೋಣೆಯನ್ನೂ ಸಹ ಶುಚಿಗೊಳಿಸಿದರು. ಪಾತ್ರೆಗಳನ್ನು ತೊಳೆದಿಟ್ಟುಕೊಂಡರು.

ಶಾಲೆಯ ಆಡಳಿತ ಕಚೇರಿ, ಮುಖ್ಯೋಪಾಧ್ಯಾಯರ ಕೊಠಡಿಗಳಲ್ಲಿ ಕಡತ ಸಜ್ಜುಗೊಳಿಸಿಕೊಂಡರು. ವೇಳಾಪಟ್ಟಿ ರೂಪಿಸುವಿಕೆ, ಹಾಜರಾತಿ ಪುಸ್ತಕದಲ್ಲಿ ಹೆಸರು ನಮೂದಿಸುವುದು, ಮೊದಲ ದಿನ ಶಾಲೆಗೆ ಸೇರ್ಪಡೆಗೊಳ್ಳುವವರ ಪ್ರವೇಶ ದಾಖಲಾತಿ ಮಾಡಿಕೊಳ್ಳುವ ಚಿತ್ರಣವೂ ವಿವಿಧೆಡೆ ಗೋಚರಿಸಿತು. ಸಹ ಶಿಕ್ಷಕರನ್ನು ಬಿಇಓ ಕಚೇರಿಗಳಿಗೆ ಕಳುಹಿಸಿಕೊಟ್ಟು, ಪಠ್ಯ ಪುಸ್ತಕ ತರುವ ಸೂಚನೆಯನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರು ನೀಡಿದರು.

ಇದೇ 29ರ ಮಂಗಳವಾರ ಶಾಲಾ ಆರಂಭೋತ್ಸವ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಆಯಾ ಶಾಲಾ ಸಿಬ್ಬಂದಿ ಮಾಡಿಕೊಂಡರು. ತಳಿರು–ತೋರಣಗಳಿಂದ ಸಿಂಗರಿಸಿ, ಅಲಂಕಾರದ ಸಿದ್ಧತೆ ಬಹುತೇಕ ಶಾಲೆಗಳಲ್ಲಿ ಸೋಮವಾರವೇ ನಡೆಯಿತು.

ಮಂಗಳವಾರ ಆಯಾ ಗ್ರಾಮ, ಪಟ್ಟಣ, ನಗರದ ಶಾಲಾ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು, ಜಾಥಾ, ಅಲಂಕೃತ ಎತ್ತಿನ ಬಂಡಿಗಳು, ಡೊಳ್ಳು ಕುಣಿತ, ಶಾಲಾ ಬ್ಯಾಂಡ್‌ಗಳೊಂದಿಗೆ ಮೆರವಣಿಗೆ ನಡೆಯಲಿದೆ.

ನಿಯಮಾನುಸಾರ ಎಸ್‌ಡಿಎಂಸಿ ಅಧ್ಯಕ್ಷ–ಸದಸ್ಯರು, ಆಯಾ ಗ್ರಾಮದಲ್ಲಿನ ವಿವಿಧ ಹಂತಗಳ ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು, ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಶಾಲಾ ಸಿಬ್ಬಂದಿ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಹೆಚ್ಚಿನೆಡೆ ಇದು ಕಷ್ಟಸಾಧ್ಯ. ಆದರೆ ನಮ್ಮ ಶಾಲೆಯಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆದಿದೆ. ಪೋಷಕರಿಗೂ, ಹಳೆಯ ವಿದ್ಯಾರ್ಥಿಗಳಿಗೂ ಆಹ್ವಾನ ನೀಡಿದ್ದೇವೆ ಎಂದು ವಿಜಯಪುರದ ವೀರೇಶ್ವರ ನಗರದ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ನಂಬರ್‌ 60ರ ಸಹ ಶಿಕ್ಷಕಿ ಎಸ್‌.ಬಿ.ಹಿರೇಮಠ ತಿಳಿಸಿದರು.

‘ಶಾಲಾ ಆರಂಭದ ದಿನವೇ ಅಂಗನವಾಡಿ ಕಾರ್ಯಕರ್ತರಿಂದ ಪ್ರಸಕ್ತ ಸಾಲಿನ ಅರ್ಹ ವಯಸ್ಸಿನ ಮಕ್ಕಳ ಪಟ್ಟಿ ಪಡೆಯುವ ಶಿಕ್ಷಕ ಸಿಬ್ಬಂದಿ ಶಾಲೆಗೆ ದಾಖಲಾತಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಸುತ್ತದೆ. ಮೊದಲ ದಿನ ಶಾಲೆಗೆ ಬರುವ ಮಕ್ಕಳಿಗೆ ಸಂತಸದ ಕಲಿಕೆಗೆ ಅವಕಾಶ ಕೊಡುವ, ಆಕರ್ಷಣೀಯ ಎನ್ನಿಸುವಂತೆ ಮಾಡುವ ವಿಶೇಷ ಪ್ರಯತ್ನವೂ ನಡೆಯಲಿದೆ’ ಎಂದು ಬಸವನಬಾಗೇವಾಡಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಸ್‌,ಎಸ್‌.ಗಡೇದ ಹೇಳಿದರು.

ಇದರ ಜತೆ ಶಿಕ್ಷಕ ಸಿಬ್ಬಂದಿ, ಮುಖ್ಯೋಪಾಧ್ಯಾಯರು ವರ್ಗ ಹಂಚಿಕೆ, ವೇಳಾ ಪತ್ರಿಕೆ, ಸೇತುಬಂಧ, ಪಾಠ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆಗಳ ತಯಾರಿ ಮಾಡಿಟ್ಟುಕೊಂಡಿರಬೇಕು. ಇವುಗಳನ್ನು ಕ್ರಮಬದ್ಧವಾಗಿ ಮಾಡಲಾಗಿದೆಯೇ ಎಂದು ಪರಿಶೀಲನೆಗೆ ಜಿಲ್ಲಾ ಹಂತದಲ್ಲಿ, ತಾಲ್ಲೂಕು ಹಂತದಲ್ಲಿ, ತಂಡ ರಚಿಸಿ ಮೊದಲ ಒಂದು ವಾರ ಅಧಿಕಾರಿಗಳು ಎಲ್ಲ ಶಾಲೆಗೆ ಭೇಟಿ ನೀಡುತ್ತಾರೆ. ಈ ಸಂದರ್ಭ ಶಾಲಾ ಸ್ವಚ್ಛತೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರೆ ಪ್ರಮುಖ ಆದ್ಯತೆಗಳ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

**

ತಾಳಿಕೋಟೆ ಸಮೀಪದ ತಮದಡ್ಡಿ ಗ್ರಾಮದಲ್ಲಿ ಮುದ್ದೇಬಿಹಾಳ ತಾಲ್ಲೂಕು ಹಂತದ ಶಾಲಾ ಆರಂಭೋತ್ಸವ ಮಾಡಿದ್ದೇವೆ. ಈ ಮಾದರಿ ಶಾಲೆಯಂತೆ ತಾಲ್ಲೂಕಿನ ಎಲ್ಲ ಶಾಲೆಗಳು ರೂಪುಗೊಳ್ಳಲಿ

ಎಸ್‌.ಡಿ.ಗಾಂಜಿ,  ಮುದ್ದೇಬಿಹಾಳ ಬಿಇಒ

**


ಮೊದಲ ದಿನವೇ ಮೂರು ವಿದ್ಯಾರ್ಥಿಗಳ ದಾಖಲಾತಿ ನಡೆಯಿತು. ಮಂಗಳವಾರ ಶಾಲಾ ಆರಂಭೋತ್ಸವದ ಜತೆಗೆ ಮಕ್ಕಳನ್ನು ಆಕರ್ಷಿಸುವ ಕಾರ್ಯಕ್ರಮ ರೂಪಿಸಿದ್ದೇವೆ

ಎಸ್‌.ಬಿ.ಹಿರೇಮಠ, ಸಹ ಶಿಕ್ಷಕಿ, ವಿಜಯಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry