ಮಣ್ಣಿನ ಮಗನನ್ನು ಮನೆಗೆ ಕಳುಹಿಸಿ: ಮುದ್ನಾಳ

7
ಯಾದಗಿರಿ, ಸುರಪುರ, ಶಹಾಪುರದಲ್ಲಿ ಬಂದ್, ಕೆಲವೆಡೆ ಪ್ರತಿಭಟನೆ, ಸಂಚಾರದಲ್ಲಿ ವ್ಯತ್ಯಯ

ಮಣ್ಣಿನ ಮಗನನ್ನು ಮನೆಗೆ ಕಳುಹಿಸಿ: ಮುದ್ನಾಳ

Published:
Updated:
ಮಣ್ಣಿನ ಮಗನನ್ನು ಮನೆಗೆ ಕಳುಹಿಸಿ: ಮುದ್ನಾಳ

ಯಾದಗಿರಿ: ರೈತರ ಸಾಲ ಮನ್ನಾಕ್ಕೆ  ಒತ್ತಾಯಿಸಿ ಬಿಜೆಪಿಯಿಂದ ಕರ್ನಾಟಕ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ನಗರದ ಅಂಗಡಿ ಮುಂಗ್ಗಟ್ಟು ಬಂದ್ ಆಗಿದ್ದವು.  ಮಧ್ಯಾಹ್ನ ಒಂದು ಗಂಟೆಯ ತನಕ ಸಾರಿಗೆ ಇಲಾಖೆಯು ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ನಂತರ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದರಿಂದ ಜನತೆ ಪರದಾಡುವಂತೆ ಆಯಿತು.

ಶಾಸಕ ವೆಂಕಟರಡ್ಡಿ ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆಯ ಮೂಲಕ ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಕೆಲವು ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಯಿತು.

ಶಾಸಕ ವೆಂಕಟರಡ್ಡಿ ಮುದ್ನಾಳ ಮಾತನಾಡಿ, ‘ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲಿ ರಾಷ್ಟ್ರೀಕೃತ ಹಾಗೂ ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ಹೇಳಿದರು ಈಗ ಉಲ್ಟಾ ಹೊಡೆದಿದ್ದಾರೆ. ಮಣ್ಣಿನ ಮಗನನ್ನು ಮನೆಗೆ ಕಳುಹಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 25 ವರ್ಷದಿಂದ ರೈತರ ಪರ ಹೋರಾಟ ಮಾಡಿರುವೆ. ರೈತರ ಸಂಕಷ್ಟಕ್ಕೆ ಯಾರು ಸ್ಪಂದಿಸುತ್ತಿಲ್ಲ. ನಿರತರವಾಗಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ರೈತ ಸಮುದಾಯ ಜಾಗೃತಗೊಳ್ಳಬೇಕು. ಮುಖ್ಯಮಂತ್ರಿ ಅವರು ಮಣ್ಣಿನ ಮಗ ಎಂದು  ಬಿಂಬಿಸಿಕೊಳ್ಳುವುದನ್ನು ನಿಲ್ಲಿಸಲಿ ಎಂದರು.

ಮಾಜಿ ಶಾಸಕ ಡಾ.ವೀರಬಸವಂತ ರಡ್ಡಿ ಮುದ್ನಾಳ, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಮಾಗನೂರ ಮಾತನಾಡಿ, ‘ಅನ್ನ ನೀಡುವ ಅನ್ನದಾತನಿಗೆ ನ್ಯಾಯ ಹಾಗೂ ಪರಿಹಾರ ನೀಡಬೇಕು. ಅಪಮೈತ್ರಿ ಹೊಂದಾಣಿಕೆಯ ಸರ್ಕಾರ ಕಿತ್ತು ಹಾಕಬೇಕು. ಅಪ್ಪ–ಮಗ ರೈತರ ಮಕ್ಕಳು ಎನ್ನುತ್ತಲೇ ರೈತರ ಕತ್ತು ಹಿಸುಕುತ್ತಿದ್ದಾರೆ’ ಎಂದು ಆರೋಪಿಸಿದರು.

ನಗರಸಭೆಯ ಅಧ್ಯಕ್ಷೆ ಲಲಿತಾ ಅನಪೂರ, ಬಿಜೆಪಿಯ ಮುಖಂಡರಾದ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಶ್ರೀನಿವಾಸರಡ್ಡಿ ಚೆನ್ನೂರ, ಖಂಡಪ್ಪ ದಾಸನ್, ಭೀಮಣ್ಣಗೌಡ ಕ್ಯಾತನಾಳ, ಭೀಮರಡ್ಡಿ ಕೂಡ್ಲೂರ, ಮಲ್ಲಣ್ಣಗೌಡ ಹತ್ತಿಕುಣಿ, ಶರಣಗೌಡ ಬಾಡಿಯಾಳ, ಶರಣಗೌಡ ತಂಗಡಗಿ, ಬಸವಂತಪ್ಪಗೌಡ ಚಟ್ನಳ್ಳಿ, ಬಸವಂತರಾಯಗೌಡ ನಾಯ್ಕಲ್, ಅಯ್ಯಣ್ಣ ಹುಂಡೆಕಾರ, ರಮೇಶ ದೊಡ್ಮನಿ, ಬಸವರಾಜ ಚಂಡ್ರಿಕಿ, ಮರೆಪ್ಪ ನಾಟೇಕಾರ, ಸುಭಾಸ ರಾಠೋಡ, ವಿಶ್ವನಾಥರಡ್ಡಿ ಜೋಳದಡಗಿ, ವೀಣಾ ಮೋದಿ, ಸುನಿತಾ ಚವ್ಹಾಣ, ಅಕ್ಕಮಹಾದೇವಿ, ಗೋಪಾಲ ದಾಸನಕೇರಿ, ಮಹಾದೇವ ಗಣಪೂರ ಪ್ರತಿಭಟನೆಯಲ್ಲಿ ಇದ್ದರು.

ಶಹಾಪುರ ವರದಿ: ಕರ್ನಾಟಕ ಬಂದ್‌, ಪ್ರತಿಭಟನೆಗೆ ಶಹಾಪುರ ಬಿಜೆಪಿ ಘಟಕವು ಸಾಥ್ ನೀಡಿತು. ಬೆಳಿಗ್ಗೆಯಿಂದ ಎಂದಿನಂತೆ ಬಸ್ ಸಂಚಾರವಿತ್ತು. ಅಂಗಡಿ ಮುಗ್ಗಟ್ಟು ತೆರೆದಿದ್ದವು. ಖಾಸಗಿ ವಾಹನಗಳ ಓಡಾಟ ಸಾಮಾನ್ಯವಾಗಿತ್ತು. ಕೆಲ ಗಂಟೆ ಮಾತ್ರ ರಾಜ್ಯ ಹೆದ್ದಾರಿ ಸ್ಥಗಿತಗೊಂಡಿತ್ತು. ವಾಹನಗಳನ್ನು ಅನ್ಯ ಮಾರ್ಗದಿಂದ ತೆರಳುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಿತ್ತು.

ನಂತರ ಮಾಜಿ ಶಾಸಕ ಗುರು ಪಾಟೀಲ್ ನೇತೃತ್ವದಲ್ಲಿ ಬೀದರ್‌– ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ನಗರದ ಬಸವೇಶ್ವರ ವೃತ್ತದಲ್ಲಿ ಕೆಲವು ಕಡೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು.

ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿ, ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ವಿಚಾರದಲ್ಲಿ ಇಬ್ಬಗೆಯ ನೀತಿ ಅನುಸರಿಸುವುದು ಸರಿಯಲ್ಲ’ ಎಂದರು.

ಕಾಂಗ್ರೆಸ್ ಸರ್ಕಾರ ಐದು ವರ್ಷದ ಆಡಳಿತಾವಧಿಯಲ್ಲಿ ಕೃಷಿ ಆಯೋಗ ನೀತಿ ಜಾರಿಯಾದರು ಸಹ ಅದರ ಅನುಷ್ಠಾನಗೊಳಿಸದೆ ಇರುವುದರಿಂದ ರೈತರ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರ ನೋವಿಗೆ ಪ್ರಾಮಾಣಿಕವಾಗಿ ಮುಖ್ಯಮಂತ್ರಿ  ಅವರು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ರೈತರ ಸಾಲಮನ್ನಾ ಮಾಡದಿದ್ದರೆ ಪ್ರತಿ ಹಳ್ಳಿ, ಹಳ್ಳಿಯಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಖಂಡ ಕರ್ನಾಟಕ ರೈತ ಸಂಘದ ಸಂಚಾಲಕ ಮಲ್ಲಣ್ಣ ಪರಿವಾಣ ಗೋಗಿ ಹಾಗೂ ಬಿಜೆಪಿಯ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಮಲ್ಲಣ್ಣಗೌಡ ಉಕ್ಕನಾಳ, ಕಾರ್ಯದರ್ಶಿ ಅಡಿವೆಪ್ಪ ಜಾಕಾ, ಯಲ್ಲಯ್ಯ ನಾಯಕ ವನದುರ್ಗ,ವಸಂತ ಸುರಪುರಕರ್, ಮಲ್ಲಣ್ಣ ಮಡ್ಡಿ ಸಾಹು, ಅಮಾತೆಪ್ಪ ಕಂದಕೂರ, ಲಾಲ್ ಅಹ್ಮದ ಖುರೇಶಿ, ಶ್ರೀಕಾಂತ ಸುಬೇದಾರ,ಶರಣಪ್ಪ ಹೊತಪೇಟ, ತ್ರಿಶೂಲ ಹವಾಲ್ದಾರ, ಅಮೃತ ಹೂಗಾರ, ಗೌಡಪ್ಪಗೌಡ ರಬ್ಬನಹಳ್ಳಿ,ಚಂದ್ರು ಯಾಳಗಿ, ನಿಂಗಣ್ಣ ರಾಕಂಗೇರಾ, ಗುರು ಮದ್ದಿನ, ಉಮೇಶ ಬಾಗೇವಾಡಿ, ಸಂತೋಷ ಗುತ್ತೇದಾರ, ಅಮರೇಶ ವಿಭೂತಿಹಳ್ಳಿ ಪ್ರತಿಭಟನೆಯಲ್ಲಿ ಇದ್ದರು.

ಸುರಪುರ ವರದಿ: ಇಲ್ಲಿಯೂ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಸಹಕರಿಸಿದರು. ಸರ್ಕಾರಿ ಕಚೇರಿ, ಬ್ಯಾಂಕ್‌ಗಳು ಶಾಲೆ, ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸಾರಿಗೆ ಸಂಚಾರ ಮಾಮೂಲಾಗಿತ್ತು. ಗ್ರಾಮೀಣ ವಾಸಿಗಳು ನಗರದತ್ತ ಮುಖ ಮಾಡದ ಕಾರಣ ನಗರದ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಬಿಜೆಪಿ ಮುಖಂಡರು, ಕಾರ್ಯ ಕರ್ತರು ನಗರದ ಪ್ರಮುಖ ರಸ್ತೆಗಳ ಮೂಲಕ ಘೋಷಣೆಗಳನ್ನು ಕೂಗುತ್ತಾ ಗಾಂಧಿ ವೃತ್ತಕ್ಕೆ ಬಂದು ಪ್ರತಿಭಟಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ರಾಜೂಗೌಡ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದಂತೆ 24 ಗಂಟೆಯೊಳಗಾಗಿ ರೈತರ ಸಾಲಮನ್ನಾ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಶೀಘ್ರ ರೈತರ ಸಾಲ ಮನ್ನಾ ಮಾಡಬೇಕು. ಇಲ್ಲವಾದಲ್ಲಿ ವಿಧಾನ ಮಂಡಲದ ಅಧಿವೇಶನದ ವೇಳೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ರಾಜ್ಯಪಾಲರಿಗೆ ಬರೆದ ಮನವಿ ಯನ್ನು ತಹಶೀಲ್ದಾರ್ ಸುರೇಶ ಅಂಕಲಗಿ ಅವರ ಮೂಲಕ ಸಲ್ಲಿಸಲಾಯಿತು. ಯಲ್ಲಪ್ಪ ಕುರುಕುಂದಿ, ಸುರೇಶ ಸಜ್ಜನ್ ಮಾತನಾಡಿದರು.

ರಾಜಾ ಹನುಮಪ್ಪನಾಯಕ, ರಾಜಾ ಪಾಮನಾಯಕ, ಪರಮಣ್ಣ ಪೂಜಾರಿ, ದೊಡ್ಡ ದೇಸಾಯಿ ದೇವರಗೋನಾಲ, ದತ್ತಾತ್ರೇಯ ಗುತ್ತೇದಾರ್, ಪಾರಪ್ಪ ಗುತ್ತೇದಾರ್, ಭೀಮಣ್ಣ ಬೇವಿನಾಳ, ಸಣ್ಣ ದೇಸಾಯಿ ದೇವರಗೋನಾಲ, ದತ್ತು ಗುತ್ತೇದಾರ್ ಇದ್ದರು.

ಹೋಟೆಲ್‌, ಬಸ್‌ ಬಂದ್‌ ಮಾಡಿಸಿದ ಶಾಸಕ

ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಸೋಮವಾರ ಯಾದಗಿರಿ ನಗರದಲ್ಲಿ ಬಿಜೆಪಿ ಶಾಸಕ ವೆಂಕಟರಡ್ಡಿ ಮುದ್ನಾಳ ಬಲವಂತವಾಗಿ ಹೋಟೆಲ್ ಹಾಗೂ ಬಸ್‌ ಸಂಚಾರವನ್ನು ಬಂದ್‌ ಮಾಡಿಸಿದರು.

‌ಇಲ್ಲಿನ ಶಿರಡಿ ಸಾಯಿ ಹೋಟೆಲ್‌ಗೆ ಕಾರ್ಯಕರ್ತರ ಜೊತೆಗೆ ಬಂದ ಶಾಸಕ, ‘ನಾನು ಯಾದಗಿರಿ ಶಾಸಕ, ಎಲ್ಲರೂ ಹೋಟೆಲ್ ಬಂದ್ ಮಾಡಿ’ ಎಂದು ಮನವಿ ಮಾಡಿದರು. ಇದಕ್ಕೆ ಕೆಲ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದಕ್ಕೆ ಇಳಿದರು. ಆದರೂ ಕಾರ್ಯಕರ್ತರು ಉಪಾಹಾರ ಸೇವಿಸುತ್ತಿದ್ದವರನ್ನು ಬಲವಂತವಾಗಿ ಹೊರಹಾಕಿ ಬಂದ್‌ ಮಾಡಿಸಿದರು.

ಶಾಸಕ ಬಸ್‌ ಡಿಪೊಕ್ಕೆ ತೆರಳಿ ಮ್ಯಾನೇಜರ್ ಪ್ರಭು ಅಲಗೊಂಡ ಅವರ ಜೊತೆ ಮಾತನಾಡಿ, ‘ಸಂಜೆ 4 ಗಂಟೆ ತನಕ ಬಸ್ ಸಂಚಾರ ಸ್ಥಗಿತಗೊಳಿಸಬೇಕು. ಯಾವುದೇ ಅನಾಹುತವಾದರೆ ನೀವೇ ಹೊಣೆಗಾರರಾಗುತ್ತೀರಿ’ ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳು ಬಸ್ ಸಂಚಾರ ಸ್ಥಗಿತಗೊಳಿಸಿದರು.

‘ಶಾಸಕರು ಡಿಪೊಕ್ಕೆ ಬಂದ್‌ ಬಸ್ ಸಂಚಾರ ನಿಲ್ಲಿಸುವಂತೆ ಸೂಚಿಸಿದರು. ಮಧ್ಯಾಹ್ನ ಒಂದು ಗಂಟೆಯಿಂದ ಬಸ್‌ ಸಂಚಾರ ಆರಂಭಿಸಿದ್ದೇವೆ’ ಎಂದು ಪ್ರಭು ಅಲಗೊಂಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

**

ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ನಗರದಲ್ಲಿ ಸಹಜ ಸ್ಥಿತಿಯಲ್ಲಿ ವಾಹನ ಸಂಚಾರವಿತ್ತು. ಜಿಲ್ಲೆಯಲ್ಲಿ ಸಂಪೂರ್ಣವಾಗಿ ಶಾಂತಿ ಇದೆ

ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry