ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಪ್ರಾರಂಭೋತ್ಸವ ಇಂದು

ತಳಿರು, ತೋರಣಗಳಿಂದ ಪೂರ್ವ ಸಿದ್ಧತೆ ಮಾಡಿಕೊಂಡ ಶಾಲಾ ಮುಖ್ಯಸ್ಥರು
Last Updated 29 ಮೇ 2018, 10:36 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮಂಗಳವಾರ ಪ್ರಾರಂಭೋತ್ಸವ ಸಂಭ್ರಮವನ್ನು ಆಚರಿಸಲಿವೆ.

ಶಾಲೆಗೆ ಬರುವ ಮಕ್ಕಳಿಗೆ ಮೊದಲ ದಿನವೇ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ವಿತರಿಸುವುದಕ್ಕೆ ಈ ವರ್ಷ ವ್ಯವಸ್ಥೆ ಮಾಡಿಕೊಂಡಿರುವುದು ಗಮನಾರ್ಹ. ಜಿಲ್ಲೆಯಿಂದ ಬೇಡಿಕೆ ಸಲ್ಲಿಸಲಾಗಿದ್ದ ಪಠ್ಯಪುಸ್ತಕಗಳ ಪೈಕಿ ಶೇ 74 ರಷ್ಟು ಹಾಗೂ ಸಮವಸ್ತ್ರಗಳ ಪೈಕಿ ಶೇ 90 ರಷ್ಟು ಬಂದು ತಲುಪಿವೆ. ಅಲ್ಲದೆ, ಅವುಗಳನ್ನು ಸಂಬಂಧಿಸಿದ ಶಾಲೆಗಳಿಗೂ ರವಾನಿಸಲಾಗಿದೆ. ಶಾಲೆಗೆ ಬರುವ ಮಕ್ಕಳು ಹೊಸ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳೊಂದಿಗೆ ನಿಜಕ್ಕೂ ಸಂಭ್ರಮ ಪಡಲಿವೆ.

ಮಕ್ಕಳು ಶಾಲೆಗೆ ಬರುವ ಮೊದಲ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುವುದಕ್ಕೆ ಸಂಬಂಧಿಸಿದಂತೆ ಶಾಲಾ ಮುಖ್ಯಸ್ಥರು ಸರ್ಕಾರಿ ಶಾಲೆ ಗಳಲ್ಲಿ ಸೋಮವಾರವೆ ಪೂರ್ವ ತಯಾರಿ ಮಾಡಿಕೊಂಡಿರಬೇಕು ಎಂದು ಸುತ್ತೋಲೆ ಕಳುಹಿಸಲಾಗಿತ್ತು. ಎಸ್‌ಡಿಎಂಸಿ ಸಭೆ ನಡೆಸುವುದು ಹಾಗೂ ಜನಪ್ರತಿನಿಧಿಗಳಿಗೆ ಈ ಬಗ್ಗೆ ಮಾಹಿತಿ ಕಳುಹಿಸಬೇಕು. ಶಾಲಾ ವ್ಯಾಪ್ತಿಯಲ್ಲಿ ಡಂಗುರ ಸಾರುವ ವ್ಯವಸ್ಥೆ ಮಾಡಿಕೊಂಡಿರಬೇಕು. ಬೋಧನಾ ಕೊಠಡಿಗಳು ಮತ್ತು ಹೊರಾಂಗಣ ಶುಚಿತ್ವಗೊಳಿಸಬೇಕು. ಹೊರಾಂಗಣವನ್ನು ತಳಿರು, ತೋರಣಗಳಿಂದ ಸಿಂಗರಿಸಬೇಕು. ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಬೇಕೆಂದು ಸೂಚಿಸಲಾಗಿತ್ತು.

‘ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭೋತ್ಸವ ನಡೆಸಲು ಎಲ್ಲ ಕಡೆಗಳಲ್ಲೂ ಪೂರ್ವಸಿದ್ಧತೆಯನ್ನು ಶಾಲಾ ಮುಖ್ಯಸ್ಥರು ಮಾಡಿಕೊಂಡಿ ದ್ದಾರೆ. ಮಾನ್ವಿ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ಸೋಮವಾರ ಭೇಟಿ ಕೊಟ್ಟು ಪರಿಶೀಲನೆ ಮಾಡಿಕೊಂಡು ಬಂದಿದ್ದೇನೆ’ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಂದನೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಶಾಲಾ ಪ್ರಾರಂಭೋತ್ಸವ ದಿನದಂದು ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಕೊಡುವುದಕ್ಕೆ ವ್ಯವಸ್ಥೆ ಆಗಿದೆ. ಸಕಾಲದಲ್ಲಿ ಪಠ್ಯಪುಸ್ತಕ ಮತ್ತು ಸಮವಸ್ತ್ರ ತಂದುಕೊಂಡಿದ್ದೇವೆ. ಉರ್ದು ಪುಸ್ತಕಗಳು ಬರುವುದು ಬಾಕಿ ಇದೆ. ಪ್ರೌಢಶಾಲೆಗಳ ಹೆಣ್ಣು ಮಕ್ಕಳಿಗೆ ಚೂಡಿದಾರ್‌ ಸಮವವಸ್ತ್ರ ಬರುವುದು ಮಾತ್ರ ಬಾಕಿ ಇದೆ. ಶಾಲೆಗೆ ಬರುವ ಮಕ್ಕಳಿಗೆ ಯಾವುದೇ ಕೊರತೆ ಆಗದ ರೀತಿಯಲ್ಲಿ ಪಠ್ಯಪುಸ್ತಕಗಳು ಲಭ್ಯವಿದೆ. ಹೊಸದಾಗಿ ಪ್ರವೇಶಾತಿ ಪಡೆಯುವ ಪ್ರಕ್ರಿಯೆ ಕೂಡಾ ಮೇ 29 ರಿಂದಲೇ ಆರಂಭವಾಗುತ್ತದೆ’ ಎಂದು ವಿವರಿಸಿದರು.

‘ವಿಧಾನ ಪರಿಷತ್‌ ಚುನಾವಣೆಗಾಗಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದ ಜನಪ್ರತಿನಿಧಿಗಳನ್ನು ಕರೆದು ದೊಡ್ಡ ಪ್ರಮಾಣದಲ್ಲಿ ಶಾಲಾ ಪ್ರಾರಂಭೋತ್ಸವ ಮಾಡುವುದಕ್ಕೆ ಅವಕಾಶವಿಲ್ಲ. ಜೂನ್‌ ಎರಡನೇ ವಾರ ಪ್ರತಿ ತಾಲ್ಲೂಕಿನಲ್ಲಿ ಶಾಸಕರ ಸಮ್ಮುಖದಲ್ಲಿ ಸಾಂಕೇತಿಕವಾಗಿ ಪಠ್ಯಪುಸ್ತಕಗಳ ವಿತರಣೆ ಮತ್ತು ಸಮವಸ್ತ್ರ ವಿತರಣೆ ಸಮಾರಂಭ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಂದ ಸುತ್ತೋಲೆ ಬಂದಿದೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಶಾಲೆಗಳು
2,519 ಜಿಲ್ಲೆಯಲ್ಲಿರುವ ಒಟ್ಟು ಶಾಲೆಗಳು
910 ಕಿರಿಯ ಪ್ರಾಥಮಿಕ ಶಾಲೆಗಳು
1173 ಹಿರಿಯ ಪ್ರಾಥಮಿಕ ಶಾಲೆಗಳು
436 ಪ್ರೌಢಶಾಲೆಗಳು
3 ಕೇಂದ್ರೀಯ ವಿದ್ಯಾಲಯಗಳು

ಸಮವಸ್ತ್ರ ವಿವರ
2,19,690 ಸಮವಸ್ತ್ರ ತಲುಪಿವೆ
1,22,245 ಗಂಡು ಮಕ್ಕಳ ಸಮವಸ್ತ್ರ
97,445 ಹೆಣ್ಣು ಮಕ್ಕಳ ಸಮವಸ್ತ್ರ
19,715 ಇನ್ನೂ ಬರಬೇಕಾದ ಸಮವಸ್ತ್ರ

ಪಠ್ಯಪುಸ್ತಕಗಳ ವಿವರ
17,89,039 ಉಚಿತ ಪಠ್ಯ ಪುಸ್ತಕಗಳಿಗೆ ಬೇಡಿಕೆ
12,87,447 ಇನ್ನೂ ಬರಬೇಕಾದ ಪುಸ್ತಕಗಳು
3,99,582 ಖಾಸಗಿ ಶಾಲೆಗಳಿಗೆ ಕೊಟ್ಟಿರುವ ಪುಸ್ತಕಗಳು

ಶಾಲಾ ಪ್ರಾರಂಭೋತ್ಸವದ ಪೂರ್ವಸಿದ್ಧತೆ ಪರಿಶೀಲಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಿ, ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಗಿದೆ 
– ಬಿ.ಕೆ. ನಂದನೂರು, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT