ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಕ್ಷೇತ್ರದ ದಿಕ್ಕು ಬದಲಿಸಿರುವ ಸ್ವಯಂ ಚಾಲಿತ ಕಾರು

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಸ್ವಯಂ ಚಾಲಿತ ಅಂದರೆ ವಿದ್ಯುತ್‌ ಮತ್ತು ಬ್ಯಾಟರಿ ಚಾಲಿತ ವಾಹನಗಳ ಮಾರುಕಟ್ಟೆ ಇಂದು ಶರವೇಗದಲ್ಲಿ ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆಗಳು ಆಟೊಮೊಬೈಲ್ ಕ್ಷೇತ್ರದ ದಿಕ್ಕನ್ನೇ ಬದಲಾಯಿಸಿದೆ.

ಬಿಎಂಡಬ್ಲ್ಯು, ಟೊಯೊಟಾ ಮತ್ತು ಟೆಸ್ಲಾದಂತ ವಾಹನ ಉದ್ಯಮ ಕ್ಷೇತ್ರದ ದೈತ್ಯ ಕಂಪನಿಗಳೇ ವಾಹನದ ಸ್ಟಿಯರಿಂಗ್‌ ಅನ್ನು ಮನುಷ್ಯನ ಕೈಯಿಂದ ಕಿತ್ತು ಕಂಪ್ಯೂಟರ್‌ ಕೈಗೆ ಕೊಟ್ಟಿವೆ. ಅಂದರೆ ಚಾಲಕ ಮಾಡಬೇಕಾದ ಕೆಲಸವನ್ನು ಕಂಪ್ಯೂಟರ್‌ ಅಪ್ಲಿಕೇಷನ್ಸ್‌ಗಳು, ಅದಕ್ಕಿಂತಲೂ ಉತ್ತಮವಾಗಿ ಯಾವುದೇ ದೂರು ಹೇಳದೆ ಮಾಡುತ್ತವೆ.

ಕಂಪ್ಯೂಟರ್‌ಗಳು ನಿದ್ರೆ ಮಾಡುವುದಿಲ್ಲ. ಅವು ಕುಡಿದು ವಾಹನ ಚಾಲನೆ ಮಾಡುವುದಿಲ್ಲ, ಅವಕ್ಕೆ ದಣಿವಾಗುವುದಿಲ್ಲ ಮತ್ತು ಮನುಷ್ಯನಿಗಿಂತ ಬೇಗನೆ ಪ್ರತಿಕ್ರಿಯೆ ನೀಡುತ್ತವೆ ಎನ್ನುವುದು ಈ ತಂತ್ರಜ್ಞಾನದ ಮತ್ತೊಂದು ಹೆಗ್ಗಳಿಕೆ.

ವಿದ್ಯುತ್‌ ಚಾಲಿತ ಕಾರುಗಳು, ಸಾಂಪ್ರದಾಯಿಕ ಕಾರುಗಳಿಗಿಂತ ಅಗ್ಗವಾದರೆ ಮತ್ತು ಇಂತಹ ಕಾರುಗಳನ್ನು ಕೇವಲ 15 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ (ಇಂಧನ ತುಂಬಿಸಿಕೊಳ್ಳಲು ತೆಗೆದುಕೊಳ್ಳುವ ಸಮಯ) ರೀಚಾರ್ಜ್‌ ಮಾಡಿಕೊಳ್ಳುವ ತಂತ್ರಜ್ಞಾನ ಅಭಿವೃದ್ಧಿಯಾದರೆ ಇಡೀ ಮಾರುಕಟ್ಟೆಯ ಚಿತ್ರಣವೇ ಬದಲಾಗಲಿದೆ. ಈಗಿನ ತಂತ್ರಜ್ಞಾನ ಗಮನಿಸಿದರೆ ಮುಂದಿನ 5 ವರ್ಷಗಳಲ್ಲಿ ಇದು ಸಾಧ್ಯವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ ಎನ್ನುತ್ತಾರೆ ಆಟೊಮೊಬೈಲ್ ಕ್ಷೇತ್ರದ ತಂತ್ರಜ್ಞರು.

ಇದಕ್ಕೆ ಮುಖ್ಯವಾದ ಕಾರಣ, ಕಳೆದೊಂದು ದಶಕದಲ್ಲಿ ಸುಧಾರಿತ ತಂತ್ರಜ್ಞಾನ, ಕಂಪ್ಯೂಟಿಂಗ್ ಹಾರ್ಡ್‌ವೇರ್, ಸಾಫ್ಟ್‌ವೇರ್‌ ಮತ್ತು ಹೆಚ್ಚು ನಿಖರವಾದ ಸಂವೇದಕ ತಂತ್ರಜ್ಞಾನಗಳನ್ನು ವಾಹನದಲ್ಲಿ ಬಳಸಲಾಗುತ್ತಿದೆ. ಹೀಗಾಗಿ ಎರಡು ದಶಕಗಳ ಹಿಂದಿನವರೆಗೆ ಅಸಾಧ್ಯ ಎನಿಸಿದ್ದ ಚಾಲಕ ರಹಿತ ಮತ್ತು ಹಾರುವ ಕಾರಿನ ಕಲ್ಪನೆಗಳು ಇಂದು ಸಾಧ್ಯವಾಗಿದೆ. ವಾಹನದಲ್ಲಿ ಬಳಸುತ್ತಿರುವ ಕಂಪ್ಯೂಟಿಂಗ್ ತಂತ್ರಜ್ಞಾನ ಎಷ್ಟು ಸುಧಾರಿತ ಎಂದರೆ, ಇದು ಮಾನವನಿಗಿಂತ ಭಿನ್ನವಾಗಿದ್ದು, ಪರಿಪೂರ್ಣ ಅಪಘಾತ ರಹಿತ ಚಾಲಕ ಎಂಬುದನ್ನು ಈಗಾಗಲೇ ಸಾಧಿಸಿ ತೋರಿಸಿದೆ.

ದೊಡ್ಡ ಮೊಬೈಲ್‌ ಕಂಪ್ಯೂಟರ್‌
ಸಾಕಷ್ಟು ಜನರು ಈಗ ಕಾರನ್ನು ದೊಡ್ಡ ಮೊಬೈಲ್‌ ಕಂಪ್ಯೂಟರ್ ಎಂದು ಬಣ್ಣಿಸುತ್ತಾರೆ. ಇದು ನಿಜ. ಸಾಕಷ್ಟು ಜನರಿಗೆ ಇದರ ಬಗ್ಗೆ ಅರಿವಿಲ್ಲ. 1990ರ ದಶದಲ್ಲಿ ಕಾರಿನಲ್ಲಿ ಕಂಪ್ಯೂಟಿಂಗ್‌ ತಂತ್ರಜ್ಞಾನ ಹೇಗೆ ಬಳಕೆಯಲ್ಲಿತ್ತು ಅಂದರೆ, ಎಂಜಿನ್‌ ಒಳಗೆ ಇದರ ನೆರವಿನಿಂದ ಇಂಧನ ಮತ್ತು ಗಾಳಿಯನ್ನು ಬೆರಕೆ ಮಾಡಲು ಮತ್ತು ಇಂಗಾಲ ಉಗುಳುವಿಕೆ ವ್ಯವಸ್ಥೆ ನಿಯಂತ್ರಿಸಲು ಮಾತ್ರ ಬಳಸುತ್ತಿದ್ದರು. ಆದರೆ, ಈಗ ಕಂಪ್ಯೂಟರ್‌ ಅಪ್ಲಿಕೇಷನ್‌ ಇಡೀ ವಾಹವನ್ನು ಆವರಿಸಿಕೊಂಡಿದೆ. ವಾಹನದ ಮ್ಯೂಸಿಕ್‌ ಸಿಸ್ಟಂ, ಧ್ವನಿ, ಬೆಳಕು ಮತ್ತು ವಾತಾವರಣಕ್ಕೆ ಚಾಲನೆಯನ್ನು ಸುಗಮಗೊಳಿಸುವ ವ್ಯವಸ್ಥೆಯನ್ನು ಕಾರಿನಲ್ಲಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ನಿರ್ವಹಿಸುತ್ತದೆ.

ಕಾರುಗಳಲ್ಲಿ ಕಂಪ್ಯೂಟರ್‌ ತಂತ್ರಜ್ಞಾನ ಬಳಸಲು ಪ್ರಾರಂಭಿಸಿದ ನಂತರ ಕಾರುಗಳು ಹೆಚ್ಚು ಚಾಲಕ ಸ್ನೇಹಿಯಾದವು. ಅಪಘಾತಗಳು ಗಣನೀಯವಾಗಿ ತಗ್ಗಿದವು. ಫೋಕ್ಸ್‌ವ್ಯಾಗನ್‌ ಕಂಪನಿ ತನ್ನ ಡೀಸೆಲ್‌ ಕಾರುಗಳಲ್ಲಿ ಮೊದಲು ಕಂಪ್ಯೂಟರ್‌ ಎಂಜಿನ್‌ ತಂತ್ರಜ್ಞಾನ ಅಳವಡಿಸಿಕೊಂಡಿತು. ಆದರೆ, ವಿಪರ್ಯಾಸವೆಂದರೆ ಕಂಪ್ಯೂಟರ್‌ ತಂತ್ರಜ್ಞಾನ ಬಳಸಿದ್ದ ಇದೇ ಸರಣಿಯ ಕಾರುಗಳು ಎಮಿಷನ್‌ (ಇಂಗಾಲ ಹೊರಸೂಸುವಿಕೆ) ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವು. ಕಂಪ್ಯೂಟಿಂಗ್‌ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಆಟೊಮೊಬೈಲ್ ಕ್ಷೇತ್ರದ ಭಾಗವಾಗಿದೆ ಅಂದರೆ, ಬಿಎಂಡಬ್ಲ್ಯುನಂತಹ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ಮೆಕಾನಿಕಲ್‌ ಎಂಜಿನಿಯರ್‌ಗಳಿಗಿಂತ ಹೆಚ್ಚಾಗಿ ಕಂಪ್ಯೂಟರ್‌ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡಿವೆ. ಸ್ವಯಂಚಾಲಿತ ವಾಹನಗಳ ಮಿದುಳು ಅಂದರೆ ಕಂಪ್ಯೂಟರ್‌ ಮತ್ತು ಅದರಲ್ಲಿ ಬಳಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ.

ಸ್ವಯಂ ಚಾಲಿತ ಕಾರು ರಸ್ತೆಗೆ
ಬೆಳೆಯುತ್ತಿರುವ ತಂತ್ರಜ್ಞಾನ ಗಮನಿಸಿದರೆ, ಸಾಂಪ್ರದಾಯಿಕ ಚಾಲಕ ಚಾಲಿತ ವಾಹನಗಳ ಸ್ಥಾನವನ್ನು ಸ್ವಯಂ ಚಾಲಿತ ವಾಹನಗಳು ಇನ್ನೆರಡು ವರ್ಷಗಳಲ್ಲಿ ಆಕ್ರಮಿಸಿಕೊಳ್ಳುವ ಬಗ್ಗೆ ನಿರೀಕ್ಷೆಯಿದೆ. ಆಟೋಮೊಬೈಲ್‌ ಕ್ಷೇತ್ರದ ಒಂದು ಕಂಪನಿ ನಡೆಸಿದ ಅಧ್ಯಯನದ ಪ್ರಕಾರ, 2020ರ ವೇಳೆಗೆ 1 ಕೋಟಿಯಷ್ಟು ಸ್ವಯಂ ಚಾಲಿತ ಕಾರುಗಳು ರಸ್ತೆಗೆ ಇಳಿಯಲಿವೆ. ಆದರೆ, ಇಂತಹ ಸ್ವಯಂ ಚಾಲಿತ ಕಾರುಗಳಲ್ಲಿ ಬಳಸುವ ಅಪ್ಲಿಕೇಷನ್ಸ್‌ಗಳಿಗೆ ಪ್ರಯಾಣಿಕನ/ ಚಾಲಕನ ವೈಯಕ್ತಿಕ ವಿವರವನ್ನೂ ನೀಡಬೇಕಾಗಿರುವುದರಿಂದ, ಇಂತಹ ಖಾಸಗಿ ಮಾಹಿತಿ ಸುರಕ್ಷತೆ ಕುರಿತೂ ಪ್ರಶ್ನೆಗಳೆದ್ದಿವೆ.

ಹಾರುವ ಕಾರು
ಈಗ ವಿಮಾನವಷ್ಟೇ ಅಲ್ಲ, ಕಾರು ಕೂಡ ಹಾರುವ ಕಾಲ ಸನ್ನಿಹಿತವಾಗಿದೆ. ಸ್ಲೊವಾಕಿಯಾ ದೇಶದ ಏರೊಮೊಬಿಲ್‌  ಕಂಪನಿಯು ಹಾರುವ ಕಾರಿನ ಮಾದರಿ ಸಿದ್ಧಪಡಿಸಿದೆ. ಅಂದರೆ ಇದನ್ನು ಧರೆಗಿಳಿಸಲು ಪುಟ್ಟ ರನ್‌ವೇ ಸಾಕು. ಒಂದು ಕಾರನ್ನು ನಿಲುಗಡೆ ಮಾಡಬಹುದಾದಷ್ಟು ಸ್ಥಳದಲ್ಲಿ ಈ ಕಾರನ್ನು ಇಳಿಸಬಹುದು. ‘ಗುರುತ್ವಾಕರ್ಷಣ ರಹಿತ’ ತಂತ್ರಜ್ಞಾನದಲ್ಲಿ ಈ ಕಾರು ಹಾರಾಟ ನಡೆಸಲಿದೆ ಎನ್ನುತ್ತದೆ ಕಂಪನಿ. ಅಷ್ಟೇ ಅಲ್ಲ, ಈ ಹಾರುವ ಕಾರನ್ನು ಚಾಲನೆ ಮಾಡಲು ಪ್ರತ್ಯೇಕವಾಗಿ ಪೈಲಟ್‌ ಚಾಲನಾ ಪರವಾನಗಿ ಪಡೆಯುವ ಅಗತ್ಯವೂ ಇಲ್ಲ. 2020ರಲ್ಲಿ ಏರೊಮೊಬಿಲ್‌ ಕಾರುಗಳು ರಸ್ತೆಗೆ ಇಳಿದು, ಆಗಸಕ್ಕೆ ನೆಗೆಯಲಿವೆ. ಆಗಸದಲ್ಲಿ ಗರಿಬಿಚ್ಚುವ ಇವುಗಳು ರಸ್ತೆಯ ಮೇಲೆ ಚಲಿಸುವಾಗ ಹಿಂಬದಿ ಸೀಟಿನಡಿಯಲ್ಲಿ ರೆಕ್ಕೆಗಳನ್ನು ಮಡಚಿಟ್ಟುಕೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT