ನರೇಗಾದಿಂದ ಗ್ರಾಮ ಅಭಿವೃದ್ಧಿ ಸಾಧ್ಯ

7
ಬಲಚವಾಡಿ ಶಾಲೆ ಮುಖ್ಯ ಶಿಕ್ಷಕ ಎಂ.ಜಿ.ನಾಗಭೂಷಣ್‍ ಅಭಿಮತ

ನರೇಗಾದಿಂದ ಗ್ರಾಮ ಅಭಿವೃದ್ಧಿ ಸಾಧ್ಯ

Published:
Updated:

ಗುಂಡ್ಲುಪೇಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು (ನರೇಗಾ) ಸರಿಯಾಗಿ ಉಪಯೋಗಿಸಿಕೊಂಡಲ್ಲಿ ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಹೊಂದಬಹುದು ಎಂದು ಬಲಚವಾಡಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಎಂ.ಜಿ.ನಾಗಭೂಷಣ್‍ ತಿಳಿಸಿದರು.

ತಾಲ್ಲೂಕಿನ ಬಲಚವಾಡಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ 2018-19ನೇ ಸಾಲಿನ 1ನೇ ಸುತ್ತಿನ ಸಾಮಾಜಿಕ ಲೆಕ್ಕಪರಿಶೋಧನಾ ವರದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಜನರು ಉದ್ಯೋಗ ಖಾತರಿಯಿಂದ ತಮ್ಮ ಕೃಷಿ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಕೃಷಿ ಹೊಂಡ, ಜಮೀನು ಅಭಿವೃದ್ಧಿ, ಬದು ನಿರ್ಮಾಣ, ಗಿಡ ನೆಡುವುದು, ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಬಹುದು. ಇತ್ತೀಚೆಗೆ ವಿವಿಧ ವಸತಿ ಯೋಜನೆಯಲ್ಲಿ ನಿರ್ಮಾಣವಾಗುವ ಮನೆಗಳಿಗೂ ಕೂಲಿ ಪಾವತಿ ಮಾಡಿಕೊಳ್ಳಬಹುದಾಗಿದೆ ಎಂದರು.

ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಿಕೊಳ್ಳಬಹುದು. ಆದ್ದರಿಂದ ಜನರು ಇದರ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಸಿದ್ಧನಾಯ್ಕ ಮಾತನಾಡಿ, ‘ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಿಂದ ಗ್ರಾಮ ಪಂಚಾಯಿತಿಯಲ್ಲಿ ಯಾವ ಕೆಲಸವಾಗಿದೆ, ಯಾರಿಗೆ ಅನುದಾನ ದೊರಕಿದೆ ಎನ್ನುವುದು ಗೊತ್ತಾಗುತ್ತದೆ’ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ತಾಲ್ಲೂಕು ಸಂಯೋಜಕ ರಾಜಕುಮಾರ್, ಕಾರ್ಯದರ್ಶಿ ಶಿವಸ್ವಾಮಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry