ಹದವಾಗಿ ಬಿದ್ದ ಮಳೆಗೆ ತಂಪಾದ ವಸುಂಧರೆ

7
ಗಾದೆ ಮಾತು ಅಕ್ಷರಶಃ ನಿಜವಾದ ‘ರೋಹಿಣಿ ಮಳೆ ಓಣಿಯೆಲ್ಲಾ ಕೆಸರು’ ಗಾದೆ

ಹದವಾಗಿ ಬಿದ್ದ ಮಳೆಗೆ ತಂಪಾದ ವಸುಂಧರೆ

Published:
Updated:
ಹದವಾಗಿ ಬಿದ್ದ ಮಳೆಗೆ ತಂಪಾದ ವಸುಂಧರೆ

ಚಾಮರಾಜನಗರ: ಮುಂಗಾರುಪೂರ್ವ ಮಳೆಯ ವರ್ಷಧಾರೆ ಜಿಲ್ಲೆಯಲ್ಲಿ ನಿಂತಿಲ್ಲ. ಮುಂಗಾರು ಪ್ರವೇಶದ ಹೊಸ್ತಿಲಲ್ಲೂ ಮುಂಗಾರುಪೂರ್ವದ ರೋಹಿಣಿ ಮಳೆಯ ಅಬ್ಬರ ಕಡಿಮೆಯಾಗಿಲ್ಲ. ‘ರೋಹಿಣಿ ಮಳೆ ಓಣಿಯೆಲ್ಲಾ ಕೆಸರು’ ಎಂಬ ಗಾದೆ ಮಾತು ಅಕ್ಷರಶಃ ನಿಜವಾಗಿದೆ. ಈಗ ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಕೆಸರೊ ಕೆಸರು.

ಸೋಮವಾರ ಮಧ್ಯಾಹ್ನ ಬಿರುಗಾಳಿಯೊಂದು ಹೊತ್ತು ತಂದ ಕಾರ್ಮೋಡಗಳು ಮಿಂಚು, ಸಿಡಿಲುಗಳ ಆರ್ಭಟ ಇಲ್ಲದೇ ಮಳೆಯನ್ನು ಸುರಿಸಿದವು. ಚಾಮರಾಜನಗರ ಪಟ್ಟಣದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು. ಗುಂಡ್ಲುಪೇಟೆ ತಾಲ್ಲೂಕಿನ ಸಾಗಡೆ, ಮೂಡ್ನಾಕೂಡು, ಹರವೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಭಾರಿ ಮಳೆಯಾಯಿತು. ಕೊಳ್ಳೇಗಾಲ ತಾಲ್ಲೂಕು ಬಿಟ್ಟರೆ ಹನೂರು ಸೇರಿದಂತೆ ಇತರೆಡೆ ಸಾಧಾರಣ ಮಳೆಯಾಗಿದೆ.

ಮಳೆಯಿಂದ ಸಣ್ಣಪುಟ್ಟ ಕೆರೆಕಟ್ಟೆಗಳೆಲ್ಲ ತುಂಬಿ ಹೋಗಿವೆ. ದೊಡ್ಡ ಕೆರೆಗಳಿಗೂ ನೀರು ಹರಿದು ಬಂದಿವೆ. ರಸ್ತೆಗಳು ಕಿತ್ತು ಹೋಗಿರುವ ಕಡೆ ಸಂಚಾರ ದುಸ್ತರ ಎನಿಸಿದೆ. ಖಾಲಿ ಬಿದ್ದಿರುವ ಜಾಗದಲ್ಲೆಲ್ಲಾ ಹಚ್ಚ ಹಸಿರಿನ ಪೈರುಗಳು ಕಂಗೊಳಿಸುತ್ತಿವೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಶೇ 27ರಷ್ಟು ಹೆಚ್ಚು ಮಳೆ: ಹವಾಮಾನ ಇಲಾಖೆಯ ಮೇ 25ರವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಶೇ 27ರಷ್ಟು ಹೆಚ್ಚು ಮಳೆಯಾಗಿದೆ. ವಾಡಿಕೆಯಂತೆ ಜನವರಿಯಿಂದ 1ರಿಂದ ಮೇ 25ರವರೆಗೆ 206 ಮಿ.ಮೀ ಮಳೆಯಾಗಬೇಕಿತ್ತು. ಆಗಿರುವುದು 260.5 ಮಿ.ಮೀ. ಒಟ್ಟಾರೆ, ಶೇ 127ರಷ್ಟು ಮಳೆಯಾಗಿದೆ.

ತಾಲ್ಲೂಕುವಾರು ಅಂಕಿ ಅಂಶ ಪ್ರಕಾರ ಚಾಮರಾಜನಗರ ತಾಲ್ಲೂಕಿನಲ್ಲೇ ಅತ್ಯಧಿಕ ಮಳೆಯಾಗಿದೆ. ಇಲ್ಲಿ ಶೇ 38ರಷ್ಟು ಹೆಚ್ಚು ಮಳೆ ಸುರಿದಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಶೇ 35, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶೇ 19, ಯಳಂದೂರು ತಾಲ್ಲೂಕಿನಲ್ಲಿ ಕೇವಲ ಶೇ 7ರಷ್ಟು ಮಳೆಯಾಗಿದೆ.

ಬೆಳೆಗಳಿಗೆ ಅನುಕೂಲ: ಈಗ ಬೀಳುತ್ತಿರುವ ಮಳೆಯು ಬಹುತೇಕ ಬೆಳೆಗಳಿಗೆ ಸಹಕಾರಿಯಾಗಿದೆ. ಸ್ಥಳೀಯ ಜೋಳ ಬಿತ್ತಿದ್ದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯ ಮಳೆಯಾಶ್ರಿತ ಭೂಮಿಯಲ್ಲಿ ಈ ಬೆಳೆಯನ್ನೇ ಅಧಿಕ ಮಂದಿ ಬಿತ್ತನೆ ಮಾಡಿದ್ದಾರೆ. ಉಳಿದಂತೆ, ತೊಗರಿ, ಹೆಸರು, ಅಲಸಂದೆ, ಉದ್ದು ಬೆಳೆಗಳಿಗೂ ಇದು ಪ್ರಯೋಜನಕಾರಿಯಾಗಿದೆ. ಗುಂಡ್ಲುಪೇಟೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನೆಲಗಡಲೆ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ಇವು ಸಹ ಸೊಂಪಾಗಿ ಒಳ್ಳೆಯ ಇಳುವರಿ ಕೊಡಲು ಮಳೆಯು ಸಹಕಾರಿಯಾಗಿದೆ. ಯಾವಾಗಲೂ ಮುಂಗಾರು ಪ್ರವೇಶದ ನಂತರ ಬಿತ್ತನೆ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು. ಇದೀಗ ಮುಂಗಾರು ಪೂರ್ವದಲ್ಲೇ ಜಿಲ್ಲೆಯ ಶೇ 32.96ರಷ್ಟು ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry