ಶಾಲೆ ಆರಂಭ: ಎಲ್ಲೆಲ್ಲೂ ಹಬ್ಬದ ವಾತಾವರಣ

7
ಉಲ್ಲಾಸದಿಂದ ಶಾಲೆ ಪ್ರವೇಶಿಸಿದ ಮಕ್ಕಳು, ಗಮನ ಸೆಳೆದ ಅಕ್ಷರ ಬಂಡಿ ಮೆರವಣಿಗೆ

ಶಾಲೆ ಆರಂಭ: ಎಲ್ಲೆಲ್ಲೂ ಹಬ್ಬದ ವಾತಾವರಣ

Published:
Updated:
ಶಾಲೆ ಆರಂಭ: ಎಲ್ಲೆಲ್ಲೂ ಹಬ್ಬದ ವಾತಾವರಣ

ಚಿತ್ರದುರ್ಗ: ಸಗಣಿ ಸಾರಿಸಿದ್ದ ಅಂಗಳ, ಶುಚಿಯಾಗಿದ್ದ ಕೊಠಡಿ, ಮಾವಿನ ತೋರಣ ಹಾಗೂ ಹೂವುಗಳಿಂದ ಸಿಂಗಾರಗೊಂಡಿದ್ದ ಶಾಲೆಗಳು ಸೋಮವಾರ ವಿದ್ಯಾರ್ಥಿಗಳನ್ನು ಆಕರ್ಷಿಸಿದವು. ಉಲ್ಲಾಸದಿಂದ ಶಾಲೆಯ ಆವರಣ ಪ್ರವೇಶಿಸಿದ ಮಕ್ಕಳು ಸಂತಸದಿಂದ ತರಗತಿಗೆ ಹಾಜರಾದರು.

ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದ ದಿನವಾದ ಸೋಮವಾರ ಬಹುತೇಕ ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕೆಲವು ಶಾಲೆಗಳಲ್ಲಿ ಸಿಹಿ ಹಂಚಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ವಿವಿಧೆಡೆಗಳಲ್ಲಿ ವಿದ್ಯಾರ್ಥಿಗಳು ಎಂದಿನಂತೆ ಶಾಲೆಗಳತ್ತ ಮುಖಮಾಡಿದರು.

ಬೇಸಿಗೆ ರಜೆ ನಂತರ ಶಾಲೆ ಪ್ರಾರಂಭಗೊಂಡಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಸಂತೋಷದಿಂದ ಬಂದಿದ್ದರು. ಶಾಲಾ ಆರಂಭದ ಮೊದಲ ದಿನವಾಗಿದ್ದರಿಂದ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು.

ಈಚೆಗೆ ನಡೆದ ವಿಧಾನಸಭಾ ಚುನಾವಣೆಗೆ ಬಹುತೇಕ ಎಲ್ಲ ಶಾಲೆಗಳನ್ನು ಬಳಸಿಕೊಂಡಿದ್ದರಿಂದ ಕುಡಿಯುವ ನೀರಿನ ಘಟಕ ಮತ್ತು ಶೌಚಾಲಯಗಳನ್ನು ದುರಸ್ತಿ ಮಾಡಲಾಗಿತ್ತು. ಕೆಲವು ಕಡೆ ಚುನಾವಣೆ ಸಮಯದಲ್ಲಿ ಮಾತ್ರ ನೀರಿನ ವ್ಯವಸ್ಥೆ ಮಾಡಿದ್ದರಿಂದ ಸೋಮವಾರ ವಿದ್ಯಾರ್ಥಿಗಳು ನೀರಿಗೆ ಪರದಾಡಿದರು.

ಅಕ್ಷರ ಬಂಡಿ ಮೆರವಣೆಗೆ: ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಕ್ಲಸ್ಟರ್‌ನ ಕುರುಬರಹಳ್ಳಿಯ ಸರ್ಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಉರ್ದು ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಎತ್ತಿನ ಗಾಡಿಗೆ ಬಾಳೆಗಿಡ ಹಾಗೂ ವಿವಿಧ ಬಗೆಯ ಹೂಗಳಿಂದ ಸಿಂಗಾರ ಮಾಡಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ಸೂಚಿಸುವ ಫಲಕ ಕಟ್ಟಿದ ಅಕ್ಷರ ಬಂಡಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಚಾಲನೆ ನೀಡಿದರು.

ಸಿಂಗಾರಗೊಂಡ ಎತ್ತಿನ ಗಾಡಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ’, ‘ಶಿಕ್ಷಣವೇ ಶಕ್ತಿ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಲಾಯಿತು. ನಂತರ ಇದೇ ಸಂದರ್ಭದಲ್ಲಿ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ಸುರೇಶ್, ರವಿ, ಸಿಆರ್‌ಪಿ ಕೆ.ರೇವಣ್ಣ, ಶಿಕ್ಷಣ ಸಂಯೋಜಕರಾದ ಪದ್ಮಾ, ಏಕನಾಥ್, ಝಾಕೀರ್, ಬಿಆರ್‌ಪಿಗಳಾದ ಭೀಮಪ್ಪ ಮಾದಾರ, ತಾಜೀರ್ ಬಾಷಾ, ಎಸ್‌ಡಿಎಂಸಿ ಅಧ್ಯಕ್ಷ ಯೋಗೇಶ್ ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ, ಊರಿನ ಗ್ರಾಮಸ್ಥರು ಇದ್ದರು.

ಶಾಲೆ ಪ್ರಾರಂಭೋತ್ಸವಕ್ಕೆ ಮಂಕು

ರಾಜ್ಯ ಬಂದ್‌ಗೆ ಬಿಜೆಪಿ ಕರೆ ನೀಡಿದ್ದರಿಂದ ಶೈಕ್ಷಣಿಕ ವರ್ಷದ ಮೊದಲ ದಿನಕ್ಕೆ ಮಂಕು ಕವಿದಂತಾಗಿತ್ತು. ನಗರ ವ್ಯಾಪ್ತಿಯ ಬಹುತೇಕ ಶಾಲೆಗಳಿಗೆ ಮಕ್ಕಳು ಸೋಮವಾರ ಬರಲಿಲ್ಲ.

ಖಾಸಗಿ ಶಾಲೆಗಳು ಮೊದಲ ದಿನವೇ ರಜೆ ಘೋಷಣೆ ಮಾಡಿದ್ದವು. ಈ ಕುರಿತು ಪ್ರವೇಶ ದ್ವಾರದಲ್ಲಿ ಸೂಚನಾ ಫಲಕ ಅಂಟಿಸಿದ್ದವು. ಸರ್ಕಾರಿ ಶಾಲೆಗಳಲ್ಲಿ ಶುಚಿಗೊಳಿಸುವ ಕೆಲಸ ಸೋಮವಾರವೂ ಮುಂದುವರಿದಿತ್ತು. ಕೆಲ ಸರ್ಕಾರಿ ಶಾಲೆಗಳು ಮಧ್ಯಾಹ್ನದ ಬಳಿಕ ಬಾಗಿಲು ಹಾಕಿದವು.

ಮಕ್ಕಳಿಗೆ ಶಾಲಾ ವಾತಾವರಣ ಆಕರ್ಷಣೀಯವಾಗಿದ್ದರೆ ಖುಷಿಯಿಂದ ಬರುತ್ತಾರೆ. ಪೋಷಕರು, ಶಿಕ್ಷಕರು, ಗ್ರಾಮಸ್ಥರು ಸೇರಿ ಶಾಲಾ ಪ್ರಾರಂಭೋತ್ಸವವನ್ನು ವಿಭಿನ್ನವಾಗಿ ಆಚರಿಸಿದ್ದಾರೆ 

ನಾಗಭೂಷಣ್, ಕ್ಷೇತ್ರ ಶಿಕ್ಷಣಾಧಿಕಾರಿ, ಚಿತ್ರದುರ್ಗ

**

ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ವಿನೂತನ ಕಾರ್ಯಕ್ರಮದ ಅಗತ್ಯವಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಇದು ಪ್ರೇರೇಪಿಸುತ್ತದೆ

ಟಿ. ಈಶ್ವರಪ್ಪ, ಕ್ಷೇತ್ರ ಸಮಾನ್ವಾಯಾಧಿಕಾರಿ, ಚಿತ್ರದುರ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry