ಜಿಲ್ಲೆಯಲ್ಲಿ ಬಂದ್‌ ಸಂಪೂರ್ಣ ವಿಫಲ

7
ನಗರದಲ್ಲಿ ಎತ್ತಿನ ಗಾಡಿಗಳ ಮೆರವಣಿಗೆ, ಟೈರ್‌ಗಳಿಗೆ ಬೆಂಕಿ; ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

ಜಿಲ್ಲೆಯಲ್ಲಿ ಬಂದ್‌ ಸಂಪೂರ್ಣ ವಿಫಲ

Published:
Updated:
ಜಿಲ್ಲೆಯಲ್ಲಿ ಬಂದ್‌ ಸಂಪೂರ್ಣ ವಿಫಲ

ಹಾಸನ: ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಸೋಮವಾರ ಬಿಜೆಪಿ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಹೇಮಾವತಿ ಪ್ರತಿಮೆ ಎದುರು ಬಿಜೆಪಿ ಹಾಗೂ ರೈತ ಸಂಘಟನೆ ಮುಖಂಡರು ಟೈರ್‌ಗಳಿಗೆ ಬೆಂಕಿ ಹಚ್ಚಿ, ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ್ದು ಹೊರತು ಪಡಿಸಿದರೆ ಜನಜೀವನ ಸಹಜ ಸ್ಥಿತಿಯಲ್ಲಿತ್ತು.

ಖಾಸಗಿ, ಸರ್ಕಾರಿ ಶಾಲಾ ಕಾಲೇಜು, ಚಿತ್ರಮಂದಿರ, ಸರ್ಕಾರಿ ಕಚೇರಿಗಳು, ಪೆಟ್ರೋಲ್ ಬಂಕ್, ಸಾರಿಗೆ ಬಸ್ ಸಂಚಾರ, ಆಟೊ, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ನಗರದ ಸಹ್ಯಾದ್ರಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ಕೆಲವು ಕಡೆ ಪೊಲೀಸರು ಬೆಂಕಿ ಹೆಚ್ಚಲು ಬಿಡಲಿಲ್ಲ. ಹಲವು ಕಡೆ ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲು ಯತ್ನಿಸಿದರು. ಆದರೆ ಪೊಲೀಸರು ಮಧ್ಯೆ ಪ್ರವೇಶಿಸಿ ಅದಕ್ಕೆ ಅವಕಾಶ ನೀಡಲಿಲ್ಲ.

ಹೇಮಾವತಿ ಪ್ರತಿಮೆ ಬಳಿಯಿಂದ ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಪಿ.ಸಿ.ಜಾಫರ್ ಅವರಿಗೆ ಮನವಿ ಸಲ್ಲಿಸಿದರು.

‘ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ 24 ಗಂಟೆಯಲ್ಲಿ ರೈತರ ₹ 53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಆದರೆ ಸಾಲ ಮನ್ನಾ ಮಾಡಿಲ್ಲ. ಚುನಾವಣೆ ಗೆಲುವಿಗಾಗಿ ಇಲ್ಲಸಲ್ಲದ ಭರವಸೆ ನೀಡಿ ಈಗ ಜನರನ್ನು ಮರಳು ಮಾಡುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಹೊಸ ಸರ್ಕಾರ ರಚನೆಯಾದ ಕೂಡಲೇ ರೈತರ ಸಾಲ ಮನ್ನಾ ಮಾಡುವ ತೀರ್ಮಾನ ಹೊರ ಬೀಳುತ್ತದೆ ಎಂದು ನಂಬಿದ್ದ ಅಸಂಖ್ಯಾತ ರೈತರು, ಹತಾಶೆಯಿಂದ ಜೆಡಿಎಸ್-ಕಾಂಗ್ರೆಸ್ ಮಿತ್ರಕೂಟವನ್ನು ಶಪಿಸುತ್ತಿದ್ದಾರೆ. ಆತ್ಮಹತ್ಯೆಯ ದಾರಿ ಹಿಡಿದಿರುವ ರೈತ ಸಮುದಾಯದಲ್ಲಿ ವಿಶ್ವಾಸ ತುಂಬುವ ಬದಲಿಗೆ ಕುಮಾರಸ್ವಾಮಿ ಇಲ್ಲಸಲ್ಲದ ಸಬೂಬು ಹೇಳಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ನವಿಲೆ ಅಣ್ಣಪ್ಪ, ಪ್ರಸನ್ನಕುಮಾರ್, ಎಚ್.ಎನ್.ನಾಗೇಶ್, ಸುಪ್ರದಿಪ್ ಯಜಮಾನ್, ವೇಣುಗೋಪಾಲ್, ರೈತ ಸಂಘದ ಮುಖಂಡ ಚಂದ್ರೇಗೌಡ ಇದ್ದರು.

ಸಿ.ಎಂ ನಿಧಿಗೆ ಗೌರವಧನ

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುತ್ತಿದ್ದಂತೆ ರೈತರ ನೆರವಿಗಾಗಿ ಒಂದು ತಿಂಗಳ ಗೌರವಧನವನ್ನು ಮುಖ್ಯಮಂತ್ರಿ ಕಲ್ಯಾಣ ನಿಧಿಗೆ ನೀಡುತ್ತೇನೆ’ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

‘ಬಿಜೆಪಿ ಅಧಿಕಾರ ನಡೆಸುತ್ತಿರುವ ಮಧ್ಯ ಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಐದಾರು ಸಂಖ್ಯೆಯಲ್ಲಿ ಬಿಜೆಪಿಗೆ ಅಧಿಕಾರ ತಪ್ಪಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ರೈತರ ಏಳಿಗೆಗೆ ಶ್ರಮಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry