ಬಂದ್‌ಗೆ ನೀರಸ ಪ್ರತಿಕ್ರಿಯೆ

7
ಜಿಲ್ಲೆಯ ಹಲವೆಡೆ ರ್‍ಯಾಲಿ, ಮೆರವಣಿಗೆ, ಮನವಿಗೆ ಸೀಮಿತವಾದ ಪ್ರತಿಭಟನೆ

ಬಂದ್‌ಗೆ ನೀರಸ ಪ್ರತಿಕ್ರಿಯೆ

Published:
Updated:

ಹಾವೇರಿ: ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಸೋಮವಾರ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿಜೆಪಿಯ ಪ್ರತಿಭಟನಾ ಮೆರವಣಿಗ ಸಾಗಿದ ದಾರಿಯಲ್ಲಿನ ಅಂಗಡಿಗಳನ್ನು ಕಾರ್ಯಕರ್ತರು ಬಂದ್‌ ಮಾಡಿಸಿದರು. ಉಳಿದಂತೆ ಜನಜೀವನ ಎಂದಿನಂತೆ ಸಾಗಿತು.

ನಗರದಲ್ಲಿ ಬೆಳಿಗ್ಗೆಯಿಂದ ವ್ಯಾಪಾರ, ಬಸ್‌ ಸಂಚಾರ, ಕಚೇರಿಗಳು ಹಾಗೂ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಆದರೆ, 11 ಗಂಟೆ ಸುಮಾರಿಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾರ್ಯಕರ್ತರ ಒತ್ತಾಯಕ್ಕೆ ಮಣಿದ ಅಂಗಡಿ ಮುಗ್ಗಟ್ಟುಗಳ ಮಾಲೀಕರು ಕೆಲವು ಸಮಯ ಬಾಗಿಲು ಹಾಕಿದರು. ಮೆರವಣಿಗೆ ಮುಂದೆ ಸಾಗಿದ ಬಳಿಕ ವ್ಯಾಪಾರ– ವಹಿವಾಟು ಎಂದಿನಂತೆ ಮುಂದುವರಿಯಿತು.

ಪಿ.ಬಿ.ರಸ್ತೆಯ ಶಿವಶಕ್ತಿ ಪ್ಯಾಲೇಸ್ ಮುಂಭಾಗದ ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಆರಂಭವಾದ ಮೆರವಣಿಗೆಯು ಹೊಸಮನಿ ಸಿದ್ದಪ್ಪ ವೃತ್ತದ ಮಾರ್ಗವಾಗಿ ಕೆಇಬಿ ವೃತ್ತದ ವರೆಗೆ ಬಂತು. ಮತ್ತೆ ಅದೇ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಬಂದಿತು. ಅಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ನೆಹರು ಓಲೇಕಾರ ಮಾತನಾಡಿ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದರು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಸಾಲವನ್ನು ಮನ್ನಾ ಮಾಡದೇ, ಕೊಟ್ಟ ಮಾತಿಗೆ ತಪ್ಪುತ್ತಿದ್ದಾರೆ ಎಂದು ದೂರಿದರು.

ಕೇವಲ 38 ಸೀಟುಗಳನ್ನು ಪಡೆದು, ಮೂರನೇ ಸ್ಥಾನದಲ್ಲಿರುವ ಜೆಡಿಎಸ್‌ ಕಾಂಗ್ರೆಸ್‌ನೊಂದಿಗೆ ಅನೈತಿಕವಾಗಿ ಮೈತ್ರಿ ಮಾಡಿದೆ. ಇದು ಹೆಚ್ಚಿನ ಸಮಯ ಉಳಿಯುವ ಸರ್ಕಾರವಲ್ಲ. ರಾಜ್ಯದ ಜನರು ನಮ್ಮ ಪಕ್ಷಕ್ಕೆ 104 ಕ್ಷೇತ್ರಗಳಲ್ಲಿ ಆಶೀರ್ವಾದ ಮಾಡಿದ್ದಾರೆ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ಗಂಟೆಯ ಒಳಗಾಗಿ, ರೈತರ ₹1 ಲಕ್ಷದ ವರೆಗಿನ ಸಾಲವನ್ನು ಮನ್ನಾ ಎಂದು ಘೋಷಣೆ ಮಾಡಿದ್ದರು ಎಂದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ತಾಲ್ಲೂಕು ಘಟಕದ ಅಧ್ಯಕ್ಷ ಮುತ್ತಯ್ಯ ಕಿತ್ತೂರಮಠ, ನಗರಸಭೆ ಸದಸ್ಯರಾದ ಕರಬಸಪ್ಪ ಹಳದೂರ, ಶಿವಬಸವ ವನ್ನಳ್ಳಿ, ಜಗದೀಶ ಮಲಗೋಡ, ಲಲಿತಾ ಗುಂಡೇನಹಳ್ಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಬಿಜೆಪಿ ಮುಖಂಡರಾದ ಸುರೇಶ ಹೊಸಮನಿ, ವಿಜಯಕುಮಾರ ಚಿನ್ನಿಕಟ್ಟಿ, ಗಿರೀಶ ತುಪ್ಪದ, ನಾಗರಾಜ ಬಸೇಗಣ್ಣಿ, ಶಂಕರಗೌಡ ಹಟ್ಟಿ, ಪಿ.ಎಸ್‌.ರಾಮನಗೌಡ್ರ, ಈರಣ್ಣ ಸಂಗೂರ ಇದ್ದರು.

**

ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು

ನೆಹರು ಓಲೇಕಾರ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry