ಜಿಲ್ಲೆಯಲ್ಲಿ ಜನಜೀವನಕ್ಕೆ ತಟ್ಟದ ಬಂದ್‌ ಬಿಸಿ

7
ಬಸ್‌– ಆಟೊ ಸೇವೆ ಅಬಾಧಿತ: ವಹಿವಾಟು ಸಹಜ

ಜಿಲ್ಲೆಯಲ್ಲಿ ಜನಜೀವನಕ್ಕೆ ತಟ್ಟದ ಬಂದ್‌ ಬಿಸಿ

Published:
Updated:
ಜಿಲ್ಲೆಯಲ್ಲಿ ಜನಜೀವನಕ್ಕೆ ತಟ್ಟದ ಬಂದ್‌ ಬಿಸಿ

ಕೋಲಾರ: ಬಿಜೆಪಿಯ ‘ಕರ್ನಾಟಕ ಬಂದ್‌’ ಕರೆಗೆ ಜಿಲ್ಲೆಯಲ್ಲಿ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಜನಜೀವನಕ್ಕೆ ಬಂದ್‌ನ ಬಿಸಿ ತಟ್ಟಲಿಲ್ಲ.

ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿಯು ಕೊಟ್ಟಿದ್ದ ಬಂದ್‌ ಕರೆಗೆ ಜಿಲ್ಲೆಯಲ್ಲಿ ಜನರು ಹಾಗೂ ಸಂಘಟನೆಗಳು ಬೆಂಬಲ ಸೂಚಿಸಲಿಲ್ಲ. ಬಿಜೆಪಿ ಕಾರ್ಯಕರ್ತರು ಕೆಲವೆಡೆ ರಸ್ತೆ ತಡೆ, ಬೈಕ್‌ ರ‍್ಯಾಲಿ ನಡೆಸಿದ್ದನ್ನು ಹೊರತುಪಡಿಸಿದರೆ ಎಲ್ಲಿಯೂ ಬಂದ್‌ನ ಛಾಯೆ ಇರಲಿಲ್ಲ.

ವಾಣಿಜ್ಯ ವಹಿವಾಟು ಹಾಗೂ ವಾಹನ ಸಂಚಾರ ಎಂದಿನಂತೆಯೇ ಇತ್ತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಮತ್ತು ಆಟೊಗಳು ಪ್ರತಿನಿತ್ಯದಂತೆ ರಸ್ತೆಗಿಳಿದವು. ಹೀಗಾಗಿ ಜನಜೀವನಕ್ಕೆ ಯಾವುದೇ ತೊಂದರೆಯಾಗಲಿಲ್ಲ. ನಗರದ ಕೆಎಸ್‌ಆರ್‌ಟಿಸಿ ಮತ್ತು ಹಳೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ದೊಡ್ಡ ದಂಡೇ ಕಂಡುಬಂತು.

ಎಪಿಎಂಸಿ, ರೇಷ್ಮೆಗೂಡು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ದಿನನಿತ್ಯದಂತೆ ವಹಿವಾಟು ನಡೆಯಿತು. ಪ್ರಮುಖ ವಾಣಿಜ್ಯ ಸ್ಥಳಗಳಾದ ಎಂ.ಜಿ.ರಸ್ತೆ, ಎಂ.ಬಿ.ರಸ್ತೆ, ಅಮ್ಮವಾರಿಪೇಟೆ, ದೊಡ್ಡಪೇಟೆ, ಹಳೇ ಬಸ್‌ ನಿಲ್ದಾಣ, ಕ್ಲಾಕ್‌ ಟವರ್‌, ಗೌರಿಪೇಟೆಯಲ್ಲಿನ ಅಂಗಡಿಗಳು ತೆರೆದಿದ್ದವು. ತರಕಾರಿ, ಹಾಲು, ದಿನಸಿ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಲಿಲ್ಲ.

ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಬಿಎಸ್‌ಎನ್‌ಎಲ್‌ ಮತ್ತು ಅಂಚೆ ಕಚೇರಿಗಳು ಇಡೀ ದಿನ ಕಾರ್ಯ ನಿರ್ವಹಿಸಿದವು. ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಹೋಟೆಲ್‌ಗಳು, ಆಸ್ಪತ್ರೆಗಳು ಮತ್ತು ಔಷಧ ಮಾರಾಟ ಮಳಿಗೆಗಳು ಸೇವೆ ಒದಗಿಸಿದವು. ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯಿತು. ಪೆಟ್ರೋಲ್‌ ಬಂಕ್‌ಗಳಲ್ಲೂ ವಹಿವಾಟು ಸಹಜವಾಗಿತ್ತು. ವಾಹನ ಸವಾರರು ಸಾಲಿನಲ್ಲಿ ನಿಂತು ಪೆಟ್ರೋಲ್‌ ಮತ್ತು ಡೀಸೆಲ್‌ ಹಾಕಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಹಾಜರಾತಿ ಕಡಿಮೆ: ಬೇಸಿಗೆ ರಜೆಯ ನಂತರ ಜಿಲ್ಲೆಯಾದ್ಯಂತ ಸೋಮವಾರ ಶಾಲೆಗಳು ಪುನರಾರಂಭವಾದವು. ಬಂದ್‌ ಹಾಗೂ ಮೊದಲ ದಿನವಾದ ಕಾರಣಕ್ಕೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಜಿಲ್ಲಾಡಳಿತವು ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಮುಂಚಿತವಾಗಿ ತಿಳಿಸಿತ್ತು. ಆದರೂ ಬಂದ್‌ನ ಗೊಂದಲದಿಂದಾಗಿ ಸಾಕಷ್ಟು ವಿದ್ಯಾರ್ಥಿಗಳು ಶಾಲೆಗೆ ಗೈರಾದರು.

ಆತಂಕದ ವಾತಾವರಣ: ಬಿಜೆಪಿ ಕಾರ್ಯಕರ್ತರು ಕೆಲವೆಡೆ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದರು. ರಸ್ತೆಯಲ್ಲಿ ಸಂಚರಿಸುತ್ತಿದ್ದ ಲಾರಿ, ಆಟೊ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳನ್ನು ತಡೆದು ಬಂದ್‌ಗೆ ಬೆಂಬಲ ನೀಡುವಂತೆ ಒತ್ತಾಯಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು.

ಜಿಲ್ಲಾ ಕೇಂದ್ರದ ಕೆಎಸ್‌ಆರ್‌ಟಿಸಿ ಡಿಪೊ ಮತ್ತು ನಿಲ್ದಾಣದಿಂದ ಹೊರ ಬರುತ್ತಿದ್ದ ಬಸ್‌ಗಳನ್ನು ಕಾರ್ಯಕರ್ತರು ಪ್ರವೇಶದ್ವಾರದಲ್ಲೇ ತಡೆಯಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಬಳಿಕ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪೊಲೀಸ್ ಭದ್ರತೆ: ಬಂದ್‌ ಕಾರಣ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಸರ್ಕಾರಿ ಕಚೇರಿಗಳು, ಪ್ರಮುಖ ವೃತ್ತ, ಜಂಕ್ಷನ್‌ಗಳು ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ಸೂಕ್ಷ್ಮ ಪ್ರದೇಶಗಳಲ್ಲಿ ನಿಯಮಿತವಾಗಿ ಗಸ್ತು ನಡೆಸಿದರು.

ಕಾರ್ಯಕರ್ತರ ಬಂಧನ

ಜಿಲ್ಲೆಯಾದ್ಯಂತ ಬಂದ್‌ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬಂದ್‌ನಿಂದ ಜನಜೀವನಕ್ಕೆ ಯಾವುದೇ ತೊಂದರೆಯಾಗಿಲ್ಲ. ಬಸ್‌ ಹಾಗೂ ವಾಹನಗಳನ್ನು ತಡೆದ ಮತ್ತು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ ಸಂಬಂಧ ಬಿಜೆಪಿಯ 17 ಕಾರ್ಯಕರ್ತರನ್ನು ಬಂಧಿಸಿ ಸಂಜೆ ಬಿಡುಗಡೆಗೊಳಿಸಲಾಯಿತು ಪ್ರಭಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ಲೋಕೇಶ್‌ ತಿಳಿಸಿದರು.

**

ಅಂಗಡಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಬೇರೆ ಬೇರೆ ಉದ್ದೇಶಕ್ಕೆ ವರ್ಷದಲ್ಲಿ ನಾಲ್ಕೈದು ಬಾರಿ ಬಂದ್‌ ಮಾಡಿ ವಹಿವಾಟಿಗೆ ಅಡ್ಡಿಪಡಿಸಿದರೆ ಸಂಪಾದನೆ ಇಲ್ಲದೆ ಬೀದಿಗೆ ಬರುತ್ತೇವೆ. ಬಂದ್‌ ನಡೆಸುವುದಕ್ಕೆ ಅಭ್ಯಂತರವಿಲ್ಲ. ಆದರೆ, ಬಂದ್‌ನ ಸೋಗಿನಲ್ಲಿ ಜನಜೀವನಕ್ಕೆ ಯಾವುದೇ ಸಮಸ್ಯೆ ಮಾಡಬಾರದು

ನವೀನ್‌, ಪೀಠೋಪಕರಣ ವ್ಯಾಪಾರಿ

**

ಬಂದ್‌ನ ನೆಪದಲ್ಲಿ ಕೆಲವೆಡೆ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿ ಮತ್ತು ವಾಹನಗಳನ್ನು ತಡೆದು ಜನರಿಗೆ ತೊಂದರೆ ಮಾಡಲಾಗುತ್ತಿದೆ. ಇದು ಸರಿಯಲ್ಲ. ಜನರಿಗೆ ತೊಂದರೆ ಮಾಡುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು

ಶೆಟ್ಟಪ್ಪ, ಕೋಲಾರ ನಗರವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry