ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾಯಾನದ ಸುರಕ್ಷೆ...

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಶಾಲೆ ಆರಂಭವಾಯಿತು ಎಂದರೆ ಮಕ್ಕಳ ಸಕ್ಕರೆ ನಿದ್ದೆಗೆ ಬ್ರೇಕ್‌ ಬಿದ್ದಂತೆ. ಮನೆ ಸಮೀಪದಲ್ಲೇ ಶಾಲೆಯಿದ್ದರೆ ಮಕ್ಕಳಿಗೆ ಮಲಗಲು ಹೆಚ್ಚು ಕಾಲ ಸಿಗುತ್ತದೆ. ದೂರವಿದ್ದರಂತೂ ಮುಂಜಾನೆಯೇ ಏಳಬೇಕು. ಅದರಲ್ಲೂ ಶಾಲೆಗೆ ಕರೆದುಕೊಂಡು ಹೋಗಲು ಶಾಲಾ ವಾಹನವೇ ಮನೆಯ ಬಳಿ ಬುರುವುದಿದ್ದರೆ ಇನ್ನೂ ಬೇಗ ಎದ್ದು, ಸಿದ್ಧರಾಗಬೇಕು. ಪುಟಾಣಿ ಮಕ್ಕಳಾದರಂತೂ ಅವರನ್ನು ಅಷ್ಟು ಬೇಗ ಎಬ್ಬಿಸಿ ಸಿದ್ಧ ಮಾಡಿ ಕಳುಹಿಸುವಷ್ಟರಲ್ಲಿ ಪೋಷಕರು ಸುಸ್ತಾಗಿರುತ್ತಾರೆ.

ಶಾಲೆಯಲ್ಲಿ ಮಕ್ಕಳ ಸುರಕ್ಷೆ ವಿಚಾರ ಕುರಿತು ಗಂಭೀರವಾಗಿ ಯೋಚಿಸುವ ಪೋಷಕರು, ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳೂ ಅಷ್ಟೇ ಸುರಕ್ಷೆಯಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಚಾಲಕ ಮಕ್ಕಳನ್ನು ಜೋಪಾನವಾಗಿ ಶಾಲೆಗೆ ಕರೆದುಕೊಂಡು ಹೋಗಿ, ಅಷ್ಟೇ ಜೋಪಾನವಾಗಿ ಮನೆಗೆ ಕರೆದುಕೊಂಡು ಬರಬೇಕು. ಯಾವುದೇ ರೀತಿಯ ದೌರ್ಜನ್ಯ, ಶೋಷಣೆ ಮಕ್ಕಳಿಗೆ ಆಗಬಾರದು ಎಂದೂ ಅವರು ಬಯಸುತ್ತಾರೆ.

ಈ ಹಿಂದೆ ಅತಿ ವೇಗ, ಕುಡಿದು ವಾಹನ ಚಲಾಯಿಸಿದ್ದರಿಂದ ಸಂಭವಿಸಿದ್ದ ಅಪಘಾತಗಳು ಹಾಗೂ ಮಕ್ಕಳ ಮೇಲಿನ ಶಾಲಾ ವಾಹನದಲ್ಲಿನ ದೌರ್ಜನ್ಯದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಂಕೋರ್ಟ್‌ ಕೆಲ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಈಗಾಗಲೇ ಸೂಚಿಸಿದೆ. ಅದನ್ನು ಆಧರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯಮಾವಳಿಗಳನ್ನು ರಚಿಸಿ ಅನುಷ್ಠಾನಗೊಳಿಸುವಂತೆ ಶಾಲಾ, ಕಾಲೇಜುಗಳಿಗೆ ನಿರ್ದೇಶಿಸಿದೆ. ಶಿಕ್ಷಣ ಸಂಸ್ಥೆಗಳು ಅವುಗಳ ಪಾಲನೆಗೆ ಮುಂದಾಗಿವೆ. ಆದರೆ ಅದರ ಹೊರೆಯೂ ಪೋಷಕರ ಮೇಲೆ ಬೀಳುತ್ತಿದೆ.

ಅಂದರೆ ಸುರಕ್ಷಾ ನಿಯಮಗಳ ಪಾಲನೆಗೆ ತಗಲುವ ಪ್ರತಿ ಖರ್ಚು, ವೆಚ್ಚವನ್ನು ಶಾಲೆಗಳು ಪೋಷಕರ ಮೇಲೇ ಹಾಕುತ್ತಿವೆ. ಕೆಲ ಶಾಲೆಗಳಲ್ಲಿಯಂತೂ ಶಾಲಾ ಶುಲ್ಕಕ್ಕೆ ಸರಿ ಸಮಾನವಾಗಿ ವಾಹನ ಶುಲ್ಕವನ್ನೂ ಪೋಷಕರು ಭರಿಸಬೇಕಾದ ದುಸ್ತಿತಿ ಬಂದಿದೆ.

ಪೋಕ್ಸೊ ಕಾಯ್ದೆ ಕುರಿತು ಜಾಗೃತಿ: ‘ನಮ್ಮ ಶಾಲೆಯಲ್ಲಿ ಮೂರು ವಾಹನಗಳಿವೆ. ಸರ್ಕಾರದ ನಿಯಮಗಳನ್ನು ಪಾಲಿಸುತ್ತಿದ್ದೇವೆ. ಚಾಲಕರಿಗೆ ಪೋಕ್ಸೊ ಕಾಯ್ದೆ ಕುರಿತು ಮಾಹಿತಿ ನೀಡಿದ್ದೇವೆ. ಮಕ್ಕಳೊಂದಿಗೆ, ಪೋಷಕರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಸಿದ್ದೇವೆ. ಪ್ರತಿ ವಾಹನದಲ್ಲೂ ಒಬ್ಬರು ಅಟೆಂಡರ್‌ ನೇಮಿಸಿದ್ದೇವೆ. ವಾಹನಗಳಲ್ಲಿ ಮಕ್ಕಳ ಸಮಿತಿ ರಚಿಸಿದ್ದೇವೆ. ಕಿರಿಯ ಮಕ್ಕಳ ಸುರಕ್ಷತೆಗೆ ಅವರು ಒತ್ತು ನೀಡುತ್ತಾರೆ. ಚಾಲಕ ಅಥವಾ ಅಟೆಂಡರ್‌ ವರ್ತನೆ ಸರಿಯಿಲ್ಲದಿದ್ದರೆ ಅವರು ಮುಖ್ಯ ಶಿಕ್ಷಕರ ನೇತೃತ್ವದ ಮಕ್ಕಳ ಹಕ್ಕುಗಳ ಸಮಿತಿಗೆ ದೂರು ನೀಡಬಹುದು’ ಎಂದು ಹೇಳುತ್ತಾರೆ ಬಾಗಲಗುಂಟೆಯ ಬ್ಲಾಸಂ ಶಾಲೆಯ ಮುಖ್ಯಸ್ಥರೂ ಆಗಿರುವ ರಾಜ್ಯ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌.

‘ಚಾಲಕರು ಮಧ್ಯಪಾನ ಮಾಡಿದ್ದಾರೋ ಇಲ್ಲವೋ ಎಂಬುದರ ಕುರಿತು ‘ಆಲ್ಕೋ ಮೀಟರ್‌’ ನಿಂದ ಆಗಾಗ ಪರೀಕ್ಷಿಸಲಾಗುತ್ತದೆ. ಜಿಪಿಎಸ್‌ ಅಳವಡಿಸಲಾಗಿದ್ದು, ವಾಹನದ ಚಲನವಲನ ಮೇಲೆ ನಿಗಾ ಇಡಲಾಗಿರುತ್ತದೆ. ಅಗ್ನಿ ನಂದಕ ಉಪಕರಣದ ಜತೆಗೆ ಪ್ರಥಮ ಚಿಕಿತ್ಸಾ ಕಿಟ್‌ ಕೂಡ ಇಡಲಾಗಿದೆ. ವಾಹನ ಬರುವುದು ಮತ್ತು ಹೋಗುವುದು ತಡವಾಗುವಂತಿದ್ದರೆ ಆ ಕುರಿತು ’ವಾಯ್ಸ್‌ ಮೆಸೇಜ್‌’ ಅನ್ನು ಎಲ್ಲ ಪೋಷಕರಿಗೂ ಕಳುಹಿಸುವ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ. ನಮ್ಮಲ್ಲಿ ತಿಂಗಳಿಗೆ ಕನಿಷ್ಠ ₹ 400 ರಿಂದ ಗರಿಷ್ಠ ₹ 2000 (ಶಾಲೆ–ಮನೆ ಅಂತರದ ಮೇಲೆ ನಿರ್ಧಾರ) ವಾಹನ ಶುಲ್ಕ ಪಡೆಯುತ್ತಿದ್ದೇವೆ’ ಎನ್ನುತ್ತಾರೆ ಅವರು.

‘ಬಹುತೇಕ ಖಾಸಗಿ ಶಾಲೆಗಳು ತಮ್ಮ ಶಾಲಾ ವಾಹನಗಳಲ್ಲಿ ಈ ನಿಯಮಗಳ ಅಳವಡಿಸಿಕೊಂಡಿವೆ. ವಾಹನದ ವಿಮಾ ಮೊತ್ತ, ಸಿಸಿಟಿವಿ, ಜಿಪಿಎಸ್‌ ಸೌಲಭ್ಯ, ಮಾಸಿಕ ನಿರ್ವಹಣೆ, ಚಾಲಕ, ಅಟೆಂಡರ್‌ ವೇತನ, ಇಂಧನಕ್ಕೆ ವ್ಯಯಿಸುವ ಖರ್ಚು ಎಲ್ಲವನ್ನೂ ವಿದ್ಯಾರ್ಥಿಗಳ ಪೋಷಕರೇ ಭರಿಸಬೇಕಾಗುತ್ತದೆ. ಇದು ಶಾಲೆಯಿಂದ ಶಾಲೆಗೆ ಭಿನ್ನವಿರುತ್ತದೆ. ಶಾಲೆ ವಾಹನದ ವ್ಯವಸ್ಥೆಯನ್ನು ಹೊರತುಪಡಿಸಿ ಪೋಷಕರೇ ಪ್ರತ್ಯೇಕವಾಗಿ ಮಾಡಿಕೊಳ್ಳುವ ವಾಹನ ವ್ಯವಸ್ಥೆಗಳಿಗೆ ನಾವು ಜವಾಬ್ದಾರರಲ್ಲ’ ಎಂಬುದು ಅವರು ನೀಡುವ ವಿವರಣೆ.

ನಿಯಮ ಪಾಲಿಸದಿದ್ದರೆ ದಂಡ: ನಿಯಮಗಳನ್ನು ಉಲ್ಲಂಘಿಸಿದ ವಾಹನಗಳನ್ನು ಜಪ್ತಿ ಮಾಡುವ ಮತ್ತು ದಂಡ ವಿಧಿಸುವ ಅಧಿಕಾರ ಆರ್‌ಟಿಒಗೆ ಇದೆ. ವಾಹನದ ಫಿಟ್‌ನೆಸ್‌ ಪ್ರಮಾಣ ಪತ್ರ ಇರದಿದ್ದರೆ ₹ 2000 ದಂಡ ವಿಧಿಸಲಾಗುತ್ತದೆ. ಪರ್ಮಿಟ್‌ ಇಲ್ಲದಿದ್ದರೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಚಾಲನಾ ಪರವಾನಗಿ ಇಲ್ಲದಿದ್ದರೆ ₹ 1500 ದಂಡ, ವಿಮೆ ನವೀಕರಣವಾಗದಿದ್ದರೆ ವಾಹನವನ್ನು ಜಪ್ತಿ ಮಾಡಲಾಗುತ್ತದೆ. ವಾಹನದ ತೆರಿಗೆ ಕಟ್ಟದಿದ್ದರೆ ದಂಡ ಹಾಕಲಾಗುತ್ತದೆ ಎಂದು
ಜಂಟಿ ಸಾರಿಗೆ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್‌ ಮಾಹಿತಿ ನೀಡಿದ್ದಾರೆ.
*
ಆರ್‌ಟಿಒ ನಿಯಮ

* ಶಾಲಾ ಬಸ್ಸಿನ ಹಿಂಭಾಗ ಹಾಗೂ ಮುಂಭಾಗದಲ್ಲಿ ಕಡ್ಡಾಯವಾಗಿ ಶಾಲಾ ಬಸ್‌ ಎಂದು ಬರೆದಿರಬೇಕು.

* ಪ್ರಥಮ ಚಿಕಿತ್ಸಾ ಕಿಟ್‌, ಅಗ್ನಿನಂದಕ ಹೊಂದಿರಬೇಕು

* ಬಸ್ಸುಗಳ ಆಯತಾಕಾರದ ಕಿಟಕಿಗಳಿಗೆ ಕಬ್ಬಿಣದ ಸರಳುಗಳನ್ನು ಅಳವಡಿಸಿರಬೇಕು

* ಶಾಲೆಯ ಹೆಸರು ಹಾಗೂ ದೂರವಾಣಿ ಸಂಖ್ಯೆ ಬರೆದಿರಬೇಕು

* ಚಾಲಕರು ಐದು ವರ್ಷಗಳ ಚಾಲನಾ ಅನುಭವ ಹೊಂದಿರಬೇಕು ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ ದಾಖಲೆ ಹೊಂದಿರಬಾರದು.

* ಬಸ್‌ಗಳಲ್ಲಿ ಶಾಲಾ ಬೆಂಗಾವಲು ಇರಬೇಕು ಹಾಗೂ ಸಿಬ್ಬಂದಿಯೊಬ್ಬರು ಸುರಕ್ಷತಾ ಕ್ರಮವನ್ನು ಪರಿಶೀಲನೆ ನಡೆಸಬೇಕು.

* ಮಕ್ಕಳ ರಕ್ತ ಮಾದರಿಯ ಮಾಹಿತಿ ಇರಬೇಕು.

* ವಾಹನವು ನೋಂದಣಿ ದಿನಾಂಕದಿಂದ 15 ವರ್ಷ ಮೀರಿರಬಾರದು. ಸ್ಪೀಡ್‌ ಗವರ್ನರ್‌ ಅಳವಡಿಸಿರಬೇಕು. ವೇಗದ ಮಿತಿ ಗಂಟೆಗೆ 40 ಕಿ.ಮೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT