ಕಥೆ ಕೇಳೋಣ ಬನ್ರಿ...

7
ಕಥಾ ಕಣಜ

ಕಥೆ ಕೇಳೋಣ ಬನ್ರಿ...

Published:
Updated:
ಕಥೆ ಕೇಳೋಣ ಬನ್ರಿ...

ಕಥೆ ಮಕ್ಕಳಿಗಷ್ಟೇ ಅಲ್ಲ ದೊಡ್ಡವರ ಭಾವ ಪ್ರಪಂಚವನ್ನೂ ವಿಸ್ತರಿಸುವ ಪರಿ ಅನನ್ಯ. ಬಾನುಲಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಥಾ ನಾಟಕ’ಕ್ಕಾಗಿ ರೇಡಿಯೊ ಟ್ಯೂನ್ ಮಾಡಿಟ್ಟು ಕೇಳುತ್ತಿದ್ದ ದಿನಗಳೇ ಅದ್ಭುತ. ಕಥೆ ಕೇಳುತ್ತಾ ಕೇಳುತ್ತಾ ಕಲ್ಪನಾ ವಿಲಾಸದಲ್ಲಿ ವಿಹರಿಸುತ್ತಿದ್ದ ಸುಖಕ್ಕೆ ಸರಿಸಾಟಿ ಯಾವುದೂ ಇರುತ್ತಿರಲಿಲ್ಲ. ಅಂಥದೊಂದ್ದು ವಿಶಿಷ್ಟ ಕಾರ್ಯಕ್ರಮವನ್ನು ನೀಡಿದ್ದ ಆಕಾಶವಾಣಿ ಇದೀಗ ಕನ್ನಡದ ಖ್ಯಾತ ಕಥೆಗಾರರ ‘ಕಥಾ ಕಣಜ’ವನ್ನು ಹೊತ್ತು ತರಲು ಸಿದ್ಧವಾಗಿದೆ.

ಈಗಾಗಲೇ ‘ಕಥಾಕಣಜ’ ಕುರಿತು ಸಂಕ್ಷಿಪ್ತ ಪರಿಚಯ ಪ್ರವೇಶಿಕೆ ಕಾರ್ಯಕ್ರಮಗಳನ್ನು ಮೇ 28ರಿಂದ ಪ್ರಸಾರ ಮಾಡುತ್ತಿರುವ ಆಕಾಶವಾಣಿ, ಜೂನ್ 4ರಿಂದ ಕನ್ನಡದ ಆಯ್ದ ಅತ್ಯುತ್ತಮ ಕಥೆಗಳನ್ನು ಬಿತ್ತರಿಸಲಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಡಾ.ಜಿ.ಎಸ್. ಶಿವರುದ್ರಪ್ಪ ಅವರ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ಡಾ.ಗಿರಡ್ಡಿ ಗೋವಿಂದರಾಜು ಮತ್ತು ಬೋಳುವಾರು ಮೊಹಮದ್ ಕುಂಞಿ ಅವರ ಸಂಪಾದಕತ್ವದಲ್ಲಿ ನಾಡಿನ ಎಲ್ಲಾ ಪ್ರದೇಶಗಳ ಎಲ್ಲಾ ಪ್ರಕಾರಗಳ ಎಲ್ಲಾ ಸಮುದಾಯಗಳ ಸಾಕ್ಷಿಪ್ರಜ್ಞೆಯಂತೆ ಮತ್ತು ಎಲ್ಲರೂ ಒಪ್ಪುವಂತೆ ಆರಿಸಿದ ‘ಶತಮಾನದ ಸಣ್ಣಕಥೆಗಳು’ ಕಥಾ ಸಂಕಲನವು ಈ ಕಥಾಕಣಜ ಮಾಲಿಕೆಗೆ ಪ್ರಧಾನ ಆಕರವಾಗಿದೆ. ಲೇಖಕ ಡಾ. ಎಸ್. ದಿವಾಕರ್ ಅವರು ಸಂಪಾದಿಸಿರುವ ಕಥಾ ಸಂಕಲನ ಮತ್ತು ಪ್ರೊ.ಜಿ.ಎಚ್. ನಾಯಕ್ ಅವರು ಸಂಪಾದಿಸಿರುವ ಕಥಾ ಸಂಕಲನದ ಕೆಲವು ಉತ್ತಮ ಕಥೆಗಳನ್ನು ಸಹ ಈ ಮಾಲಿಕೆಯಲ್ಲಿ ಬಳಸಿಕೊಳ್ಳಲಾಗಿದೆ.

‘ಶತಮಾನದ ಸಣ್ಣಕಥೆಗಳು’ ಕಥಾ ಸಂಕಲನದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ದಲಿತ ಮತ್ತು ಬಂಡಾಯದ ಪ್ರಾತಿನಿಧಿಕ ಕಥೆಗಳಿವೆ. ಈ ಕೃತಿ ಮುದ್ರಣವಾಗಿ 17 ವರ್ಷಗಳ ಬಳಿಕ ಆಕಾಶವಾಣಿಯಲ್ಲಿ ‘ಕಥಾ ಕಣಜ’ ಮಾಲಿಕೆಯಲ್ಲಿ ಈ ಕಥೆಗಳು ಪ್ರಸಾರವಾಗುತ್ತಿರುವುದು ವಿಶೇಷ. ಸುಬ್ಬು ಹೊಲೆಯಾರ್, ಶಿವಕುಮಾರ್ ಮತ್ತುಬಿ.ಕೆ.ಸುಮತಿ ಅವರ ತಂಡ ಕಥಾ ಕಣಜಕ್ಕೆ ರೂಪರೇಷೆ ನೀಡುವಲ್ಲಿ ಶ್ರಮಿಸಿದೆ.

ಈ ಸರಣಿ ಮಾಲಿಕೆಯಲ್ಲಿ ಪ್ರತಿವಾರ ಒಂದು ಕಥೆಯಂತೆ ಒಂದು ವರ್ಷಕ್ಕೆ 52 ಕಥೆಗಳು ಪ್ರಸಾರಗೊಳ್ಳಲಿವೆ. ಈ ಕಾರ್ಯಕ್ರಮವು ಕಥೆಗಾರನ ಮಾತು, ಕಥೆಯ ಓದು, ಹಿರಿಯ ಸಾಹಿತಿಗಳಿಂದ ವಿಮರ್ಶೆ ಹಾಗೂ ಪೂರಕ ಸಂಗೀತವನ್ನು ಒಳಗೊಂಡಿರುತ್ತದೆ. ಸಾಹಿತಿಗಳಾದ ಎಚ್.ಎಸ್. ವೆಂಕಟೇಶ್ ಮೂರ್ತಿ, ಕುಂ. ವೀರಭದ್ರಪ್ಪ, ಜಯಂತ ಕಾಯ್ಕಿಣಿ ಮತ್ತು ಡಾ.ಎಂ.ಎಸ್.ಆಶಾದೇವಿ  ಸೇರಿದಂತೆ 19 ಸಾಹಿತಿಗಳು ಕಥಾ ವಿಮರ್ಶಕರಾಗಿ ಭಾಗವಹಿಸಲಿದ್ದಾರೆ. ಶ್ರೀನಿವಾಸ ಪ್ರಭು, ಡಾ.ಅಬ್ದುಲ್ ರೆಹಮಾನ್ ಪಾಷಾ, ಜೆ.ಪಿ. ರಾಮಣ್ಣ, ಸೇರಿದಂತೆ ಕನ್ನಡದ ಅತ್ಯುತ್ತಮ ನಿರೂಪಕರು ಕಥೆಗಳನ್ನು ಓದಲಿದ್ದಾರೆ.

‘ಕಥಾಕಣಜ’ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆಕಾಶವಾಣಿ ಜತೆಗೂಡಿ ಮಾಡುತ್ತಿರುವ ಅಪರೂಪದ ಕಾರ್ಯಕ್ರಮ. ಕಥಾಶ್ರೀಮಂತಿಕೆ ಮತ್ತು ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಈ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಇದೊಂದು ಮೈಲಿಗಲ್ಲು. ಮತ್ತಷ್ಟು ಓದುಗರನ್ನು ಸೃಷ್ಟಿ  ಮಾಡಲು ಅಪರೂಪದ ಪ್ರಯತ್ನವಿದು. ಆಕಾಶವಾಣಿಯ ಸ್ಟುಡಿಯೊದಲ್ಲಿ ಪಿ.ಲಂಕೇಶ್ ಅವರ ‘ರೊಟ್ಟಿ’ ಕಥೆ ಕೇಳಿದೆ. ಅದನ್ನು ಕೇಳಿದ ಮೇಲೆ ಮನೆಗೆ ಹೋಗಿ ಆ ಕಥೆಯನ್ನು ಪೂರ್ತಿ  ಓದಬೇಕೆಂಬ ಕುತೂಹಲ ಉಂಟಾಯಿತು. ನಗರದ ಒತ್ತಡದ ಬದುಕಿನಲ್ಲಿ ಓದುಲು ಪುರುಸೊತ್ತು ಇಲ್ಲದವರಿಗೆ ‘ಕಥಾ ಕಣಜ’ ಇಷ್ಟವಾಗುತ್ತದೆ. ಕಥೆಯ ಪರಿಚಯ ಕಿವಿಯ ಮೇಲೆ ಬಿದ್ದರೆ ಖಂಡಿತಾ ಕಥೆ ಓದುವ ಹಂಬಲ ಉಂಟಾಗುತ್ತದೆ ಎಂಬುದು ನಮ್ಮ ನಂಬಿಕೆ’ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್.

‘ಕಥೆಗಾರರ ಅನಿಸಿಕೆ, ಕಥೆಯ ಓದಿನ ಜತೆಗೆ ಕಥೆಗಾರರ ಅನಿಸಿಕೆ, ವಿಮರ್ಶೆ, ಲೇಖಕರ ಪರಿಚಯ ಇವಿಷ್ಟನ್ನೂ 15 ನಿಮಿಷಗಳಲ್ಲಿ ಕಟ್ಟಿಕೊಡಲಾಗುವುದು. ಆಕಾಶವಾಣಿಯ ಒಟ್ಟು 13 ಕೇಂದ್ರಗಳಲ್ಲೂ ಈ ಕಾರ್ಯಕ್ರಮ ಪ್ರತಿ ಬುಧವಾರ ಪ್ರಸಾರವಾಗುತ್ತದೆ. ತಿಂಗಳ ಕೊನೆಯ ಶನಿವಾರ ನೇರ ಫೋನ್ ಇನ್ ರಸಪ್ರಶ್ನೆ ಕೂಡಾ ಇದೆ. ವಿಜೇತರಿಗೆ ಬಹುಮಾನವನ್ನೂ ನೀಡಲಾಗುವುದು’ ಎಂದು ವಿವರಿಸುತ್ತಾರೆ ಬೆಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಸುಬ್ಬು ಹೊಲೆಯಾರ್.

*

ಕಥೆಯ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಕಾರ್ಯಕ್ರಮ ರೂಪಿಸಲಾಗಿದೆ. ಕಡಿಮೆ ಸಮಯದಲ್ಲಿ ಸಾಂದ್ರವಾಗಿ ಸಂಗ್ರಹ ರೂಪದಲ್ಲಿ ಕೇಳುಗರ ಮನಸಿಗೆ ದಾಟಿಸುವಂಥ ಕೆಲಸವನ್ನು ಮಾಡುತ್ತಿದ್ದೇವೆ. ಕಥೆ ಓದುವ ಮತ್ತು ಕೇಳುವ ಪರಂಪರೆಯನ್ನು ಕನ್ನಡಿಗರಿಗೆ ನೆನಪಿಸುವ ಕಾರ್ಯಕ್ರಮ ಇದಾಗಿದೆ.

–ಡಾ.ಎನ್.ರಘು,  ಸಹಾಯಕ ನಿರ್ದೇಶಕ (ಕಾರ್ಯಕ್ರಮ), ಆಕಾಶವಾಣಿ ಬೆಂಗಳೂರು

*

ಪ್ರಸಾರದ ಮಾಹಿತಿ

* fm rainbow 101.3 mhz: ಪ್ರತಿ ಸೋಮವಾರ ಬೆಳಿಗ್ಗೆ 8.02

* ರಾಜ್ಯದ 13 ಬಾನುಲಿ ಕೇಂದ್ರಗಳು ಮತ್ತು ಬೆಂಗಳೂರು ಆಕಾಶವಾಣಿ: ಪ್ರತಿ ಬುಧವಾರ ಬೆಳಿಗ್ಗೆ 7.15

* ವಿವಿಧ ಭಾರತಿ fm 102.9 MHz: ಪ್ರತಿ ಶುಕ್ರವಾರ  8.30ಕ್ಕೆ ಮರುಪ್ರಸಾರ

* ಕೇಳುಗರು airkathakanaja@gmail.comಗೆ ಪ್ರತಿಕ್ರಿಯೆ ಕಳಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry