ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ನಡೆಯೂ ದೇವರ ಅಸ್ತಿತ್ವವೂ

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಹೊರೆಯಾಲ ದೊರೆಸ್ವಾಮಿ ಅವರ ‘ದುರ್ಬಲ ರಾಜಕಾರಣಿಗಳು’ (ಪ್ರ.ವಾ., ಸಂಗತ, ಮೇ 28) ಬರಹ ವರ್ತಮಾನದ ರಾಜಕಾರಣಿಗಳ ಅಂತರಂಗದ ಒಂದು ಮುಖವನ್ನು ಬಯಲು ಮಾಡಿದೆ. ಚುನಾವಣಾಪೂರ್ವ ಮತ್ತು ನಂತರದ ದಿನಗಳಲ್ಲಿ ಬಹಳಷ್ಟು ರಾಜಕಾರಣಿಗಳು ಎಡತಾಕುವ ಮಠ, ಮಂದಿರ, ಚರ್ಚು, ಮಸೀದಿ, ದರ್ಗಾಗಳ ಲೆಕ್ಕ ನೋಡಿದರೆ ಯಾವತ್ತೂ ಇಲ್ಲದ ದೇವರ ಮೇಲಿನ ಭಕ್ತಿ, ಜಾತ್ಯತೀತ ಭಾವನೆ ಒಮ್ಮಿಂದೊಮ್ಮೆಲೇ ಹೇಗೆ ಉದ್ಭವವಾಯಿತು ಎನ್ನುವ ಸಂಶಯ ಕಾಡುವುದು ಸಹಜವೇ.

ಆತ್ಮವಂಚನೆಯ ಈ ನಾಟಕ ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಲ್ಲದೆ ಬೇರೇನೂ ಅಲ್ಲ. ಜಾತ್ಯತೀತವೆಂದು ಕರೆಸಿಕೊಳ್ಳುವ ನಮ್ಮ ದೇಶದ ರಾಜಕೀಯ, ಸಾಮಾಜಿಕ ಬದುಕಿನಲ್ಲಿ ಜಾತಿ ಲೆಕ್ಕಾಚಾರ ಅತಿಯಾಗಿ ಬೇರು ಬಿಟ್ಟಿರುವುದು ಬೆಳಕಿನಷ್ಟು ಸ್ಪಷ್ಟ. ಸತ್ಯ ಗೊತ್ತಿದ್ದೂ ಕುರುಡರಂತೆ ಅದಕ್ಕೆ ಜೋತುಬೀಳುವ ನಾವೆಲ್ಲ ಈ ಲೆಕ್ಕಾಚಾರಕ್ಕೆ ಒತ್ತು ಕೊಟ್ಟವರೇ. ಬೇರೆ ಬೇರೆ ಜಾತಿಯ ಮತದಾರರನ್ನು ಓಲೈಸುವ, ತಮ್ಮ ಬುಟ್ಟಿಗೆ ಹಾಕಿಕೊಳ್ಳುವ, ಅನುಕಂಪ ಪಡೆಯುವ ನೂರಾರು ವಿಧಾನಗಳಲ್ಲಿ ಗುಡಿಗುಂಡಾರ ಸುತ್ತುವುದೂ ಒಂದು.

ದೇವರ ದರ್ಶನ ಮಾತ್ರವಲ್ಲದೆ ನಾನಾ ಹೆಸರಿನ ಯಜ್ಞ– ಯಾಗಾದಿಗಳನ್ನು ಮಾಡಿಸುವುದು, ವ್ರತನಿಯಮಗಳನ್ನು ಪಾಲಿಸುವುದು, ವಿಶೇಷ ಪೂಜೆಗಳನ್ನು ಸಲ್ಲಿಸುವುದು ಇದರ ಮುಂದುವರಿದ ಭಾಗ. ಮತದಾರರಿಗೆ ಮಾತ್ರವಲ್ಲದೆ ದೇವರಿಗೂ ಆಮಿಷ ಒಡ್ಡುವ ಸಂಪ್ರದಾಯವಿದು. ಇದರಿಂದಾಗಿಯೇ ತಾವು ಗೆದ್ದೆವೋಇಲ್ಲ ಬಿದ್ದೆವೋ ಎಂದು ಆನಂತರದಲ್ಲಿ ಪರಾಮರ್ಶಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಇಂತಹ ನಡೆಗೆ ಕಾರಣಕರ್ತರಾಗುವ ಅವರ ಹಿಂಬಾಲಕರ ದಂಡೂ ದೊಡ್ದದಿದೆ. ಕಾಡುವ ಪಾಪಪ್ರಜ್ಞೆಯೂ ರಾಜಕಾರಣಿಗಳ ಈ ರೀತಿಯ ನಡೆಗೆ ಕಾರಣವಾಗಿರಬಹುದು.

ದೇವರ ಅಸ್ತಿತ್ವವನ್ನು ನಂಬುವ ಶ್ರದ್ಧಾಕೇಂದ್ರಗಳುಎಂದೂ ಬೂಟಾಟಿಕೆಯ ತಾಣಗಳಾಗಬಾರದು. ಆಧ್ಯಾತ್ಮಿಕ ದೃಷ್ಟಿಯಲ್ಲಿ ಅಲ್ಲಿಗೆ ಹೋಗುವವರ ಮನಸ್ಸಿನ ಮಲಿನವನ್ನು ತೊಳೆಯುವಂತಹ ವಾತಾವರಣವನ್ನು ಅವುಗಳು ಸೃಷ್ಟಿಸಬೇಕು. ಆಸ್ತಿಕತೆ, ನಾಸ್ತಿಕತೆ ತೀರ ವೈಯಕ್ತಿಕ ವಿಚಾರಗಳು. ಅವರವರ ಅನುಭವ, ಶ್ರದ್ಧೆ, ನಂಬಿಕೆಗಳನ್ನು ಅವಲಂಬಿಸಿದ ಈ ಸಂಗತಿಗಳು ಯಾವತ್ತೂ ಸಾರ್ವಜನಿಕ ಚರ್ಚೆಗೆ ಆಹಾರವಾಗಬಾರದು.

ಭಾರತೀಯ ಸಂಸ್ಕೃತಿಯಲ್ಲಿ ದೇವರ ಅಸ್ತಿತ್ವದ ಪ್ರಶ್ನೆ ಬಂದಾಗ ನಿಜವಾದ ಅರ್ಥದಲ್ಲಿ ಅದು ಹೆಚ್ಚು ಒತ್ತು ಕೊಡುವುದು ವೈಯಕ್ತಿಕ ಸನ್ಮಾರ್ಗದ ಪ್ರಗತಿಗೇ ಹೊರತು ಭೌತಿಕ ಇಷ್ಟಾರ್ಥಸಿದ್ಧಿಗಳಿಗಲ್ಲ. ಆದರೆ ಇಂದು ನಾವು ದೇವರನ್ನು ಬೇಡಿಕೊಳ್ಳುವುದು ಕೇವಲ ಆತನನ್ನು ಪಡೆಯುವುದಕ್ಕಾಗಿ ಅಲ್ಲ, ಬದಲು ನಮ್ಮ ಎಲ್ಲ ಆಸೆ ಆಕಾಂಕ್ಷೆಗಳ ಈಡೇರಿಕೆಗಾಗಿ. ‘ದೇವರನ್ನು ಹೃದಯದಲ್ಲೇ ಹುಡುಕು’ ಎನ್ನುವ ಮಾತು ಅನುಭವಕ್ಕೆ ಬಂದಾಗ ಇಂತಹ ದ್ವಂದ್ವಗಳು ಒಂದರ್ಥದಲ್ಲಿ ಕಾಣೆಯಾಗುತ್ತವೆ. ಹೊರಗೆಲ್ಲೂ ಕಾಣದ ದೇವರನ್ನು ವ್ಯರ್ಥವಾಗಿ ಹುಡುಕದೆ ತನ್ನೊಳಗೇ ಹುಡುಕುತ್ತ ಸಾಗುವ ಹಾದಿಯು ಜಾತಿ, ಮತ, ಪಂಥಗಳನ್ನು ಮೀರಿ ಬೆಳೆಯುವ ಮಾನವೀಯತೆಯ ಮತವೊಂದನ್ನು ಹುಟ್ಟುಹಾಕುವುದರಲ್ಲಿ ಸಂಶಯವಿಲ್ಲ.

ಜೀವನ ನಿರ್ವಹಣೆಗೆ ದುಡಿಯುವ ಅನಿವಾರ್ಯ ಎಲ್ಲರಿಗೂ ಇದ್ದೇ ಇದೆ. ಯಾವಾಗ ತನ್ನ ಮನಸ್ಥಿತಿಯಲ್ಲಿ, ನಡೆ–ನುಡಿಯಲ್ಲಿ ಪಾವಿತ್ರ್ಯವನ್ನು ಕಂಡುಕೊಳ್ಳಲು ವ್ಯಕ್ತಿ ಬಯಸುತ್ತಾನೋ ವೃತ್ತಿಯಲ್ಲಿಯೂ ಅದು ಸಹಜವಾಗಿ ಪ್ರತಿಫಲಿತವಾಗುತ್ತದೆ. ಆದರ್ಶ ಸಮಾಜಕ್ಕೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಮನೆ ಈ ರೀತಿಯಲ್ಲಿ ಶ್ರದ್ಧಾಕೇಂದ್ರವಾಗುತ್ತ ತಮ್ಮೊಳಗಿನ ಪರಿವರ್ತನೆಗೆ ನಾಂದಿ ಹಾಡಿದರೆ ದೇವರೇ ಬಂದು ಅಂಥವರ ಮನೆ ಬಾಗಿಲು ಬಡಿಯುತ್ತಾನೆ. ಆದರೆ ಇದಕ್ಕೆ ಪ್ರಬಲವಾದ ಇಚ್ಛಾಶಕ್ತಿ, ಬದ್ಧತೆ ಬೇಕು.

– ಧರ್ಮಾನಂದ ಶಿರ್ವ, ಬೆಂಗಳೂರು

‘ಪಂಚಾಂಗ’ದ ಸವಾರಿ

ಮಾನವ ದೇಹದೊಳಗೆ ಹೃದಯ ಮತ್ತು ಆತ್ಮಕ್ಕೆ ಇರುವ ಸಂಬಂಧವೇ ದೇಶದ ವಿಚಾರಕ್ಕೆ ಬಂದಾಗ ಸ್ವಾತಂತ್ರ್ಯ ಮತ್ತು ಸಂವಿಧಾನದ ನಡುವೆ ಇರುತ್ತದೆ. ಸಂವಿಧಾನದ ಸಾರ್ವಭೌಮತ್ವವನ್ನು ಕಾಪಾಡುತ್ತಾ ಒಂದು ಆರೋಗ್ಯಕರವಾದ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ರೂಪಿಸಲಾಗಿದೆ. ಆದರೆ ಈ ಮೂರು ಅಂಗಗಳಿಗೂ ಹೊರತಾಗಿ, ಕಾನೂನು– ಕಟ್ಟಳೆಗಳ ವ್ಯಾಪ್ತಿಯಿಂದ ಹೊರಗಿರುವ ಇನ್ನೊಂದು ಅಂಗವು ಕೆಲವರ ನಿತ್ಯ ಬದುಕಿನಲ್ಲಿ ಸೇರ್ಪಡೆಗೊಂಡು, ಒಟ್ಟಾರೆ ಸಮಾಜವನ್ನು ಹಿಮ್ಮುಖವಾಗಿ ಎಳೆಯುತ್ತಿದೆ. ಆ ಅಂಗವೇ ‘ಪಂಚಾಂಗ’.

ಪಂಚಾಂಗವನ್ನೇ ಪಾಲಿಸುವ ಅನೇಕರು ಅದನ್ನು ಸಾರ್ವಜನಿಕವಾಗಿ ವಿಜೃಂಭಿಸಿ, ಹೊತ್ತು- ಗಳಿಗೆಗಳನ್ನು ‘ಭಕ್ತಿಗಣಿತ’ದಿಂದ ಕೂಡಿ– ಕಳೆದು ಲೆಕ್ಕ ಹಾಕಿ, ಅವುಗಳನ್ನು ಪ್ರಚಾರ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಅಂಥವರು ಈ ವೈಜ್ಞಾನಿಕ ಯುಗದಲ್ಲೂ ಯಾವುದೇ ಕೆಲಸ ಆರಂಭಿಸುವುದಕ್ಕೂ ಮುನ್ನ ಪಂಚಾಂಗದ ಮೊರೆಹೋಗುತ್ತಾರೆ.

ಕುಟುಂಬದ ಚೌಕಟ್ಟಿನೊಳಗೆ ಪಂಚಾಂಗ ಇದ್ದರೆ ಆಕ್ಷೇಪ ಇರಲಿಲ್ಲ. ಆದರೆ ಅದು ಇಂದು ಸಂವಿಧಾನದ ಆಶಯವನ್ನು ಪ್ರಶ್ನಿಸುವ ಹಂತಕ್ಕೆ ಬಂದಿದೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಸಮ್ಮಿಶ್ರ ಸರ್ಕಾರದ ಪ್ರಮಾಣವಚನ ಸ್ವಿಕಾರಕ್ಕೂ ಮುನ್ನ ನಮ್ಮ ಮುಖ್ಯಮಂತ್ರಿ ತೋರಿದ ಭಕ್ತಿ- ಭಾವ ಮತ್ತು ಶ್ರದ್ಧೆಗಳನ್ನು ನೋಡಿದರೆ ಆಡಳಿತದ ಮೇಲೆ ಪಂಚಾಂಗ ಸವಾರಿ ಮಾಡುತ್ತಿರುವಂತೆ ಗೋಚರಿಸುತ್ತಿದೆ. ಆಡಳಿತ ನಡೆಸುವ ಇತರ ಕೆಲವರೂ ಇದೇ ನೀತಿ ಅನುಸರಿಸುತ್ತಿರುವುದು ಸ್ಪಷ್ಟ. ಸರ್ಕಾರದ ಕಟ್ಟಡಗಳಲ್ಲಿ ತಮಗೆ ಕೊಟ್ಟಿರುವ ಕುರ್ಚಿಯ ದಿಕ್ಕನ್ನು ಬದಲಾಯಿಸಿರುವುದು, ವಾಸ್ತು ಪ್ರಕಾರವಾಗಿ ಕೊಠಡಿಯನ್ನು ವಿನ್ಯಾಸಗೊಳಿಸುವುದೇ ಮುಂತಾದವು ನಡೆಯುತ್ತಲೇ ಇವೆ.

ಮಹಾ ಮಾನವತಾವಾದಿಗಳು ಹಾಗೂ ವೈಚಾರಿಕತೆಯನ್ನು ಸಾರಿದ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಪೆರಿಯಾರ್‌ ಅಂಥವರನ್ನು ಕಂಡಂಥ ನಾಡು ನಮ್ಮದು. ‘ಕಾಲವನ್ನು ನಿರ್ಣಯಿಸುವ ಯಾವ ಅಗೋಚರ ಶಕ್ತಿಯೂ ಇಲ್ಲ’ ಎಂದು ಬುದ್ಧ ಹೇಳಿದ್ದರು. 12ನೇ ಶತಮಾನದಲ್ಲಿ ವೈಚಾರಿಕತೆಯ ಮೇಲೆ ಬೆಳಕು ಚೆಲ್ಲಿದ ಬಸವಣ್ಣನ ವಿಚಾರಗಳು, ಆಲೋಚನೆಗಳು ವಚನಗಳ ರೂಪದಲ್ಲಿ ಇಂದಿಗೂ ಜೀವಂತವಾಗಿವೆ.

ಆಡಳಿತ ನಡೆಸುವವರು ಸಂವಿಧಾನದ ಆಶಯವನ್ನು ಅರಿತು ‘ಪಂಚಾಂಗ’ವನ್ನು ಹೊರಗಿಟ್ಟು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಮೂಲಕವೇ ದೇಶವನ್ನು ಮುನ್ನಡೆಸಬೇಕು. ಅದು ಅವರ ಜವಾಬ್ದಾರಿ.

– ಪುನೀತ್ ಎನ್., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT