ತೂತ್ತುಕುಡಿ ದುರಂತ: ಸರ್ಕಾರ, ಕೈಗಾರಿಕೆಗಳಿಗೆ ಎಚ್ಚರಿಕೆ ಪಾಠ

7

ತೂತ್ತುಕುಡಿ ದುರಂತ: ಸರ್ಕಾರ, ಕೈಗಾರಿಕೆಗಳಿಗೆ ಎಚ್ಚರಿಕೆ ಪಾಠ

Published:
Updated:
ತೂತ್ತುಕುಡಿ ದುರಂತ: ಸರ್ಕಾರ, ಕೈಗಾರಿಕೆಗಳಿಗೆ ಎಚ್ಚರಿಕೆ ಪಾಠ

ತೂತ್ತುಕುಡಿಯಲ್ಲಿ ಇರುವ ವೇದಾಂತ ಸಮೂಹ ಒಡೆತನದ ಸ್ಟೆರ್‌ಲೈಟ್‌ ತಾಮ್ರ ಸಂಸ್ಕರಣಾ ಘಟಕವನ್ನು ಶಾಶ್ವತವಾಗಿ ಮುಚ್ಚಲು ತಮಿಳುನಾಡಿನ ರಾಜ್ಯ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ. ಘಟಕ ಮುಚ್ಚಬೇಕೆಂದು ರಾಜ್ಯದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು (ಟಿಎನ್‌ಪಿಸಿಬಿ) ನೀಡಿರುವ ನಿರ್ದೇಶನವನ್ನು ಸರ್ಕಾರ ಅನುಮೋದಿಸಿದೆ. ಸ್ಥಳೀಯರಲ್ಲಿ ಮಡುಗಟ್ಟಿದ್ದ ಆಕ್ರೋಶವು ಹಿಂಸಾಚಾರಕ್ಕೆ ತಿರುಗಿ 13 ಜನರನ್ನು ಬಲಿತೆಗೆದುಕೊಂಡ ನಂತರ ಈ ನಿರ್ಣಯಕ್ಕೆ ಬರಲಾಗಿದೆ. ಕಳೆದ 20 ವರ್ಷಗಳಿಂದಲೂ ಈ ಬಗ್ಗೆ ಜನರು ಒತ್ತಾಯಿಸುತ್ತಲೇ ಇದ್ದರು. ಆದರೆ ಎರಡನೇ ಘಟಕ ತೆರೆಯಲು ಸಂಸ್ಥೆ ಸಜ್ಜಾಗುತ್ತಿದೆ ಎಂದು ತಿಳಿದ ನಂತರ ಹೋರಾಟ ತೀವ್ರವಾಗಿತ್ತು. ಕಳೆದ ವಾರ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಯನ್ನು ನಿಯಂತ್ರಿಸುವಲ್ಲಿ ಸ್ಥಳೀಯ ಆಡಳಿತದ ವೈಫಲ್ಯ ಕಣ್ಣಿಗೆ ರಾಚುತ್ತದೆ. ಗುಂಪು ನಿಯಂತ್ರಿಸಲು ಕೊನೆಯ ಅಸ್ತ್ರವಾಗಿ ಕೈಗೊಳ್ಳುವ ಗೋಲಿಬಾರ್‌ನ ಕನಿಷ್ಠ ನಿಯಮಗಳನ್ನೂ ಪಾಲಿಸದೆ ಹಿಂಸಾನಿರತರ ಮೇಲೆ ವಾಹನದ ಮೇಲೇರಿ ಗುಂಡು ಹಾರಿಸಿರುವುದು ಪೊಲೀಸರ ಅತಿರೇಕದ ವರ್ತನೆಗೆ ಸಾಕ್ಷಿಯಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳ ಅಳವಡಿಕೆಗೆ ಉದ್ದಕ್ಕೂ ನಿರ್ಲಕ್ಷ್ಯ ತೋರುತ್ತಲೇ ಬಂದಿದ್ದ ಕಂಪನಿ ಈಗ ದೊಡ್ಡ ಬೆಲೆ ತೆತ್ತಿದೆ. ಈ ಘಟಕವು ಹೊರ ಸೂಸುತ್ತಿರುವ ವಿಷಾನಿಲವು ಸುತ್ತಲಿನ ನೆಲ, ಜಲ ಮತ್ತು ಗಾಳಿಯನ್ನು ಕಲುಷಿತಗೊಳಿಸಿದೆ. ಕ್ಯಾನ್ಸರ್ ಸೇರಿದಂತೆ ಹಲವಾರು ಗಂಭೀರ ಸ್ವರೂಪದ ಕಾಯಿಲೆಗಳು ಹೆಚ್ಚಳವಾಗಿರುವುದನ್ನು ಅಂಕಿಅಂಶಗಳು ತಿಳಿಸಿವೆ. ಅಪಾಯಕಾರಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವುದು, ನದಿ ಪಾತ್ರದಲ್ಲಿ ತ್ಯಾಜ್ಯ ಹರಿ ಬಿಟ್ಟಿರುವುದು, ಘಟಕದ ತಯಾರಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಚಿಮಣಿಯ ಎತ್ತರ ಹೆಚ್ಚಿಸದಿರುವುದು ಅದರ ಗುರುತರ ವೈಫಲ್ಯಗಳಾಗಿವೆ. ಸುತ್ತಲ ಪರಿಸರ ಹಾಗೂ ಜನಸಮುದಾಯದ ಆರೋಗ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕೈಗಾರಿಕೀಕರಣವಾಗಬೇಕು ಎಂಬಂತಹ ಗುರಿ ಸಾಧನೆಯೇ ದೊಡ್ಡ ಸವಾಲಾಗಿ ಪರಿಣಮಿಸುತ್ತಿರುವುದು ವಿಪರ್ಯಾಸ.

ಅಪಾಯಕಾರಿ ಕೈಗಾರಿಕೆಗಳನ್ನು ಅವುಗಳಿಗೆ ಮೀಸಲಾದ ವಲಯದಲ್ಲಿಯೇ ಸ್ಥಾಪಿಸಬೇಕು. ಆದರೆ, ಈ ತಾಮ್ರ ಘಟಕವನ್ನು ಸ್ಥಾಪಿಸಲಾಗಿರುವ ಸ್ಥಳವು ತೂತ್ತುಕುಡಿಯ ಅಂಗೀಕೃತ ಸಮಗ್ರ ಅಭಿವೃದ್ಧಿ ಯೋಜನೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಕಂಪನಿಯು ಸುತ್ತಮುತ್ತಲಿನ ಪ್ರದೇಶದ ಜನರ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ಮಾಡುವುದನ್ನೂ ನಿರ್ಲಕ್ಷಿಸಿದೆ. ಪರಿಸರ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ 

ಕಂಪನಿಗೆ ₹ 100 ಕೋಟಿ ದಂಡವನ್ನು ಸುಪ್ರೀಂ ಕೋರ್ಟ್‌ ವಿಧಿಸಿತ್ತು. ಆದರೆ, ಕೋರ್ಟ್‌ ನಿಗದಿಪಡಿಸಿದ ಉದ್ದೇಶಕ್ಕೆ ಈ ಮೊತ್ತದ ಸದ್ಬಳಕೆಯಾಗಿಲ್ಲ. ತೂತ್ತುಕುಡಿ ಜಿಲ್ಲಾಡಳಿತವು ಐದು ವರ್ಷಗಳಲ್ಲಿ ಕೇವಲ ₹ 7 ಕೋಟಿಗಳನ್ನಷ್ಟೇ ವೆಚ್ಚ ಮಾಡಿರುವುದು ಅಧಿಕಾರಶಾಹಿಯ ಅದಕ್ಷತೆಗೆ ನಿದರ್ಶನ. ಘಟಕ ಹೊರಸೂಸುವ ವಿಷಾನಿಲಗಳಿಂದ ಜನರ ಆರೋಗ್ಯ ಹಾಳಾಗುತ್ತಿದೆ ಎಂಬ ಕೂಗು ವ್ಯಾಪಕವಾಗಿದ್ದರೂ ಸ್ಟೆರ್‌ಲೈಟ್ ತನ್ನ ಘಟಕವನ್ನು ವಿಸ್ತರಿಸಲು ಮುಂದಾಗಿದ್ದು ಸರಿಯಲ್ಲ. ಈ ಬೆಳವಣಿಗೆ ವಿರುದ್ಧದ ಪ್ರತಿಭಟನೆ ನೂರು ದಿನಕ್ಕೆ ಕಾಲಿಟ್ಟಾಗಲೂ ಎಚ್ಚೆತ್ತುಕೊಳ್ಳದ ಸರ್ಕಾರ, ಪ್ರತಿಭಟನೆಯನ್ನು ನಿರ್ವಹಿಸುವಲ್ಲಿ ಎಡವಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಹ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದರೆ ಪರಿಸ್ಥಿತಿ ಈ ಮಟ್ಟಿಗೆ ವಿಷಮಗೊಳ್ಳುತ್ತಿರಲಿಲ್ಲ.  ಘಟಕವನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರವು ಬಂಡವಾಳ ಹೂಡಿಕೆದಾರರಿಗೆ ತಪ್ಪು ಸಂದೇಶ ನೀಡಲಿದೆ. ಆದರೆ, ಪರಿಸರ ಹಾನಿ ಬಗ್ಗೆ ಜನರಲ್ಲೂ ಜಾಗೃತಿ ಮೂಡುತ್ತಿದೆ. ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದುದು ಮುಖ್ಯ ಎಂಬ ಪ್ರಜ್ಞೆಯೂ ಇರಬೇಕು. ಜನರ ಭೀತಿ ಹಾಗೂ ಕಾಳಜಿಗಳಿಗೆ ಸ್ಪಂದಿಸಬೇಕಾದುದೂ ಅಗತ್ಯ. 1984ರ ಭೋಪಾಲ್ ಅನಿಲ ದುರಂತದ ನಂತರವೂ ಅಪಾಯಕಾರಿ ಕೈಗಾರಿಕೆಗಳನ್ನು ಸ್ಥಾಪಿಸುವ ಸ್ಥಳದ ಬಗ್ಗೆ ಈಗಲೂ ಸರಿಯಾದ ಗಮನ ನೀಡುತ್ತಿಲ್ಲ ಎಂದರೆ ಅದು ಅಕ್ಷಮ್ಯ. ಆದರೆ ಈಗ, ಜನ ಪ್ರತಿರೋಧ ತೋರುತ್ತಾರೆ ಎಂಬುದು ಸರ್ಕಾರಕ್ಕೆ ಗೊತ್ತಿರಬೇಕು. ಹೀಗಾಗಿ ಪರಿಸರ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದುದು ಅನಿವಾರ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry