ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಢಚರ್ಯೆ ಲೋಕದ ಅಪರೂಪದ ಅದೃಶ್ಯಗಾಥೆ

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಇತಿಹಾಸದ ಕಾಲಚಕ್ರದಲ್ಲಿ ಹಲವು ಮಹಿಳೆಯರ ಕಥಾನಕಗಳು ಹಾಗೆಯೇ ಹೂತುಹೋಗಿಬಿಡುತ್ತವೆ. ಇತಿಹಾಸದ ಪ್ರಧಾನಧಾರೆಯಲ್ಲಿ ಅಂಚಿನಲ್ಲೇ ಉಳಿದುಬಿಡುತ್ತಾಳೆ ಆಕೆ. ಆದರೆ ಆತನಷ್ಟೇ ಅಲ್ಲ ಆಕೆಯನ್ನೂ ಒಳಗೊಂಡ ಇತಿಹಾಸವನ್ನು ಎಲ್ಲಾ ಕ್ಷೇತ್ರಗಳಲ್ಲೂ ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಡುವ ಪ್ರಯತ್ನಗಳು ಈಗ ಅಲ್ಲಲ್ಲಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ರಹಸ್ಯವಾಗಿಯೇ ಕಾರ್ಯಾಚರಣೆ ನಡೆಸಬೇಕಾದಂತಹ ಬೇಹುಗಾರಿಕೆ ಜಗತ್ತಿನಲ್ಲಿನ ಮಹಿಳೆಯರ ಅಸಾಧಾರಣ ಸಾಹಸ ಕಥಾನಕಗಳು ಹೊರಜಗತ್ತಿಗೆ ತಿಳಿಯದೆ ಹಾಗೆಯೇ ಕಾಲದೊಂದಿಗೆ ಕಳೆದೇ ಹೋಗುತ್ತವೆ. ಎಲ್ಲೋ ಕೆಲವು ಬೆಳಕು ಕಾಣುತ್ತವೆ. ಅಪಾಯಕಾರಿ ಸಂದರ್ಭಗಳನ್ನು ಚಾಕಚಕ್ಯತೆಯಿಂದ ನಿವಾರಿಸಿಕೊಳ್ಳುತ್ತಾ ರಾಷ್ಟ್ರದ ಭದ್ರತೆಗಾಗಿ ವೈಯಕ್ತಿಕ ಬದುಕಿನ ತ್ಯಾಗಕ್ಕೂ ಸಿದ್ಧರಾಗುವ ಗೂಢಚಾರಿಣಿಯರ ಸಾಧನೆಗಳು ಸ್ಮರಣೀಯ. ಸುಭಾಷ್ ಚಂದ್ರ ಬೋಸರ ಐಎನ್‍ಎನಲ್ಲಿ ಕಾರ್ಯ ನಿರ್ವಹಿಸಿದ ಸರಸ್ವತಿ ರಾಜಮಣಿಯವರು ಬ್ರಿಟಿಷ್ ಸೇನಾ ಶಿಬಿರಗಳಲ್ಲಿ ಬೇಹುಗಾರಿಕೆ ಕಾರ್ಯ ನಡೆಸಿ ಅಸಾಧಾರಣ ಸಾಹಸ ಮೆರೆದಿದ್ದರು. ಎಲ್ಲಾ ಗೂಢಚರ್ಯೆ ಕಾರ್ಯಾಚರಣೆಗಳು ಯಶಸ್ವಿಯಾಗುವುದೂ ಇಲ್ಲ. ಕೆಲವು ಕಾರ್ಯಾಚರಣೆಗಳು ಭಯಾನಕ ಅಂತ್ಯ ಕಾಣುತ್ತವೆ. ಎರಡನೇ ಮಹಾಯುದ್ಧ ಕಾಲದಲ್ಲಿ ಬ್ರಿಟನ್ ಪರ ಗೂಢಚರ್ಯೆ ಕಾರ್ಯ ನಿರ್ವಹಿಸುತ್ತಿದ್ದಾಗ ನಾಜಿಗಳಿಂದ ಕ್ರೂರ ಹಿಂಸೆಗೊಳಗಾಗಿ ಪ್ರಾಣ ತೆತ್ತವರು ಟಿಪ್ಪು ಸುಲ್ತಾನ್ ವಂಶಸ್ಥೆಯಾದ ನೂರ್ ಇನಾಯತ್ ಖಾನ್. ಆ ಕಾಲದಲ್ಲಿ ರಹಸ್ಯ ಕಾರ್ಯಾಚರಣೆಗಳನ್ನು ನಡೆಸುವ ಬ್ರಿಟಿಷ್ ಸಂಸ್ಥೆಯಾಗಿದ್ದ ಸ್ಪೆಷಲ್ ಆಪರೇಷನ್ಸ್ ಎಕ್ಸಿಕ್ಯುಟಿವ್ (ಎಸ್ಓಇ) ಏಜೆಂಟ್ ಆಗಿದ್ದ ನೂರ್ ಮೊದಲ ಮಹಿಳಾ ವೈರ್‍ಲೆಸ್ ಆಪರೇಟರ್‍ ಆಗಿ ಫ್ರೆಂಚರಿಗೆ ನೆರವಾಗಲು ನಾಜಿ ಆಕ್ರಮಿತ ಫ್ರಾನ್ಸ್‌ಗೆ ನಿಯೋಜಿತಗೊಂಡಿದ್ದರು. ಯುದ್ಧರಂಗದಲ್ಲಿ ಕಾರ್ಯನಿರ್ವಹಿಸಿದ ಬ್ರಿಟನ್‍ನ ಮೊದಲ ಮುಸ್ಲಿಂ ಧೀರೆ ಈಕೆ. ಈಕೆಯ ತಂದೆ ಭಾರತ ಮೂಲದ ಸೂಫಿ ಮತ ಪ್ರಚಾರಕ ಹಾಗೂ ಸಂಗೀತಗಾರ ಹಜರತ್‌ ಇನಾಯತ್‌ಖಾನ್‌. ಅಮ್ಮ ಅಮೆರಿಕ ಮೂಲದವರು. 2014ರಲ್ಲಿ ನೂರ್ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಅವರ ಗೌರವಾರ್ಥ ಬ್ರಿಟನ್‌ನ ರಾಯಲ್‌ ಮೇಲ್‌ ಅಂಚೆಚೀಟಿ ಹೊರತಂದಿತ್ತು. ಈಗ ನೂರ್ ಕುರಿತಂತೆ ಅಂತರರಾಷ್ಟ್ರೀಯ ಸಿನಿಮಾ ನಿರ್ಮಾಣದ ಸಿದ್ಧತೆ ನಡೆದಿದೆ. ಈ ಸಿನಿಮಾದಲ್ಲಿ ನೂರ್ ಇನಾಯತ್ ಖಾನ್‍ ಪಾತ್ರವನ್ನು ತಾವು ನಿರ್ವಹಿಸುತ್ತಿರುವುದಾಗಿ ರಾಧಿಕಾ ಆಪ್ಟೆ ಹೇಳಿಕೊಂಡಿದ್ದಾರೆ. ಋತುಚಕ್ರದ ಸ್ವಚ್ಛತೆಯ ಪಾಠ ಹೇಳುವ ‘ಪ್ಯಾಡ್ ಮ್ಯಾನ್’ ಚಿತ್ರದಲ್ಲಿ ನಟ ಅಕ್ಷಯ್‌ಕುಮಾರ್‌ನ ಮುಗ್ಧಪತ್ನಿಯಾಗಿ ನಟಿಸಿದ್ದ ರಾಧಿಕಾ ಈಗ ನೂರ್ ಪಾತ್ರನಿರ್ವಹಣೆಯ ಸಿದ್ಧತೆಯಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ಕಾ‍ಶ್ಮೀರದ ಮುಸ್ಲಿಂ ಯುವತಿಯೊಬ್ಬಳು ಪಾಕಿಸ್ತಾನದಲ್ಲಿ ಭಾರತದ ಪರವಾಗಿ ಗೂಢಚಾರಿಣಿಯಾಗಿ ಕಾರ್ಯನಿರ್ವಹಿಸುವ ಕಥಾ ಹಂದರ ಹೊಂದಿರುವ ಮೇಘನಾ ಗುಲ್ಜಾರ್ ನಿರ್ದೇಶನದ ‘ರಾಝಿ’ ಸಿನಿಮಾ ತೆರೆ ಕಂಡು ಕಳೆದ ಮೂರು ವಾರಗಳಲ್ಲಿ ₹100 ಕೋಟಿಗೂ ಹೆಚ್ಚು ಗಳಿಸಿದೆ. ಈ ಚಿತ್ರಕ್ಕೆ ಪ್ರೇರಕವಾದದ್ದು ಹರಿಂದರ್ ಸಿಕ್ಕಾ ಅವರ ‘ಕಾಲಿಂಗ್ ಸೆಹಮತ್’ ಎಂಬ ಕಾದಂಬರಿ. ಈ ಕಾದಂಬರಿ ನಿಜಜೀವನ ಆಧರಿತವಾದದ್ದು ಎಂದು ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದು ನಿವೃತ್ತಿ ಪಡೆದಿರುವ ಹರಿಂದರ್ (ಈಗ ಪಿರಮಲ್‌ ಕಂಪನಿಯ ಸ್ಟ್ರಾಟೆಜಿಕ್ ಬಿಸಿನೆಸ್ ಗ್ರೂಪ್ ನಿರ್ದೇಶಕ) ಹೇಳುತ್ತಾರೆ. ಹೀಗಾಗಿಯೇ ಇದಕ್ಕೆ ಹೆಚ್ಚಿನ ಮೌಲಿಕತೆ ಇದೆ.

ಈ ನಿಜಜೀವನದ ಕಥೆ ಹರಿಂದರ್ ಸಿಕ್ಕಾ ಅವರಿಗೆ ಸಿಕ್ಕಿದ್ದೇ ಅಚಾನಕ. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅವರು ಕಾರ್ಗಿಲ್‌ಗೆ ತೆರಳಿದ್ದರು. ಗೂಢಚರ್ಯೆ ವೈಫಲ್ಯದ ಬಗ್ಗೆ ಪತ್ರಿಕೆಗಳಿಗೆ ಬರೆಯುವುದು ಅವರ ಉದ್ದೇಶವಾಗಿತ್ತು. ಗೂಢಚರ್ಯೆ ಇಲಾಖೆಯ ದೇಶಪ್ರೇಮವನ್ನು ಆಗ ಅವರು ಪ್ರಶ್ನಿಸಿದ್ದರು. ಅಂತಹದೊಂದು ಚರ್ಚೆಯಲ್ಲಿ ‘ಎಲ್ಲರೂ ಹಾಗೆ ಇರುವುದಿಲ್ಲ’ ಎಂದಿದ್ದ ಒಬ್ಬ ಸೇನಾ ಅಧಿಕಾರಿ ತನ್ನ ತಾಯಿಯ ಉದಾಹರಣೆ ನೀಡಿದ್ದ. ‘ಅದು ನನಗೆ ಅಚ್ಚರಿ ತಂದಿತ್ತು’ ಎಂದು ಅನೇಕ ಮಾಧ್ಯಮ ಸಂದರ್ಶನಗಳಲ್ಲಿ ಸಿಕ್ಕಾ ಹೇಳಿಕೊಂಡಿದ್ದಾರೆ. 1971ರ ಯುದ್ಧದ ಸಂದರ್ಭದಲ್ಲಿ ಭಾರತಕ್ಕೆ ರಹಸ್ಯ ಮಾಹಿತಿಗಳನ್ನು ರವಾನಿಸುವುದಕ್ಕಾಗಿಯೇ ಆಕೆ ಪಾಕಿಸ್ತಾನಿ ಸೇನಾ ಅಧಿಕಾರಿಯನ್ನು ವಿವಾಹವಾಗಿದ್ದರು. ಆಕೆ ಕಾಶ್ಮೀರಿ ಮುಸ್ಲಿಂ. ‘ಪಾಕಿಸ್ತಾನಿ ಪತಿಯ ಮಗುವನ್ನು ಬಸಿರಲ್ಲಿ ಹೊತ್ತು ಭಾರತಕ್ಕೆ ಮರಳಿದ ಈ ಗೂಢಚಾರಿಣಿಯ ಸಾಹಸದ ಬಗ್ಗೆಯೇ ಪದೇಪದೇ ಯೋಚಿಸುತ್ತಿದ್ದೆ. ಆ ಮಗುವೇ ನಾನು ಭೇಟಿ ಮಾಡಿದ ಆ ಭಾರತೀಯ ಸೇನಾಧಿಕಾರಿ. ಈಗ ಆ ಅಧಿಕಾರಿಯೂ ಭಾರತೀಯ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಸಿಕ್ಕಾ ಹೇಳಿದ್ದಾರೆ. ಬಹಳ ಪ್ರಯತ್ನಗಳ ನಂತರ, ಪಂಜಾಬ್‍ನ ಮಾಲೆರ್ ಕೋಟ್ಲಾದಲ್ಲಿ ಆಕೆಯ ಮನೆಯಲ್ಲಿ ಸೆಹಮತ್‍ರನ್ನು (ಕಾಲ್ಪನಿಕ ಹೆಸರು) ಸಿಕ್ಕಾ ಭೇಟಿಯಾಗುತ್ತಾರೆ. ‘ಅನೇಕ ಸಲ ಆಕೆಯ ಮನೆ ಬಾಗಿಲಿಗೆ ಹೋಗಿ ನನ್ನ ಜೊತೆ ಮಾತನಾಡಬೇಕೆಂದು ಕೇಳಿಕೊಳ್ಳುತ್ತಿದ್ದೆ. ಆದರೆ ಅವರಿಗೆ ಯಾವುದೇ ಪ್ರಚಾರ ಬೇಕಿರಲಿಲ್ಲ. ಜೊತೆಗೆ ತಮ್ಮ ಬಗ್ಗೆ ಬರೆಯುವುದೂ ಅವರಿಗೆ ಬೇಕಿರಲಿಲ್ಲ. ಮನ ಒಲಿಕೆಗೆ ಬಹಳ ಪ್ರಯತ್ನಪಟ್ಟ ನಂತರ ಕಡೆಗೆ ನನ್ನ ಜೊತೆ ಮಾತನಾಡಲು ಅವರು ಒಪ್ಪಿಕೊಂಡರು’ ಎಂದು ತಮ್ಮ ಅನುಭವಗಳನ್ನು ಸಿಕ್ಕಾ ಹಂಚಿಕೊಂಡಿದ್ದಾರೆ. ಅನಾಮಿಕತೆ ಕಾಪಾಡುತ್ತಲೇ ಆಕೆಯ ಅಸಾಧಾರಣ ಬದುಕನ್ನು ಜನರೊಂದಿಗೆ ಹಂಚಿಕೊಳ್ಳುವುದಕ್ಕಾಗಿ ಆಕೆಗೆ ಅವರು ಸೆಹಮತ್ ಖಾನ್ ಎಂಬ ಹೆಸರು ನೀಡಿದರು.

ಅಷ್ಟೊಂದು ರಹಸ್ಯ ಮಾಹಿತಿಗಳನ್ನು ಸೆಹಮತ್ ಹೇಗೆ ಸಂಗ್ರಹಿಸಲು ಸಫಲರಾದರು ಎಂಬುದೇ ಅಚ್ಚರಿಯ ಸಂಗತಿ. ಅವರು ಜನರಲ್ ಯಾಹ್ಯಾ ಖಾನ್ ಅವರ ಮೊಮ್ಮಕ್ಕಳಿಗೂ ಪಾಠ ಹೇಳುತ್ತಿದ್ದರು. ಭಾರತೀಯ ಸೇನೆಗೆ ಸೆಹಮತ್ ನೀಡಿದ ಬಹುಮುಖ್ಯ ಮಾಹಿತಿ ಎಂದರೆ, ಐಎನ್ಎಸ್ ವಿಕ್ರಾಂತ್ ಅನ್ನು ಮುಳುಗಿಸುವ ಪಾಕಿಸ್ತಾನದ ಯೋಜನೆ. ಭಾರತೀಯ ನೌಕಾಪಡೆಯ ಹೆಮ್ಮೆಯ ಸಂಕೇತವಾಗಿದ್ದ ಈ ಹಡಗನ್ನು 1971ರ ಯುದ್ಧ ಸಂದರ್ಭದಲ್ಲಿ ಕಾಪಾಡಿಕೊಳ್ಳಲು ಸಾಧ್ಯವಾದದ್ದು ಆಕೆಯಿಂದ ಎಂಬುದನ್ನು ಮರೆಯಲಾಗದು. ಅವರ ಅನುಭವದ ಎಳೆಗಳನ್ನು ಹೆಣೆದು ಕಾಲ್ಪನಿಕ ಸ್ಪರ್ಶವನ್ನೂ ನೀಡಿ ಕಾದಂಬರಿಯಾಗಿಸಲು ತಮಗೆ ಎಂಟು ವರ್ಷಗಳು ಹಿಡಿದವು ಎಂದು ಲೇಖಕ ಹೇಳಿಕೊಂಡಿದ್ದಾರೆ. ಈ ಅನುಭವಗಳನ್ನು ಕಥೆಯ ರೂಪದಲ್ಲಿ ಹೇಳುವುದು ಅಗತ್ಯವಾಗಿತ್ತು. ಇಲ್ಲದಿದ್ದಲ್ಲಿ ಅವರ ಕುಟುಂಬಕ್ಕೆ ಅದು ಅಪಾಯಕಾರಿಯಾಗಿರುತ್ತಿತ್ತು. ಸೆಹಮತ್ ಈಗ ಬದುಕಿಲ್ಲ. 2008ರಲ್ಲಿ ಈ ಪುಸ್ತಕವನ್ನು ಮೊದಲು ‘ಕೊನಾರಕ್ ಪಬ್ಲಿಷರ್ಸ್’ ಪ್ರಕಟಿಸಿತ್ತು. ಮುಂಬೈ ನೌಕಾನೆಲೆಯಲ್ಲಿ ಸ್ಮಾರಕವಾಗಿ ನಿಂತಿರುವ ಐಎನ್‌ಎಸ್‌ ವಿಕ್ರಾಂತ್‌ನಲ್ಲೇ ಸೆಹಮತ್‌ಳ ಗೌರವಾರ್ಥ ಈ ಪುಸ್ತಕವನ್ನು ಆಗ ಬಿಡುಗಡೆ ಮಾಡಿದವರು ನೌಕಾಪಡೆಯ ಅಂದಿನ ಮುಖ್ಯಸ್ಥ ಅಡ್ಮಿರಲ್ ಎಸ್ ಮೆಹ್ತಾ. ಈಗ ಈ ವರ್ಷ ಇದೇ ಕೃತಿಯನ್ನು ಪೆಂಗ್ವಿನ್ ಮರು ಪ್ರಕಟಿಸಿದೆ.

‘ವತನ್ ಕೇ ಆಗೆ ಕುಛ್ ನಹೀ, ಖುದ್ ಭಿ ನಹೀ’ (ರಾಷ್ಟ್ರದ ಮುಂದೆ ಏನೂ ಇಲ್ಲ, ನೀವೂ ಇಲ್ಲ...) ಎಂಬುದು ಈ ಪುಸ್ತಕವನ್ನಾಧರಿಸಿದ ‘ರಾಝಿ’ ಸಿನಿಮಾದ ಮುಖ್ಯ ತತ್ವ. ಶ್ರೀಮಂತ ಕಾಶ್ಮೀರಿ ಉದ್ಯಮಿಯ ಪುತ್ರಿ ಸೆಹಮತ್ (ಆಲಿಯಾ ಭಟ್). ಉದ್ಯಮದ ಜೊತೆಜೊತೆಗೇ ಪಾಕಿಸ್ತಾನಲ್ಲಿ ಭಾರತದ ಪರವಾಗಿ ಬೇಹುಗಾರಿಕೆ ನಡೆಸಿಕೊಂಡು ಬಂದವರು ತಂದೆ. ಆರೋಗ್ಯ ಹದಗೆಟ್ಟು ಸಾವಿನ ಸನಿಹಕ್ಕೆ ಬಂದ ತಂದೆಯ ಇಚ್ಛೆಯಂತೆ ಕುಟುಂಬದ ಸಂಪ್ರದಾಯ ಮುಂದುವರಿಸಿ ಗೂಢಚಾರಿಣಿಯಾಗಲು ಸೆಹಮತ್ ಒಪ್ಪಿಕೊಳ್ಳತ್ತಾಳೆ. ಕಾಲೇಜಿನಲ್ಲಿ ಓದುತ್ತಿದ್ದವಳು ಗೂಢಚಾರಿಕೆಗೆ ಕಠಿಣ ತರಬೇತಿ ಪಡೆದುಕೊಳ್ಳುತ್ತಾಳೆ. ನಂತರ ಪಾಕಿಸ್ತಾನಿ ಬ್ರಿಗೇಡಿಯರ್ ಕುಟುಂಬಕ್ಕೆ ವಿವಾಹವಾಗುತ್ತಾಳೆ. ಬಾಂಗ್ಲಾದೇಶ ಸೃಷ್ಟಿಯಾಗುತ್ತಿದ್ದ ಆ ಸಂದರ್ಭದಲ್ಲಿ ಭಾರತ– ಪಾಕಿಸ್ತಾನ ಮಧ್ಯದ ಯುದ್ಧ ಅನಿವಾರ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ತನ್ನ ದೇಹ, ಸುರಕ್ಷತೆ ಹಾಗೂ ಬದುಕನ್ನೇ ರಾಷ್ಟ್ರಕ್ಕಾಗಿ ಅರ್ಪಿಸಿಕೊಳ್ಳುತ್ತಾಳೆ. ಸಿನಿಮಾದ ಘಟನಾವಳಿಗಳು ನಡೆಯುವುದು ಪಾಕಿಸ್ತಾನದಲ್ಲಿ. ಸೇನಾ ಅಧಿಕಾರಿಗಳೇ ತುಂಬಿರುವ ಕುಟುಂಬದಲ್ಲಿ ಎಲ್ಲರೂ ಭಾರತ ವಿರೋಧಿಗಳು. ಆದರೆ ತೀವ್ರ ದೇಶಭಕ್ತಿಯ ನಡುವೆ ಪ್ರೀತಿ, ಕಾರುಣ್ಯದ ಎಳೆಗಳಿಗೆ ಇಲ್ಲಿ ಕೊರತೆ ಇಲ್ಲ. ತನ್ನ ದೇಶಭಕ್ತಿಗೆ ಅಂಟಿಕೊಂಡೂ ಪತ್ನಿಯ ದೇಶಭಕ್ತಿಯನ್ನು ಗೌರವಿಸುತ್ತಾ ಆಕೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಂತಹ ಸಭ್ಯ ವ್ಯಕ್ತಿ ಸೆಹಮತ್‌ಳ ಪತಿ. ಪತಿಯ ಮನೆಯವರೆಲ್ಲಾ ಆಕೆಯನ್ನು ಪ್ರೀತಿ, ಗೌರವ ಹಾಗೂ ವಿಶ್ವಾಸದಿಂದಲೇ ಕಾಣುತ್ತಾರೆ. ಸಭ್ಯ ಮಾನವರಾಗಿರಲು ಅವರ ರಾಷ್ಟ್ರೀಯತೆಯ ಪ್ರಜ್ಞೆ ಅಡ್ಡಿಯಾಗಿಲ್ಲದಿರುವುದು ಇಲ್ಲಿ ವ್ಯಕ್ತ. ಸುಳ್ಳು ಹೇಳುತ್ತಾ ವಂಚಿಸುತ್ತಾ ಸಾಗುವ ಸೆಹಮತ್‌ಳೇ ಇಲ್ಲಿ ದೇಶಭಕ್ತಿಯ ಕಲ್ಪಿತ ವಿಚಾರಕ್ಕೆ ಪ್ರತಿ ಸಂಬಂಧವನ್ನೂ ಒತ್ತೆ ಇಡುತ್ತಾಳೆ. ಈ ಸಂಘರ್ಷದಲ್ಲಿ ಹೃದಯಹೀನ ಸೈನಿಕಳಾಗುತ್ತಾಳೆ ಆಕೆ. ತನ್ನ ರಾಷ್ಟ್ರದ ಕಣ್ಣು, ಕಿವಿಯಾಗಿ ಶತ್ರುವಿನ ಮನೆಯಲ್ಲಿ ಇರುವ ಸ್ಥಿತಿ ಆಕೆಯದು. ಪಾಕಿಸ್ತಾನದ ಮಿಲಿಟರಿ ಜೊತೆ ಹತ್ತಿರವಾಗಲು ತನ್ನದೇ ವಿಧಾನಗಳನ್ನು ಸೃಷ್ಟಿಸಿಕೊಳ್ಳುತ್ತಾಳೆ. ಶತ್ರುವಿನ ನೆಲೆಗಳು, ಸೈನಿಕರ ಜಮಾವಣೆ, ಆಕ್ರಮಣ ಸಾಧ್ಯತೆಗಳ ನಕ್ಷೆಯ ಬಗ್ಗೆ ಮಾಹಿತಿ ನೀಡುತ್ತಾ ಭಾರತೀಯ ಸೈನಿಕರ ಜೀವ ಉಳಿಸಲು ಸೆಹಮತ್ ನೀಡಿದ ಮಾಹಿತಿಗಳು ಅನನ್ಯ. ಪುರುಷರಿಗಿಂತ ಹೆಚ್ಚಿನದನ್ನು ಸಾಧಿಸುವ ಸಾಮರ್ಥ್ಯವನ್ನು ಸೆಹಮತ್ ಪ್ರದರ್ಶಿಸುತ್ತಾಳೆ. ಆದರೆ, ಪ್ರತಿ ಬಾರಿ ರಹಸ್ಯ ದಾಖಲೆಯನ್ನು ಡಿಕೋಡ್ ಮಾಡಿ ಅಪಾಯಗಳನ್ನು ಎದುರಿಸಿ ಮಹತ್ವದ ಮಾಹಿತಿಯನ್ನು ಭಾರತಕ್ಕೆ ಕಳುಹಿಸಿದಾಗ ಅಥವಾ ಈ ಪ್ರಕ್ರಿಯೆಯಲ್ಲಿ ಪತಿಯ ಕುಟುಂಬದವರ ಮೇಲೆ ಕ್ರೂರ ಕಾರ್ಯಾಚರಣೆ ನಡೆಸಿದಾಗ, ಗುರಿ ಸಾಧಿಸಿದ ಸಂಭ್ರಮ ಅಲ್ಲಿರುವುದಿಲ್ಲ. ರಾಷ್ಟ್ರಭಕ್ತಿಗಾಗಿ ತಾನು ಮಾಡುವ ಕೆಲಸದಿಂದ ಸೆಹಮತ್ ಅನುಭವಿಸುವ ಭಾವನಾತ್ಮಕ ಸಂಘರ್ಷದ ಚಿತ್ರಣವೂ ಚಿತ್ರದಲ್ಲಿ ಪರಿಣಾಮಕಾರಿಯಾಗಿದೆ.

ಎದೆಬಡಿದುಕೊಳ್ಳುತ್ತಾ ರಾಷ್ಟ್ರಭಕ್ತಿಯ ತೀವ್ರವಾದವನ್ನು ಎತ್ತಿಹಿಡಿಯುವ ಕಾಲ ಇದು. ರಾಷ್ಟ್ರಪ್ರೇಮದ ಹೆಸರಲ್ಲಿ ಶಿಕ್ಷಾ ಭಯವಿಲ್ಲದೆ ಅಪರಾಧ ಎಸಗಬಹುದಾದ ಸ್ಥಿತಿ ಇರುವ ಸಂದರ್ಭದಲ್ಲಿ ರಾಷ್ಟ್ರಭಕ್ತಿಯ ಸೂಕ್ಷ್ಮ ಆಯಾಮಗಳನ್ನು ‘ರಾಝಿ’ ಕಟ್ಟಿಕೊಡುತ್ತದೆ. ಹಾಗೆಯೇ ನಮ್ಮ ರಾಷ್ಟ್ರವನ್ನು ಸುರಕ್ಷಿತವಾಗಿ ಇಡಲು ದೊಡ್ಡ ಪಾತ್ರ ವಹಿಸಿದ ಸೆಹಮತ್‌ಳಂತಹವರ ತ್ಯಾಗವನ್ನೂ ‘ರಾಝಿ’ ನಿರೂಪಿಸುತ್ತದೆ. ಕಡೆಗೆ ಸೆಹಮತ್ ಎಲ್ಲವನ್ನೂ ಕಳೆದುಕೊಂಡಿರುತ್ತಾಳೆ. ಆದರೆ ಯಾರನ್ನೂ ದೂಷಿಸುವಂತಿಲ್ಲ. ರಾಷ್ಟ್ರ ರಕ್ಷಿಸಲು ತೊಡಗಿಕೊಳ್ಳುವ ಬೇಹುಗಾರಿಕೆಯಲ್ಲಿ ಆಕೆಯ ಸ್ವಂತ ಬದುಕು ಛಿದ್ರವಾಗಿರುತ್ತದೆ. ಯುದ್ಧದ ಸಂಕೀರ್ಣತೆಗಳನ್ನು ಅನಾವರಣಗೊಳಿಸುತ್ತಲೇ ಯುದ್ಧವನ್ನು ವೈಭವೀಕರಿಸುವಂತಹ ಚಿಂತನೆಯ ಚೌಕಟ್ಟಿನಿಂದ ಹೊರಬಂದಿರುವುದು ಈ ಚಿತ್ರದ ಯಶಸ್ಸು. ಯುದ್ಧಗಳ ನಿರರ್ಥಕತೆ ಹಾಗೂ ಅದು ಸೃಷ್ಟಿಸುವ ಮತಿಹೀನ ವಿನಾಶಗಳೂ ಸೂಕ್ಷ್ಮವಾಗಿ ಬಿಂಬಿತವಾಗಿವೆ.

ಪುಸ್ತಕದ ವಿವರಗಳ ಪ್ರಕಾರ, ಸೆಹಮತ್ ಜಾತ್ಯತೀತತೆಯ ದೊಡ್ಡ ಸಂಕೇತ. ಸೆಹಮತ್ ತಂದೆ ಕಾಶ್ಮೀರಿ ಮುಸ್ಲಿಂ ಆಗಿದ್ದರೆ ತಾಯಿ ದೆಹಲಿ ಮೂಲದ ಪಂಜಾಬಿ ಹಿಂದೂ. ಉದಾರ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಆಕೆ ಜೀಸಸ್, ಅಲ್ಲಾ, ಕೃಷ್ಣ ಹಾಗೂ ಸಿಖ್ ಗುರುವನ್ನು ಪ್ರಾರ್ಥಿಸುವಾಕೆ. ಧರ್ಮ ಮುಖ್ಯವಲ್ಲ. ನಂಬಿಕೆ, ಶ್ರದ್ಧೆ ಹಾಗೂ ಸೇವೆ ಮುಖ್ಯ ಎಂಬುದನ್ನು ಪುಸ್ತಕ ಪ್ರತಿಪಾದಿಸುತ್ತದೆ. ಆಕೆ ಕಡೆಯಲ್ಲಿ ಮಾಲೆರ್ ಕೋಟ್ಲಾದಲ್ಲಿ ನೆಲೆಸಿದ ಮನೆ ಬರೀ ಕಲ್ಲಿನ ಕಟ್ಟಡವಾಗಿರದೆ ಶಾಂತಿಯ ಸಂಕೇತವಾಗಿತ್ತು ಎಂದು ಪುಸ್ತಕ ವಿವರಿಸುತ್ತದೆ.

ಈ ಮಧ್ಯೆಯೇ ಉಪಖಂಡದ ರಾಜಕಾರಣವನ್ನು ಇಬ್ಬರು ನುರಿತ ಬೇಹುಗಾರಿಕಾ ತಜ್ಞರ ಕಣ್ಣಲ್ಲಿ ನೋಡುವ ಪುಸ್ತಕ ಪ್ರಕಟವಾಗಿದೆ. ಭಾರತದ ರಿಸರ್ಚ್‌ ಅಂಡ್ ಅನಾಲಿಸಿಸ್‌ (ಆರ್‌ಎಡಬ್ಲ್ಯು) ಮುಖ್ಯಸ್ಥರಾಗಿದ್ದ ಎ.ಎಸ್‌. ದುಲತ್‌ ಮತ್ತು ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆ ಐಎಸ್‌ಐ ಮುಖ್ಯಸ್ಥರಾಗಿದ್ದ ಅಸದ್‌ ದುರಾನಿ ಮಧ್ಯದ ಸಂವಾದವನ್ನು ‘ಸ್ಪೈ ಕ್ರೋನಿಕಲ್ಸ್ – ಆರ್‌ಎಡಬ್ಲ್ಯು, ಐಎಎಸ್ ಅಂಡ್ ದಿ ಇಲ್ಯೂಷನ್ ಆಫ್ ಪೀಸ್’ ಪುಸ್ತಕದಲ್ಲಿ ಪತ್ರಕರ್ತ ಆದಿತ್ಯ ಸಿನ್ಹಾ ಕಟ್ಟಿಕೊಟ್ಟಿದ್ದಾರೆ. ಇದಕ್ಕಾಗಿ ದುರಾನಿ ಅವರು ಈಗ ಪಾಕಿಸ್ತಾನ ಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದುರಾನಿ ಅವರಿಂದ ವಿವರಣೆ ಕೇಳಲಾಗಿದೆ. ಎರಡೂ ರಾಷ್ಟ್ರಗಳ ಮಧ್ಯೆ ಶಾಂತಿ ಮರೀಚಿಕೆಯಾಗಿದೆಯೇ ಎಂಬುದನ್ನು ಇಂತಹ ಬೆಳವಣಿಗೆಗಳು ನೆನಪಿಸುತ್ತಲೇ ಇರುವುದು ಅಸಂಗತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT