ಸೂಚ್ಯಂಕ 216 ಅಂಶ ಕುಸಿತ

7

ಸೂಚ್ಯಂಕ 216 ಅಂಶ ಕುಸಿತ

Published:
Updated:
ಸೂಚ್ಯಂಕ 216 ಅಂಶ ಕುಸಿತ

ಮುಂಬೈ: ಸತತ ಮೂರು ದಿನಗಳ ಏರಿಕೆ ನಂತರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 216 ಅಂಶಗಳ ಕುಸಿತ ದಾಖಲಿಸಿತು.

ವಿದೇಶಿ ಬಂಡವಾಳದ ಹೊರ ಹರಿವು, ಜಾಗತಿಕ ಷೇರುಪೇಟೆಗಳಲ್ಲಿ ಕಂಡು ಬಂದ ಕುಸಿತದ ಕಾರಣಕ್ಕೆ ಸ್ಥಳೀಯ ಪೇಟೆಗಳಲ್ಲಿಯೂ ಷೇರುಗಳ ಮಾರಾಟದಲ್ಲಿ ಭಾರಿ ಒತ್ತಡ ಕಂಡು ಬಂದಿತು. ಇಟಲಿಯ ರಾಜಕೀಯ ಅನಿಶ್ಚಿತತೆ ಯುರೋಪ್‌ ಮಾರುಕಟ್ಟೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ವಹಿವಾಟಿನ ಆರಂಭದಲ್ಲಿ ದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ರಿಟೇಲ್‌ ವಹಿವಾಟುದಾರರು ಷೇರುಗಳ ಖರೀದಿಗೆ ಆಸಕ್ತಿ  ತೋರಿದರು. ಈ ಪ್ರವೃತ್ತಿಯು ವಹಿವಾಟಿನ ಕೊನೆಯವರೆಗೂ ಮುಂದುವರೆಯಲಿಲ್ಲ.

ಸಂವೇದಿ ಸೂಚ್ಯಂಕವು ದಿನದಂತ್ಯದಲ್ಲಿ 34,949 ಅಂಶಗಳೊಂದಿಗೆ ವಹಿವಾಟು ಕೊನೆಗೊಳಿಸಿತು. ಹಿಂದಿನ ಮೂರು ವಹಿವಾಟಿನ ದಿನಗಳಲ್ಲಿ ಸೂಚ್ಯಂಕವು 820 ಅಂಶಗಳ ಏರಿಕೆ ದಾಖಲಿಸಿತ್ತು.

ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಕೂಡ 55 ಅಂಶಗಳಿಗೆ ಎರವಾಗಿ 10,633 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಮಾರಾಟಕ್ಕೆ ಆದ್ಯತೆ: ಲಾಭ ಮಾಡಿಕೊಳ್ಳುವ ಉದ್ದೇಶದಿಂದ ವಹಿವಾಟುದಾರರು ಷೇರುಗಳ ಮಾರಾಟಕ್ಕೆ ಆದ್ಯತೆ ನೀಡಿದ್ದರು. ಡಾಲರ್‌ ಎದುರು ರೂಪಾಯಿ ವಿನಿಮಯ ದರವು ಮಂಗಳವಾರ 57 ಪೈಸೆಗಳಷ್ಟು ಕುಸಿತ ಕಂಡಿರುವುದು, ಇಂಧನಗಳ ದುಬಾರಿ ದರವು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗುತ್ತಿರುವುದು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.

ಐಸಿಐಸಿಐ ಬ್ಯಾಂಕ್‌ (ಶೇ 2.87), ಎಸ್‌ಬಿಐ (ಶೇ 2.70), ಯೆಸ್‌ ಬ್ಯಾಂಕ್‌ (1.78), ಕೋಲ್‌ ಇಂಡಿಯಾ (ಶೇ 0.98) ಮತ್ತು ಐಟಿಸಿ (ಶೇ 0.62) ಷೇರುಗಳು ಇಳಿಕೆ ಕಂಡವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry