7

ಮುದ್ರಾ ಯೋಜನೆ ಯಶೋಗಾಥೆ ಆಲಿಕೆ!

Published:
Updated:
ಮುದ್ರಾ ಯೋಜನೆ ಯಶೋಗಾಥೆ ಆಲಿಕೆ!

ಬಾಗಲಕೋಟೆ: ಮುಧೋಳದ ರನ್ನ ವೃತ್ತದ ಶ್ರೀಸಾಯಿನಾಥ ಎಂಟರ್‌ ಪ್ರೈಸಸ್‌ ಮೊಬೈಲ್ ಅಂಗಡಿ ಮಾಲೀಕ ಮಂಜುನಾಥ ಖಮಿತ್ಕರ್‌ಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೊ ಸಂವಾದ ನಡೆಸಿದ ಪುಳಕ..

ಮುದ್ರಾ ಯೋಜನೆಯ ಫಲಾನುಭವಿಗಳ ಯಶೋಗಾಥೆ ಖುದ್ದಾಗಿ ಅವರಿಂದಲೇ ಆಲಿಸಲು ದೇಶದ ವಿವಿಧ ರಾಜ್ಯಗಳ ಆರು ಮಂದಿ ಫಲಾನುಭವಿಗಳೊಂದಿಗೆ ನರೇಂದ್ರ ಮೋದಿ ವಿಡಿಯೊ ಸಂವಾದ ನಡೆಸಿದರು. ಕರ್ನಾಟಕದಿಂದ ಮಂಜುನಾಥ ಖಮಿತ್ಕರ್‌ ಅವಕಾಶ ಪಡೆದಿದ್ದರು. ಪ್ರಧಾನಿ ಕಚೇರಿಯ ಸೂಚನೆಯಂತೆ ಮುಂಜಾನೆ ಇಲ್ಲಿನ ಜಿಲ್ಲಾಡಳಿತ ಭವನಕ್ಕೆ ಮಂಜುನಾಥ ಅವರನ್ನು ಕರೆತಂದ ಅಧಿಕಾರಿಗಳು ಸಂವಾದಕ್ಕೆ ವೇದಿಕೆ ಕಲ್ಪಿಸಿದ್ದರು.

ಗದುಗಿನ ಮಂಜುನಾಥ, ಕಳೆದ 15 ವರ್ಷಗಳಿಂದ ಮುಧೋಳದಲ್ಲಿ ಮೊಬೈಲ್‌ ಫೋನ್‌ ಹಾಗೂ ಪರಿಕರಗಳ ವಹಿವಾಟು ನಡೆಸುತ್ತಿದ್ದಾರೆ. ಆರಂಭದಲ್ಲಿ ಸಣ್ಣದಾಗಿ ವ್ಯವಹಾರ ನಡೆಸುತ್ತಿದ್ದ ಅವರು, ಮುದ್ರಾ ಯೋಜನೆಯಡಿ ಸಿಂಡಿಕೇಟ್‌ ಬ್ಯಾಂಕ್‌ನಿಂದ ₹13 ಲಕ್ಷ ಸಾಲ ಪಡೆದು ವಹಿವಾಟು ವಿಸ್ತರಿಸಿದ್ದಾರೆ.

ಪ್ರಧಾನಿಯೊಂದಿಗೆ ಮಂಜುನಾಥ ಹಿಂದಿಯಲ್ಲಿ ನಾಲ್ಕು ನಿಮಿಷ ಮಾತುಕತೆ ನಡೆಸಿದರು. ಈ ವೇಳೆ ಅವರ ಆರ್ಥಿಕ ಹಿನ್ನೆಲೆ, ಸಾಲ ಪಡೆದ ಮೊತ್ತ, ಅದನ್ನು ಮರುಪಾವತಿಸುತ್ತಿರುವ ವಿಧಾನ, ಕುಟುಂಬದ ಸದಸ್ಯರ ವಿವರ, ಮನೆಯ ಖರ್ಚು– ವೆಚ್ಚ ಎಲ್ಲವನ್ನೂ ಮೋದಿ ಕೇಳಿ ತಿಳಿದುಕೊಂಡರು. ತಮ್ಮ ಶಾಪ್‌ನಲ್ಲಿ ನಾಲ್ಕು ಜನರಿಗೆ ಕೆಲಸ ಕೊಟ್ಟಿರುವುದು. ಅವರಿಗೆ ಕೊಡುವ ಸಂಬಳ, ಮುದ್ರಾ ಯೋಜನೆಯಡಿ ಇನ್ನೂ ಮೂವರಿಗೆ ತಾವು ಸಾಲ ಕೊಡಿಸಿರುವುದನ್ನು ಮಂಜುನಾಥ ಹೇಳಿಕೊಂಡಿದ್ದಾರೆ.

‘ಮುದ್ರಾ ಯೋಜನೆಯ ಅನುಕೂಲಗಳ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ನೀಡುವಂತೆ ತಿಳಿಸಿ. ಅದರ ಉಪಯೋಗ ಎಲ್ಲರಿಗೂ ಗೊತ್ತಾಗಲಿ’ ಎಂದು ಸಲಹೆ ನೀಡಿದ ಪ್ರಧಾನಿ ಕೊನೆಗೆ ಧನ್ಯವಾದ ಹೇಳಿದರು ಎಂದು ಮಂಜುನಾಥ ತಿಳಿಸಿದರು.

ತಮಾಷೆ ಎಂದು ಭಾವಿಸಿದ್ದೆ: ‘10 ದಿನಗಳ ಹಿಂದೆ ಪ್ರಧಾನಿ ಕಚೇರಿಯಿಂದ ಎಂದು ಹೇಳಿಕೊಂಡು ಯಾರೊ ಕರೆ ಮಾಡಿದ್ದರು. ನಂತರ ಧಾರವಾಡ

ದಿಂದಲೂ ಕರೆ ಬಂದಿತ್ತು. ನಿಮ್ಮೊಡನೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಸಿದ್ಧರಾಗಿ ಎಂದು ತಿಳಿಸಿದ್ದರು. ಯಾರೊ ತಮಾಷೆ ಮಾಡುತ್ತಿದ್ದಾರೆ ಎಂದು ಆಗ ಭಾವಿಸಿದ್ದೆ. ಮೊದಲಿಗೆ ವಂಚನೆ ಕರೆಯೂ ಇರಬಹುದು ಎಂದೇ ತಿಳಿದಿದ್ದೆ. ಕೊನೆಗೆ ಬಾಗಲಕೋಟೆಯಿಂದ ಸಿಂಡಿಕೇಟ್‌ ಬ್ಯಾಂಕ್‌ ಅಧಿಕಾರಿ ಕರೆ ಮಾಡಿದಾಗ ಸ್ಪಷ್ಟವಾಯಿತು. ಪ್ರಧಾನಿಯೊಂದಿಗೆ ಮಾತಾಡುವ ಅವಕಾಶ ಸಿಕ್ಕಿರುವುದು ತಿಳಿದು ಹಿರಿಹಿರಿ ಹಿಗ್ಗಿದ್ದೆನು’ ಎಂದು ಮಂಜುನಾಥ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

‘ನರೇಂದ್ರ ಮೋದಿ ಜೊತೆ ಮಾತಾಡಿದ ಕಾರಣ ಬೆಳಿಗ್ಗೆಯಿಂದ ಊರಿನಲ್ಲಿ ಹೀರೊ ಆಗಿದ್ದೇನೆ. ಸ್ನೇಹಿತರು, ಬಂಧು– ಬಳಗದವರು ಕರೆ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಅಂಗಡಿಗೆ ಬರುವ ಗ್ರಾಹಕರೂ ಅದನ್ನೇ ಕೇಳುತ್ತಿದ್ದಾರೆ’ ಎಂದರು.

ಎರಡು ದಿನದಲ್ಲಿ ಸಾಲ ಮಂಜೂರು

‘2016ರಲ್ಲಿ ದಿಢೀರನೆ ಎದುರಾದ ಆರ್ಥಿಕ ಮುಗ್ಗಟ್ಟಿನಿಂದ ಉಳಿತಾಯ ಖಾತೆ ಮುಚ್ಚಲು ಬ್ಯಾಂಕಿಗೆ ತೆರಳಿದ್ದೆ. ನನ್ನ ಖಾತೆಯ ಹಿಂದಿನ ವಹಿವಾಟು ಕಂಡು ಬ್ಯಾಂಕ್‌ನ ವ್ಯವಸ್ಥಾಪಕರು ಮುದ್ರಾ ಯೋಜನೆಯ ಬಗ್ಗೆ ಮಾಹಿತಿ ನೀಡಿ ಯಾವುದೇ ಭದ್ರತೆ ಪಡೆಯದೇ ಎರಡು ದಿನಗಳಲ್ಲಿ ₹ 5 ಲಕ್ಷ ಸಾಲ ಕೊಟ್ಟರು. ಅದು ನನ್ನ ಬದುಕನ್ನೇ ಬದಲಾಯಿಸಿತು. ಅದನ್ನು ಮರುಪಾವತಿಸಿ ಮತ್ತೆ ₹ 8 ಲಕ್ಷ ಪಡೆದಿದ್ದೇನೆ’ ಎಂದು ಮಂಜುನಾಥ ಖಮಿತ್ಕರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry