ಗಾರ್ಬೈನ್‌ ಮುಗುರುಜಾ ಶುಭಾರಂಭ

7

ಗಾರ್ಬೈನ್‌ ಮುಗುರುಜಾ ಶುಭಾರಂಭ

Published:
Updated:
ಗಾರ್ಬೈನ್‌ ಮುಗುರುಜಾ ಶುಭಾರಂಭ

ಪ್ಯಾರಿಸ್‌: ಅಮೋಘ ಆಟ ಆಡಿದ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ, ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಮುಗುರುಜಾ 7–6, 6–2ರ ನೇರ ಸೆಟ್‌ಗಳಿಂದ ರಷ್ಯಾದ ಸ್ವೆಟ್ಲಾನ ಕುಜ್ನೆತ್ಸೋವಾ ಅವರನ್ನು ಪರಾಭವಗೊಳಿಸಿದರು.

ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಮುಗು ರುಜಾ, ಮೊದಲ ಸೆಟ್‌ನಲ್ಲಿ ಎರಡು ಬಾರಿ ಸರ್ವ್‌ ಕಳೆದುಕೊಂಡರು. ಇದರಿಂದ ಎದೆಗುಂದದ ಅವರು ಛಲದಿಂದ ಹೋರಾಡಿ 6–6ರಲ್ಲಿ ಸಮಬಲ ಮಾಡಿಕೊಂಡರು. ‘ಟೈ ಬ್ರೇಕರ್‌’ನಲ್ಲಿ ಒತ್ತಡ ಮೀರಿ ನಿಂತು ಆಡಿದ ಸ್ಪೇನ್‌ನ ಆಟಗಾರ್ತಿ, ಕುಜ್ನೆತ್ಸೋವಾ ಸವಾಲು ಮೀರಿ ಸಂಭ್ರಮಿಸಿದರು.

ಎರಡನೇ ಸೆಟ್‌ನಲ್ಲಿ ಮುಗುರುಜಾ ಆಟ ರಂಗೇರಿತು. 2016ರಲ್ಲಿ ನಡೆದಿದ್ದ ಸುಜಾನ್‌ ಲೆಂಗ್ಲೆನ್‌ ಕಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಅವರು ಆರಂಭಿಕ ಗೇಮ್‌ನಲ್ಲಿ ಮಿಂಚಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 43ನೇ ಸ್ಥಾನ ಹೊಂದಿರುವ ಕುಜ್ನೆತ್ಸೋವಾ ಎರಡನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡರು. ಹೀಗಾಗಿ 1–1ರ ಸಮಬಲ ಕಂಡುಬಂತು. ನಂತ ರದ ಎರಡು ಗೇಮ್‌ಗಳಲ್ಲೂ ಉಭಯ ಆಟಗಾರ್ತಿಯರು ಸರ್ವ್‌ ಕಾಪಾಡಿಕೊಂಡರು.

ಬಳಿಕ ಮುಗುರುಜಾ ಮೋಡಿ ಮಾಡಿದರು. ಶರವೇಗದ ಸರ್ವ್‌ ಮತ್ತು ಬಲಿಷ್ಠ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು ಸತತ ಎರಡು ಗೇಮ್‌ ಗೆದ್ದು 4–2ರ ಮುನ್ನಡೆ ಗಳಿಸಿದರು.

2009ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಕುಜ್ನೆತ್ಸೋವಾ, ನಂತರ ಪುಟಿದೇಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಮುಗುರುಜಾ ಇದಕ್ಕೆ ಅವಕಾಶ ನೀಡಲಿಲ್ಲ. ದೀರ್ಘ ರ‍್ಯಾಲಿ ಗಳನ್ನು ಆಡಿದ ಅವರು ಬೇಸ್‌ಲೈನ್‌ ಹೊಡೆತಗಳ ಮೂಲಕ ಕುಜ್ನೆತ್ಸೋವಾ ಅವರನ್ನು ತಬ್ಬಿಬ್ಬುಗೊಳಿಸಿ ಖುಷಿಯ ಕಡಲಲ್ಲಿ ತೇಲಿದರು.

ಎರಡನೇ ಸುತ್ತಿನ ಹಣಾಹಣಿಯಲ್ಲಿ ಮುಗುರುಜಾ, ಫ್ರಾನ್ಸ್‌ನ ಫಿಯೊನಾ ಫೆರೊ ವಿರುದ್ಧ ಸೆಣಸಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಫಿಯೊನಾ 6–4, 6–2ರಲ್ಲಿ ಜರ್ಮನಿಯ ಕ್ಯಾರಿನಾ ವಿಥೊಫ್ಟ್‌ ವಿರುದ್ಧ ಗೆದ್ದರು.

ಇತರ ಪಂದ್ಯಗಳಲ್ಲಿ ಅಮೆರಿಕದ ಬೆಥನಿ ಮಟೆಕ್‌ ಸ್ಯಾಂಡ್ಸ್‌ 6–4, 6–3ರಲ್ಲಿ ಸ್ವಿಟ್ಜರ್‌ಲೆಂಡ್‌ನ ಜೊಹಾನ್ನ ಲಾರ್ಸನ್‌ ಎದುರೂ, ಆಸ್ಟ್ರೇಲಿಯಾದ ಸಮಂತಾ ಸೊಸುರ್‌ 6–2, 6–4 ರಲ್ಲಿ ಬೆಲ್ಜಿಯಮ್‌ನ ಯಾನಿನ ವಿಕ್‌ಮೇಯರ್‌ ವಿರುದ್ಧವೂ ಗೆದ್ದರು.

ಶಪೊವಲೊವ್‌ಗೆ ಚೊಚ್ಚಲ ಜಯ: ಕೆನಡಾದ ಯುವ ಆಟಗಾರ ಡೆನಿಸ್‌ ಶಪೊವಲೊವ್‌ ಅವರು ಫ್ರೆಂಚ್‌ ಓಪನ್‌ ಟೂರ್ನಿಯ ಮುಖ್ಯ ಸುತ್ತಿನಲ್ಲಿ ಮೊದಲ ಜಯ ದಾಖಲಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ 19ರ ಹರೆಯದ ಶಪೊವಲೊವ್‌ 7–5, 6–4, 6–2ರಲ್ಲಿ ಆಸ್ಟ್ರೇಲಿಯಾದ ಜಾನ್‌ ಮಿಲ್‌ಮ್ಯಾನ್‌ ಅವರನ್ನು ಮಣಿಸಿದರು.

ಟೂರ್ನಿಯಲ್ಲಿ 24ನೇ ಶ್ರೇಯಾಂಕ ಹೊಂದಿದ್ದ ಡೆನಿಸ್‌, ಮೊದಲ ಸೆಟ್‌ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ನಂತರದ ಎರಡು ಸೆಟ್‌ ಗಳಲ್ಲೂ ಮಿಂಚಿನ ಆಟ ಆಡಿ ಗೆಲುವಿನ ತೋರಣ ಕಟ್ಟಿದರು.

ಕ್ರೊವೇಷ್ಯಾದ ಮರಿನ್‌ ಸಿಲಿಕ್‌ 6–3, 7–5, 7–6ರಲ್ಲಿ ಜೇಮ್ಸ್‌ ಡಕ್ವರ್ಥ್‌ ಎದುರು ಗೆದ್ದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಮ್ಯಾಕ್ಸಿಮಿಲಿಯನ್‌ ಮಾರ್ಟೆರರ್‌ 6–1, 6–3, 7–5ರಲ್ಲಿ ರ‍್ಯಾನ್‌ ಹ್ಯಾರಿಸನ್‌ ಎದುರೂ, ಕೆವಿನ್‌ ಆ್ಯಂಡರ್‌ಸನ್‌ 6–1, 6–2, 6–4ರಲ್ಲಿ ಪಾವೊಲೊ ಲೊರೆಂಜಿ ಮೇಲೂ, ಜಾನ್‌ ಲೆನ್ನಾರ್ಡ್‌ ಸ್ಟ್ರಫ್‌ 6–1, 6–3, 6–0ರಲ್ಲಿ ಎವಜೆನಿ ಡೊನ್ಸ್‌ಕೊಯ್‌ ವಿರುದ್ಧವೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry