ವಿಳಂಬ ದರ್ಶನ; ಜನತೆ ಅಹವಾಲು

7
ಗೃಹಕಚೇರಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜನತಾದರ್ಶನ

ವಿಳಂಬ ದರ್ಶನ; ಜನತೆ ಅಹವಾಲು

Published:
Updated:
ವಿಳಂಬ ದರ್ಶನ; ಜನತೆ ಅಹವಾಲು

ಬೆಂಗಳೂರು: 'ಪತಿಗೆ ಸ್ತನದ ಕ್ಯಾನ್ಸರ್‌ ಆಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣಕಾಸಿನ ನೆರವಿಗಾಗಿ ಅಲೆದು ಸಾಕಾಗಿದೆ. ಇಂದಾದರೂ ಸಿಕ್ಕೀತೇ’ ಎಂಬ ಭರವಸೆಯಿಂದ ಬಂದಿದ್ದೇವೆ.

– ಇದು ರಾಜಾಜಿನಗರದ ಎಂ. ಗಂಗಪ್ಪ ಅವರ ಪತ್ನಿ ಮುನಿವೆಂಕಟಮ್ಮ ಅವರ ಅಳಲು. ಆ ವೇಳೆಗಾಗಲೇ ಗಂಗಪ್ಪ ಅವರು ಅಂಗಿಬಿಚ್ಚಿ ಎಡಭಾಗದ ಎದೆಭಾಗವನ್ನು ಕಿತ್ತು ಹಾಕಿದ್ದನ್ನು ವೇದನೆಯಿಂದ ಪ್ರದರ್ಶಿಸಿದರು.

‘ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಡೇಟಾ ಎಂಟ್ರಿ ಆಪರೇಟರ್‌ ಆಗಿದ್ದೆ. ಒಪ್ಪಂದದ ಅವಧಿ ಮುಗಿದಿದೆ. ಬೇರೆ ಕಡೆಯಾದರೂ ಕೆಲಸ ಕೊಡಿಸಿ’ –ಇದು ಕೊರಟಗೆರೆಯ ಯುವತಿ ರಂಜಿತಾ ಅವರ ಮನವಿ.

ಉದ್ಯೋಗ ಕೊಡಿಸಿ, ರಕ್ಷಣೆ ಕೊಡಿಸಿ, ಖಾತೆ ಬದಲಾಯಿಸಿ ಕೊಡಿ, ವರ್ಗಾವಣೆ ಮಾಡಿಸಿ... ಹೀಗೆ ಐವತ್ತಕ್ಕೂ ಹೆಚ್ಚು ಅಹವಾಲುಗಳು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಂಗಳವಾರ ಸಲ್ಲಿಕೆಯಾದವು.

ಬೆಳಿಗ್ಗೆ 10ಕ್ಕೆ ಆರಂಭವಾಗಬೇಕಿದ್ದ ಜನತಾದರ್ಶನಕ್ಕೆ ಬೆಳಿಗ್ಗೆ 8ರಿಂದಲೇ ಜನ ಕಾದಿದ್ದರು. ಆದರೆ ಮುಖ್ಯಮಂತ್ರಿ ಬಂದಿದ್ದು ಮಧ್ಯಾಹ್ನ 1.05ಕ್ಕೆ.

ಆರ್‌ಟಿಐ ಗೋಳು: ಹೆಬ್ಬಾಳ ಕೆಂಪಾಪುರ ಪ್ರದೇಶದ 30ಕ್ಕೂ ಹೆಚ್ಚು ಪೋಷಕರು ಶಿಕ್ಷಣ ಸಂಸ್ಥೆಯ ವಿರುದ್ಧ ದೂರು ಸಲ್ಲಿಸಿದರು. ವಿದ್ಯಾನಿಕೇತನ ಶಾಲೆಯಲ್ಲಿ ಶಿಕ್ಷಣ ಹಕ್ಕುಕಾಯ್ದೆ ಅಡಿ 33 ಮಕ್ಕಳಿಗೆ ಸೀಟು ಮಂಜೂರು ಆಗಿದೆ. ಆದರೆ, ಮಕ್ಕಳನ್ನು ಸೇರಿಸಿಕೊಳ್ಳುತ್ತಿಲ್ಲ. ಕಾರಣ ಕೇಳಿದರೆ ಇದು ಭಾಷಾ ಅಲ್ಪಸಂಖ್ಯಾತರ ಶಾಲೆ. ಇಲ್ಲಿ ಆರ್‌ಟಿಇ ಅನ್ವಯಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಈಗಾಗಲೇ ತರಗತಿಗಳು ಆರಂಭವಾಗಿವೆ. ಸೀಟು ನಿರಾಕರಿಸಿದರೆ ಶೈಕ್ಷಣಿಕ ವರ್ಷವೂ ಹಾಳಾಗುತ್ತದೆ ಎಂದು ಹೇಳಿದರು.

‘ಡಿ’ ಗ್ರೂಪ್‌ ನೌಕರರು ತಮ್ಮನ್ನು ಕಾಯಂಗೊಳಿಸಬೇಕು ಎಂದು ಅಹವಾಲು ಸಲ್ಲಿಸಿದರು. ‘ಮಡಿವಾಳ ಸಮುದಾಯದವರಿಗೆ ಮಹಾಲಕ್ಷ್ಮೀ ಲೇಔಟ್‌ನ ಇಸ್ಕಾನ್‌ ದೇವಸ್ಥಾನದ ಬಳಿ ಮಂಜೂರು ಮಾಡಲಾದ 150 ಮನೆಗಳ ಪೈಕಿ ಸುಮಾರು 50 ಮನೆಗಳನ್ನು ಬೆಂಗಳೂರು ನಾರ್ಥ್ ಮಡಿವಾಳ ಮಹಾಜನ ಸಂಘದ ಪದಾಧಿಕಾರಿಗಳೇ ಮಾರಾಟ ಮಾಡಿ ಅಕ್ರಮ ಎಸಗಿದ್ದಾರೆ. ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಬೇಕು. ಅರ್ಹರಿಗೆ ಮನೆ ನೀಡಬೇಕು’ ಎಂದು ರಮೇಶ್‌ ಮತ್ತು ವೇಣುಗೋಪಾಲ್‌ ಎಂಬುವವರು ಮನವಿ ಸಲ್ಲಿಸಿದರು.

ಶ್ರೀಶಕ್ತಿ ಸೌಹಾರ್ದ ಕ್ರೆಡಿಟ್‌ ಕೋ– ಆಪರೇಟಿವ್‌ ಸೊಸೈಟಿಯಲ್ಲಿ ಹೂಡಿಕೆ ಮಾಡಲಾದ ₹ 6.50 ಲಕ್ಷ ಮೊತ್ತವನ್ನು ಸಂಸ್ಥೆ ವಂಚಿಸಿದೆ. ಅವರ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಕಾಮಾಕ್ಷಿ ಪಾಳ್ಯದ ಎಸ್‌.ಎಲ್‌. ಭಾಗ್ಯಲಕ್ಷ್ಮೀ ಅವರು ಮನವಿ ಮಾಡಿದರು.

ಎಂಜಿನಿಯರಿಂಗ್‌ ವಿದ್ಯಾರ್ಥಿನಿಯೊಬ್ಬರು ತನಗೆ ಗ್ರಾಮಕರಣಿಕರ ಕೆಲಸ ಕೊಡಿಸಲು ಕೋರಿದರು. ಎಂಜಿನಿಯರ್‌ ಪುತ್ರನಿಗೆ ಟೊಯೊಟಾ ಅಥವಾ ಬಾಷ್‌ ಕಂಪೆನಿಯಲ್ಲಿ ಕೆಲಸ ಕೊಡಲು ಶಿಫಾರಸು ಮಾಡಬೇಕು ಎಂದು ಅವನ ತಂದೆ ಅರ್ಜಿ ಹಿಡಿದು ನಿಂತಿದ್ದರು.

ನಿಮ್ಮ ಚಾನೆಲ್‌ನಲ್ಲಿ ಕೆಲಸ ಕೊಡಿ

ನಾಗರಬಾವಿಯ ನಂದಿನಿ ಅವರ ಮನವಿ ಹೀಗಿತ್ತು. ‘ನಾನು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೆ. ಅಪಘಾತದಿಂದ ಕಾಲು ಮುರಿಯಿತು. ಈಗ ನಡೆದಾಡುವಾಗ ಸ್ವಲ್ಪ ಕುಂಟುತ್ತೇನೆ. ಈ ಪರಿಸ್ಥಿತಿ ನೋಡಿ ಯಾವ ಸಂಸ್ಥೆಯವರೂ ನನಗೆ ಕೆಲಸ ಕೊಡುತ್ತಿಲ್ಲ. ನಿಮ್ಮ ಚಾನೆಲ್‌ನಲ್ಲಾದರೂ ನನಗೊಂದು ಕೆಲಸ ಕೊಡಿ. ಕೆಲವು ಧಾರಾವಾಹಿ, ಕಿರುಚಿತ್ರಗಳಲ್ಲಿ ನಟಿಸಿದ್ದೇನೆ. ಕಂಪ್ಯೂಟರ್‌ ಗೊತ್ತಿದೆ. ಹಾಗಾಗಿ ನನಗೊಂದು ಕೆಲಸ ಕೊಡಿ’ ಎಂದು ಮನವಿ ಮಾಡಿದರು.

ಅಣ್ಣಂಗೆ ವಿಷ್‌ ಮಾಡಲು ಬಂದಿದ್ದೆ

ಕುಮಾರಸ್ವಾಮಿ ಅವರಿಗೆ ಶುಭಕೋರಲು ಬಂದವರ ಪೈಕಿ ವಿಶೇಷವಾಗಿ ಗಮನ ಸೆಳೆದವರು ತಲಕಾಡಿನ ಸವಿತಾ.

ಕುಳ್ಳು ಗಾತ್ರದ ಸವಿತಾ ಅವರಿಗೆ ಕುಮಾರಸ್ವಾಮಿ ಅವರ ಶಿಫಾರಸ್ಸಿನ ಮೇಲೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಕೆಲಸ ಸಿಕ್ಕಿತ್ತಂತೆ. ‘ನಾನು ಈಗಲೂ ಅಲ್ಲೇ ಕೆಲಸ ಮಾಡುತ್ತಿದ್ದೇನೆ. ಅಣ್ಣ (ಕುಮಾರಸ್ವಾಮಿ) ಬಂದಾಗಲೆಲ್ಲಾ ಏನು ಸವಿತಾ ಚೆನ್ನಾಗಿದ್ದೀಯಾ ಎಂದು ಕೇಳುತ್ತಾರೆ. ನಾನೂ ಕರೆ ಮಾಡುತ್ತೇನೆ ಎಂದು ಹೇಳಿದ ಅವರು, ಅಣ್ಣನಿಗೆ ಬರುವ ವಿಘ್ನಗಳು ನಿವಾರಣೆಯಾಗಲಿ ಎಂದು ಹಾರೈಸಿ ಗಣೇಶ ಚಿತ್ರವನ್ನು ಉಡುಗೊರೆಯಾಗಿ ತಂದಿದ್ದೇನೆ’ ಎಂದರು.

ಸವಿತಾ ಹಾಗೂ ಅವರ ಪೋಷಕರನ್ನು ಎಚ್‌ಡಿಕೆ ಅಷ್ಟೇ ಕಾಳಜಿಯಿಂದ ಮಾತನಾಡಿಸಿದರು.

ನಾನು ಇಲ್ಲಿ ಸನ್ಮಾನಿಸುವುದಿಲ್ಲ...: ಜನತಾದರ್ಶನದಲ್ಲಿ ಕೊನೆಯ ಸಾಲಿನಲ್ಲಿ ಕುಳಿತಿದ್ದ ಕೇಸರಿ ಬಣ್ಣದ ಉಡುಪು ಧರಿಸಿದ್ದ ದಂಪತಿ ಗಮನ ಸೆಳೆದರು.

ಆ ಮಹಿಳೆಯ ಪತಿ ಶಂಭುಗೌಡ ಮಾತನಾಡಿ ‘ಕುಮಾರಣ್ಣ ಅವರನ್ನು ಪ್ರತ್ಯೇಕವಾಗಿ ಸನ್ಮಾನಿಸಬೇಕು. ಅದಕ್ಕಾಗಿ ಎಲ್ಲ ಕೆಲಸ ಮುಗಿದ ಮೇಲೆ ಅಲ್ಲಿ (ಗೃಹಕಚೇರಿ ಸಮೀಪ) ಸನ್ಮಾನಿಸಬೇಕು ಎಂದು ಪೊಲೀಸರನ್ನು ಕೋರಿದ್ದೇನೆ. ನಾನು ಅಲ್ಲಿ ಸನ್ಮಾನಿಸಲು ಅರ್ಹ. ಇಲ್ಲಿಯೇ (ಜನರ ನಡುವೆ) ಸನ್ಮಾನಿಸಿದರೆ ನನಗೇನು ಪ್ರಯೋಜನ. ಅದಕ್ಕೆ ಕಾಯುತ್ತಿದ್ದೇನೆ’ ಎಂದರು. ಅಂದಹಾಗೆ ಶಂಬುಗೌಡ ಅವರ ಪತ್ನಿ ಮಂಗಳಾ ಅವರು ರಾಮನಗರ ನಗರಸಭಾ ಉಪಾಧ್ಯಕ್ಷೆ.

ಮುಖ್ಯಾಂಶಗಳು

* ಎರಡು ಗಂಟೆ ವಿಳಂಬ; ಕಾದು ಸುಸ್ತಾದ ಜನರು

* ಅಹವಾಲಿನ ನಡುವೆ ಸನ್ಮಾನಿಸುವವರ ಸಾಲು

* ಮನೆ, ನಿವೇಶನ ಕೋರಿದ ಬೇಡಿಕೆಗಳೇ ಹೆಚ್ಚು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry