ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಪ್ರಣವ್‌: ಕಾಂಗ್ರೆಸ್ ಅಸಮಾಧಾನ

5

ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಪ್ರಣವ್‌: ಕಾಂಗ್ರೆಸ್ ಅಸಮಾಧಾನ

Published:
Updated:
ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಪ್ರಣವ್‌: ಕಾಂಗ್ರೆಸ್ ಅಸಮಾಧಾನ

ನವದೆಹಲಿ: ನಾಗ್ಪುರದಲ್ಲಿ ಜೂನ್‌ 7ರಂದು ನಡೆಯಲಿರುವ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಒಪ್ಪಿಗೆ ಸೂಚಿಸಿರುವುದಕ್ಕೆ ಕಾಂಗ್ರೆಸ್‌ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

‘ಆರ್‌ಎಸ್‌ಎಸ್‌ ಕಾರ್ಯಕ್ರಮ ಇನ್ನೂ ನಡೆದಿಲ್ಲ. ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಕಾಂಗ್ರೆಸ್‌ ವಕ್ತಾರ ಟಾಮ್‌ ವಡಕ್ಕನ್‌ ತಿಳಿಸಿದ್ದಾರೆ.

ಆದರೆ, ಮುರ್ಖರ್ಜಿ ಅವರ ಕೈಗೊಂಡ ನಿರ್ಧಾರದ ಬಗ್ಗೆ ಮಾಜಿ ಸಂಸದ ಸಂದೀಪ್‌ ದೀಕ್ಷಿತ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹಾವಿಗಿಂತಲೂ ಆರ್‌ಎಸ್‌ಎಸ್‌ ಅಪಾಯಕಾರಿ ಎಂದು ಮುಖರ್ಜಿ ಹೇಳುತ್ತಿದ್ದರು. ಆರ್‌ಎಸ್‌ಎಸ್‌ ಕೋಮುವಾದಿ, ದಲಿತ ವಿರೋಧಿ ಮತ್ತು ಸಂವಿಧಾನ ವಿರೋಧಿ ಸಂಘಟನೆ ಎನ್ನುವ ಕಾಂಗ್ರೆಸ್‌ ಅಭಿಪ್ರಾಯಕ್ಕೆ ಅವರು ಸಹಮತ ವ್ಯಕ್ತಪಡಿಸಿದ್ದರು. ಆದರೆ, ಈಗ ದಿಢೀರನೆ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ.

‘1975ರಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮತ್ತು 1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ಬಳಿಕ ಆರ್‌ಎಸ್‌ಎಸ್‌ ಮೇಲೆ ನಿಷೇಧ ಹೇರಲಾಗಿತ್ತು. ಈ ಎರಡು ಸಂದರ್ಭಗಳಲ್ಲಿ ಮುಖರ್ಜಿ ಅವರು ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದರು’ ಎಂದು ದಿಕ್ಷೀತ್‌ ನೆನಪಿಸಿದ್ದಾರೆ.

ಮುಂಬೈನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ‘ಮುಖರ್ಜಿ ಅವರು ಆರ್‌ಎಸ್‌ಎಸ್‌ ಕಾರ್ಯಕ್ರಮದ ಆಹ್ವಾನವನ್ನು ಸ್ವೀಕರಿಸಿರುವುದು ಉತ್ತಮ ಬೆಳವಣಿಗೆ. ರಾಜಕೀಯ ಅಸ್ಪೃಶ್ಯತೆ ಒಳ್ಳೆಯದಲ್ಲ. ನಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನಾಗಿದ್ದ ವೇಳೆ ಸಿಪಿಎಂ ಮುಖ್ಯ ಕಚೇರಿಗೆ ತೆರಳಿ ಎ.ಬಿ. ಬರ್ಧನ್‌ ಅವರ ಆರ್ಶೀವಾದ ಪಡೆದಿದ್ದೆ’ ಎಂದು ಹೇಳಿದ್ದಾರೆ.

ತ್ರಿಪುರಾ ರಾಜ್ಯಪಾಲ ತಥಾಗತ್‌ ರಾಯ್‌ ಸಹ ಈ ಬಗ್ಗೆ ಟ್ವೀಟ್‌ ಮಾಡಿದ್ದು, ’ಗಾಂಧೀಜಿ ಅವರನ್ನು ಆರ್‌ಎಸ್‌ಎಸ್‌ ಹತ್ಯೆ ಮಾಡಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಒಂದು ವೇಳೆ ಇದು ನಿಜವಾಗಿದ್ದರೆ ಆರ್‌ಎಸ್‌ಎಸ್‌ ಮೇಲೆ ಹೇರಿದ್ದ ನಿಷೇಧವನ್ನು ಕಾಂಗ್ರೆಸ್‌ ಪಕ್ಷವೇ ಮತ್ತೆ ಏಕೆ ತೆಗೆದು ಹಾಕಿತು’ ಎಂದು ಪ್ರಶ್ನಿಸಿದ್ದಾರೆ.

‘ಆರ್‌ಎಸ್‌ಎಸ್‌ ಪಾಕಿಸ್ತಾನದ ಐಎಸ್‌ಐ ಅಲ್ಲ. ಆರ್‌ಎಸ್‌ಎಸ್‌ ರಾಷ್ಟ್ರೀಯವಾದಿ ಸಂಘಟನೆಯಾಗಿದೆ.’

– ನಿತಿನ್‌ ಗಡ್ಕರಿ,ಕೇಂದ್ರ ಸಚಿವ

ಆರ್‌ಎಸ್‌ಎಸ್‌ ಬಗ್ಗೆ ಮುಖರ್ಜಿ ಅವರು ಹೊಂದಿದ್ದ ನಿಲುವು ಬದಲಾಗಿದೆಯೇ? ಇದು ಆಶ್ಚರ್ಯಕರ.

– ಸಂದೀಪ್‌ ದೀಕ್ಷಿತ್‌, ಮಾಜಿ ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry