ಅಕಾಡೆಮಿಗಳಿಗೆ ಚುನಾವಣಾ ಜ್ವರ: ಸಿಎನ್‌ಆರ್ ಬೇಸರ

7
ಸಾಂಸ್ಕೃತಿಕ ವರದಿ ಅನುಷ್ಠಾನಕ್ಕೆ ಮತ್ತು ಸಗಟು ಪುಸ್ತಕ ಖರೀದಿಗೆ ಒತ್ತಾಯ

ಅಕಾಡೆಮಿಗಳಿಗೆ ಚುನಾವಣಾ ಜ್ವರ: ಸಿಎನ್‌ಆರ್ ಬೇಸರ

Published:
Updated:
ಅಕಾಡೆಮಿಗಳಿಗೆ ಚುನಾವಣಾ ಜ್ವರ: ಸಿಎನ್‌ಆರ್ ಬೇಸರ

ಬೆಂಗಳೂರು: ಸರ್ಕಾರಗಳು ಬದಲಾದಂತೆ ವಿಶ್ವವಿದ್ಯಾಲಯಗಳ ಕುಲಪತಿಗಳ ರಾಜೀನಾಮೆಗಳನ್ನು ಯಾರೂ ಕೇಳುವುದಿಲ್ಲ. ಆದರೆ, ವಿ.ವಿ.ಗಳ ಸ್ವರೂಪವನ್ನೇ ಹೊಂದಿರುವ ಅಕಾಡೆಮಿಗಳು ಮಾತ್ರ ಸರ್ಕಾರದ ಬದಲಾವಣೆಯೊಂದಿಗೆ ಅಸುರಕ್ಷತೆ ಅನುಭವಿಸುತ್ತವೆ. ಈ ವಿರೋಧಾಭಾಸ ಏಕೆ? ಇದು ವಿಮರ್ಶಕ ಪ್ರೊ. ಸಿ.ಎನ್. ರಾಮಚಂದ್ರನ್‌ ಅವರ ಪ್ರಶ್ನೆ.

ಸರ್ಕಾರಗಳು ಬದಲಾದಾಗಲೆಲ್ಲ ಅಕಾಡೆಮಿಗಳಲ್ಲಿ ಬದಲಾವಣೆ ತರುವುದು ಸಾಹಿತಿಗಳಿಗೆ ಹಾಗೂ ಚಿಂತಕರಿಗೆ ಮಾಡುವ ಅವಮಾನ ಎಂದವರು ಅಭಿಪ್ರಾಯಪಟ್ಟರು. ಮಂಗಳವಾರ ನಡೆದ ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸಲ್ಲಿಸಿರುವ ಸಾಂಸ್ಕೃತಿಕ ನೀತಿಯನ್ನು ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಕನ್ನಡದ ಹೆಮ್ಮೆ:  ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಜ್ಞಾನಪ್ರಸಾರದ ಆಶಯವನ್ನು ಹೋಲುವ ‘ಭಾಷಾ ಭಾರತಿ’ ಕರ್ನಾಟಕದ ಹೆಮ್ಮೆ. ಅನುವಾದ ಚಟುವಟಿಕೆಗಳಿಗೆ ಮೀಸಲಾದ ಇಂಥದೊಂದು ಸಂಸ್ಥೆ ಮೊದಲು ಆರಂಭವಾದುದು ಕರ್ನಾಟಕದಲ್ಲಿ. ಸಾಂಸ್ಕೃತಿಕ ಕೊಡು–ಕೊಳ್ಳು ಕಾರ್ಯದಲ್ಲಿ ತೊಡಗಿರುವ ಪ್ರಾಧಿಕಾರ ಹಲವು ಮಹತ್ವದ ಪುಸ್ತಕಗಳನ್ನು ಪ್ರಕಟಿಸಿದೆ. ಆದರೆ, ಈ ಕೃತಿಗಳು ಓದುಗರಿಗೆ ಸಮರ್ಪಕವಾಗಿ ತಲುಪುತ್ತಿವೆಯೇ ಎಂದು ಪ್ರಶ್ನಿಸಿದರು.

ವಿವಿಧ ಪ್ರಾಧಿಕಾರಗಳು ಪ್ರಕಟಿಸುವ ಪುಸ್ತಕಗಳನ್ನು ಸರ್ಕಾರ ಸಗಟು ಖರೀದಿ ಮಾಡಿ, ಅವುಗಳನ್ನು ಶಾಲಾ ಕಾಲೇಜು ಮತ್ತು ಸಾರ್ವಜನಿಕ ಗ್ರಂಥಾಲಯಗಳಿಗೆ ಒದಗಿಸಬೇಕು. ಇಲ್ಲದೆ ಹೋದರೆ ಪುಸ್ತಕಗಳು ಗೋದಾಮುಗಳಲ್ಲಿ ಕೊಳೆಯುತ್ತವೆ ಎಂದು ಹೇಳಿದರು.

ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌, ವಿವಿಧ ಅಕಾಡೆಮಿಗಳ ಪ್ರಕಟಣೆಗಳನ್ನು ಖರೀದಿಸಿ, ಗ್ರಂಥಾಲಯ ಇಲಾಖೆ ವತಿಯಿಂದ ವಿವಿಧ ವಾಚನಾಲಯಗಳಿಗೆ ತಲುಪಿಸಲು ಸರ್ಕಾರ ಈಗಾಗಲೇ ಸಮ್ಮತಿಸಿದ್ದು, ಖರೀದಿ ಪ್ರಕ್ರಿಯೆಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದರು.

ಐವರು ಹಿರಿಯರಿಗೆ ಗೌರವ: ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿರುವ ಹಿರಿಯ ಲೇಖಕರಾದ ಪ್ರೊ. ಸಿ.ಎನ್. ರಾಮಚಂದ್ರನ್, ಡಾ. ಎಚ್.ಎಸ್. ಶ್ರೀಮತಿ, ಪ್ರೊ. ಓ.ಎಲ್. ನಾಗಭೂಷಣಸ್ವಾಮಿ, ಪ್ರೊ. ಧರಣೇಂದ್ರ ಕುರಕುರಿ ಹಾಗೂ ಕೆ.ಕೆ. ಗಂಗಾಧರನ್ ಅವರಿಗೆ 2017ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ₹ 50 ಸಾವಿರ ನಗದು, ಸ್ಮರಣಿಕೆ ಹಾಗೂ ಸನ್ಮಾನವನ್ನು ಪುರಸ್ಕಾರ ಒಳಗೊಂಡಿದೆ.

ಡಿ.ಎನ್. ಶ್ರೀನಾಥ್ (‘ಉಪಸಂಹಾರ’), ರಶ್ಮಿ ತೇರದಾಳ (‘ಮೋಹನಸ್ವಾಮಿ’), ಬಿ.ಎಸ್. ಜಯಪ್ರಕಾಶ ನಾರಾಯಣ (‘ಭಾರತ ಬೆಸುಗೆ’), ವಿಠಲರಾವ್ ಟಿ.ಗಾಯಕ್ವಾಡ (‘ದಲಿತ ಸಾಹಿತ್ಯದ ಸೌಂದರ್ಯಪ್ರಜ್ಞೆ’), ರಾಜಣ್ಣ ತಗ್ಗಿ ಟಿ.ಡಿ. (‘ದಾಹ’) ಹಾಗೂ ಎಂ. ಉಷಾ (‘ಅರ್ಧಕಥಾನಕ’) ಅವರಿಗೆ 2016ನೇ ಸಾಲಿನ ಪುಸ್ತಕ ಬಹುಮಾನಗಳನ್ನು ನೀಡಲಾಯಿತು. ₹ 25 ಸಾವಿರ ನಗದು, ಸ್ಮರಣಿಕೆ ಹಾಗೂ ಗೌರವವನ್ನು ಪ್ರಶಸ್ತಿ ಒಳಗೊಂಡಿದೆ.

ಅಂಬೇಡ್ಕರ್ ಸಂಪುಟ ಮರುಮುದ್ರಣ

ಅಂಬೇಡ್ಕರ್ ಅವರ ಸಮಗ್ರ ಬರಹಗಳು ಹಾಗೂ ಭಾಷಣಗಳನ್ನೊಳಗೊಂಡ 22 ಸಂಪುಟಗಳಿಗೆ ಅಪಾರ ಬೇಡಿಕೆಯಿದ್ದು, ಈ ಸಂಪುಟಗಳನ್ನು ಮರುಮುದ್ರಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಕೆ. ಮರುಳಸಿದ್ಧಪ್ಪ ಹೇಳಿದರು. ಸಂವಿಧಾನ ಸಭೆಯ ಸಮಗ್ರ ಚರ್ಚೆಗಳನ್ನು ಒಳಗೊಂಡ 10 ಸಂಪುಟಗಳು ಕೂಡ ಮುದ್ರಣ ಹಂತದಲ್ಲಿವೆ. ಮರುಮುದ್ರಣ ಕೃತಿಗಳೂ ಸೇರಿದಂತೆ ಈ ವರ್ಷ ಪ್ರಾಧಿಕಾರ ಸುಮಾರು 100 ಪುಸ್ತಕಗಳನ್ನು ಪ್ರಕಟಿಸಲಿದೆ ಎಂದರು.

* ಅನುವಾದ ಬರಹಗಳನ್ನು ಪ್ರೋತ್ಸಾಹಿಸಲು ‘ಭಾಷಾ ಭಾರತಿ’ ಪತ್ರಿಕೆಯೊಂದನ್ನು ಆರಂಭಿಸಬೇಕು.

–ಡಿ.ಎನ್. ಶ್ರೀನಾಥ್, ಅನುವಾದಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry