ರೈತರ ಸಾಲಮನ್ನಾ: ರೈತರ ಜತೆ ಸಿ.ಎಂ ಸಭೆ ಇಂದು

7

ರೈತರ ಸಾಲಮನ್ನಾ: ರೈತರ ಜತೆ ಸಿ.ಎಂ ಸಭೆ ಇಂದು

Published:
Updated:
ರೈತರ ಸಾಲಮನ್ನಾ: ರೈತರ ಜತೆ ಸಿ.ಎಂ ಸಭೆ ಇಂದು

ಬೆಂಗಳೂರು: ರೈತರ ಸಾಲ ಮನ್ನಾ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಪ್ರಗತಿಪರ ರೈತರ ಜೊತೆ ಬುಧವಾರ ಮಹತ್ವದ ಸಭೆ ನಡೆಸಲಿದ್ದಾರೆ.

ರೈತರಿಂದ ಅಗತ್ಯ ಮಾಹಿತಿ ಪಡೆದ ಬಳಿಕ ಸಾಲಮನ್ನಾ ಜಾರಿಗೊಳಿಸುವ ಸಂಬಂಧ ಕುಮಾರಸ್ವಾಮಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಸಭೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೂ ಆಹ್ವಾನ ನೀಡಲಾಗಿದೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರೂ ಭಾಗವಹಿಸಲಿದ್ದಾರೆ. ರೈತರ ಸಭೆಗೆ ಪ್ರತಿ ಜಿಲ್ಲೆಯಿಂದಲೂ ತಲಾ ನಾಲ್ಕು ಮಂದಿ ಪ್ರಗತಿಪರ ರೈತರನ್ನು ಆಹ್ವಾನಿಸಲಾಗಿದೆ. ಒಟ್ಟು 150 ರೈತ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುವರು. ಸಭೆಯಲ್ಲಿ ಕೃಷಿ, ತೋಟಗಾರಿಕೆ, ಸಹಕಾರ, ಹಣಕಾಸು ಇಲಾಖೆ ಅಧಿಕಾರಿಗಳು ಭಾಗವಹಿಸುವರು.

ಸಿ.ಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಕುಮಾರಸ್ವಾಮಿ ಮಂಗಳವಾರ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಮಾತುಕತೆ ನಡೆಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಹಣಕಾಸು, ಕೃಷಿ ಇಲಾಖೆ ಅಧಿಕಾರಿಗಳೂ ಹಾಜರಿದ್ದರು.

ಸಾಲ ಮನ್ನಾ ಹೇಗೆ ಜಾರಿ ಮಾಡಬೇಕು. ಕೇವಲ ಬೆಳೆ ಸಾಲ ಮನ್ನಾ ಮಾಡಬೇಕೆ, ಕೃಷಿ ಉಪಕರಣಗಳ ಸಾಲವನ್ನೂ ವ್ಯಾಪ್ತಿಗೆ ಸೇರಿಸಬೇಕೆ ಎಂಬುದರ ಬಗ್ಗೆಯೂ ಕುಮಾರಸ್ವಾಮಿ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿದರು.

‘ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಬೇಕಾಗಿರುವ ಆರನೇ ವೇತನ ಆಯೋಗಕ್ಕೆ ಹಣ ಹೊಂದಿಸುವುದು ಕಷ್ಟವಾಗಿದೆ. ಅದರ ಮೇಲೆ ಬೃಹತ್‌ ಮೊತ್ತದ ಸಾಲ ಮನ್ನಾ ಮಾಡಲು, ಸಂಪನ್ಮೂಲ ಕ್ರೊಡೀಕರಣಕ್ಕಾಗಿ ಜನರ ಮೇಲೆ ತೆರಿಗೆ ಹೊರೆ ಹೆಚ್ಚಿಸಬೇಕಾಗುತ್ತದೆ’ ಎಂದು ಅಧಿಕಾರಿಗಳು ಮುಖ್ಯಮಂತ್ರಿ ಗಮನಕ್ಕೆ ತಂದರು ಎಂದು ಮೂಲಗಳು ಹೇಳಿವೆ.

ಮುಖ್ಯಾಂಶಗಳು

* ಬೆಳಿಗ್ಗೆ 11 ಕ್ಕೆ ವಿಧಾನಸೌದದಲ್ಲಿ ಸಭೆ

* 150 ರೈತ ಪ್ರತಿನಿಧಿಗಳಿಗೆ ಆಹ್ವಾನ

* ವಿರೋಧ ಪಕ್ಷದ ನಾಯಕರಿಗೂ ಆಹ್ವಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry