ಅವಧಿಗೂ ಮುನ್ನವೇ ಕೇರಳ ಪ್ರವೇಶಿಸಿದ ಮುಂಗಾರು

7

ಅವಧಿಗೂ ಮುನ್ನವೇ ಕೇರಳ ಪ್ರವೇಶಿಸಿದ ಮುಂಗಾರು

Published:
Updated:
ಅವಧಿಗೂ ಮುನ್ನವೇ ಕೇರಳ ಪ್ರವೇಶಿಸಿದ ಮುಂಗಾರು

ತಿರುವನಂತಪುರ: ಅವಧಿಗಿಂತ ಮೂರು ದಿನ ಮುಂಚಿತವಾಗಿ ಮುಂಗಾರು ಮಳೆ ಮಂಗಳವಾರ ಕೇರಳವನ್ನು ಪ್ರವೇಶಿಸಿದೆ.

ಸಾಮಾನ್ಯವಾಗಿ ಜೂನ್‌ 1ರಂದು ಮುಂಗಾರು ಪ್ರವೇಶವಾಗುತ್ತದೆ. ಆದರೆ, ಈ ಬಾರಿ ಮೇ 29ರಂದು ನೈರುತ್ಯ ಮಾರುತ ಕೇರಳವನ್ನು ಪ್ರವೇಶಿಸಿದೆ. ಈ ಬಗ್ಗೆ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ನಿಜವಾಗಿದೆ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌, ಸೋಮವಾರ ಮುಂಗಾರು ಪ್ರವೇಶಿಸಲಿದೆ ಎಂದು ಹೇಳಿತ್ತು.

ದಕ್ಷಿಣ ಅರಬ್ಬೀ ಸಮುದ್ರದಿಂದ ಮಂಗಳವಾರ ಕೇರಳ ಮತ್ತು ಲಕ್ಷದ್ವೀಪ ಕರಾವಳಿಗೆ ಅಪ್ಪಳಿಸಿದ ಮಾರುತಗಳು ಭಾರಿ ಗಾಳಿ ಸಹಿತ ಮಳೆಯನ್ನು ಸುರಿಸುತ್ತಿವೆ.

ಮೋಡ ಕವಿದ ವಾತಾವರಣ

ಕೇರಳದಲ್ಲಿ ಮೋಡ ಕವಿದ ವಾತಾವರಣವಿದ್ದು, ಇನ್ನೂ ಮೂರ‍್ನಾಲ್ಕು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಮುಂದಿನ 48 ಗಂಟೆಗಳಲ್ಲಿ ಕೇರಳದ ಇತರ ಭಾಗ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಈ ವರ್ಷ ಉತ್ತಮ ಮುಂಗಾರು ಮಳೆಯಾಗಲಿದೆ (ಶೇ 96ರಿಂದ ಶೇ104) ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅವಧಿಗೂ ಮುನ್ನವೇ ಮುಂಗಾರು ಪ್ರವೇಶದಿಂದ ದೇಶದಾದ್ಯಂತ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆಯಲಿದೆ.

ಸಾಮಾನ್ಯವಾಗಿ ಜೂನ್‌ 1ರಂದು ಕೇರಳದ ಮೂಲಕ ಭಾರತವನ್ನು ಪ್ರವೇಶಿಸುವ ಮುಂಗಾರು ಮಾರುತಗಳು ಕ್ರಮೇಣ ಉತ್ತರ ಭಾರತದತ್ತ ಸಾಗುತ್ತವೆ. ಜುಲೈ ಮಧ್ಯ ಭಾಗದಲ್ಲಿ ದೇಶದಾದ್ಯಂತ ಮಳೆ ತರುತ್ತವೆ.

ವಾಯುಭಾರ ಕುಸಿತ

ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕೇಂದ್ರಗಳು ಕಂಡುಬಂದಿದೆ ಎಂದು  ಹವಾಮಾನ ಇಲಾಖೆ ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಹಮಾಮಾನ ಮುನ್ಸೂಚನೆ ವರದಿಯಲ್ಲಿ ಹೇಳಿದೆ.

ಉತ್ತರ ಕೇರಳ ಮತ್ತು ಕರಾವಳಿ ಕರ್ನಾಟಕದ ಬಳಿಯ ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿಯ ಮಧ್ಯ ಪೂರ್ವ ಮತ್ತು ಈಶಾನ್ಯ ಭಾಗದಲ್ಲಿ ಕಂಡುಬಂದ ವಾಯುಭಾರ ಕುಸಿತ ಕೇಂದ್ರಗಳು ಮುಂದಿನ 12 ಗಂಟೆಗಳಲ್ಲಿ ಭಾರಿ ವಾಯುಭಾರ ಕುಸಿತಕ್ಕೆ ಕಾರಣವಾಗಲಿವೆ ಎಂದು ವರದಿ ಹೇಳಿದೆ.

ಪ್ರತಿಕೂಲ ಹವಾಮಾನ ಮತ್ತು ಕಡಲ ಅಬ್ಬರದ ಕಾರಣ ಮುಂದಿನ 48 ಗಂಟೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಮುಖ್ಯಾಂಶಗಳು

* ಅವಧಿಗಿಂತ ಮುನ್ನ ಮುಂಗಾರಿನಿಂದ ಕೃಷಿ ಚಟುವಟಿಕೆ ಚುರುಕು

* ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುರಿಯುವ ಮುಂಗಾರು ಮಳೆ

* ದೇಶದ ಅರ್ಧದಷ್ಟು ಒಣ ಕೃಷಿ ಪ್ರದೇಶ ಮುಂಗಾರು ಮಳೆ ಅವಲಂಬಿತ

* ಮುಂಗಾರು ಅವಧಿಯಲ್ಲಿ ಶೇ 70ರಷ್ಟು ಮಳೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry