ಸೋಮವಾರ, ಡಿಸೆಂಬರ್ 9, 2019
22 °C

ರಾಮಚಂದ್ರಾಪುರ ಮಠದ ಅರ್ಜಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮಚಂದ್ರಾಪುರ ಮಠದ ಅರ್ಜಿ ವಜಾ

ಬೆಂಗಳೂರು: ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠವು ನಾಗರಿಕ ಸೌಲಭ್ಯದ(ಸಿ.ಎ) ನಿವೇಶನದಲ್ಲಿ ಕಟ್ಟಡ ನಿರ್ಮಾಣ ಯೋಜನೆ ಮಾಡಿರುವುದು ಮತ್ತು ಖಾತೆ ನೋಂದಣಿಗೆ ಅರ್ಜಿ ಹಾಕಿರುವುದನ್ನು ಬಿಬಿಎಂಪಿ ರದ್ದುಗೊಳಿಸಿದೆ.

‘ಮಠವು ಕಟ್ಟಡ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಕಾನೂನುಬಾಹಿರವಾಗಿ, 1985ರ ಏಪ್ರಿಲ್‌ 6ರ ದಿನಾಂಕ ಹೊಂದಿದ್ದ ಒಂದು ಪುಟದ ಆದೇಶವನ್ನು ಸೃಷ್ಟಿಸಿದೆ. ಆದರೆ, ಅದರ ಮೂಲ ದಾಖಲೆಗಳು ಬಿಡಿಎಯಲ್ಲಿ ಇಲ್ಲ’ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.

1979ರಲ್ಲಿ 21,249 ಚದರ ಅಡಿ ನಿವೇಶನವನ್ನು ವಿಶ್ವಭಾರತಿ ಗೃಹ ನಿರ್ಮಾಣ ಸಂಘದಿಂದ ಖರೀದಿಸಿರುವುದಾಗಿ ಮಠ ಹೇಳಿಕೊಂಡಿತ್ತು. ಇದಾದ 31 ವರ್ಷಗಳ ಬಳಿಕ (2010ರಲ್ಲಿ) ಸಿ.ಎ ನಿವೇಶನ ಸಂಖ್ಯೆ 2ರ ಖಾತೆ ನೋಂದಣಿಗೆ ನಿರಾಕ್ಷೇಪಣಾ ಪತ್ರ ನೀಡಲು ಮಠವು ಬಿಡಿಎಗೆ ಅರ್ಜಿ ಸಲ್ಲಿಸಿತ್ತು. ಅಂಥ ಯಾವುದೇ ಸೈಟನ್ನು ತಾನು ಮಂಜೂರು ಮಾಡಿಲ್ಲ ಎಂದು ಹೇಳಿ ಬಿಡಿಎ ಅರ್ಜಿಯನ್ನು ತಿರಸ್ಕರಿಸಿತು. 1985ರ ದಾಖಲೆಯನ್ನು ಮುಂದಿಟ್ಟುಕೊಂಡು, ಗೃಹನಿರ್ಮಾಣ ಸಂಘವು ಬಿಡಿಎಗೆ ಈ ನಿವೇಶನದ ಮೌಲ್ಯವಾದ ₹ 5.46 ಲಕ್ಷ  ಪಾವತಿಸಬೇಕು ಎಂದು ಅಂದಿನ ಆಯುಕ್ತರು ಕೋರಿದ್ದರು. ಅಂದು ಯಾವುದೇ ಪತ್ರದ ದಾಖಲೆ ಇಲ್ಲದಿದ್ದರೂ ಬಿಡಿಎ ನಿರಾಕ್ಷೇಪಣಾ ಪತ್ರ ಕೊಟ್ಟಿತ್ತು. ಇದರ ಆಧಾರದ ಮೇಲೆ ಬಿಬಿಎಂಪಿ ಕಟ್ಟಡ ನಿರ್ಮಾಣ ಯೋಜನೆಗೆ ಸಮ್ಮತಿಸಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದೂರುಗಳು ದಾಖಲಾದವು. ಈ ವಿಷಯದ ಕುರಿತು ಹೊಸದಾಗಿ ತನಿಖೆ ನಡೆಸಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿತು. ಮಠವು 1985ರಲ್ಲಿ ಬಿಡಿಎ ಆಯುಕ್ತರು ಸಹಿ ಮಾಡಿದ್ದ ದಾಖಲೆಗಳ ನಕಲು (ಜೆರಾಕ್ಸ್‌) ಪ್ರತಿಯನ್ನು ವಿಚಾರಣೆ ವೇಳೆ ನೀಡಿತ್ತು. 1981ರಲ್ಲಿ ಸಿ.ಎ ನಿವೇಶನ ಎಂದು ಖರೀದಿಸಲಾಗಿದ್ದ ಪ್ರದೇಶದಲ್ಲಿ ಬಿಡಿಎ ಒಪ್ಪಿಗೆ ನೀಡಿದ ಯೋಜನೆಯ ಹೊರತಾಗಿ ಹಲವು ಬದಲಾವಣೆ ಮಾಡಿರುವುದೂ ತನಿಖೆ ವೇಳೆ ಗೊತ್ತಾಗಿದೆ.  ಈ ಆಸ್ತಿಯನ್ನು ಧಾರ್ಮಿಕ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಇದು ನಾಗರಿಕ ಸೌಲಭ್ಯಕ್ಕೆ ಸಂಬಂಧಿಸಿದ್ದೇ ಆಗಿದೆ ಎಂದು ಸಮಜಾಯಿಷಿ ನೀಡಿ, ಮಠ ಮಾಡಿದ್ದ ಮನವಿಯನ್ನೂ ಬಿಬಿಎಂಪಿ ತಿರಸ್ಕರಿಸಿದೆ.

‘ನಾನು ಆದೇಶದ ಬಗ್ಗೆ ಕೇಳಿದ್ದೇನೆ. ಆದರೆ, ಅದರ ಪ್ರತಿ ಸಿಕ್ಕಿಲ್ಲ. ಸಂಬಂಧಪಟ್ಟ ಕಡತಗಳು ಬಂದ ನಂತರ ಕ್ರಮ ಕೈಗೊಳ್ಳುತ್ತೇನೆ’ ಎಂದು ಬಿಬಿಎಂಪಿ ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ವಿಜಯ್‌ ಗೋಪಾಲ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)