ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ತನಿಖೆಗೆ ಒಪ್ಪಿಸಲು ಹೈಕೋರ್ಟ್ ಇಂಗಿತ

ನಿತ್ಯಾನಂದ ಸ್ವಾಮೀಜಿ ಭಕ್ತೆಯ ಅನುಮಾನಾಸ್ಪದ ಸಾವಿನ ಪ್ರಕರಣ
Last Updated 29 ಮೇ 2018, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಆಶ್ರಮದಲ್ಲಿ ಸಾವಿಗೀಡಾಗಿದ್ದ ಸಂಗೀತಾ ಎಂಬ ಹೆಸರಿನ ಭಕ್ತೆಯ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಏಕೆ ಒಪ್ಪಿಸಬಾರದು’ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಈ ಕುರಿತಂತೆ, ಸಾವಿಗೀಡಾಗಿರುವ ಸಂಗೀತಾ ಅವರ ತಾಯಿ ಝಾನ್ಸಿ ರಾಣಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ಅವರನ್ನು ನ್ಯಾಯಮೂರ್ತಿಗಳು, ‘ಏಕೆ ನೀವು ಇನ್ನೂ ಈ ಕುರಿತ ದೂರಿನ ಅನುಸಾರ ಎಫ್‌ಐಆರ್ ದಾಖಲಿಸಿಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪೊನ್ನಣ್ಣ, ‘ಸ್ವಾಮಿ, ಇದೊಂದು ಸ್ವಾಭಾವಿಕ ಸಾವು. ಆಕೆ ಹೃದಯಾಘಾತದಿಂದಲೇ ಮೃತಪಟ್ಟಿದ್ದಾಳೆ. ಮೊದಲ ಬಾರಿಗೆ ನಡೆಸಲಾದ ಮರಣೋತ್ತರ ಪರೀಕ್ಷೆ ಹಾಗೂ ಎರಡನೇ ಬಾರಿ ಶವವನ್ನು ಸಮಾಧಿಯಿಂದ ಹೊರತೆಗೆದು ನಡೆಸಿದ ಶವ ಪರೀಕ್ಷೆಯಲ್ಲೂ ಆಕೆ ಹೃದಯಸ್ತಂಭನಕ್ಕೆ ಒಳಗಾಗಿ ಸತ್ತಿದ್ದಾಳೆ ಎಂಬ ವರದಿಗಳಿವೆ’ ಎಂದರು.

‘ಮರಣೋತ್ತರ ಪರೀಕ್ಷೆಯ ವರದಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ವಿಕ್ಟೋರಿಯಾ ಆಸ್ಪತ್ರೆಯ ಪೆಥಾಲಜಿ ವಿಭಾಗದ ತಜ್ಞ ವೈದ್ಯರು ಪ್ರಮಾಣೀಕರಿಸಿದ್ದಾರೆ. ಸಾಯುವ ಮುನ್ನ ಅವಳ ಮೈಮೇಲೆ ಯಾವುದೇ ಗಾಯ ಅಥವಾ ಪೆಟ್ಟಿನ ಗುರುತುಗಳಿರಲಿಲ್ಲ. ಹಾಗಾಗಿ ಇದರಲ್ಲಿ ಸಂಶಯಪಡುವ ಅಗತ್ಯವಿಲ್ಲ’ ಎಂದರು.

‘ಇದು ಅಸ್ವಾಭಾವಿಕ ಸಾವಲ್ಲ. ಮೂರು ವರ್ಷಗಳ ನಂತರ ಈಗ ಎಫ್‌ಐಆರ್ ದಾಖಲಿಸುವುದು ಎಂದರೆ ಹೇಗೆ’ ಎಂದೂ ನ್ಯಾಯಮೂರ್ತಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ನಿಮ್ಮ ಆಕ್ಷೇಪ ಏನಿದ್ದರೂ ಅದನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿ. ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆಯ ವರದಿಗಳು, ವೈದ್ಯರ ಅಭಿಪ್ರಾಯ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸೇರಿದಂತೆ ಎಲ್ಲ ದಾಖಲೆಗಳೂ ಹೈಕೋರ್ಟ್‌ ನ್ಯಾಯಾಂಗ ರಿಜಿಸ್ಟ್ರಾರ್ ಅವರ ಬಳಿಯೇ ಮುಚ್ಚಿದ ಲಕೋಟೆಯಲ್ಲಿ ಇರಲಿ’ ಎಂದು ದಾಖಲೆ ವಶಕ್ಕೆ ಪಡೆಯುವಂತೆ ಕೋರ್ಟ್ ಅಧಿಕಾರಿಗೆ ಸೂಚಿಸಿದರು.

ಇದಕ್ಕೆ ಪೊನ್ನಣ್ಣ, ‘ಮೂಲ ದಾಖಲೆ ಹಿಂದಿರುಗಿಸಿ, ಇದರ ನಕಲುಗಳಿಲ್ಲ’ ಎಂದು ಕೇಳಿದರೂ, ಕೊಡಲೊಪ್ಪದ ನ್ಯಾಯಮೂರ್ತಿಗಳು, ‘ಯಾಕೋ ಇದು ಮೇಲ್ನೋಟಕ್ಕೇ ಸಂಶಯಾಸ್ಪದವಾಗಿ ಕಾಣುತ್ತಿದೆ. ಬೇಕಾದರೆ ಅರ್ಜಿ ಹಾಕಿ ನಕಲು ಪ್ರತಿ ಪಡೆಯಿರಿ’ ಎಂದರು.

ವಿಚಾರಣೆಯನ್ನು ಜೂನ್‌ 11ಕ್ಕೆ ಮುಂದೂಡಲಾಗಿದೆ. ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಹಾಜರಿದ್ದರು.

ಪ್ರಕರಣವೇನು?: ಅಧ್ಯಾತ್ಮದ ಬಗ್ಗೆ ಒಲವು ಹೊಂದಿದ್ದ 24 ವರ್ಷದ ಕುಮಾರಿ ಸಂಗೀತಾ, ನಿತ್ಯಾನಂದ ಸ್ವಾಮೀಜಿ ಭಕ್ತೆಯಾಗಿದ್ದರು. 2010ರಿಂದಲೂ ಬಿಡದಿಯ ಆಶ್ರಮದಲ್ಲೇ ವಾಸವಾಗಿದ್ದರು. ತಮ್ಮ ಹೆಸರನ್ನು ‘ನಿತ್ಯಾ ತುರಿಯತೀತಾನಂದ ಸ್ವಾಮಿನಿ’ ಎಂದೂ ಬದಲಿಸಿಕೊಂಡಿದ್ದರು.

ಬಿಡದಿಯ ಆಶ್ರಮದಲ್ಲಿ 2014ರ ಡಿಸೆಂಬರ್ 28ರಂದು ಸಂಗೀತಾ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಕುರಿತು ಝಾನ್ಸಿ ರಾಣಿ, ರಾಮನಗರ ಎಸ್‌ಪಿ ಅವರಿಗೆ ತನಿಖೆ ನಡೆಸುವಂತೆ ಕೋರಿ ದೂರು ನೀಡಿದ್ದರು. ಆದರೆ, ನಿಷ್ಪಕ್ಷಪಾತ ತನಿಖೆ ನಡೆಸಿಲ್ಲ ಎಂದು ಆಕ್ಷೇಪಿಸಿ ಝಾನ್ಸಿ, ಬೆಂಗಳೂರು ಕೇಂದ್ರ ಐಜಿಪಿ ಅವರಿಗೆ ತನಿಖೆ ನಡೆಸುವಂತೆ ಕೋರಿದ್ದರು.

ಇದಕ್ಕೆ ಹಿಂಬರಹ ನೀಡಿದ್ದ ಪೊಲೀಸರು, ‘ಇದು ಹೃದಯಾಘಾತದಿಂದ ಸಂಭವಿಸಿರುವ ಸಾವು ಎಂದು ಮರಣೋತ್ತರ ಪರೀಕ್ಷೆಯ ವರದಿಗಳು ದೃಢಪಡಿಸಿವೆ’ ಎಂದು ತಿಳಿಸಿದ್ದರು.

ಇದರಿಂದ ತೃಪ್ತರಾಗದ ಝಾನ್ಸಿ ಹೈಕೋರ್ಟ್‌ನಲ್ಲಿ 2015ರ ಜುಲೈ 20ರಂದು ರಿಟ್‌ ಅರ್ಜಿ ಸಲ್ಲಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿದ್ದರು.

‘ಪೊಲೀಸರು ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ಶವದ ಹೃದಯ, ಮೂತ್ರಪಿಂಡ, ಮಿದುಳು, ಹೊಟ್ಟೆಯೊಳಗಿನ ಗುಲ್ಮದಂತಹ ಪ್ರಮುಖ ಅಂಗಗಳನ್ನು ಸಂಪೂರ್ಣವಾಗಿ ಹೊರತೆಗೆದದ್ದು ಪತ್ತೆಯಾಗಿತ್ತು. ಇದೊಂದು ಹೀನ ಅಪರಾಧ ಪ್ರಕರಣವಾಗಿದೆ. ಆದ್ದರಿಂದ ಇದರ ನಿಷ್ಪಕ್ಷಪಾತ ತನಿಖೆಗಾಗಿ ಇದನ್ನು ಸಿಬಿಐ ವಶಕ್ಕೆ ಒಪ್ಪಿಸಲು ನಿರ್ದೇಶಿಸಬೇಕು’ ಎಂದು ಕೋರಿದ್ದಾರೆ.

‘ರಂಜಿತಾ ಕಪಾಳಕ್ಕೆ ಹೊಡೆದಿದ್ದರು’

‘ಚಿತ್ರನಟಿ ರಂಜಿತಾ, ನಿತ್ಯಾನಂದ ಸ್ವಾಮೀಜಿ ಮುಂದೆ ನನ್ನ ಮಗಳ ಕೆನ್ನೆಗೆ ಹೊಡೆದಿದ್ದಳು. ಈ ಸಂಗತಿಯನ್ನು ನನ್ನ ಮಗಳು ನಾನು ಆಶ್ರಮಕ್ಕೆ ಹೋದಾಗ ನನಗೆ ತಿಳಿಸಿದ್ದಳು. ಆಗ ನಾನು ಅವಳನ್ನು ಆಶ್ರಮದಿಂದ ಮನೆಗೆ ಕರೆದುಕೊಂಡು ಹೋಗಿದ್ದೆ’ ಎಂದು ಝಾನ್ಸಿ ದೂರಿನಲ್ಲಿ ತಿಳಿಸಿದ್ದಾರೆ.

‘ಆದರೆ, ಮರುದಿನವೇ ಹಂಸಾನಂದ ಎಂಬ ಹೆಸರಿನ ಸ್ವಾಮೀಜಿ ನಮ್ಮ ಮನೆಗೆ ಬಂದು, ನಿಮ್ಮ ಮಗಳು ಸನ್ಯಾಸ ದೀಕ್ಷೆ ಪಡೆದಿದ್ದಾಳೆ. ಅದನ್ನು ನಿತ್ಯಾನಂದರ ಪಾದಕ್ಕೆ ಒಪ್ಪಿಸಿಯೇ ಕಾವಿ ಕಳಚಬೇಕು ಎಂದು ವಾಪಸು ಕರೆದುಕೊಂಡು ಹೋಗಿದ್ದರು. ನಂತರ ಸಂಗೀತಾ ಸಾವನ್ನಪ್ಪಿದ್ದಾಳೆ’ ಎಂದು ಹೇಳಿದ್ದಾರೆ.

‘ಸಂಗೀತಾ ಮನೆಗೆ ಬಂದಾಗ ಆಕೆಯ ಸೊಂಟದ ಕೆಳಗೆ ಮತ್ತು ಕಾಲಿನ ಮೇಲೆ ಬಲವಾದ ಏಟಿನ ಗುರುತುಗಳಿದ್ದವು’ ಎಂದೂ ಝಾನ್ಸಿ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT